ಕಟ್ಟಿರೋನ್ ಕೋಡಂಗಿ ಬಾಕಿ ಇಟ್ಟಿರೋನೇ ವೀರಭದ್ರ!
ಕರ್ನಾಟಕ ಸರಕಾರದ ಇಂದಿನ ಸಾಲ ಮನ್ನಾ ಕಾರ್ಯಕ್ರಮವನ್ನು ಸರಿಯಾಗಿ ಗಮನಿಸಿದ್ದೇ ಆದರೆ ಖಂಡಿತವಾಗಿಯೂ ಜನ ಹೀಗೆಯೇ ಅನ್ನಬಹುದು ಎಂದೆನ್ನಿಸುತ್ತದೆ! ಮತ್ತಿನ್ನೇನು, ಕೃಷಿ ಸಾಲ ತೆಗೆದುಕೊಂಡು ಅದ್ಯಾರು ಸಾಲವನ್ನು ಕಟ್ಟದೇ ಬ್ಯಾಂಕ್ ಮ್ಯಾನೇಜರನ್ನು ಈವರೆಗೆ ಸತಾಯಿಸುತ್ತಿದ್ದರೋ ಅವರುಗಳೇ ಇಂದು ಹೀರೋಗಳಂತಾಗಿದ್ದಾರೆ. ಹಾಗೆಯೇ ಸಾಲ ಸೋಲ ಮಾಡಿಕೊಂಡು ಬ್ಯಾಂಕಿನ ಕಂತನ್ನು ಸರಿಯಾಗಿ ತುಂಬಿರುವ ನಿಜವಾದ ರೈತ ಕೋಡಂಗಿಯಂತಾಗಿದ್ದಾನೆ! ಇದು ಅಪಾರ್ಥವಲ್ಲ. ನಿಜಕ್ಕೂ ಇವತ್ತಿನ ಸಾಲ ಮನ್ನಾದ ಅಸಲಿಯತ್ತು ಇದೇ ಆಗಿದೆ! ಕಟ್ಟಲು ಮನಸಿದ್ದವವನನ್ನೂ, ಕಟ್ಟಲು ತಾಕತ್ತು ಇವರುವವನನ್ನೂ ಹಾಗೇನೇ ಆರ್‍ಟಿಸಿ ಹಿಡಿದುಕೊಂಡು ರೈತ ಎಂಬ ಹೆಸರಲ್ಲಿ ಸಾಲ ಎತ್ತಿ ಅದೇ ಬ್ಯಾಂಕಿನಲ್ಲಿ ‘ಫಿಕ್ಸೆಡ್ ಡೆಪೋಸಿಟ್’ ಇಟ್ಟಿರುವಂತಹ ‘ರೈತ’ನನ್ನೂ ಕೂಡ ಇವತ್ತಿನ ಸಾಲ ಮನ್ನಾ ಯೋಜನೆಯು ಇನ್ನು ಮುಂದೆ ಕೃಷಿ ಸಾಲವನ್ನು ಕಟ್ಟುವುದೇ ಒಂದು ದೊಡ್ಡ ಮೂರ್ಖತನ ಎನ್ನುವಂತೆ ಮಾಡಿದೆ!
ನಿಜಕ್ಕೂ ಸರಕಾರಕ್ಕೆ ಏನಾಗಿದೆ? ರೈತರನ್ನು ಬೆಂಬಲಿಸಬೇಕು ಎನ್ನುವುದು ನಿಜ. ಅವರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಅವರ ಬದುಕನ್ನೂ ಹಸನಾಗಿಸಬೇಕು ಎನ್ನುವುದು ನಿಜವೇ. ಹಾಗೇನೆ ಅವರಿಗೊಂದಷ್ಟು ಆರ್ಥಿಕ ನೆರವನ್ನು ನೀಡುವುದು ಕೂಡ ಸರಕಾರದ ಆದ್ಯ ಕರ್ತವ್ಯವೇ ಸರಿ. ಯಾಕೆಂದರೆ ರೈತನ ಉಳಿವು ಅದು ಬರೇ ಕೃಷಿಯ ಉಳಿವು ಅಲ್ಲ ಬದಲಾಗಿ ಅದು ನಮ್ಮ ದೇಶದ ಉಳಿವು. ನಮ್ಮೆಲ್ಲರ ಉಳಿವು. ಈ ಸತ್ಯಕ್ಕೆ ಅಡ್ಡ ಮಾತಿಲ್ಲ ಬಿಡಿ. ಹಾಗಂತ ರೈತರ ಶ್ರೇಯೋಭಿವೃದ್ಧಿ ಎಂದೆನ್ನುತ್ತಾ ಯದ್ವ ತದ್ವಾವಾಗಿ ತೆಗೆದಿರುವ ಸಾಲವನ್ನೆಲ್ಲಾ ಇನ್ನು ಕಟ್ಟಬೇಡಿ ಎಂದು ಘೋಷಿಸಿದ್ದು ಅದೆಷ್ಟು ಸರಿ ಎಂಬುದು ಮಾತ್ರ ಇಲ್ಲಿ ಬಹು ಮುಖ್ಯ ವಿಷಯ. ಅಷ್ಟಕ್ಕೂ ಸಾಲ ಮನ್ನಾದ ಹೊರೆಯನ್ನು ಹೊರೆಯಲು ನಮ್ಮ ಕರ್ನಾಟಕ ಸರಕಾರದ ತಿಜೋರಿ ತುಂಬಿ ತುಳುಕುತ್ತಿದೆಯೇ!? ಅದಕ್ಕೆ ಬೇಕಾಗುವ ಆರ್ಥಿಕ ಕ್ರೋಢೀಕರಣವಿದೆಯೇ!? ಅದ್ವಾವುದೂ ಇಲ್ಲದೆ ಸರಿಸುಮಾರು 45 ಸಾವಿರಕ್ಕೂ ಮೇಲ್ಪಟ್ಟು ಸಾಲದ ಹೊರೆ ಕರ್ನಾಟಕದ ಪ್ರತೀ ವ್ಯಕ್ತಿಯ ಮೇಲೆ ಅದಾಗಲೇ ಇರುವಾಗ ಮತ್ತೊಂದಷ್ಟು ಸಾಲ ಮಾಡಲು ಸರಕಾರ ಮುಂದಾಗಿರುವುದುರ ಔಚಿತ್ಯವೇನು? ಸಾಲ ಮನ್ನಾದ ಘೋಷಣೆ ಮಾಡಿದವರು ಅಥವಾ ಮಾಡಿದ ಪಕ್ಷವು ತನ್ನ ಸ್ವಂತ ಖರ್ಚಿನಿಂದ ಸಾಲಮನ್ನಾ ಮಾಡಿರುತ್ತಿದ್ದರೆ ಆಗ ಅದು ಬೇರೆ ಮಾತಾಗುತ್ತಿತ್ತು ಆದರೆ ಪಕ್ಷವೊಂದು ಚುನಾವಣ ಹೊಸ್ತಿಲಲ್ಲಿ ಅಧಿಕಾರದ ಲಾಲಾಸೆಯಿಂದ ಹಿಂದು ಮುಂದು ಯೋಚಿಸಿದೆ ಘೋಷಿಸಿದ ಯೋಜನೆಯನ್ನು ‘ಸ್ವ ಪ್ರತಿಷ್ಠೆಯ ವಿಷಯವಾಗಿಸಿಕೊಂಡು’ ಸಾಕಾರ ರೂಪಕ್ಕೆ ಇಳಿಸಿರುವುದು ಅಷ್ಟು ಸುಲಭವಾಗಿ ಒಪ್ಪತಕ್ಕ ವಿಚಾರವಲ್ಲ. ಯೋಚಿಸಿ ನಾಳೆ ಇನ್ನೊಂದು ಪಕ್ಷವು ಚುನಾವಣೆಯ ಹೊಸ್ತಿಲಲ್ಲಿ ‘ತಾನು ಅಧಿಕಾರಕ್ಕೆ ಬಂದರೆ ಕೃಷಿ ಸಾಲ, ಗೃಹ ಸಾಲ ಮುಂತಾದ ಎಲ್ಲಾ ಸಾಲಗಳನ್ನು ಮನ್ನಾ ಮಾಡುತ್ತೇನೆ ಎಂದು ಬಿಟ್ಟರೆ ಮತ್ತದನ್ನು ಒಣ ಪ್ರತಿಷ್ಠೆಯಾಗಿಟ್ಟುಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದರೆ ಪರಿಸ್ಥಿತಿ ಏನಾದೀತು!? ಆ ಪಕ್ಷಕ್ಕೆ ಅಧಿಕಾರ ಸಿಗುವುದಂತೂ ಗ್ಯಾರಂಟಿ ಬಿಡಿ ಆದರೆ ಸರಕಾರದ ತಿಜೋರಿಯ ಗತಿ!?
ಹೌದು ಸಾಲಮನ್ನಾ ಯೋಜನೆಯನ್ನು ವಿರೋಧಿಸಿದರೆ ರೈತರ ವಿರೋಧಿ ಎಂದೆನ್ನಬಹುದು. ಆದರೆ ವಿಷಯ ಖಂಡಿತಾ ಅದಲ್ಲ. ಬದಲಾಗಿ ಸರಕಾರದ ಈ ರೀತಿಯ ಘೋಷಣೆಯಿಂದ ಆಗಬಹುದಾದ ಪರಿಣಾಮಗಳೇನು ಎಂಬುದೇ ಪ್ರಸ್ತುತ ವಿಷಯ. 2007ರಿಂದ ಇರುವ ಸುಸ್ತಿ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದಿದೆ ಸರಕಾರ. ಅಂದರೆ ಬ್ಯಾಂಕ್‍ನ ಸುಸ್ತಿ ಸಾಲ ಸರಕಾರದ ಕೃಪೆಯಿಂದ ಸಂಪೂರ್ಣ ಪಾವತಿಯಾಗುವ ಸನ್ನಿವೇಶವಿದು. ಒಂದು ವೇಳೆ ಸಾಲ ಮನ್ನಾದಂತಹ ಪ್ರಸ್ತಾಪ ಇಲ್ಲದೇ ಹೋಗಿರುತ್ತಿದ್ದರೆ ಈ ಸಾಲಗಳೆಲ್ಲಾ ಏನಾಗುತ್ತಿದ್ದುವು? ಬ್ಯಾಂಕ್‍ಗಳು ರೈತರ ಆಸ್ತಿಯನ್ನು ಮುಟ್ಟುಗೋಲು ಹಾಕುತ್ತಿತ್ತೇ!? ತೋರಿಕೆಗೆ ಹಾಗೆನ್ನಿಸಿದರೂ ಖಂಡಿತಾ ಆ ರೀತಿ ಆಗದು. ಸಾಲ ವಸೂಲಿಯಲ್ಲಿ ಸರಕಾರಿ ಬ್ಯಾಂಕ್‍ಗಳು ಅಷ್ಟೊಂದು ಕಠೋರವಾಗುವ ಸಂದರ್ಭ ಬಲು ಕಡಿಮೆಯೇ. ಮಾತ್ರವೇ ಅಲ್ಲದೆ ಅಡಮಾನು ಆಸ್ತಿಯ ಜಪ್ತಿ ಒಂದು ದೊಡ್ಡ ತಲೆನೋವಾದ್ದರಿಂದ ಈ ಬಗ್ಗೆ ಬ್ಯಾಂಕ್‍ಗಳು ಕೂಡ ಹೆಚ್ಚು ಆಸಕ್ತಿವಹಿಸದು. ಸಾಲ ವಸೂಲಿಯಾಗದೇ ಸುಸ್ತಿ ಸಾಲವಾಗಿ ಮಾರ್ಪಟ್ಟರೆ, ಸಾಲಿಗ ನಿಜವಾಗಿಯೂ ಆರ್ಥಿಕ ಅಪಾಯವನ್ನು ಎದುರಿಸುತ್ತಿದ್ದರೆ ಆವಾಗ ಬ್ಯಾಂಕ್‍ಗಳೇ ಒಂದಷ್ಟು ವರ್ಷ ಕಾದು, ಸಾಲಗಾರನ ಬಾಗಿಲು ಬಡಿದು ಆ ಬಳಿಕ ‘ಕಾಂಪ್ರಮೈಸ್’ ಸೂತ್ರಕ್ಕೆ ಇಳಿದುಬಿಡುತ್ತದೆ! ಅಂದರೆ ‘ಲೋಕ ಅದಾಲತ್’ ನಡೆಸಿಯೋ ಇಲ್ಲವೇ ಯಾವುದಾದರೂ ‘ರಿಯಾಯಿತಿ ಮೇಳ’ವನ್ನು ನಡೆಸಿಯೋ ಸಾಲಗಾರನಿಗೆ ಅದೆಷ್ಟು ಕಟ್ಟಲು ಸಾಧ್ಯವೋ ಅಷ್ಟನ್ನು ಕಟ್ಟಿಸಿಕೊಂಡು ಬಾಕಿ ಸಾಲವನ್ನು ವಜಾಗೊಳಿಸುವ ಪರಿಪಾಠ ಬ್ಯಾಂಕ್‍ಗಳಲ್ಲಿಯೇ ಇದೆ ಎಂಬುದು ಸತ್ಯ! ಹೀಗೆ ಕಟ್ಟಿಸುವಾಗ ಅದು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿಕೊಂಡು ಉಳಿಕೆಯಿರುವ ಅಸಲಿಯಲ್ಲೂ (ಔಟ್ ಸ್ಟಾಂಡಿಂಗ್ ಬುಕ್ ಬ್ಯಾಲೆನ್ಸ್) ಬರೇ 10-20%ನಷ್ಟನ್ನೂ ಮಾತ್ರ ಕಟ್ಟಿಸಿಕೊಂಡು ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ಬ್ಯಾಂಕ್‍ಗಳೇ ಸಾಲವನ್ನು ಕೊನೆಗೊಳಿಸುತ್ತದೆ. ಹೀಗೆ ನಡೆಯುವ ‘ರಿಯಾಯಿತಿ ಮೇಳ’ದಿಂದ ಒಂದೆಡೆ ರೈತನು ಸಾಲದಿಂದ ಮುಕ್ತಿಯನ್ನೂ ಪಡೆಯುತ್ತಾನೆ ಹಾಗೂ ಆ ನಷ್ಟದ ತೂಕವನ್ನು ಸರಕಾರಿ ಬ್ಯಾಂಕ್‍ಗಳೇ ಬರಿಸಿದಂತಾಗುತ್ತದೆ. ಇದರಿಂದ ಸರಕಾರದ ಖಜಾನೆಗೆ ಅದ್ಯಾವ ನಷ್ಟವೂ ಇರದು. ಆದರೆ ಇಂದಿನ ಸರಕಾರದ ಸಾಲಮನ್ನಾದಿಂದ ಅತ್ತ ರೈತರಿಗೂ ಲಾಭ ಇತ್ತ ಬ್ಯಾಂಕ್‍ಗಳಿಗೂ ಲಾಭ. ಜೊತೆಗ್ತೆ ಅದನ್ನು ಘೋಷಿಸಿದ ರಾಜಕಾರಣಿಗಳಿಗೂ! ಹಾಗಾದರೆ ಇಲ್ಲಿ ನಷ್ಟ ಯಾರಿಗೆ? ಯೋಚಿಸುವುದೇ ಬೇಡ ಅದು ನಮ್ಮ ನಿಮ್ಮಂತಹ ಜನಸಾಮಾನ್ಯರಿಗೆ ಅಷ್ಟೇ! ಇವತ್ತು ಸರಕಾರ ಸಾಲಮನ್ನಾದಿಂದ ಹೊರೆಯಾಗಲಿರುವ ಹೆಚ್ಚುವರಿ ದುಡ್ಡಿಗಾಗಿ ಅದು ಸಲೀಸಾಗಿ ಇಂಧನದ (ಜೊತೆಗೆ ಇನ್ನೊಂದಷ್ಟು ವಸ್ತುಗಳ) ಬೆಲೆ ಏರಿಕೆಗೆ ಕೈಹಾಕಿದೆ. ಇಂಧನದ ಬೆಲೆ ಏರಿಕೆ ನೇರವಾಗಿ ಪ್ರಯಾಣದರದ ಏರಿಕೆಗೆ ಕಾರಣವಾಗಲಿದೆ ಎಂಬುದು ನಿಸ್ಸಂಶಯ. ಅಂದರೆ ನಷ್ಟದ ಹೊರೆಯು ಜನಸಾಮಾನ್ಯನಿಗೆ ವರ್ಗಾವಣೆಯಾದಂತೆ!
ಇನ್ನು ಸಾಲಮನ್ನಾದ ಘೋಷಣೆ ಮಾಡುವ ಮೊದಲು ಅದಕ್ಕೊಂದು ರೂಪುರೇಷೆಗಳನ್ನಾದರೂ ಇಡಬೇಕಿತ್ತು. ಯಾವ ಯಾವ ರೈತ ಎಷ್ಟು ಸಾಲ ಮಾಡಿದ್ದಾನೆ, ಮಾಡಿರುವ ಸಾಲ ನಿಜಕ್ಕೂ ಕೃಷಿಕಾರ್ಯಕ್ಕೆ ವಿನಿಯೋಗಿಸಲಾಗಿದೆಯೇ. ಇರುವ ಜಾಗದಲ್ಲಿ ಬೆಳೆ ಬೆಳೆಯಲಾಗಿದೆಯೇ, ತೆಗೆದಿರುವ ಸಾಲವನ್ನು ಕಟ್ಟಲಾಗದಷ್ಟು ಆತ ಕಂಗಾಲಾಗಿದ್ದಾನೆಯೇ ಇವೇ ಮುಂತಾದ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ಆ ಬಳಿಕ ಯಾರ್ಯಾರು ಸಾಲಮನ್ನಾಕ್ಕೆ ಅರ್ಹರು ಎಂಬುದನ್ನು ಸಾರಬೇಕಿತ್ತು. ಕನಿಷ್ಟ ಪಕ್ಷ ಬರಪೀಡಿತ ಕೃಷಿ ಭೂಮಿಯ ರೈತರ ಸಾಲವನ್ನು ಮಾತ್ರ ಮನ್ನಾ ಎಂದು ಘೋಷಿಸಬಹುದಿತ್ತು. ಅಥವಾ ಕನಿಷ್ಠ ಪಕ್ಷ ಕಟ್ಟಲು ಸದ್ಯದ ಕಾಲಘಟ್ಟದಲ್ಲಿ ಅನಾನುಕೂಲವಾಗಿರುವ ರೈತರನ್ನು ಅದ್ಯಾವುದಾದರೂ ಮಾನದಂಡದ ಮೂಲಕ ಗುರುತಿಸಿ ಅವರ ಸಾಲದ ಮೇಲಿನ ಬಡ್ಡಿಯನ್ನ ಮನ್ನಾ ಮಾಡಬಹುದಿತ್ತು. ಜೊತೆಗೆ ಸಾಲ ತೀರಿಸಲು ಇನ್ನೊಂದಷ್ಟು ವರುಷಗಳ ವಿಸ್ತರಣೆ ಮಾಡಬಹುದಿತ್ತು. ಹೀಗೆ ಮಾಡುವುದರಿಂದ ಸಾಲ ತೆಗೆದುಕೊಂಡಿರುವ ರೈತನಿಗೆ ತನ್ನ ಸಾಲದ ಜವಾಬ್ದಾರಿ ಉಳಿದುಬಿಟ್ಟಂತಾಗುತ್ತದೆ. ಅದು ಬಿಟ್ಟು 2ಲಕ್ಷದ ವರಗಿನ ಸುಸ್ತಿ ಹಾಗು ಚಾಲ್ತಿ ಸಾಲ ಸಂಪೂರ್ಣ ಮನ್ನಾ ಹಾಗೂ ಅದಾಗಲೇ ಕಟ್ಟಿ ಮುಗಿಸಿರುವ ರೈತರಿಗೆ 25 ಸಾವಿರ ರೂಪಾಯಿಗಳ ಹಿಂದಿರುಗಿಸುವಿಕೆ ಎಂಬ ಅವೈಜ್ಞಾನಿಕ ಕ್ರಮವನ್ನು ಮುಂದಿರಿಸಿದ್ದು ಯೋಚನೆಯಿಲ್ಲದ ಯೋಜನೆ ಎನ್ನದೆ ವಿಧಿಯಿಲ್ಲ! ನೇರವಾಗಿ ಹೇಳುವುದಾದರೆ ಇದು ಚುನಾವಣೆ ಗೆಲ್ಲಲು ತೋರಿಸಿದ ‘ಆಮಿಷ’ ಎಂದೇ ಹೇಳಬೇಕು! ನಯಾಪೈಸೆ ಕಟ್ಟದವನದ್ದು ಸಂಪೂರ್ಣ ಮನ್ನಾ ಆದರೆ ನಿಯತ್ತಿನಿಂದ ಕಟ್ಟಿರೋನಿಗೆ ಬರೇ 25 ಸಾವಿರ ರೂಪಾಯಿಗಳ ಪರಿಹಾರ ಎಂದಾದರೆ ‘ತಾನು ಸಾಲ ಮರುಪಾವತಿ ಮಾಡಿದ್ದೇ ತಪ್ಪಾ?’ ಎಂದು ರೈತ ಪ್ರಶ್ನಿಸುವುದು ಖಂಡಿತ! ಹೀಗಾದರೆ ಇನ್ನು ಮುಂದೆ ಅದ್ಯಾವ ರೈತ ಸಾಲ ಮರುಪಾವತಿಯ ದುಸ್ಸಾಹಸಕ್ಕೆ ಇಳಿಯಬಲ್ಲ!? ರೈತರಿಗೆ ನಿಜವಾಗಿಯೂ ಹಲವಾರು ಸಮಸ್ಯೆಗಳಿವೆ. ಆದರೆ ಸಾಲವನ್ನು ಮನ್ನಾ ಮಾಡಿದ ತಕ್ಷಣ ಅವರ ಸಮಸೆಯಗಳೆಲ್ಲಾ ಇತ್ಯರ್ಥವಾಗಬಲ್ಲುದು ಎನ್ನುವಂತಿದೆ ಸರಕಾರದ ನೀತಿ! 2007ರಿಂದ ಇರುವ ಸುಸ್ತಿ ಸಾಲವನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಅಂದರೆ ಅಷ್ಟೂ ವರ್ಷದಿಂದ ರೈತ ಸಾಲವನ್ನು ಬಾಕಿ ಇಟ್ಟಿದಾನೆಂದರೆ ಅದಷ್ಟೂ ವರ್ಷಗಳಲ್ಲಿ ಅವನಿಗೆ ಬಂಪರ್ ಬೆಳೆ ಬಂದೇ ಇಲ್ಲವೇ? ಪ್ರತೀ ವರ್ಷವೂ ಬರಗಾಲವೇ ಆಗಿದ್ದು ನಷ್ಟವನ್ನಷ್ಟನ್ನೇ ಅನುಭವಿಸಿದ್ದಾನೆಯೇ?
ಇವತ್ತು ಸಾಲಮನ್ನಾದ ಘೋಷಣೆ ಹೊರಬೀಳುತ್ತಲೇ ಬ್ಯಾಂಕ್‍ಗಳಲ್ಲಿ ಮತ್ತೊಂದಷ್ಟು ಕೃಷಿ ಸಾಲದ ಅರ್ಜಿಗಳು ಬಂದು ಬೀಳುತ್ತಲಿವೆಯಂತೆ! ಹೀಗೆ ಬರುತ್ತಿರುವ ಅರ್ಜಿಗಳಲ್ಲಿ ಎಲ್ಲವೂ ಕೃಷಿಕರದ್ದೇ ಅಂದುಕೊಂಡರೆ ಅದು ಮೂರ್ಖತನವಾದೀತು. ಕೃಷಿ ಭೂಮಿ ಹೊಂದಿರುವ ಹಾಗೂ ಇತರ ಮೂಲದಿಂದ ಆದಾಯ ಹೊಂದಿರುವ ಜನಗಳು ಕೂಡ ಇಂದು ಕೃಷಿಗೆ ಎಂದು ಸಾಲ ಎತ್ತಲು ಮುಂದಾಗುತ್ತಿದ್ದಾರೆ ಎಂಬುದು ತೆರೆದ ಸತ್ಯ. ಕಾರಣ ಒಂದಲ್ಲ ಒಂದು ದಿನ ಸಾಲಮನ್ನಾ ಆಗಿಯೇ ಆಗುತ್ತದೆ ಎಂಬ ಭರವಸೆಯಿಂದ! ಹೌದು ಸಾಲಮನ್ನಾದಂತಾಹ ಪ್ರಸ್ತಾವನೆ ಇಂದು ಬ್ಯಾಂಕ್‍ನ ಸಾಲದ ದಿಕ್ಕನ್ನೇ ಬದಲಿಸಿದಂತಿದೆ. ಕೃಷಿ ಸಾಲವೆಂದರೆ ಅದು ಮನ್ನಾ ಆಗುವವರೆಗೆ ಮರೆತುಬಿಡುವ ಸಾಲ ಎಂದೇ ಬ್ಯಾಂಕ್‍ಗಳು ಭಾವಿಸುವಂತಾಗಿದೆ! ನೆನಪಿಡಿ ಬ್ಯಾಂಕ್‍ಗಳು ಸಾಲ ನೀಡುವುದು ಅದು ನಮ್ಮ ನಿಮ್ಮಂತೋರು ಇಟ್ಟಿರೋ ಹಣದಿಂದಲೇ! ಸರಕಾರದ ತಿಜೋರಿಯಲ್ಲಿರುವ ದುಡ್ಡು ಕೂಡ ಅದು ನಮ್ಮ ನಿಮ್ಮಂತೋರು ಕಟ್ಟಿರುವ ತೆರಿಗೆದ್ದೇ. ಆದ್ದರಿಂದ ಇವೆರೆಡರ ಖರ್ಚುಗಳಿಗೂ ಒಂದಷ್ಟು ಕಡಿವಾಣ ಬೇಕು. ಹೇಳಿ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು!?
ಚಿತ್ರ: ಸುವರ್ಣ ನ್ಯೂಸ್
Facebook ಕಾಮೆಂಟ್ಸ್