ಭೂಮಿಯ ಮೇಲೆ ತನ್ನ ಪಾದಾರ್ಪಣೆಯದಾಗಿನಿಂದಲೂ ಮಾನವ ಒಂದಿಲ್ಲೊಂದು ಬಗೆಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಅನ್ವೇಷಿಸುತ್ತಿದ್ದಾನೆ. ಈ ಅನ್ವೇಷಣೆ ಆತನ ಹಸಿವು, ರಕ್ಷಣೆ ಹಾಗು ಮೈಗಳ್ಳತನಕ್ಕೆ ಪೂರಕವಾಗಿತ್ತಲ್ಲದೆ ಆತನ ಕುತೂಹಲ ಚಿಂತನೆಗಳಿಗೂ ದಾರಿಯನ್ನು ತೋರಿಸಿತು. ಆದ ಕಾರಣವೇ ಇತರೆ ಪ್ರಾಣಿಗಳೊಟ್ಟಿಗೆ ಗೆಡ್ಡೆಗೆಣಸು ಹಾಗೂ ಹಸಿ ಮಾಂಸವನ್ನು ತಿಂದು ಎಲ್ಲೆಂದರಲ್ಲಿ ಎದ್ದು ಬಿದ್ದು ಬೆಳೆಯುತ್ತಿದ್ದ ಜೀವಿಯೊಂದು ಇಂದು ತನ್ನ ಸಹವರ್ತಿ ಜೀವಿಗಳನೆಲ್ಲ ಬಿಟ್ಟು ಬಹಳಷ್ಟು ದೂರಕ್ಕೆ ಸಾಗಿರುವುದು. ಇಂದು ಆ ಜೀವಿಯ ನಡೆ ಕೇವಲ ಭೂಮಿಯ ಮೇಲೆ ಸಮಾಜವನ್ನು ನಿರ್ಮಿಸಿ ಬಾಳಿ ಬದುಕುವುದಲ್ಲದೆ ಪ್ರಚಂಡದೂರಗಳಲ್ಲಿರುವ ಗ್ರಹ, ಗ್ಯಾಲಕ್ಸಿಗಳ ಅಧ್ಯಯನವನ್ನೂ ಒಳಗೊಂಡಿದೆ. ಕತ್ತಲೆಯ ರಾತ್ರಿಯಲ್ಲಿ ಮಿನುಗುವ ಅಗಣಿತ ನಕ್ಷತ್ರಗಳ ನಡುವೆ ಗ್ರಹಗಳನ್ನು ಗುರುತಿಸಿ ಅದರ ಮುಖೇನ ಸೌರಮಂಡಲ, ಅಲ್ಲಿರುವ ಗ್ರಹಗಳು, ಅವುಗಳ ರಚನೆ, ತೂಕ, ಹಾಗು ತಾಪಮಾನವಲ್ಲದೆ ಅವುಗಳಿಗಿರುವ ನೈಸರ್ಗಿಕ ಉಪಗ್ರಹಗಳ ಬಗೆಗೂ ಈತ ಕೂತಲ್ಲೇ ಲೆಕ್ಕಾಚಾರ ಹಾಕತೊಡಗಿದ. ದಿನಗಳು ಕಳೆದಂತೆ, ವಿಜ್ಞಾನ ಬೆಳೆದಂತೆ ಈತನಿಗೆ ಅವುಗಳ ಮೇಲೂ ಕಾಲೂರಬೇಕೆಂಬ ತವಕ ವಿಪರೀತವಾಯಿತು. ಮಾನವನ ಈ ತವಕ ಏತಕೆ? ಅದನ್ನು ಆತನ ಮಸ್ತಿಷ್ಕದೊಳಗೆ ತುಂಬಿದವರ್ಯಾರು? ಭೂಮಿಯ ಮೇಲೆ ಬದುಕಲಿ ಎನುತ ಗಾಳಿ, ನೀರು ಎಲ್ಲವನ್ನೂ ಕೊಟ್ಟರೂ ಪಕ್ಕದ ಮನೆಯ ಮೇಲ್ಯಾಕೆ ಈತನಿಗೆ ಕಣ್ಣು ಎಂಬ ಪ್ರೆಶ್ನೆಗೆ ಉತ್ತರ ಮಾತ್ರ ನಾವುಗಳೇ ಹುಡುಕಿಕೊಳ್ಳಬೇಕು.
ಮಾನವ ಹೀಗೆ ಸೌರಮಂಡಲದಲ್ಲಿರುವ ಅಷ್ಟೂ ಗ್ರಹಗಳ ಆಳೆತ್ತರಗಳನ್ನು ಅರಿತು ಕೊನೆಗೆ ಹೆಚ್ಚುಕಡಿಮೆ ಯಾವ ಗ್ರಹಗಳ ಮೇಲೂ ಜೀವಿಗಳಿರುವುದು ಸಾಧ್ಯವಿಲ್ಲವೆಂಬುದನ್ನು ಅರಿತಮೇಲೆ ಆತನ ದೃಷ್ಟಿ ಸೌರಮಂಡಲದಾಚೆ ಇರುವ ಅನಂತ ವಿಶ್ವದ ಕಡೆಗೆ ನೆಟ್ಟಿತು. ನಮ್ಮ ಸೌರಮಂಡಲದಂತಹ ಕೋಟಿಕೋಟಿ ಸೌರಮಂಡಲಗಳಿರುವ ಅಗಾಧ ವಿಶ್ವದಲ್ಲಿ ಇತರೆ ಜೀವಿಗಳ ಇರುವಿಕೆಯನ್ನು ಅಲ್ಲಗೆಳೆಯಲಾಗುವುದಿಲ್ಲ ಎಂಬುದನ್ನರಿತು ತನ್ನ ಸಂಶೋಧನೆಯನ್ನು ಮುಂದುವರೆಸಿದರೂ ಇಂದಿಗೂ ಆತನಿಗೆ ಹೇಳಿಕೊಳ್ಳುವಂತಹ ಯಾವುದೇ ಪುರಾವೆಗಳು ಸಿಗದಿರುವುದು ವಿಪರ್ಯಾಸವೇ ಸರಿ. ಆದರೆ ಮುಂದೊಂದು ದಿನ ಇದು ಸಾಧ್ಯವಾಗದು ಎಂದು ಖಡಾಖಂಡಿತವಾಗಿ ಹೇಳಲಾಗದು. ಆದರೆ ಆ ಸಮಯದವರೆಗೆ ಮಾನವ ಬದುಕಿರಬೇಕು. ಆದರೆ ಇನ್ನು ಕೆಲವು ದಶಕಗಳಲ್ಲೇ ಸಾವಿರ ಕೋಟಿ ಜನಸಂಖ್ಯೆಯನ್ನು ಹಾಗು ಅವರುಗಳ ಉಪಟಳವನ್ನು ಸಹಿಸಿಕೊಳ್ಳಬೇಕಾದ ಭೂಮಿಯ ಕತೆ ಏನಾಗುತ್ತದೋ ಎಂಬುದನ್ನು ಯಾವೊಬ್ಬ ವಿಜ್ಞಾನಿಯೂ ನಿಖರವಾಗಿ ಹೇಳಲಾರ. ಈವೊಂದು ಕಾರಣಕ್ಕಾದರೂ ಮಾನವನಿಗೆ ತನ್ನ ಸೌರಮಂಡಲದ ಇತರ ಗ್ರಹಗಳ ಮೇಲೆ ದೃಷ್ಟಿ ನಟ್ಟಿತು. ಹಾಗೆ ಯೋಚಿಸುತ್ತಾ ಹೋದ ಮಾನವನಿಗೆ ತಕ್ಷಣ ಹೊಳೆದ ಗ್ರಹವೇ ಮಂಗಳ ಗ್ರಹ.
ಭೂಮಿ ಸೂರ್ಯನಿಂದ 93 ಮಿಲಿಯನ್ ಮೈಲುಗಳ ದೂರದಲ್ಲಿದ್ದರೆ ಮಂಗಳ ಸೂರ್ಯನಿಂದ 142 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ಹಾಗಾಗಿ ಅದು ಸೂರ್ಯನ ಸುತ್ತ ಸುತ್ತಲು ಭೂಮಿಗಿಂತಲೂ ಎರಡು ಪಟ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಅಂದರೆ ಅಲ್ಲಿನ ಇಂದು ವರ್ಷ ನಮ್ಮಯ ಎರಡು ವರ್ಷಕ್ಕೆ ಸಮ. ಆದರೆ ಕೆಲವು ನಿಮಿಷಗಳ ಅಂತರವನ್ನು ಬಿಟ್ಟರೆ ದಿನದ ಘಂಟೆಗಳು ಎರಡೂ ಗ್ರಹಗಳಲ್ಲೂ ಒಂದೇಯಾಗಿರುತ್ತದೆ. ಅಲ್ಲಿಯ ಸರಾಸರಿ ತಾಪಮಾನವೂ 30 ಡಿಗ್ರಿಗಳ ಒಳಗೆ ಇರುತ್ತದೆ. ವಾತವರಣ ಇಂಗಾಲದ ಡೈ ಆಕ್ಸೈಡ್ ಹಾಗು ಇತರ ಅನಿಲಗಳಿಂದ ಕೂಡಿದೆ. ಹೀಗೆ ಭಾಗಶಃ ಭೂಮಿಯ ಮೇಲ್ಮೈಯನ್ನೇ ಹೋಲುವ ಮಂಗಳ ಗ್ರಹ ಸಧ್ಯಕ್ಕೆ ಮಾನವನ ಲೆಕ್ಕಾಚಾರದಲ್ಲಿ ಜೀವಿಗಳ ಇರುವುಕೆಗೆ ಪೂರಕವಾಗಿರುವ ಗ್ರಹ. ಇದಲ್ಲದೆ ನಮ್ಮ ಸೌರಮಂಡಲದ ಅತಿದೊಡ್ಡ ಗ್ರಹವೆನಿಸಿಕೊಂಡ ಗುರುಗ್ರಹ ಸುಮಾರು ಎಂಬತ್ತು ಉಪಗ್ರಹಗಳನ್ನು ಒಳಗೊಂಡಿದೆ. ಆ ಉಪಗ್ರಹಗಳಲ್ಲಿ ಭೂಮಿಯ ಕಾಲು ಭಾಗದಷ್ಟು ದೊಡ್ಡದಾದ ‘ಯುರೋಪಿಯಾ’ ಎಂಬ ಉಪಗ್ರಹ ಒಂದಿದೆ. ಇದನ್ನು ಕ್ರಿಸ್ತ ಶಕ 1610 ರಲ್ಲಿ ಗೆಲಿಲಿಯೋ ತನ್ನ ಟೆಲಿಸ್ಕೋಪ್ ನ ಮೂಲಕ ಕಂಡುಹಿಡಿದ.(!) ಹೀಗೆ ಪತ್ತೆಯಾದ ಉಪಗ್ರಹದ ಮೇಲ್ಮೈ ದಟ್ಟವಾದ ಮಂಜುಗೆಡ್ಡೆಯಿಂದ ಕೂಡಿದ್ದೂ ಆ ಪದರದ ಕೆಳಗೆ ಅಗಾಧವಾದ ನೀರಿನ ಸಾಗರಗಳಿವೆ ಎಂಬುದನ್ನು ವಿಜ್ಞಾನಿಗಳು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಒಂದು ಪಕ್ಷ ಮಂಗಳವೇನಾದರೂ ಬದುಕಲು ಯೋಗ್ಯವಲ್ಲದ ನೆಲವಾದರೆ ಇಡೀ ಸೌರಮಂಡಲದಲ್ಲಿ ಬಹುಶಃ ಬದುಕಲು ಯೋಗ್ಯವಾದ ಮತ್ತೊಂದು ಗ್ರಹವೊಂದಿದ್ದರೆ ಅದು ಯುರೋಪಿಯಾ ಗ್ರಹವಾಗಬಹುದು ಎಂಬುದು ಸದ್ಯಕ್ಕೆ ಹಲವು ವಿಜ್ಞಾನಿಗಳ ಲೆಕ್ಕಾಚಾರ.
ಎರಡನೇ ವಿಶ್ವಯುದ್ಧದ ನಂತರ ವಿಶ್ವದ ಎರಡು ಮಹಾಶಕ್ತಿಗಳಾದ ಅಮೇರಿಕ ಹಾಗು ರಷ್ಯಾಗಳ ನಡುವೆ ನೆಡೆದ ಶೀತಲ ಸಮರದಲ್ಲಿ ಅಂತರಿಕ್ಷದ ಬಗೆಗಿನ ಅನ್ವೇಷಣೆಗಳು ವೇಗೋತ್ಕರ್ಷದ ಹಾದಿಯನ್ನು ಹಿಡಿದವು. ಈ ಸಮರದಲ್ಲಿ ನಾ ಮುಂದು ತಾ ಮುಂದು ಎನುತ ಮಂಗಳ ಗ್ರಹದ ಮೇಲೆ ಕಾಲಿಡಬಯಸಿದ ಎರಡು ದೇಶಗಳಲ್ಲಿ ಸಾಕಷ್ಟು ಕಷ್ಟ ನಷ್ಟಗಳ ನಂತರ ಅಮೆರಿಕದ ಮರಿನಾರ್-4 ಎಂಬ ಬಾಹ್ಯಾಕಾಶ ನೌಕೆ ಮೊದಲು (1965) ಮಂಗಳನ ಕಕ್ಷೆಯನ್ನು ಸೇರಲು ಸಫಲವಾಯಿತು. ಅಲ್ಲಿಂದ ಮುಂದೆ ಅದೇ ಅಮೇರಿಕ ಒಟ್ಟು ನಾಲ್ಕು ರೋವರ್ (ಮಂಗಳದ ನೆಲದ ಮೇಲೆ ಇಳಿದ ಯಂತ್ರಗಳು) ಗಳನ್ನು ಮಂಗಳ ಅಂಗಳದ ಮೇಲೆ ಇಳಿಸಿ ಇತಿಹಾಸವನ್ನು ಸೃಷ್ಟಿಸಿತು. ಕ್ಯೂರಿಯಾಸಿಟಿ (2011) ಹಾಗು ಆಪರ್ಚುನಿಟಿ (2003) ಎಂಬ ಎರಡು ರೋವರ್ಗಳು ಇಂದಿಗೂ ಭೂಮಿಯ ಪ್ರತಿನಿಧಿಗಳಾಗಿ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಭಾರತದ ವಿಷಯಕ್ಕೆ ಬಂದರೆ ತನ್ನ ಮೊದಲ ಉಡಾವಣೆಯಲ್ಲೇ ಯಶಸ್ವೀಯಾದ ವಿಶ್ವದ ಏಕೈಕ ದೇಶವಾಗಿ ಅಲ್ಲದೆ ವಿಶ್ವದಲ್ಲೇ ಅತೀ ಅಗ್ಗವಾದ ಮಂಗಳಯಾನ (MOM) ಪ್ರೋಬನ್ನು 2013 ರಲ್ಲಿ ಗಗನಕ್ಕೆ ಹಾರಿಸಿ ಕಕ್ಷೆಯನ್ನು ತಲುಪಿಸಿದ ಕೀರ್ತಿ ನಮ್ಮ ಇಸ್ರೋ ಸಂಸ್ಥೆಗೆ ಸೇರುತ್ತದೆ. ಈ ಮೂಲಕ ಏಷ್ಯಾದಲ್ಲೇ ಮಂಗಳವನ್ನು ತಲುಪಿದ ಮೊದಲ (ವಿಶ್ವದಲ್ಲಿ ನಾಲ್ಕನೇ) ದೇಶವೆಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.
ಎಲ್ಲ ನಕ್ಷತ್ರಗಳಂತೆ ನಮ್ಮ ಸೂರ್ಯನೂ ಒಂದು ದಿನ ನಶಿಸಲೇಬೇಕು. ಅದರಲ್ಲಿರುವ ಹೈಡ್ರೋಜೆನ್ ಹಾಗು ಹೀಲಿಯಂ ಒಂದಿಷ್ಟೂ ಬಿಡದೆ ಖಾಲಿಯಾದ ನಂತರ ಕೆಂಡಂತಹ ದೈತ್ಯ ಸೂರ್ಯ ತನ್ನ ಹತ್ತಿರವಿರುವ ಗ್ರಹಗಳನೆಲ್ಲ ನುಂಗಿ ಹಾಕಲಿದೆ. ಇದಕ್ಕೆ ಕಾರಣ ಗುರುತಾಕರ್ಷಣೆಯಷ್ಟೇ ಅಲ್ಲದೆ ಆ ಸಮಯಕ್ಕೆ ಸೂರ್ಯ ಅದೆಷ್ಟರ ಮಟ್ಟಿಗೆ ದೊಡ್ಡವನಾಗಿರುತ್ತಾನೆ ಎಂದರೆ ಆದರ ಪ್ರಸ್ತುತ ಪರಿಧಿ ಹೆಚ್ಚು ಕಡಿಮೆ ಭೂಮಿಯ ಬಳಿಗೆ ಬಂದಿರುತ್ತದೆ!. ಆದರೆ ಇದು ಜರುಗಲು ಇನ್ನು 5 ಬಿಲಿಯನ್ ವರ್ಷಗಳಿಗೂ ಹೆಚ್ಚಿನ ಕಾಲವಿದೆ. ಅಷ್ಟೊತ್ತಿಗಾದರೂ ಮಾನವನಿಗೆ ಶತಾಯ ಗತಾಯ ಅಂತರಿಕ್ಷದಲ್ಲೊಂದು ಹೊಸ ಮನೆಯನ್ನು ಹುಡುಕುವ ಅವಶ್ಯಕೆತೆಯಿದೆ.ಆದರೆ ಸೂರ್ಯನ ಕಾಲಾವಧಿ ಹೀಗೆ ಮುಗಿದ ನಂತರ ನಮ್ಮ ಇಡೀ ಸೌರಮಂಡಲವೇ ಬದುಕನ್ನು ಕಳೆದುಕೊಳ್ಳುವಾಗ ಇಲ್ಲಿಯ ಯಾವುದೇ ಗ್ರಹಗಳ ಮೇಲೂ ಆತ ಶಾಶ್ವತವಾದೊಂದು ಮನೆಯನ್ನು ನಿರ್ಮಿಸಿಕೊಳ್ಳಲಾರ. ಹಾಗಾಗಿ ಆತನ ಅರಸುವ ಗುರಿಯೇನಿದ್ದರೂ ಅಂತರಿಕ್ಷದಲ್ಲಿ ಮತ್ತೊಂದು ಜೀವಿಸಲೋಗ್ಯವಾದ ಸಂಪೂರ್ಣ ಸೌರಮಂಡಲಗಳೇ ಆಗಿದೆ.
ಹೀಗೆ ದಿನದಿಂದ ದಿನಕ್ಕೆ ಆಗಸದೆಡೆಗೆ ದಾಪುಗಾಲಿಡುತ್ತಿರುವ ಮಾನವನ ಪ್ರಯತ್ನದ ಫಲಿತಾಂಶ ಅದೆಷ್ಟರ ಮಟ್ಟಿಗೆ ಸಫಲವಾಗಲಿದೆ? ಮಂಗಳ ಗ್ರಹದಲ್ಲಿ ತನ್ನ ಎರಡನೆಯ ಮನೆಯನ್ನು ಕಾಣುವ ಆತನ ಕನಸ್ಸು ನನಸಾಗಲಿದೆಯೇ ? ಬ್ರಹ್ಮಾಂಡದ ಅಲ್ಲೆಲ್ಲೋ ನಮ್ಮಂತೆಯೇ ಹೋಲುವ ಜೀವಿಗಳೋ ಅಥವಾ ಭೂಮಿಯೊಂದು ಸಿಗುವ ಲಕ್ಷಣಗಳೆಷ್ಟಿವೆ? ಇಂದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೇ ಹೋಗಲು ಪರದಾಡುವ ಮಾನವನಿಗೆ ಅಂತಹ ಅನಂತ ದೂರದ ಪ್ರಯಾಣಕ್ಕೆ ಬೇಕಾಗುವ ವಾಹಕಗಳಾದರೂ ಎಂತಹದ್ದು? ಆದರೆ ಅಂತಹ ಜಾಗವೊಂದು ಅನಂತ ವಿಶ್ವದ ಅದ್ಯಾವ ಮೂಲೆಯಲ್ಲಿದೆ. ಅದನ್ನು ಹುಡುಕುವ ಬಗೆಯಾದರೂ ಎಂತಹದ್ದು?ಇದು ಖಂಡಿತವಾಗಿಯೂ ಸಾಧ್ಯವೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮೊಳಗೇ ಮೂಡುತ್ತವೆ.
ಐನ್’ಸ್ಟೈನ್ ನ ಟೈಮ್-ಸ್ಪೇಸ್ ಥಿಯರಿ, ಟೈಮ್ ಮಷೀನ್, ಬ್ಲಾಕ್ ಹೋಲ್ಸ್, ಏಲಿಯನ್ಸ್ ಅಥವಾ ಇನ್ನಾವುದೇ ಥಿಯರಿಗಳೂ ಸದ್ಯಕಂತೂ ಈ ಪ್ರಶ್ನೆಗಳಿಗೆ ಪೂರಕವಾದಂತಹ ಉತ್ತರವನ್ನು ನೀಡಲಾರವು. ಹಾಗಾದರೆ ಬೇರ್ಯಾವ ಬಗೆಯಲ್ಲಿ ಈ ಕಾರ್ಯವನ್ನು ಸಿದ್ಧಿಗೊಳಿಸಬಹುದು? ದೀಪದ ಬೆಳಕು ತನ್ನ ಬುಡಕ್ಕೇ ಕತ್ತಲನೆಯನ್ನು ತಂದಂತೆ ನಾವುಗಳು ವಿಶ್ವದ ಸರ್ವವನ್ನೂ ಪಶ್ಚಿಮದ ಕನ್ನಡಕ ಒಂದರಲ್ಲೇ ನೋಡಲಿಚ್ಛಿಸುತ್ತೇವೆ. ನಮ್ಮ ವೇದ ಉಪನಿಷತ್ತುಗಳಲ್ಲಿ ತಿಳಿಸಿರುವ ಫಾರ್ಮುಲಾಗಳ ಮೇಲೂ ಒಮ್ಮೆ ಕಣ್ಣಾಯಿಸಿದರೆ ಬಹುಷಃ ಇನ್ನೊಂದು ಬಗೆಯ ಸಂಶೋಧನೆಯನ್ನು ಹುಟ್ಟುಹಾಕಬಹುದೇನೋ. ಮಹಾಭಾರತದದಲ್ಲಿ ಬಳಸಲಾದ ಬ್ರಹ್ಮಾಸ್ತ್ರ, ವಿಮಾನ, ವಿಷ್ಣವಾಸ್ತ್ರ ಎಂಬ ಹಲವು ಪದಗಳಾಗಲಿ, ಕಾಪರ್ನಿಕಸ್ ನಿಗಿಂತಲೂ ಸಹಸ್ರ ವರ್ಷಗಳ ಮುಂಚೆಯೇ ಸೌರಮಂಡಲ, ಗ್ರಹಗಳು, ಅವುಗಳ ಚಲನೆ, ದೂರದ ನಕ್ಷತ್ರಗಳು, ಗ್ರಹಣ ಇವುಗಳ ಬಗ್ಗೆ ವಿವರಿಸಿರುವ ವೇದ ಉಪನಿಷತ್ತುಗಳಾಗಲಿ ಎಲ್ಲವೂ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನದ ಆಳವನ್ನು ತೋರಿಸುತ್ತದೆ. ಇಂತಹ ಭಾರತೀಯ ವಿಜ್ಞಾನದ ನಿಟ್ಟಿನಲ್ಲೇನಾದರೂ ಸಂಶೋಧನೆ ನೆಡೆಸಿದರೆ ಬಹುಷಃ ಮೇಲಿನ ಕೆಲವು ಪ್ರೆಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದೇನೋ. ಹಾಗಾದರೆ ಆ ಕಾಲಕ್ಕೆ ಭಾರತದ ವಿಜ್ಞಾನ ಅಷ್ಟೊಂದು ಮುಂದುವರೆದಿದ್ದರೆ ಇಂದಿಗೆ ನಾವುಗಳು ನಮ್ಮಂತೆಯೇ ಹೋಲುವ ಅದೆಷ್ಟೋ ಗ್ರಹಗಳನ್ನು ಕಂಡುಹಿಡಿಯಬಹುದಿತ್ತು, ಅದೇಕೆ ಸಾಧ್ಯವಾಗಲಿಲ್ಲ ಎಂಬ ಪ್ರೆಶ್ನೆ ಉದ್ಭವಿಸುವುದು ಸಹಜ. ಆದರೆ ಹಿಂದೂ ವಿಶ್ವವಿಜ್ಞಾನ (Hindu Cosmology) ದ ಪ್ರಕಾರ ಇಡೀ ಬ್ರಹ್ಮಾಂಡವು ಹುಟ್ಟುವ ಮತ್ತು ಸಾಯುವ ಆವರ್ತ ನಿಯಮವನ್ನು ಅನುಸರಿಸುತ್ತದೆ. ಈ ನಿಯಮವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಇಡೀ ಬ್ರಹ್ಮಾಂಡವೇ ಇಂತಹ ಹುಟ್ಟು ಸಾವುಗಳ ನಡುವೆ ಚಲಿಸುತ್ತಿದ್ದರೆ ಮಾನವ ಹೊಸ ಗ್ರಹವೊಂದನ್ನು ಹುಡುಕಿದರೆಷ್ಟು ಅಥವ ಬಿಟ್ಟರೆಷ್ಟು. ಪಡೆದುಕೊಂಡಿರುವ ನಿಸರ್ಗವನ್ನು ಹಾಳುಗೆಡವದೆ ಮನೆಯಲ್ಲಿಯೇ ಬದುಕಿ ನಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆವುದು ನೆಮ್ಮದಿಯ ಕಾರ್ಯ. ಆದರಿಂದಲೇ ಏನೋ ನಮ್ಮ ಹಿರಿಕರು ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಆ ವಿಜ್ಞಾನವನ್ನು ಬೇರೊಂದು ಗ್ರಹದ ಅನ್ವೇಷಣೆಗೆ ಬಳಸಿ ಅದನ್ನೂ ಹಾಳುಗೆಡಹುವ ಕಾರ್ಯಕ್ಕೆ ಕೈಯಾಕದಿದ್ದದ್ದು.
ಒಟ್ಟಿನಲ್ಲಿ ಅಂಬೆಗಾಲಿಡುತ ಬೆಳೆವ ಮಗುವಿಗೆ ಪ್ರತಿದಿನವೂ ಕುತೂಹಲ ಹಾಗು ಬೆರಗನ್ನು ನೀಡುವ ಪರಿಸರದಂತೆ ಇಂದು ವಿಶ್ವವು ಮಾನವನಿಗೆ ಗೋಚರವಾಗುತ್ತಿದೆ. ಈ ಅನಂತ ಸಮುದ್ರದಲ್ಲಿ ಆತನಿಗೆ ಕಲಿತಷ್ಟೂ, ತಿಳಿದಷ್ಟೂ ಕಡಿಮೆಯೇ. ಸೃಷ್ಟಿಯ ಮುಂದೆ ಇದು ಆತನ ಕುಬ್ಜತೆಯನ್ನು ತೋರಿಸುತ್ತದೆ. ಇದು ಮಹತ್ತ್ವಾಕಾಂಕ್ಷಿ ಮಾನವನಿಗೆ ಸುಮ್ಮನಿರದಿರಲು ವಿಷಯವೊಂದನ್ನು ಮಾತ್ರ ಸದಾ ತೆರೆದಿರುತ್ತದೆ. ಒಟ್ಟಿನಲ್ಲಿ ಮಾನವನ ಹೊಟ್ಟೆಗೆ ಹಿಟ್ಟು ಖಾಲಿಯಾಗುವ ಮುನ್ನ ಪಕ್ಕದ ಮನೆಯನ್ನು ಹುಡುಕುವ ಆತನ ಹುಚ್ಚು ಅದೆಂದು ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಲೂ ನಮಗೆ ಸಾಧ್ಯವಾಗದೇನೋ?
Facebook ಕಾಮೆಂಟ್ಸ್