X

ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ

ವಿಮರ್ಶೆ


ಸಂಪಾದಕರು: ಶಾಂತಿನಾಥ ದೇಸಾಯಿ,

ಮುದ್ರಣವರ್ಷ: 1987, ಪುಟಗಳು: 202, ಬೆಲೆ: ರೂ.35

ಪ್ರಕಾಶಕರು: ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ (ಉ.ಕ.)

(ರುಕ್ಮಿಣಿ-ವಿಠೋಬಾ ಗ್ರಂಥಮಾಲೆ ಪರವಾಗಿ)


ಹೊಸಗನ್ನಡ ಕಾವ್ಯದ ಮಹತ್ತ್ವದ ಕವಿಗಳಲ್ಲಿ ಒಬ್ಬರಾದ ಗಂಗಾಧರ ಚಿತ್ತಾಲರು (1923-1987) ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಹನೇಹಳ್ಳಿಯವರು. ಇವರು ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಎರಡನೆಯ ಅಣ್ಣ. ಐವರು ಚಿತ್ತಾಲ ಸಹೋದರರಲ್ಲಿ ಹಿರಿಯರಾಗಿದ್ದ ದಾಮೋದರ ಚಿತ್ತಾಲರು ಧೀಮಂತವಾದ ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದ್ದರು. ಗಂಗಾಧರ ಚಿತ್ತಾಲರು ಓದಿದ್ದು ಹನೇಹಳ್ಳಿ, ಧಾರವಾಡ, ಮತ್ತು ಸಾಂಗ್ಲಿಯಲ್ಲಿ; ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಅಂದಿನ ಮುಂಬಯಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತದ ಭಾಗಗಳನ್ನೊಳಗೊಂಡಿದ್ದ ವಿಶಾಲ ಮುಂಬಯಿರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿದ್ದರು. ಇವರು ಪದವಿಯಲ್ಲಿ ಓದಿದ್ದು ಇಂಗ್ಲಿಷ್ ಸಾಹಿತ್ಯ. ಭಾರತ ಸರಕಾರದ ಅಕೌಂಟ್ಸ್ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿ ಕೆಲಸ ಮಾಡಿ 1977ರಲ್ಲಿ ಸೇವೆಯಿಂದ ದಿಲ್ಲಿಯಲ್ಲಿ ನಿವೃತ್ತರಾಗುವ ಪೂರ್ವದಲ್ಲಿ ಅಕೌಂಟ್ಸ್ ಇಲಾಖೆಯಲ್ಲಿ ಡೈರೆಕ್ಟರ್ ಆಗಿ ವಾಷಿಂಗ್ಟನ್ ಮತ್ತು ಲಂಡನ್‍ನಲ್ಲಿ ಕೆಲಸಮಾಡಿದ್ದರು. ಇಪ್ಪತ್ತೈದು ವರ್ಷಗಳಿಂದ ಪಾರ್ಕಿನ್‍ಸನ್ ಖಾಯಿಲೆಯಿಂದ ಬಳಲುತ್ತಿದ್ದ ಗಂಗಾಧರ ಚಿತ್ತಾಲರಿಗೆ ಕೊನೆಗೂ ಅದೇ ಬೇನೆ ವರ ಸಾವಿಗೆ ಕಾರಣವಾಯಿತು. ಇದು ಅವರ ಬಾಳಿನ ರೇಖಾಚಿತ್ರ.

ಶ್ರೀಯುತರಾದ ಗಂಗಾಧರ ಚಿತ್ತಾಲ, ಸು.ರಂ. ಎಕ್ಕುಂಡಿ, ವಿ.ಜಿ. ಭಟ್ಟ ಹಾಗೂ ಆರ್.ವಿ.ಕುಲಕರ್ಣಿ (ಮರಾಠಿಭಾಷೆಯ ಖ್ಯಾತ ಬರಹಗಾರ) ಇವರೆಲ್ಲ ಸಾಂಗ್ಲಿಯಲ್ಲಿ ಗೋಕಾಕರ ವಿದ್ಯಾರ್ಥಿಗಳಷ್ಟೇ ಆಗಿರಲಿಲ್ಲ, ಅವರು ನಡೆಸುತ್ತಿದ್ದ  ಸಾಹಿತ್ಯ ಸಂಘ `ವರುಣಕುಂಜ’ದಲ್ಲಿ ಸಕ್ರಿಯರಾಗಿದ್ದರು. ಮುಂದೆ ಈ ಮೂವರೂ ನವ್ಯಕಾವ್ಯವನ್ನು ತಮ್ಮದೇ ಶೈಲಿಯಲ್ಲಿ ರಚಿಸಿ ಖ್ಯಾತರಾಗಿದ್ದಾರೆ. ಆದರೆ ಇವರ ನವ್ಯಮಾರ್ಗಗಳು ವಿಭಿನ್ನವಾಗಿದ್ದವು. ಗಂಗಾಧರ ಚಿತ್ತಾಲರು ಕ್ಲಾಸಿಕಲ್ ಮನೋಭಾವದ ಹಿನ್ನೆಲೆಯನ್ನು ಉಳಿಸಿಕೊಂಡೂ ನವ್ಯ ಕವಿತೆಗಳನ್ನು ಬರೆದು ಕನ್ನಡಕ್ಕೆ ‘ಕಾಲದ ಕರೆ’, ‘ಮನುಕುಲದ ಹಾಡು’, ‘ಹರಿವ ನೀರಿದು’ ಹಾಗೂ ‘ಸಂಪರ್ಕ’ ಈ ನಾಲ್ಕು ಸಂಕಲನಗಳನ್ನು ನೀಡಿದ್ದಾರೆ. ಇವರ ಒಟ್ಟೂ ಕವಿತೆಗಳ ಸಂಖ್ಯೆ ಎಪ್ಪತ್ತೆರಡು ಮಾತ್ರ. ಚಿತ್ತಾಲರ ‘ಸಮಗ್ರ ಕಾವ್ಯ’ 1985ರಲ್ಲಿ ಬಂದಿದೆ. ಆದರೆ ಕನ್ನಡ ಓದುಗರ ವಲಯದಿಂದ ಚಿತ್ತಾಲರ ಕಾವ್ಯದ ಮೇಲೆ ವಿಮರ್ಶೆ-ಪರಾಮರ್ಶೆಗಳು ಉತ್ಸಾಹದಿಂದ ಬರಲೇಇಲ್ಲ. ಆ ಕೊರತೆ ಇನ್ನೂ ಉಳಿದುಕೊಂಡಿದೆ. ಸಾಂದರ್ಭಿಕವಾಗಿ ಶಾಂತಿನಾಥ ದೇಸಾಯಿ, ಕುರ್ತಕೋಟಿ, ಟಿ.ಪಿ. ಅಶೋಕ, ಡಾ.ವಿ.ಕೆ. ಗೋಕಾಕ್, ಗೌರೀಶ ಕಾಯ್ಕಿಣಿ, ಅನಂತಮೂರ್ತಿ ಮುಂತಾದವರು ಬರೆದ ಕೆಲವೇ ಲೇಖನಗಳನ್ನು ಬಿಟ್ಟರೆ ಚಿತ್ತಾಲರು ಅಕ್ಷರಶಃ ನಿರ್ಲಕ್ಷಿತ ಕವಿ.

ಕರ್ನಾಟಕದಿಂದ ಹೊರಗೇ ಉಳಿದ ಚಿತ್ತಾಲರಿಗೆ ತಮ್ಮ ಕಾವ್ಯವನ್ನು ಓದುಗರು ಹೇಗೆ ಸ್ವೀಕರಿಸಿದರು ಎನ್ನುವುದು ಗಮನಕ್ಕೆ ಬಂದಿರಲಿಕ್ಕಿಲ್ಲ. ಆದರೆ ಅವರ ನಿಕಟವರ್ತಿಗಳಾಗಿದ್ದ, ಕನ್ನಡದ ಖ್ಯಾತ ಬರಹಗಾರ ಡಾ. ಶಾಂತಿನಾಥ ದೇಸಾಯಿಯವರಿಗೆ ಈ ಕೊರತೆ ತಿಳಿದಿತ್ತು. ಆದ್ದರಿಂದ ಅವರು ಬೇರೆಬೇರೆ ಸಂದರ್ಭಗಳಲ್ಲಿ ಚಿತ್ತಾಲರ ಕಾವ್ಯದ ಕುರಿತು ಬಂದಿದ್ದ ವಿಮರ್ಶೆ ಮತ್ತು ಅವಲೋಕನ ಸ್ವರೂಪದ ಬರಹಗಳನ್ನು ಕ್ರೋಢೀಕರಿಸಿ ಪ್ರಸ್ತುತ ಕೃತಿಯನ್ನು ತಂದಿದ್ದಾರೆ. ಪ್ರಕಟಣೆಗೆ ಸಿದ್ಧವಾದ ಈ ಪುಸ್ತಕವನ್ನು ಮತ್ತು ಇದಕ್ಕೆ ಶಾಂತಿನಾಥ ದೇಸಾಯಿಯವರು ಬರೆದ ಮುನ್ನುಡಿಯನ್ನು ಚಿತ್ತಾಲರು ನೋಡಿ  ಸಮಾಧಾನ ವ್ಯಕ್ತಪಡಿಸಿದ್ದರು ಎಂದು ವಿಷ್ಣು ನಾಯ್ಕರು ಬರೆದಿದ್ದಾರೆ. ಆಗ ಚಿತ್ತಾಲರ ಬದುಕಿನ ಕೊನೆಯ ಕ್ಷಣಗಣನೆ ಶುರುವಾಗಿತ್ತು. ಈ ಪುಸ್ತಕ ಪ್ರಕಟವಾಗಿ ಕೈಸೇರುವ ಮೊದಲೇ ಅವರು ತೀರಿಕೊಂಡರು. ನನಗೆ ತಿಳಿದ ಮಾಹಿತಿಯಂತೆ ಚಿತ್ತಾಲರ ಕಾವ್ಯದ ಕುರಿತು ಕನ್ನಡದಲ್ಲಿ ಬಂದ ಏಕೈಕ ಕೃತಿ, ಇದು.

ಗಂಗಾಧರ ಚಿತ್ತಾಲರ ‘ಕಾವ್ಯಸೃಷ್ಟಿ’ಯಲ್ಲಿ ಶಾಂತಿನಾಥ ದೇಸಾಯಿಯವರು ಬರೆದ ಅರ್ಥಪೂರ್ಣವಾದ ಒಂದು  ಮುನ್ನುಡಿಯೂ ಸೇರಿ ಇಪ್ಪತ್ತು ವಿಮರ್ಶಾಬರಹಗಳಿವೆ. ಮುನ್ನುಡಿಯ ನಂತರ ಚಿತ್ತಾಲರ ಒಂದು ಕವಿತೆಯಿದೆ; ಕವಿತೆಯ ಹೆಸರೂ ‘ಕವನ’ ಎಂದೇ. ಇದು ಅವರ ‘ಹರಿವ ನೀರಿದು’ ಸಂಕಲನದಿಂದ ಆಯ್ದುಕೊಂಡ ಪದ್ಯ. ಈ ಕವನದ ನಂತರ ಚಿತ್ತಾಲರ ‘ಕವಿಯ ಮಾತು’ ಎನ್ನುವ ಪುಟ್ಟ ಬರಹವೊಂದಿದ್ದು ಚಿತ್ತಾಲರ ಕಾವ್ಯಕಲೆಯ ಹಿಂದು-ಮುಂದನ್ನು ಅರ್ಥಮಾಡಿಕೊಳ್ಳಲು ಈ ಲೇಖನ ನೆರವಾಗುತ್ತದೆ. ಗೋಪಾಲಕೃಷ್ಣ ಅಡಿಗ, ವಿ.ಕೆ. ಗೋಕಾಕ್, ಗೌರೀಶ ಕಾಯ್ಕಿಣಿ, ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಕಾಶಿ ಪುಣೇಕರ್, ಯು.ಆರ್. ಅನಂತಮೂರ್ತಿ, ಕೆ.ಪಿ. ಭಟ್ಟ, ಕಿ.ರಂ. ನಾಗರಾಜ್, ಎಂ.ಎನ್. ಪ್ರಭು, ಎಚ್.ಎಸ್. ವೆಂಕಟೇಶಮೂರ್ತಿ, ಅರವಿಂದ ನಾಡಕರ್ಣಿ, ಬಸವರಾಜ ಕಲ್ಗುಡಿ, ಕೆ.ವಿ. ನಾರಾಯಣ ಮತ್ತು ಟಿ.ಪಿ. ಅಶೋಕ ಈ ಸಂಕಲನದಲ್ಲಿರುವ ಲೇಖಕರು. ಇವುಗಳಲ್ಲಿ ಚಿತ್ತಾಲರ ನಾಲ್ಕೂ ಸಂಕಲನಗಳ ಮೇಲೆ ಪ್ರತ್ಯೇಕವಾದ ವಿಮರ್ಶಾಬರಹಗಳೂ, ಅವರ ಸಮಗ್ರಕಾವ್ಯದ ಕುರಿತು ಟಿ.ಪಿ. ಅಶೋಕ ಬರೆದ ಒಂದು ವಿಮರ್ಶೆಯೂ ಸೇರಿವೆ.

1970ರಲ್ಲಿ ಚಿತ್ತಾಲರ `ಹರಿವ ನೀರಿದು’ ಸಂಕಲನ ಪ್ರಕಟವಾಗುವವರೆಗೆ ಅವರ ಕಾವ್ಯದ ಚರ್ಚೆ ನಿರ್ದಿಷ್ಟವಾದ ಹಾಗೂ ಸ್ಪಷ್ಟವಾದ ದಿಕ್ಕಿನಲ್ಲಿ ಸಾಗಿರಲಿಲ್ಲ. ನವ್ಯಕಾವ್ಯದಲ್ಲಿ ಅದು ಅಡಿಗರ ಯುಗವಾಗಿದ್ದರಿಂದ ನವ್ಯ ವಿಮರ್ಶೆಯ ಮೇಲೂ ಅಡಿಗರ ಪ್ರಭಾವ ಜೋರಾಗಿತ್ತು. ಅಡಿಗರು ಕನ್ನಡಭಾಷೆಯನ್ನು ದುಡಿಸಿಕೊಂಡ ಪರಿಯೇ ಮಾದರಿಯೆನಿಸಿದ್ದ ಕಾಲದಲ್ಲಿ ಚಿತ್ತಾಲರ ಸಂಯಮಶೀಲ ಅಭಿವ್ಯಕ್ತಿಗೆ ತಕ್ಕ ಗಮನ ಸಿಗದೇ ಹೋಯಿತು. ಚಿತ್ತಾಲರ ಕಾವ್ಯಕ್ಕೆ ಕವಿಯ ಅನುಭವ ಪ್ರಮಾಣವಾಗಿದ್ದರೆ, ಅಡಿಗರದು  ಲೋಕವೀಕ್ಷಣೆಯ ಸಮಾಜಮುಖಿಯಾದ ಧೋರಣೆ. ಅಡಿಗರ ಪ್ರತಿಮಾನಿಷ್ಠವಾದ ಬೌದ್ಧಿಕ ಕಾವ್ಯವೇ ನಿಜವಾದ ಅಭಿವ್ಯಕ್ತಿಕ್ರಮ ಎನಿಸಿದ್ದ ಕಾಲದಲ್ಲಿ ಚಿತ್ತಾಲರು ವಿಮರ್ಶಕರಿಗೆ ರುಚಿಸಲಿಲ್ಲ. ಗೌರೀಶ ಕಾಯ್ಕಿಣ ಯವರು ತಮ್ಮ ದೀರ್ಘವಾದ ಅವಲೋಕನದಲ್ಲಿ ಚಿತ್ತಾಲರ ಕಾವ್ಯವನ್ನು ಚೆನ್ನವೀರ ಕಣವಿಯವರ ಕಾವ್ಯದೊಡನೆ ಹೋಲಿಸಿಕೊಂಡು ಕಣವಿ ಮತ್ತು ಚಿತ್ತಾಲ ಇಬ್ಬರೂ ಕನ್ನಡದ ಸೇತುಕವಿಗಳು, ಸಮನ್ವಯ ಕವಿಗಳು, ಬ್ರಿಡ್ಜ್ ಪೋಯಟ್ಸ್ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಆದರೆ ಚಿತ್ತಾಲರ ಮೊದಲನೆಯ ಕೃತಿ `ಕಾಲದ ಕರೆ’ಯ ಪದ್ಯಗಳನ್ನು ಚರ್ಚಿಸುತ್ತ ಅಡಿಗರು ಚಿತ್ತಾಲರ ಕವನಗಳಲ್ಲಿರುವ `ಉದಾತ್ತಭಾವ’ ಆ ಕವನಗಳ ಅನನ್ಯತೆ ಎನ್ನುತ್ತಾರೆ. ಚಿತ್ತಾಲರನ್ನು ಅಡಿಗರು `ಕಾಗೆಗಳ ಬಳಗದಲ್ಲಿ ಕಂಡ ಕೋಗಿಲೆ’ ಎನ್ನುತ್ತಾರೆ. ಕುರ್ತಕೋಟಿಯವರಿಗೆ `ಮನುಕುಲದ ಹಾಡು’ ಬಂದ ನಂತರದ ಚಿತ್ತಾಲರು ಮೆಚ್ಚಿಗೆಯಾಗುತ್ತಾರೆ. ಕನ್ನಡವಿಮರ್ಶೆ ಚಿತ್ತಾಲರ ಕಾವ್ಯಕ್ಕೆ ಸೂಕ್ತವಾಗಿ ಸ್ಪಂದಿಸತೊಡಗಿದ್ದು ಅನಂತಮೂರ್ತಿಯವರು `ಹರಿವ ನೀರಿದು’ ಸಂಕಲನಕ್ಕೆ ಮುನ್ನುಡಿ ಬರೆದು ಚಿತ್ತಾಲರನ್ನು ಪರಿಭಾವಿಸಲು ಬೇಕಾದ ಓದಿನ ಕ್ರಮವನ್ನು ವಿವರಿಸಿದ ನಂತರವಷ್ಟೇ. ಅನಂತಮೂರ್ತಿಯವರ ಈ ಮುನ್ನುಡಿ ಕನ್ನಡದ ಶ್ರೇಷ್ಠ ವಿಮರ್ಶಾಪ್ರಬಂಧಗಳಲ್ಲಿ ಒಂದು. ಒಟ್ಟಿನಲ್ಲಿ ಮೊಗೆದುದೆಲ್ಲ ಅನರ್ಘ್ಯವೇ ಆಗುವ ಚಿತ್ತಾಲರ ಕಾವ್ಯಕ್ಕೆ ಈ ಸಂಕಲನ ಒಂದು ಅಪೂರ್ವವಾದ ಸಂಗಾತಿ.

Facebook ಕಾಮೆಂಟ್ಸ್

R D Hegade Aalmane: ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.
Related Post