ಕವನ ಸಂಕಲನ
ಕವಿ: ಡಾ. ಅಜಿತ್ ಹೆಗಡೆ, ಹರೀಶಿ
ಮುದ್ರಣವರ್ಷ: ೨೦೧೭;
ಪುಟ: ೯೨; ಬೆಲೆ: ೭೦;
ಪ್ರಕಾಶಕರು: ಅಕ್ಷಯ ಪ್ರಕಾಶನ, ಬಸಪ್ಪ ಬಡಾವಣೆ, ರಾಜರಾಜೇಶ್ವರಿ ನಗರ, ಬೆಂಗಳೂರು
ಎಪ್ಪತ್ತೆರಡು ಕವಿತೆಗಳಿರುವ ‘ಬಿಳಿಮಲ್ಲಿಗೆಯ ಬಾವುಟ’ ಈ ಕವಿಯ ಮೊದಲನೆಯ ಕವನ ಸಂಕಲನ. ಬರವಣೆಗೆಯಲ್ಲಿ ಹಲವು ವರ್ಷಗಳಿಂದ ನಿರತರಾಗಿರುವ ಇವರ ಕವನಗಳು ಓದುಗರಿಗೆ ಹಲವು ಪತ್ರಿಕೆ, ವೇದಿಕೆಗಳ ಮೂಲಕ ಮೊದಲೇ ಸಿಕ್ಕಿವೆ. ಈ ಸಂಕಲನಕ್ಕೆ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರವೀಂದ್ರ ಭಟ್ಟರ ಮುನ್ನುಡಿಯಿದೆ ಮತ್ತು ರವಿಬೆಳಗೆರೆಯವರು ಬೆನ್ನುಡಿಯನ್ನು ಬರೆದಿದ್ದಾರೆ.
ರವೀಂದ್ರ ಭಟ್ಟರು ಅಜಿತ್ ಅವರ ‘ಕವಿತೆ ಕಟ್ಟುವ ಕ್ರಿಯೆ ಪ್ರಗತಿಯಲ್ಲಿದೆ’ ಎನ್ನುತ್ತಾರೆ. ಇಂದಿನ ಕಾವ್ಯಸಂದರ್ಭದ ಕುರಿತು ಮುಖ್ಯ ಎನ್ನಿಸುವ ಒಂದು ಮಾತನ್ನು ಕೂಡ ಅವರು ಹೇಳುತ್ತಾರೆ. “ಸಮಾಜದಲ್ಲಿ ಈಗ ಎಡ ಬಲಗಳ ಚರ್ಚೆ ನಡೆಯುವ ಸಂದರ್ಭದಲ್ಲಿ ಹಾಗೂ ಎಡವೋ ಬಲವೋ ಅಂತೂ ಯಾವುದಾದರೂ ಒಂದಕ್ಕೆ ಅಂಟಿಕೊಳ್ಳುವುದು ಅನಿವಾರ್ಯ. ಮಧ್ಯಮಮಾರ್ಗ ಎನ್ನುವುದು ಎಡಬಿಡಂಗಿ ಎನ್ನುವ ಸನ್ನಿವೇಶ ಸೃಷ್ಟಿಯಾದ ಸಂದರ್ಭದಲ್ಲಿ ಅಜಿತ್ ಅವರ ಈ ಕವಿತಾಸಂಕಲನ ಹೊಸದನ್ನು ಹೇಳಲು ಪ್ರಯತ್ನಿಸುತ್ತಿದೆ”. ಸಾಹಿತ್ಯದಲ್ಲಿ ಎಡ-ಬಲಗಳು ಅನಿವಾರ್ಯವೇನಲ್ಲ. ಅಲ್ಲಿ ಮಧ್ಯಮಮಾರ್ಗವೂ ಇದೆ. ಎನ್ನುವ ಮಾತು ಹುಟ್ಟಿಕೊಂಡದ್ದು ಧಾರವಾಡದ ಸಾಹಿತ್ಯಸಂಭ್ರಮದಲ್ಲಿ. ಗ್ರಾಮಾಂತರ ಪ್ರದೇಶಗಳಲ್ಲಿ ಬೇರೂರಿ ಬರೆಯುತ್ತಿರುವ ಅಜಿತರಂತಹ ಬರಹಗಾರರಿಗೆ ಸಾಹಿತ್ಯದಲ್ಲಿ ಹೊಸದಾಗಿ ಇಣುಕುತ್ತಿರುವ ಮಧ್ಯಮಮಾರ್ಗ ಕೂಡ ಅರ್ಥಪೂರ್ಣ ಎನ್ನಿಸಿಕೊಳ್ಳುವುದಿಲ್ಲ. ಕುತೂಹಲ, ಅನ್ವೇಷಣೆ ಹಾಗೂ ಅನುಸಂಧಾನಕ್ಕೆ ಒಳಗೊಳ್ಳಬಹುದಾದ ಮಾತುಗಳಷ್ಟೇ ಕೆಲವು ಬರಹಗಾರರಿಗೆ ಸಹಜ ಎನ್ನಿಸುತ್ತವೆ. ಇದು ಇಂದಿನ ನಗರಪ್ರಜ್ಞೆಯ ಬರಹಗಾರರಿಗೆ ಕಷ್ಟ. ಬರಹಗಾರರಲ್ಲಿ ಮೂರನೆಯ ವರ್ಗ ಎಡಕ್ಕೋ ಬಲಕ್ಕೋ ತಗುಲಿಕೊಂಡಿರುವವರದು. ಸದ್ಯದ ಸಾಮಾಜಿಕ ಸಂದರ್ಭಗಳಿಂದ ಸಾಧ್ಯವಾದುದನ್ನೆಲ್ಲಾ ಪಡೆಯುವ ಬಾಚುಬಾಕ ಬರಹಗಾರರಿಗಷ್ಟೇ ಎಡ-ಬಲಗಳು ಅನಿವಾರ್ಯ. ಅಜಿತ್ ಗ್ರಾಮೀಣ ಕರ್ನಾಟಕಕ್ಕೆ ಸೇರಿದವರು ಮತ್ತು ಬರಹಗಾರನಾಗಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುವ ಛಲ ಇವರಲ್ಲಿದೆ ಎನ್ನುವುದಕ್ಕಾಗಿ ಕೆಲವು ಒಳ್ಳೆಯ ಹಾಗೂ ಹಲವು ಗದ್ಯಗಂಧಿ ಕವಿತೆಗಳಿರುವ ಈ ಸಂಕಲನವನ್ನು ಓದಬೇಕಾಗುತ್ತದೆ.
ಅಷ್ಟೇನೂ ಕಾವ್ಯದ ಬೀಸು ಇಲ್ಲದ, ಆದರೆ ಆಶಯದ ನೆಲೆಯಲ್ಲಿ ಕುತೂಹಲಕಾರಿಯಾದ ಕವಿತೆ ‘ದೇವದೂತರು’ ನನಗಿಲ್ಲಿ ಮೆಚ್ಚುಗೆಯಾದ ಕವಿತೆ.
“ದೇವದೂತರು…”
ಮೇಜಿನ ಮೇಲೆ ಗುಟ್ಕಾ ಪ್ಯಾಕು
ಎಲೆ ಅಡಿಕೆ ಪುಡಿತಂಬಾಕು
ಅರ್ಧ ಖಾಲಿಯಾದ ಓಲ್ಡ್ ಮಂಕು
ಯಾಶ್ ಟ್ರೇ ಪಕ್ಕ ಸಿಗರೇಟು ಪ್ಯಾಕು
ಅಲ್ಲಲ್ಲಿ ಹರಡಿದ ಒಂದಿಷ್ಟು ಸ್ನ್ಯಾಕು
ನೀಲಿ ಕಂಗಳ ಪುಟ್ಟ ಮಗ ಕೇಳಿದ
ಇವೆಲ್ಲವೂ ನಂಗೂ ಬೇಕು
ಮಗು, ಇದು ದೊಡ್ಡವರ ಆಟ
ಬದುಕಿ ಸಾಯುವ, ಸತ್ತು ಬದುಕುವಾಟ
‘ಓಹ್, ವಾಟ್ ಎ ಫನ್ನೀ ಗೇಮ್
ಬ್ಲೂವೇಲ್ ಬೇಡ, ಆಡ್ತೀನಿ ಇದೇ ಆಟ’
ಅಪ್ಪ ಅಂದೇ ಮೇಜು ಖಾಲಿಮಾಡಿದನಂತಲ್ಲ
ಮತ್ತೆ ಮುಟ್ಟಿದ ಸುದ್ದಿಯಿಲ್ಲ…!
*
ಮಗಳಿಗೆ ಶಾಲೆ ಸೂಟಿಯಾದರೆ
ತಾಯಿಯ ತಲೆಗೆ ಕರಕರೆ
ನೂರೆಂಟು ನೆವಮಾಡಿ
ಸುಸ್ತು ,ಸಾಗಹಾಕಬೇಕಾದರೆ
ಬಂತೊಂದು ದಿನ ಕಡೆಗೂ
ದೇವ ಕನ್ಯೆ ಉಲಿದಳು..
ಹೊಸ ಹೊಸ ಅಂಕಲ್ಲು ಬರುವರು
ಒಳ ಹೋಗಿ,ಹೊರಬರುವಾಗ ನಿಂಗೆ
ದುಡ್ಡು ಕೊಡುವರಾದರೂ ಕಣ್ಣೀರೇಕಮ್ಮಾ..?
‘ನಿನ್ನ ಭವಿಷ್ಯಕೇ ಮಗಳೇ’
ನಾನೂ ದೊಡ್ಡವಳಾಗಿ ನಿನ್ನಂಗೆ
ನನ್ನ ಮಗಳಿಗೆ ದುಡಿವೆನಮ್ಮಾ..
ಖೋಲಿಯಲ್ಲಿ ಮತ್ತೆ ಗೆಜ್ಜೆ ಸಪ್ಪಳವಿಲ್ಲ
ಹೊಲಿಗೆಯಂತ್ರದ ನಿನಾದ ನಿರಂತರ…!
ಈ ಕವಿತೆಯಲ್ಲಿ ಇಡಿಯಾಗಿ ಕಾವ್ಯದ ದಿವ್ಯತೆಯಿಲ್ಲ. ಆದರೂ, ಈ ಕವನ ಇಷ್ಟವಾಗಲು ಕಾರಣ ಅಜಿತರಿಗೆ ಇದು ಹೊಳೆದ ರೀತಿ ಮತ್ತು ಕವಿತೆಯ ಬುಡದಲ್ಲೆಲ್ಲೋ ನಿಂತಿರುವ ಲೋಕಸಂಗ್ರಹದ ಅವರ ತುಡಿತ. ಈ ಕವಿತೆಯಲ್ಲಿ ಎರಡು ಘಟನೆಗಳ ಕಥನವಿದೆ. ಈ ಕಥನಗಳ ಕೊನೆಯಲ್ಲಿ ಬರುವ ತಿರುವಿನ ಹಿಂದಿನ ಭಾವತುಮುಲ ವಾಚ್ಯವಾಗಿಲ್ಲ. ಕವಿತೆಯೊಂದರ ಆಸ್ವಾದ ಗಾಢವಾಗುವುದು ಈ ಅನಿರ್ವಚನೀಯತೆಯಿಂದ. ಅಜಿತ್ ಕವಿತೆಯ ಸಿದ್ಧಿ ಪಡೆದಿರುವುದು ಭಾಷೆಗಿಂತ ಹೆಚ್ಚಾಗಿ ಆಶಯದಿಂದ. ಇದನ್ನು ವಿವರಿಸಬೇಕಾಗುತ್ತದೆಯಾದರೂ ಅದೇ ಮತ್ತೊಂದು ಪ್ರತ್ಯೇಕ ಪ್ರಬಂಧವಾದೀತು.
ಈ ಸಂಕಲನದಲ್ಲಿ ಅಜಿತರ ಬಗ್ಗೆ ನಿರೀಕ್ಷೆ ಹುಟ್ಟಿಸುವ ಸಾಲುಗಳು ಇವು:
“ಪ್ರೇಮ ಹುಟ್ಟಿಸಲಾರದವನು/ ಪರಮಾತ್ಮನ ಪಡೆಯಲಾರನು” (ಪುಟ ೨); “ಕತ್ತಲಿನ ಸಾಮ್ರಾಜ್ಯದಲ್ಲಿ /ಅನೈತಿಕತೆಯ ಮಾತೆಲ್ಲಿಯದು / ಬೆಳಕು ಬಿದ್ದಾಗಲೇ /ಹಂಸಕ್ಷೀರನ್ಯಾಯದ ವಚನ” (ಪುಟ೩); “ಕುತೂಹಲ ಕಂದೀಲು ಹಿಡಿಸುತ್ತದೆ/ ಮನಸಿನ ವಿಕ್ಷಿಪ್ತ ವರಸೆಯ ಮಾಯಾ ಜಿಂಕೆಯ ಹುಡುಕಿಕೊಂಡು” (ಪುಟ ೫); ” ಅಬ್ಬಾ ಎಂತಹ ಸುಖವಿದೆ/ ಸಿಗೆಬಿದ್ದ ಅಡಿಕೆಹೋಳನು/ ಗಣಿಗಾರಿಕೆ ಮಾಡಿ ಕಡ್ಡಿಯಿಂದ/ ಅಲ್ಲಾಡಿಸಿ ಹೊರ ತೆಗೆಯುವುದರಲ್ಲಿ” (ಪುಟ ೨೧). ಇಂತಹ ಇನ್ನೂ ಹತ್ತಾರು ಗಮನಸೆಳೆಯುವ ಸಾಲುಗಳು ಸಂಕಲನದಲ್ಲಿವೆ.
“ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ” ಎನ್ನುತ್ತಾರೆ ಶರಣರು, ಕವಿ ಕೂಡ ಹಾಗೆಯೇ ನುಡಿಯಬೇಕು ಎಂದು ನುಡಿದು ತೋರಿಸಿದವರು ಬಸವ, ಅಲ್ಲಮ, ಅಕ್ಕ. ಇತ್ತ ಬಂದರೆ ಬೇಂದ್ರೆ, ಮಧುರಚೆನ್ನ ಹೀಗೇ ನುಡಿ ಮುರಿದು ಬರೆದವರು.
ಅಜಿತರು ನಿತ್ಯದ ಭಾಷೆಯನ್ನು ಬಡಿದು ಕವಿತೆಯೆಂಬ ಇಷ್ಟದೇವತಾವಿಗ್ರಹಕ್ಕೆ ಒಗ್ಗಿಸಿದರೆ ಮತ್ತೂ ಒಳ್ಳೆಯ ಕವಿ.
Facebook ಕಾಮೆಂಟ್ಸ್