“ನನಗೆ ಒಂದು ಘಂಟೆ ಕಾಲಾವಕಾಶ ಕೊಡಿ. ನಾನು ಯಾವ ಜನರ ಬಳಿ ಸಾವಿರ ಸಾವಿರ ರೂಪಾಯಿ ದೋಚಿದ್ದೇನೋ ಅದೇ ಜನರ ಬಳಿ ಮತ್ತೊಮ್ಮೆ ದೋಚುತ್ತೇನೆ. ಅದೂ ಕೂಡ ಜನರು ಸ್ವ ಇಚ್ಛೆಯಿಂದ ಹಣ ನೀಡುವಂತೆ ಮಾಡುತ್ತೇನೆ.”
(ಪೊಲೀಸರಿಗೆ ಹೇಳಿದ ಮಾತು.)
ಡಾ. ರಾಜೇಂದ್ರ ಪ್ರಸಾದ್ ಈ ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲೊಬ್ಬರು. ಅತೀ ದೀರ್ಘಾವಧಿ ಅಂದರೆ ಸುಮಾರು 12 ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದವರು ಅವರು ಮಾತ್ರ. ದೇಶಕ್ಕಾಗಿ ಅವರ ಸೇವೆ ಬಣ್ಣಿಸಲಸಾಧ್ಯವಾದರೂ ಸಣ್ಣ ಉದಾಹರಣೆಗೆ ಹೇಳುವುದಾದರೆ ತಮ್ಮ ಹುದ್ದೆಗೆ ನಿಶ್ಚಿತವಾದ ಸಂಬಳದ ಅರ್ಧಭಾಗ ಮಾತ್ರ ತೆಗೆದುಕೊಳ್ಳುತ್ತಿದ್ದರು. ಕೊನೆಕೊನೆಯಲ್ಲಿ ಕೇವಲ 25% ಸಂಬಳ ಮಾತ್ರವೇ ತೆಗೆದುಕೊಳ್ಳುತ್ತಿದ್ದರು. ದೇಶದ ಚರಿತ್ರೆ ಸೇರಿದ ಇಂತಹ ಮಹಾನ್ ವ್ಯಕ್ತಿಯು ಹುಟ್ಟಿದ ಹಳ್ಳಿಯ ಪಕ್ಕದ ಹಳ್ಳಿಯಲ್ಲೇ ದೇಶದ ಚರಿತ್ರೆಯಲ್ಲಿ ದಾಖಲಾದ “ಮಹಾವಂಚಕ” ಎಂಬ ಕುಖ್ಯಾತಿ ಪಡೆದ ವ್ಯಕ್ತಿಯೋರ್ವನ ಜನನ ಆಗಿದ್ದು.
ಅದು 1930-40ರ ದಶಕ. ಈಗ ಎರಡು ಸಾವಿರ ರೂಪಾಯಿ ನೋಟು ಎಲ್ಲರ ಜೇಬಲ್ಲೂ ಸಿಗುವ ಕಾಲ. ಈಗ ಲಕ್ಷಕ್ಕೂ ಸಹ ಹೆಚ್ಚು ಬೆಲೆಯಿಲ್ಲ. ಸಾವಿರಾರು ಕೋಟಿ ಎಂದರೆ ಮಾತ್ರ ಜನ ಬಾಯಿ ಬಿಡುತ್ತಾರಷ್ಟೇ. ಆದರೆ ಒಮ್ಮೆ ಸ್ವಾತಂತ್ರ್ಯ ಪಡೆದ, ಸ್ವಾತಂತ್ರ್ಯ ನಂತರದ ಕಾಲಘಟ್ಟ ಊಹಿಸಿಕೊಳ್ಳಿ. ಆಗ ನೂರು ರೂಪಾಯಿಯೇ ಬಹಳ ದೊಡ್ಡ ಮೊತ್ತ. ಅಂತಹ ಕಾಲದಲ್ಲೇ ಲಕ್ಷಲಕ್ಷಗಟ್ಟಲೆ ದೋಚಿದ ವಂಚಕ ಸಾಮಾನ್ಯ ವಂಚಕನೇ?
ಅವನ ಮೊದಲ ವಂಚನೆ ಆರಂಭವಾಗಿದ್ದು ತನ್ನ ಪಕ್ಕದ ಮನೆಯವನ ಬ್ಯಾಂಕ್ ಅಕೌಂಟಿನಿಂದ ಸಹಿ ನಕಲು ಮಾಡಿ ಸಾವಿರ ರೂಪಾಯಿ ದೋಚಿದ್ದು. ಅವನ ಮಹಾವಂಚನೆಗಳ ಯಾವುದೇ ದೂರುಗಳಲ್ಲೂ ಹೊಡೆದಾಟ, ರಕ್ತಪಾತ, ಕೊಲೆ, ಜಗಳ ಮತ್ತಿತರ ಯಾವುದೇ ದಾಖಲೆಯಿಲ್ಲ. ಅವನು ಲೂಟಿ ಮಾಡುತ್ತಿದ್ದದ್ದು ಕೇವಲ ನಯ ವಂಚನೆಯಿಂದ. ಎಂತಹ ಕ್ಲಿಷ್ಟಕರ ಸಹಿಯೇ ಆಗಿರಲಿ ಸಲೀಸಾಗಿ ನಕಲುಮಾಡುವುದರಲ್ಲಿ ಆತ ನಿಸ್ಸೀಮ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರೀ ಅಧಿಕಾರಿಗಳಿಗೆ ಟೋಪಿ ಹಾಕುವುದು, ದೊಡ್ಡ ಅಧಿಕಾರಿಯ ಸೋಲಿನಲ್ಲಿ ಹೋಗಿ ಶ್ರೀಮಂತರನ್ನು, ವ್ಯಾಪಾರಸ್ಥರನ್ನು ವಂಚಿಸುವುದರಲ್ಲಿ ಆತ ನಿಷ್ಣಾತ. ಅಷ್ಟೇ ಏಕೆ ಪ್ರಪಂಚದ ಏಳು ಅಧ್ಬುತಗಳಲ್ಲೊಂದಾದ “ತಾಜ್ ಮಹಲ್”ನೇ ಇವನು ವಿದೇಶಿಯರಿಗೆ ಮಾರಿದ್ದ ಅದೂ ಒಮ್ಮೆಯಲ್ಲ ಹಲವುಬಾರಿ! ಎಂದರೆ ನೀವು ಮುಚ್ಚಿದ ಬಾಯಿ ತೆರೆಯುವಿರಿ.
ಕೇವಲ ತಾಜ್ ಮಹಲ್ ಮಾತ್ರವಲ್ಲ ರಾಷ್ಟ್ರಪತಿ ಭವನ, ಕೆಂಪುಕೋಟೆ, ಜೊತೆಗೆ ಪಾರ್ಲಿಮೆಂಟನ್ನೂ ಮಾರಿದ ಹುಂಬ ಆತ. ಮತ್ತೊಂದು ವಿನೋದದ ವಿಷಯವೆಂದರೆ ಕೇವಲ ಪಾರ್ಲಿಮೆಂಟ್ ಕಟ್ಟಡ ಮಾತ್ರವಲ್ಲ ಅದರಲ್ಲಿರುವ 545 ಲೋಕಸಭಾ ಸದಸ್ಯರನ್ನೂ ಸೇರಿಸಿ ಮಾರಾಟ ಮಾಡುವ ವ್ಯಾಪಾರ ಕುದುರಿಸಿದ್ದ ಚಾಣಕ್ಯ ಅವನು.
ಅವನ ಹಳ್ಳಿಯವರಿಗೆ ಆತ ಎಂದೂ ಖಳನಾಯಕನಾಗಿ ಕಾಣಲಿಲ್ಲ. ಅಪರೂಪಕ್ಕೆ ಹಳ್ಳಿಗೆ ಬಂದು ಹಳ್ಳಿಯಲ್ಲಿದ್ದ ಬಡವರೆಲ್ಲರಿಗೂ ಹಣ ಹಂಚಿ ಹೋಗುತ್ತಿದ್ದನಂತೆ. ಅವರು ಅವನ ಬಗೆಗೆ ಹೇಳುವುದೇ ಬೇರೆ. “ಅವನು ಶ್ರೀಮಂತರನ್ನು ದೋಚಿದ್ದು. ಅವನು ಚತುರ, ಚಾಣಾಕ್ಷ, ಡಾ.ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಬಿಹಾರ ರಾಜ್ಯವು ದೇಶಕ್ಕೆ ನೀಡಿದ ಮೂರು ಮಹಾನ್ ವ್ಯಕ್ತಿಗಳಲ್ಲಿ ಆತನೂ ಒಬ್ಬ” ಎನ್ನುವುದೇ ಅವರ ಮಾತು.
ಅವನ ನೈಪುಣ್ಯತೆಗೆ ಎಂತಹವರೂ ತಲೆದೂಗಲೇಬೇಕು. ಹತ್ತುರಾಜ್ಯಗಳು ಸೇರಿದಂತೆ ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಅವನು ಒಂಭತ್ತು ಬಾರಿ ಬಂಧಿಸಲ್ಪಟ್ಟವನು ಹಾಗೂ ಅಷ್ಟುಬಾರಿಯೂ ತಪ್ಪಿಸಿಕೊಂಡವನು. ಎಂಟುಬಾರಿಯೂ ಅವನು ಜೈಲಿನಿಂದ ತಪ್ಪಿಸಿಕೊಳ್ಳಲು ಹೂಡಿದ ತಂತ್ರಗಾರಿಕೆ ರೋಚಕವಾದದ್ದು. ಒಂಭತ್ತನೆಯ ಬಾರಿಯೂ ಪೋಲೀಸರ ಸುಪರ್ದಿಯಿಂದ ಅವರಿಗೇ ಚಳ್ಳೇಹಣ್ಣು ತಿನ್ನಿಸಿ ತಪ್ಪಿಸಿಕೊಂಡು ತಲೆಮರೆಸಿಕೊಂಡ ಅವನನ್ನು ಕೊನೆಗೂ ಪೂಲೀಸರು ಹಿಡಿಯಲಾಗಲಿಲ್ಲ. ಹಲವಾರು ನ್ಯಾಯಾಲಯಗಳಿಂದ ಒಟ್ಟು 113 ವರ್ಷಗಳ ಸಜೆ ವಿಧಿಸಲ್ಪಟ್ಟಿತ್ತು ಅವನಮೇಲೆ. ಐವತ್ತು ವರ್ಷಗಳ ಕಾಲ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆತ ಸತ್ತಮೇಲೆಯೇ ಅವನ ಮೇಲಿದ್ದ ಪ್ರಕರಣಗಳೆಲ್ಲವೂ ಖುಲಾಸೆಯಾಯಿತು ಹೊರತು ಅವನನ್ನು ಕೊನೆಗೂ ಬಂಧಿಸಲಾಗಲಿಲ್ಲ. ಅದೂ ಅವನು ಎರೆಡೆರಡು ಬಾರಿ ಸತ್ತ ದಾಖಲೆಯಿರುವುದೇ ಸೋಜಿಗದ ಸಂಗತಿ. ಆದ್ದರಿಂದಲೇ ಎಷ್ಟೋ ವಂಚಕರು ತಮಗೆ ಅವನೇ ಸ್ಫೂರ್ತಿ ಎಂದು ಹೇಳಿಕೊಂಡಿರುವ ಸಂಗತಿಗಳೂ ಇವೆ. ಇಂದಿಗೂ ಕುಖ್ಯಾತ ವಂಚಕರನ್ನು ನಮ್ಮ ದೇಶದಲ್ಲಿ ಅವನ ಹೆಸರಿನಿಂದಲೇ ಕರೆಯುತ್ತಾರೆ.
ಅವನೇ “ಮಿಥಿಲೇಶ್ ಕುಮಾರ್ ಶ್ರೀವಾಸ್ತವ್” ಪೋಲೀಸರ ದಾಖಲೆಗಳಲ್ಲಿ ಅಜರಾಮರನಾಗಿರುವ “ನಟ್ವರ್ ಲಾಲ್”.
ಅದು 1996ನೇ ಇಸವಿ. ವಾರಣಾಸಿಯ ಪೋಲಿಸರು ವಂಚನೆ ಮಾಡಲು ಪ್ರಯತ್ನಿಸಿದ ಎಂಬ ದೂರಿನ ಮೇಲೆ ವೃದ್ಧನೊಬ್ಬನನ್ನು ಬಂಧಿಸಿದ್ದರು. ಅವನು ಬಿಹಾರದವನೆಂದು ತಿಳಿದಮೇಲೆ ಪಾಟ್ನಾ CID ಯವರಿಗೆ ಇವರು ಬಂಧಿಸಿದ್ದ ಅಂಬಿಕಾ ಪಾಂಡೆ ಅಲಿಯಾಸ್ ಬಿ.ಎನ್.ಮಯೂರ್ ಅಲಿಯಾಸ್ ಶಂಕರ್ ಲಾಲ್ ಎಂಬುವವನ ಬಗ್ಗೆ ಮಾಹಿತಿ ಕೇಳಿದರು. ಅವನ ಚಿತ್ರ ಕಂಪ್ಯೂಟರ್ ತೆರೆಯಮೇಲೆ ಮೂಡುತ್ತಿದ್ದಂತೆ ಪಾಟ್ನಾ C.I.D. ವಿಭಾಗದವರು ಒಮ್ಮೆಲೇ ಪುಳಕಿತರಾದರು. ಕಾರಣ ವಾರಣಾಸಿಯ ಪೋಲೀಸರ ಸುಪರ್ದಿಯಲ್ಲಿ ಯಾವನೋ ಸಾಮಾನ್ಯ ವಂಚಕ ಇರಲಿಲ್ಲ. ಅವನು ಯಾವ ಅಂಬಿಕನೂ ಅಲ್ಲ, ಮಯೂರನು ಅಲ್ಲ, ಬದಲಾಗಿ ಮಿಥಿಲೇಶ್ ಕುಮಾರ್ ಶ್ರೀವಾಸ್ತವ್ ಅಲಿಯಾಸ್ ನಟ್ವರ್ ಲಾಲ್.
ಪಾಟ್ನಾದ ಪೋಲೀಸರು ಅಷ್ಟೊಂದು ಪುಳಕಿತರಾಗಿದ್ದಕ್ಕೆ ಕಾರಣ ನಟ್ವರ್ಲಾಲ್ 1979ನೇ ಇಸವಿಯಲ್ಲೇ ಮುಂಬೈ ಜೈಲಿನಿಂದ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದನು. ಅಂದರೆ ಬರೋಬ್ಬರಿ 26 ವರ್ಷಗಳು ಕಳೆದುಹೋಗಿದ್ದವು. ಆತ ಎಲ್ಲಿಹೋದ, ಏನು ಮಾಡುತ್ತಿರಬಹುದು ಎಂಬ ಯಾವ ಮಾಹಿತಿಯೂ ಪೋಲೀಸರಿಗೆ ದೊರಕಿರಲಿಲ್ಲ. ಅವನು ಸತ್ತುಹೋಗಿದ್ದಾನೆಂದೇ ಊಹಿಸಿ ಅವರು ಅವನನ್ನು ಹುಡುಕುವುದನ್ನು ನಿಲ್ಲಿಸಿದ್ದರು.
ಅವನನ್ನು ಕೊನೆಯಬಾರಿ ಬಂಧಿಸಿದಾಗ ಅವನಿಗೆ 84 ವರ್ಷ ವಯಸ್ಸಾಗಿತ್ತು. ಮೂರು ತಿಂಗಳು ಹಿಂದೆಯಷ್ಟೇ ತಾನು ಕೇಂದ್ರ ಹಣಕಾಸು ಸಚಿವ ಎನ್.ಡಿ.ತಿವಾರಿಯವರ ಪಿ.ಎ. ಎಂದು ಹೇಳಿ ಸಂಸದರೆಲ್ಲರಿಗೂ ಕೈಗಡಿಯಾರ ಖರೀದಿಸುವ ಆದೇಶ ಬಂದಿದೆಯೆಂದೂ ಅದಕ್ಕಾಗಿ ಬೆಲೆಬಾಳುವ ನೂರಾರು ಸಂಖ್ಯೆಯ ಕೈಗಡಿಯಾರಗಳನ್ನು ಖರೀದಿಸಿ ನಕಲೀ ಬ್ಯಾಂಕ್ ಡ್ರಾಫ್ಟ್ ನೀಡಿ ವಂಚಿಸಿ ಪರಾರಿಯಾಗಿದ್ದನು. ಹೀಗೆ ನಾನಾ ಕಡೆಗಳಲ್ಲಿ ತಾನು ಅಧಿಕಾರಿಯೆಂದೂ, ಸಚಿವ, ಸಂಸದರ ಪಿ.ಎ. ಎಂದೂ ಹತ್ತುಹಲವು ಡ್ರಾಮಾ ಮಾಡಿ ಬಹಳಷ್ಟು ವರ್ತಕರಿಗೆ ಟೋಪಿಹಾಕುತ್ತಿದ್ದನು. ಮೋಜಿನ ಸಂಗತಿಯೆಂದರೆ ಕಾನ್ಪುರದ ವರ್ತಕನೋರ್ವ ಇವನಿಂದ ಟೊಪ್ಪಿಹಾಕಿಸಿಕೊಂಡಿದ್ದಲ್ಲದೆ ಇವನನ್ನು ಸರ್ಕಾರದ ಉನ್ನತ ಅಧಿಕಾರಿ ಎಂದು ನಂಬಿ ಒಂದು ಸೂಟ್ಕೇಸ್ನಷ್ಟು ದುಡ್ಡನ್ನೇ ಲಂಚವಾಗಿ ನೀಡಿದ್ದನಂತೆ.
ಅಷ್ಟೇ ಏಕೆ, ತಾನು ಸಚಿವ ವಿ.ಪಿ.ಸಿಂಗರ ಪಿ.ಎ. ಎಂದು ಪರಿಚಯಿಸಿಕೊಂಡು ದೆಹಲಿಯ ಚಿನ್ನದ ಅಂಗಡಿಯಲ್ಲಿ ವಿ.ಪಿ.ಸಿಂಗರ ಮಗನ ಮದುವೆಗೆ ಚಿನ್ನ ಖರೀದಿಸುತ್ತಿರುವುದಾಗಿ ನಕಲಿ ಡ್ರಾಫ್ಟ್ ನೀಡಿ ಟೊಪ್ಪಿಹಾಕಿದ್ದ. ವಯಸ್ಸಾಗುತ್ತಾ ಬಂದಾಗ ತಾಜ್ ಮಹಲ್ ಮುಂತಾದ ಕಟ್ಟಡಗಳನ್ನು ಮಾರುವುದು ಮುಂತಾದ ದೊಡ್ಡ ದೊಡ್ಡ ವಂಚನೆ ಬಿಟ್ಟು, ವರ್ತಕರಿಗೆ ಮೋಸ ಮಾಡುವುದು ಮುಂತಾದ ಚಿಕ್ಕ ಪುಟ್ಟ ವಂಚನೆಗೆ ಇಳಿದಿದ್ದನು. ಟಾಟಾ, ಬಿರ್ಲಾ ಅಂಬಾನಿ ಮುಂತಾದ ದೊಡ್ಡ ಉದ್ದಿಮೆದಾರರೂ ಇವನ ನಯವಂಚನೆಗೆ ಒಳಗಾದವರೇ. ತಾನೊಬ್ಬ ಸಮಾಜ ಸೇವಕನೆಂಬ ಸೋಲಿನಲ್ಲಿ ಹೋಗಿ ಅವರಿಂದ ದೊಡ್ಡ ಮೊತ್ತದ ವಂತಿಗೆ ಪಡೆದಿದ್ದನಂತೆ. ಇವನ ಪ್ರತಿಯೊಂದು ವಂಚನೆ ಪ್ರಕರಣದಲ್ಲೂ ಅದಕ್ಕೆ ತಕ್ಕ ತಯಾರಿ, ಪಟಾಲಂ ಇಲ್ಲದೆ ಹೋಗುತ್ತಿರಲಿಲ್ಲ. ನೋಡಿದವರಿಗೆ ನಂಬಿಕೆ ಹುಟ್ಟುವಂತಹ ಮಾತು, ಭಾಷೆಯ ಮೇಲಿನ ಹಿಡಿತ, ನಟನೆ, ಹಾವ ಭಾವ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದನು. ಇವನ ಗಾಳಕ್ಕೆ ಬಿದ್ದವರಲ್ಲಿ ಬ್ಯಾಂಕ್ ನವರೂ ಇದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನಕಲಿ ದಾಖಲೆಗಳನ್ನು ನೀಡಿ ಆಗಿನ ಕಾಲದಲ್ಲೇ ಲಕ್ಷಲಕ್ಷಗಟ್ಟಲೆ ಟೋಪಿ ಹಾಕಿದ್ದನು.
1957ರಲ್ಲಿ ಕಾನ್ಪುರ ಜೈಲಿನಿಂದ ಇವನು ತಪ್ಪಿಸಿಕೊಂಡನು. ಪ್ರಪಂಚದಲ್ಲೇ ಹೆಸರುವಾಸಿಯಾಗಿರುವ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣಗಳಲ್ಲಿ ಇದೂ ಒಂದು. ಜೈಲಿನ ಸಬ್ ಇನ್ಸ್ಪೆಕ್ಟರ್ ಯುನೀಫಾರ್ಮನ್ನು ಯಾರಿಗೂ ತಿಳಿಯದಹಾಗೆ ಹೊರಗಿನಿಂದ ಮೊದಲೇ ತರಿಸಿಟ್ಟುಕೊಂಡಿದ್ದನು. ಜೈಲಿನ ತನ್ನ ಕಂಬಿಯ ಬಳಿ ಗಸ್ತು ತಿರುಗುವ ಪೇದೆಗಳಿಗೆ ಭರಪೂರ ಒಂದು ಸೂಟ್ಕೇಸ್ನಷ್ಟು ದುಡ್ಡನ್ನು ಲಂಚ ನೀಡುವುದಾಗಿ ಆಮಿಷವೊಡ್ಡಿ ಒಪ್ಪಿಸಿದ್ದನು. ಮೊದಲೇ ನಿರ್ಧರಿಸಿದ ಯೋಜನೆಯಂತೆ ಸರಾಗವಾಗಿ ಜೈಲಿನಿಂದ ತಪ್ಪಿಸಿಕೊಂಡನು. ತನ್ನ ಕೊಠಡಿ ಬಳಿ ಇರುವ ಪೇದೆಗಳಿಗೆ ಸೂಟ್ಕೇಸ್ ನೀಡಿ ಅಲ್ಲಿಂದ ಹೊರಬಂದನು. ಸಬ್ ಇನ್ಸ್ಪೆಕ್ಟರ್ ಡ್ರೆಸ್ನಲ್ಲಿದ್ದ ಇವನು ಜೈಲಿನಿಂದ ಹೊರ ನಡೆದು ಬರುವಾಗ ಎಲ್ಲರು ಎಸ್.ಐ. ಎಂದೇ ತಿಳಿದು ಸೆಲ್ಯೂಟ್ ಹೊಡೆದು ಎಲ್ಲಾ ಗೇಟುಗಳಿಂದ ಹೊರ ನಡೆಯಲು ಅನುವುಮಾಡಿಕೊಟ್ಟಿದ್ದರು. ಜೈಲಿನ ಹೊರಗೆ ಇವನಿಗಾಗಿ ಕಾಯುತ್ತಿದ್ದ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದನು. ಇನ್ನೂ ಮೋಜಿನ ವಿಷಯವೆಂದರೆ ಆ ಪೇದೆಗಳು ಸೂಟ್ಕೇಸ್ ತೆಗೆದು ನೋಡಿದಾಗ ಅದರಲ್ಲಿ ಹಳೆಯ ನ್ಯೂಸ್ ಪೇಪರ್ ಗಳು ತುಂಬಿದ್ದವು.
1980ರಲ್ಲೂ ಮತ್ತೊಮ್ಮೆ ಪೊಲೀಸರ ಸುಪರ್ದಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ತನಗೆ ಕಿಡ್ನಿ ಸಮಸ್ಯೆ ಕಾಡುತ್ತಿರುವ ನೆಪವೊಡ್ಡಿ ಮುಂಬೈ ಜೈಲಿನಿಂದ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ತಪ್ಪಿಸಿಕೊಂಡಿದ್ದನು.
ಕೊನೆಯ ಬಾರಿಯೂ ಅಂದರೆ ಒಂಭತ್ತನೆಯ ಬಾರಿಯೂ ಜೈಲಿನಿಂದ ಆಸ್ಪತ್ರೆಗೆ ಕರೆದೊಯ್ಯುವಾಗ ದೆಹಲಿ ರೈಲ್ವೇ ನಿಲ್ದಾಣದಲ್ಲಿ ಪೋಲೀಸರ ಸರ್ಪಗಾವಲಿನಿಂದ ತಪ್ಪಿಸಿಕೊಂಡಾಗ ಅವನಿಗೆ 84 ವರ್ಷ ವಯಸ್ಸಾಗಿತ್ತು. 1996ರಲ್ಲಿ ಅವನ ತಮ್ಮ ಅವನು ತೀರಿಕೊಂಡನೆಂದು ತಿಳಿಸಿದನು. ಹಾಗೆಂದೇ ಎಲ್ಲರೂ ನಂಬಿದ್ದರು. ಆದರೆ 2009ರಲ್ಲಿ ಅವನ ಪರ ವಕಾಲತ್ತು ವಹಿಸುತ್ತಿದ್ದ ಲೋಯರ್ ನ್ಯಾಯಾಲಯಕ್ಕೆ ಇತ್ತೀಚೆಗೆ ಅವನು ಮರಣಹೊಂದಿದನೆಂದು ಮರಣಪತ್ರವನ್ನು ನೀಡಿ ಅವನಮೇಲಿದ್ದ ಕೇಸುಗಳನ್ನೆಲ್ಲಾ ಖುಲಾಸೆ ಮಾಡಬೇಕೆಂದು ಮನವಿ ಸಲ್ಲಿಸಿದನು.
ಒಟ್ಟಿನಲ್ಲಿ ಐವತ್ತು ವರ್ಷಗಳ ಕಾಲ ಹಲವಾರು ರಾಜ್ಯಗಳ ಪೋಲೀಸರನ್ನು ಕಾಡಿದ, ಹಲವಾರು ಜನರಿಗೆ ಹಲವಾರು ರೀತಿಗಳಲ್ಲಿ ವಂಚಿಸಿದ, ಅಪ್ರತಿಮ ವಂಚಕನನ್ನು ಕೊನೆಗೂ ಹಿಡಿಯಲಾಗಲಿಲ್ಲ. ವಂಚಿಸಿದ ಅಷ್ಟೊಂದು ಹಣವನ್ನು ಏನು ಮಾಡಿದ? ಅಷ್ಟು ವರ್ಷಗಳ ಕಾಲ ಎಲ್ಲಿ ಭೂಗತನಾಗಿದ್ದ? ಅವನ ಬೆಂಬಲಕ್ಕೆ ಯಾರ್ಯಾರು ಇದ್ದರು? ಕೊನೆಗೆ ಅವನು ಏನಾದ ಎಂಬ ಯಾವ ಮಾಹಿತಿಯೂ ಯಾರಿಗೂ ದೊರಕಲಿಲ್ಲ. ದೇಶದ ಕುಖ್ಯಾತರ ಪ್ರಕರಣಗಳಲ್ಲಿ ಇವನದು ತುಂಬ ವಿಚಿತ್ರ ಹಾಗೂ ವಿಭಿನ್ನವಾಗಿ ಇಂದಿಗೂ ಉಳಿದಿದೆ.
ಇವನ ಕುರಿತಾದ ಸಿನಿಮಾ ಎಂದೋ ಬಂದಿದ್ದರೂ ಈಗಿನವರಿಗೆ ಇವನ ಪರಿಚಯವಿಲ್ಲ. ಏನೂ ಅಲ್ಲದ ಸಂಜಯ್ ದತ್ತನನ್ನೇ ಅಷ್ಟೊಂದು ಉತ್ಪ್ರೇಕ್ಷೆ ಮಾಡಿ ಅವನ ಜೀವನ ಕುರಿತಾದ ಸಿನಿಮಾ ಮಾಡಿದ್ದರಿಂದ ಪುನಃ ಇವನ ಕುರಿತಾಗಿಯೂ ಲೇಖನ ಬರೆಯುವ ಸಂದರ್ಭ ಒದಗಿಬಂತು.
– ವಿಕ್ರಮ್ ಜೋಯ್ಸ್.
ಶಿವಮೊಗ್ಗ.
Facebook ಕಾಮೆಂಟ್ಸ್