X

ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ!

ಈವತ್ತಿನ ಸಮಾಜದಲ್ಲಿ ಹಿಂದಿನ ಒಂದು ನೈತಿಕತೆ ಉಳಿದಿಲ್ಲ ಎಂದು ಬೊಬ್ಬೆ ಹಾಕುವ ಮುನ್ನ, ನಮ್ಮ ಗಾದೆ ಮಾತುಗಳನ್ನು ಒಮ್ಮೆ ನೋಡಿದರೆ ಸಾಕು. ತಿಳಿಯುವ ವಿಚಾರ ಇಷ್ಟೇ, ಮನುಷ್ಯನ ಮೂಲ ಸ್ವಭಾವ ಅಂದಿಗೂ ಇಂದಿಗೂ ಎಂದೆಂದಿಗೂ ಒಂದೇ!  ಗಾದೆ ಮಾತುಗಳು ಅಂದಿನ ಸಮಾಜದ ಹುಳುಕನ್ನ ಸ್ಪಷ್ಟರೂಪದಲ್ಲಿ ತೋರಿಸುತ್ತದೆ. ಜನರ ಸ್ವಭಾವ ಅಂದಿನ ಸಮಾಜದ ಪದ್ದತಿಗಳನ್ನು ಹೇಳುವುದರೊಂದಿಗೆ  ‘ನಿಮ್ಮ ಹುಷಾರಿನಲ್ಲಿ ನೀವಿರಿ’ ಎಂಬ ಒಂದು ಸಣ್ಣ ಎಚ್ಚರಿಕೆಯನ್ನು ಸಹ ವರ್ಗಾಯಿಸುತ್ತದೆ.
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ! ಎನ್ನುವ ಗಾದೆ ಮಾತು ಸೃಷ್ಟಿಯಾದ ಕಾಲಘಟ್ಟವನ್ನು ನೆನೆಸಿಕೊಂಡರೆ ಒಂದು ರೀತಿಯಲ್ಲಿ ಪುಳಕವಾಗುತ್ತದೆ. ಆಗ ಜನ ಇಂದಿನಷ್ಟು  ವ್ಯವಹಾರಿಕವಾಗಿರಲಿಲ್ಲ. ಜನರ ಮನದಲ್ಲಿ ಮರುಕ , ಭೂತದಯೆ ಇದ್ದ ಕಾಲವದು. ಆದರೆ ನಿಧಾನವಾಗಿ ಅಂತಹ ಒಂದು ಸಮಾಜದಲ್ಲಿ ಬಿರುಕು ಶುರುವಾದ ಕಾಲಘಟ್ಟದಲ್ಲಿ ಇಂತಹ ಒಂದು ಗಾದೆ ಸೃಷ್ಟಿಯಾಗಿದೆ ಎನ್ನಿಸುತ್ತದೆ. ಕಷ್ಟದಲ್ಲಿರುವ ವ್ಯಕ್ತಿಯ ನೋಡಿ ಮರುಕಪಟ್ಟು ಏನಾದರೂ ಉಡುಗೊರೆ ಕೊಟ್ಟರೆ ಆತ ಅದರ ಬೆಲೆಯೆಷ್ಟು ಎಂದು ಲೆಕ್ಕ ಹಾಕಲು ಶುರು ಮಾಡಿದರೆ ಹೇಗೆ? ಪಾಲಿಗೆ ಬಂದದ್ದು ಪಂಚಾಮೃತ ಎನ್ನುವ ಬದಲು ಸಿಕ್ಕಿದ ಉಡುಗೊರೆಯ ಗುಣಮಟ್ಟ, ಬೆಲೆ ಇವುಗಳ ಬಗ್ಗೆ ಲೆಕ್ಕ ಹಾಕಲು ಆತನಿಗೆ ನೈತಿಕವಾಗಿ ಹಕ್ಕೆಲ್ಲಿದೆ? ಅಯ್ಯೋ ಪಾಪ ಅಂತ ದಾನ ಮಾಡಿದ್ದು ಅಲ್ಲದೆ ಇಂತಹ ಪರೀಕ್ಷೆಗೆ ಒಳಗಾಗಬೇಕಾದರೆ ಕೊಟ್ಟವರ ಮನಸ್ಥಿತಿ ಹೇಗಿರಬೇಡ?
ಎಂದಾದರೂ ಯಾರಾದರೂ ಉಡುಗೊರೆ ಕೊಟ್ಟರೆ ಅದರಲ್ಲಿ ಇರುವ ನ್ಯೂನ್ಯತೆ ಹುಡುಕದೆ, ಅಥವಾ ಇದು ಎಷ್ಟು ಬೆಲೆ ಬಾಳಬಹುದು ಎಂದು ಲೆಕ್ಕ ಹಾಕದೆ ಕೊಟ್ಟದ್ದನ್ನು ತುಂಬು ಮನಸ್ಸಿನಿಂದ ಸ್ವೀಕರಿಸಬೇಕು ಎನ್ನುವ ಅರ್ಥವನ್ನು ಈ ಗಾದೆ ಮಾತು ನೀಡುತ್ತದೆ. ಇದೇ ಗಾದೆ ಮಾತನ್ನು ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಅಳೆದರಂತೆ!’ ಎನ್ನುವ ರೀತಿಯಲ್ಲೂ ಬಳಸುತ್ತಾರೆ.
ಇನ್ನು ಇದನ್ನು ಸ್ಪಾನಿಷ್’ನಲ್ಲಿ ‘caballo regalado no se le miran los dientes’ (ಕಬಾಯೊ ರಿಗಲಾದೋ ನೋ ಸೆ ಲೇ ಮೀರಾನ್ ಲಾಸ್ ದಿಯಂತೆಸ್) ಎನ್ನುತ್ತಾರೆ. ಉಡುಗೊರೆಯಾಗಿ ಬಂದ ಕುದುರೆಯ ಹಲ್ಲನ್ನು ಎಣಿಸಬೇಡ, ಎನ್ನುವುದು ಯಥಾವತ್ತು ಅನುವಾದ. ಇದರ ನಿಜಾರ್ಥ ಮಾತ್ರ ನಮ್ಮ ಕನ್ನಡ ಗಾದೆಯನ್ನೇ ಹೋಲುತ್ತದೆ.  ಅಯ್ಯೋ ಪಾಪ ಎಂದು ಕುದುರೆ ಕೊಟ್ಟರೆ ಅದರ ಹಲ್ಲು ನೋಡಿ ಅದರ ವಯಸ್ಸು ಅಳೆಯಲು ಹೋಗಬೇಡಿ, ಕೊಟ್ಟಿರುವುದು ಹಣ ತೆಗೆದುಕೊಳ್ಳದೆ ಪುಕ್ಕಟೆ ಅಂದ ಮೇಲೆ ಅಲ್ಲಿ ಅಳೆದು ತೂಗಿ ನೋಡಲು ಇನ್ನೇನು ಉಳಿದಿದೆ? ಎನ್ನುವ ಅರ್ಥ ನೀಡುತ್ತದೆ.
ಇಂಗ್ಲೀಷರು ‘Don’t look at the teeth of a gifted horse’ ಎನ್ನುತ್ತಾರೆ. ಆದರೆ ಇದಕ್ಕೆ ಸಮನಾದ ಇಂಗ್ಲಿಷ್ ಗಾದೆ ಕೂಡ ಇದೆ. ಅವರು  `Beggars can’t be choosers (beggars have no choice)’ ಎನ್ನುತ್ತಾರೆ.
ಇಂಗ್ಲಿಷರು ತಮ್ಮ ಎಂದಿನ ಗತ್ತಿನಲ್ಲಿ ಭಿಕ್ಷುಕರಿಗೆ ಆರಿಸಿಕೊಳ್ಳುವ ಹಕ್ಕೆಲ್ಲಿದೆ? ಕೊಟ್ಟದ್ದನ್ನು ತೆಗೆದುಕೊಂಡು ಹೋಗಬೇಕು ಎಂದು ಸ್ವಲ್ಪ ಧಿಮಾಕಿನಿಂದ ಹೇಳಿದಂತೆ ತೋರುತ್ತದೆ. ಸ್ಪಾನಿಷ್ ಗಾದೆ ಇದೇ ಮಾತನ್ನು ಸ್ವಲ್ಪ ಅಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದೆ. ಆದರೆ ಕನ್ನಡದ ಗಾದೆ  ಒಂದು ರೀತಿಯ ವ್ಯಂಗ್ಯ ತುಂಬಿದ ನುಡಿ ಎನ್ನುವುದು ನನ್ನ ಅನಿಸಿಕೆ.
ಎಂಡ್ ಆಫ್ ದಿ ಡೇ, ಎಲ್ಲಾ ಭಾಷೆಯ ಗಾದೆಗಳ ಉದ್ದೇಶ ಮಾತ್ರ ಸೇಮ್, ಅಷ್ಟರ ಮಟ್ಟಿಗೆ ನಮ್ಮೆಲ್ಲಾ ಬೇದಗಳ ನಡುವೆ  ನಾವೆಲ್ಲ ಒಂದು.
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:
caballo: ಕುದುರೆ ಎನ್ನುವುದು ಅರ್ಥ. ಕಬಾಯೊ ಎನ್ನುವುದು ಉಚ್ಚಾರಣೆ. 
regalado: ಉಡುಗೊರೆ, ಉಡುಗೊರೆ ನೀಡಿದ್ದು, ಕೊಟ್ಟದ್ದು ಎನ್ನುವ ಅರ್ಥ. ರಿಗಲಾದೋ ಎನ್ನುವುದು ಉಚ್ಚಾರಣೆ. 
no se le miran: ನೋಡುವುದಿಲ್ಲ, ನೋಡ ಬೇಡ  ಎನ್ನುವ ಅರ್ಥ. ನೋ ಸೆ ಲೇ ಮೀರಾನ್ ಎನ್ನುವುದು ಉಚ್ಚಾರಣೆ. 
los dientes: ಹಲ್ಲುಗಳು, ದಂತ ಎನ್ನುವ ಅರ್ಥ. ಲಾಸ್ ದಿಯಂತೆಸ್ ಎನ್ನುವುದು ಉಚ್ಚಾರಣೆ. 

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post