X
    Categories: ಕಥೆ

ವಶವಾಗದ ವಂಶಿ 14

ವಶವಾಗದ ವಂಶಿ – 13

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ)

(ಅಂತಿಮ ಭಾಗ..)

(ಕಾಗದ ಪತ್ರದಲ್ಲಿ..)

“ಅನಂತೂ ನಮ್ಮ ಆಚಾರಿಯ ಬಗ್ಗೆ ಹೇಳಿದ್ದೆನಲ್ಲಾ.. ಅವರೇ ಅಂದು ಖುದ್ದಾಗಿ ಬರುತ್ತಿದ್ದಾರೆ. ಅವರ ಜೊತೆ ಮೂವರನ್ನು ಕಳುಹಿಸುತ್ತಿದ್ದೇನೆ. ಅವರಿಗೆ ಬೇಕಾದ ವ್ಯವಸ್ಥೆಗಳಾಗಲಿ..”

***

(ಪಿಸುಗುಡುತ್ತಾ..)

ಹೊರಗಡೆ ಹಾಲುಚೆಲ್ಲಿದ ಬೆಳದಿಂಗಳಿದ್ದರೂ ಇಲ್ಲಿ ಎಷ್ಟೊಂದು ಕತ್ತಲು. ಏನೂ ಕಾಣಿಸುತ್ತಿಲ್ಲ. ದೇವರ ದೀಪವೂ ಆರಿಹೋಗಿದೆ. ನಿಧಾನವಾಗಿ ವಿಗ್ರಹ ಹಿಡಿದು ಅಲುಗಾಡಿಸು. ಶಬ್ಧ ಮಾಡಬೇಡ. ಬರುತ್ತದೆ. ಪಾಣೀಪೀಠಕ್ಕೆ ಹಾನಿಯಾಗದಂತೆ ಕೈಯಲ್ಲೇ ವಿಗ್ರಹವನ್ನು ಬಿಗಿಯಾಗಿ ಹಿಡಿದು ಅಲ್ಲಾಡಿಸು ಬರುತ್ತದೆ.

ಹಾಂ.. ದಣಿ ಬಂತು..

ಇದರ ಪಕ್ಕಕ್ಕೇ ಇಡು.. ನಾನೇ ಇದನ್ನು ಕೂರಿಸುವೆ..

(ಗಾಬರಿಯಿಂದ)

ದಣಿ….. ಆಲಿಸಿ…..

ಹೊರಗೆ ದೇವಸ್ಥಾನದ ಬೀದಿಯಲ್ಲಿ ಕಾವಲಿಗಿರುವ ನಮ್ಮವರ ಮಾತುಗಳು ಕೇಳುತ್ತಿವೆ..

ಹೌದು.. ಅಯ್ಯೋ.. ಬಾಗಿಲ ಸಂದಿಯ ಬಿರುಕಿನಿಂದ ನೋಡು.. ಯಾರಾದರೂ ಬರುತ್ತಿದ್ದಾರಾ?

ದಣಿ.. ಯಾರನ್ನೋ ಅಲ್ಲಿ ನಮ್ಮವರು ತಡೆಗಟ್ಟಿದ್ದಾರೆ. ಹೆಗಲಮೇಲೆ ಕಂಬಳಿ ಹೊದ್ದಿರುವುದು ಕಾಣುತ್ತಿದೆ. ಇಲ್ಲಿಗೆ ಕೈ ತೋರಿಸಿ ಏನೋ ಹೇಳುತ್ತಿದ್ದಾನೆ. ಇಲ್ಲಿಗೆ ಬರುತ್ತಿರಬೇಕು.

ಅಯ್ಯೋ.. ಹೌದೇ.. ನನಗೆ ಭಯವಾಗುತ್ತಿದೆ..

ಕೈ ಕಾಲು ನಡುಕ ಹತ್ತಿದೆ..

ಗಲಾಟೆ ಕೇಳಿ ಮಠದ ಒಳಗಿರುವವರು ಹೊರಬಂದರೆ?

ದಣಿ.. ನಮಗೆ ಸೂಚನೆ ಕೊಡಲೆಂದೇ ಇಷ್ಟು ದೊಡ್ಡದಾಗಿ ಮಾತನಾಡುತ್ತಿರುವುದು.

ನಾವು ಆದಷ್ಟು ಬೇಗ ಹೊರ ನಡೆಯಬೇಕು.. ನೀವು ಹಂಚಿನ ಮೇಲೆ ಹತ್ತಿ.. ನಾನೇ ಆ ಮೂರ್ತಿಯನ್ನು ಸ್ಥಾಪಿಸುವೆ.

ಸರಿ ಹಾಗೇ ಆಗಲಿ.. ನಾ ಮೇಲೆ ಹತ್ತುತ್ತೇನೆ.. ಬೇಗ ಪಾಣೀಪೀಠದ ಒಳಗೆ ಕೂರಿಸು..

ವಿಗ್ರಹ ಎಲ್ಲಿದೆ ದಣಿ.. ಹಾಂ ಸಿಕ್ಕಿತು.. ಅಯ್ಯೋ ಇದು ಕೂರುತ್ತಿಲ್ಲ ದಣಿ..

ಎರಡೂ ಒಂದೇ ಅಳತೆಯೇ. ಸರಿಯಾಗಿ ಕೂರಿಸು.. ಸ್ವಲ್ಪ ವಾರೆಯಾಗಿದ್ದರೂ ಕೂರುವುದಿಲ್ಲ..

ಇಲ್ಲ ದಣಿ.. ಕೂರುತ್ತಿಲ್ಲ.

ಹಿಂದುಮುಂದಾಗಿದೆಯೇನೋ ಸರಿಯಾಗಿ ಕೂರಿಸು.. ನಾ ಇಳಿದು ಬರಲೇ?

ಹಾಂ ಸರಿಯಾಗಿ ಕೂತಿದೆ ಈಗ ಅಲುಗಾಡುತ್ತಿಲ್ಲ.

ಸರಿ ಇನ್ನೊಂದು ವಿಗ್ರಹವನ್ನು ಗೋಣಿಚೀಲದೊಳಗೆ ಹಾಕಿ ಕೊಡು. ಬೇಗ ಮೇಲೆ ಬಾ..

***

(ಪಾಳೆಯಗಾರರ ಅರಮನೆಯಲ್ಲಿ..)

ಅಯ್ಯಾ..ದುರಂತವೊಂದು ನಡೆದುಹೋಯಿತು ಅಯ್ಯಾ..

ಏಕೆ? ಏನಾಯಿತು? ನೀವು ಮೂವರೇ ಬಂದಿದ್ದೀರಲ್ಲಾ ನಮ್ಮ ಆಚಾರಿಗಳೆಲ್ಲಿ.?

ಏನು ಹೇಳುವುದಯ್ಯಾ.. ನಾನು ಮತ್ತು ಆಚಾರಿಗಳು ಇಬ್ಬರೂ ದೇವಸ್ಥಾನದ ಒಳಗೆ ಇಳಿದಿದ್ದೆವು. ಇವರಿಬ್ಬರೂ ಹೊರಗೆ ಬೀದಿಯಲ್ಲಿ ಕಾಯುತ್ತಿದ್ದರು. ಇನ್ನೇನು ಅಲ್ಲಿಯ ವಿಗ್ರಹ ಕಳಚಿದ್ದೆವಷ್ಟೇ. ಇವರು‌ ನಮಗೆ ಸೂಚನೆ ‌ನೀಡಲು ಜೋರು ಜೋರಾಗಿ ಮಾತನಾಡಲಾರಂಭಿಸಿದರು. ನೋಡಿದರೆ ಯಾರೋ ಒಬ್ಬನನ್ನು ಇವರು ತಡೆಗಟ್ಟಿದ್ದರು. ಆಚಾರಿಗಳಿಗೆ ಭಯವಾಗಿ ಕೈಚೆಲ್ಲಿ ಕುಳಿತರು. ಅವರನ್ನು ಮೊದಲು ಮೇಲಕ್ಕೆ ಕಳುಹಿಸಿ ನಾನೇ ಹೇಗೋ ಮಾಡಿ ವಿಗ್ರಹವನ್ನು ಕೂರಿಸಿದೆ. ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ. ಆತುರ ಆತುರವಾಗಿ ದೇವಸ್ಥಾನದ ಹಿಂಬದಿಯಿಂದ ಊರ ಹೊರಗೆ ಬಂದು ಮೊದಲೇ ನಿಯೋಜಿಸಿದ್ದ ಗಾಡಿ ಹತ್ತಿ ನಾವಿಬ್ಬರು ಹೊರಟೆವು. ಅಷ್ಟರಲ್ಲಿ ಇವರಿಬ್ಬರೂ ಸೇರಿಕೊಂಡರು.

ಸರಿ.. ಯಾರದು ಬಂದವರು?

ಅಯ್ಯಾ ತಿಳಿದಿಲ್ಲ ಅಯ್ಯಾ.. ಯಾರೋ ದಾಸನಿರಬೇಕು. ನಾವು ಕಾವಲು ಕಾಯುತ್ತಿದ್ದೆವು. ಅವನು ನೇರವಾಗಿ ದೇವಾಲಯದ ಬಳಿಗೇ ಬಂದ. ನಾವು ಅವನನ್ನು ಅಡ್ಡಗಟ್ಟಿದೆವು. ಬೆಳಿಗ್ಗೆ ಬಾ ಹೋಗು ಎಂದರೂ ಕೇಳಲಿಲ್ಲ. ಅಲ್ಲೇ ಬೆಳಗಿನವರೆಗೆ ಭಜಿಸುತ್ತಾ ಕುಳಿತಿರುತ್ತೇನೆ ಎಂದ. ನಾವು ಸ್ವಲ್ಪ ಗದರಿಸಿಯೇ ಹೇಳಿದರೂ ಜಗ್ಗಲಿಲ್ಲ. ದೇವರನ್ನು ನೋಡಲು ಯಾರ ಅಪ್ಪಣೆ ಬೇಕು.? ತಡೆಯಲು ನೀವ್ಯಾರು ಎಂದು ಪ್ರಶ್ನಿಸಲು ಶುರುಮಾಡಿದ.

ನಮ್ಮ ಮಾತುಗಳು ಹೇಗಿದ್ದರೂ ಕೇಳಿ ಇವರು ಹೊರನಡೆದಿರುತ್ತಾರೆ ಎಂದು ತಿಳಿದಿತ್ತು. ಅಷ್ಟರಲ್ಲಾಗಲೇ ಸನಿಹದ ಮನೆಯ ಬಾಗಿಲು ತೆರೆಯಿತು. ಇನ್ನು ಅವನನ್ನು ತಡೆದರೆ ಎಲ್ಲರೂ ಬರುತ್ತಾರೆ. ನಾವು ತಪ್ಪಿಸಿಕೊಳ್ಳಲಾಗದು ಎಂದು ತಿಳಿದು ಅವನನ್ನು ಬಿಟ್ಟು ನಿಧಾನವಾಗಿ ಅಲ್ಲಿಂದ ಗಾಡಿಯ ಬಳಿ ಬಂದೆವು.

ಆದರೆ ಅಯ್ಯಾ ಸೀತಾನದಿಗೆ ನಮ್ಮ ಮೇಲೆ ಅದೇನು ಮುನಿಸಿತ್ತೋ ಏನೋ. ನಮ್ಮ ಈ ಭಾಗದಲ್ಲಿ ಸುರಿದ ಖಂಡವೃಷ್ಟಿಯಿಂದ ರಾತ್ರಿ ಬೆಳಗಾಗುವುದರೊಳಗೆ ನೆರೆ ಬಂದುಬಿಟ್ಟಿತ್ತು. ಈಜಿಕೊಂಡು ಮೂರ್ತಿಯನ್ನೇನೋ ಸಾಗಿಸಿದೆವು. ಆದರೆ ನದಿ ದಾಟುವಾಗ ಆಚಾರಿಗಳು ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾದರು.

ಅಯ್ಯೋ.. ದೇವಾ.. ಏನು ಹೇಳುತ್ತಿದ್ದೀರ..? ಏನು ವಿಧಿ.. ರಕ್ಷಣೆಗಾಗಿ ಬಲಿದಾನ ಮಾಡಬೇಕಾಯಿತೇ. ಮೊದಲೇ ತಿಳಿದಿದ್ದರೆ ನನ್ನ ಜೀವವನ್ನೇ ಬಲಿಕೊಡುತ್ತಿದ್ದೆ. ಅಥವಾ ಶತಮಾನಗಳಿಂದ ಯತಿವರೇಣ್ಯರಿಂದ ಪೂಜಿಸಲ್ಪಟ್ಟ ಪರಮಪವಿತ್ರ ಮೂರ್ತಿಯನ್ನು ತೆಗೆದದ್ದೇ ಅಪಚಾರವಾಯಿತೇ! ಚಿಂತೆ ಕಾಡುತ್ತಿದೆ.

ಅಯ್ಯಾ.. ಮತ್ತೊಂದು ವಿಷಯ. ಹೇಳಿದರೆ ನೀವು ನನ್ನಮೇಲೆ ಮುನಿಸಿಕೊಳ್ಳುವಿರೆಂದು ಭಯವಾಗುತ್ತಿದೆ.

ಇಲ್ಲ. ಹೇಳು. ಏನದು?

ಅಯ್ಯಾ ಆಚಾರಿಗಳಿಗೆ ತಮ್ಮ ವಿಗ್ರಹದ ಬಗ್ಗೆ ಕಾಣದಿದ್ದರೂ ಮುಟ್ಟಿದರೆ ಅರಿವಿರುತ್ತಿತ್ತು. ಒಳಗೆ ಕಾಣದಂತಹ ಕತ್ತಲಿದ್ದರಿಂದ ಯಾವ ಮೂರ್ತಿಯನ್ನು ಕೂರಿಸಿದೆ, ಯಾವ ಮೂರ್ತಿಯನ್ನು ಗೋಣಿಚೀಲದಲ್ಲಿ ಹಾಕಿದೆ ಎಂದು ತಿಳಿದಿಲ್ಲ. ಅದೇ ಮೂರ್ತಿಯನ್ನು ಪುನಃ ಕೂರಿಸಿದೆನೋ ಅಥವಾ ಆಚಾರಿಯ ಮೂರ್ತಿಯನ್ನೇ ಕೂರಿಸಿದೆನೋ ತಿಳಿಯದು. ಇದು ನಿಜವಾಗಿಯೂ ಶಿವಳ್ಳಿಯ ವಿಗ್ರಹವೇ ಅಥವಾ ಆಚಾರಿಗಳು ನಿರ್ಮಿಸಿದ ವಿಗ್ರಹವೇ ತಿಳಿಯದು.

ಹೋಗುವಾಗ ಆಚಾರಿಗಳೇ ಅದನ್ನು ಗೋಣಿಯಲ್ಲಿ ಹಾಕಿಕೊಂಡು ಬಂದಿದ್ದರಿಂದ ನೋಡಿರಲಿಲ್ಲ. ಬರುವಾಗಲೂ ಆತಂಕವಿದ್ದುದರಿಂದ ನೋಡಲಾಗಲಿಲ್ಲ. ಇದೇ ವಿಗ್ರಹ ಅಲ್ಲಿಯದು ಎಂದು ಹೇಳಲು ಇದ್ದ ಆಚಾರಿಗಳನ್ನೂ ಕಳೆದುಕೊಂಡೆವು. ಹೊಸಮೂರ್ತಿಯೆಂದು ಗೊತ್ತಾಗದಿರಲು, ಅದಕ್ಕೆ ಪ್ರತಿನಿತ್ಯ ಅಭಿಷೇಕ ಅಲಂಕಾರಾದಿಗಳನ್ನು ಮಾಡುತ್ತಿದ್ದರೆಂದು ಅವರೇ ಹೇಳಿದ್ದರು. ಕತ್ತಲಲ್ಲಿ ಕೂರಿಸುವಾಗ ಹೆಚ್ಚು ಸಮಯವಿಲ್ಲದ್ದರಿಂದ ಸರಿಯಾಗಿ ಕೂರಿಸಿದೆನೋ ಏನೋ ಅದೂ ತಿಳಿಯದು. ನಿಮ್ಮ ಕಾಲಿಗೆ ಬಿದ್ದಿದ್ದೇನೆ ಅಯ್ಯಾ ನನ್ನಿಂದ ದೊಡ್ಡ ತಪ್ಪಾಗಿದೆ.

****

(ಕೆಲ ದಿನದ ನಂತರ..)

ಮಂತ್ರಿಗಳೇ ಇದೇನು ಆತು‌ರ ಆತುರವಾಗಿ ಬಂದಿರಿ. ಏನು ವಿಷಯ?

ದೊರೆಗಳೇ.. ಯುವರಾಜರೇ ಇಬ್ಬರೂ ಒಟ್ಟಿಗೆ ಇರುವುದು ಒಳ್ಳೆಯದಾಯಿತು. ನಮ್ಮ ಸಾಮಂತರಾದ ಆಳುಪರರ ರಾಜ್ಯದಲ್ಲಿ ಇರುವ ಶಿವಳ್ಳಿಯ ವೇಣುಗೋಪಾಲ ದೇವಾಲಯದಲ್ಲಿ ಪವಾಡವೊಂದು ನಡೆದಿದೆ. ದಾಸರೊಬ್ಬರು ವೇಣುಗೋಪಾಲನ ದರ್ಶನಕ್ಕೆ ಹೊದರಂತೆ. ಆದರೆ ಅಲ್ಲಿಯವರು ಯಾರೋ ಅವರನ್ನು ತಡೆದರಂತೆ. ಆ ದಾಸರು ಭಕ್ತಿಯಿಂದ ವೇಣುಗೋಪಾಲನನ್ನು ಹೊರಗೇ ಭಜಿಸುತ್ತಾ ಕುಳಿತರಂತೆ. ಅವರ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿ ಗೋಡೆಯಲ್ಲಿ ಬಿರುಕುಬಂದು  ವೇಣುಗೋಪಾಲನೇ ದರ್ಶನವಿತ್ತರಂತೆ. ಎಲ್ಲೆಲ್ಲೂ ಅವನ ಮಹಿಮೆ ಕೊಂಡಾಡಲಾಗುತ್ತಿದೆ. ಇದನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿದ್ದಾರೆ.

(ಯುವರಾಜ ಮನಸ್ಸಿನಲ್ಲಿಯೇ ಚಿಂತಿಸುತ್ತಾ.. “ನಮ್ಮ ತಯಾರಿಗಳೆಲ್ಲವೂ ಆಗಿದ್ದವು. ಹೊರಡುವುದೊಂದೇ ಬಾಕಿ ಇತ್ತು. ಇನ್ನೇನೂ ಮಾಡಲಾಗದು.)

******************************

ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಮ್ ತತಮ್ |

ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕುರ್ತುಮರ್ಹತಿ ||

– ಯಾವುದರಿಂದ ಈ ಸಂಪೂರ್ಣ ದೃಶ್ಯ ಜಗತ್ತು ವ್ಯಾಪ್ತವಾಗಿದೆಯೋ ಅದನ್ನು ನೀನು ನಾಶರಹಿತವಾದುದೆಂದು ತಿಳಿ. ಈ ಅವಿನಾಶಿಯ ವಿನಾಶವನ್ನು ಮಾಡಲು ಯಾರೂ ಕೂಡ ಸಮರ್ಥರಲ್ಲ.

ಸಮೋಹಂ ಸರ್ವಭೂತೇಷು ನ ಮೇ ದ್ವೇಶ್ಯೋಸ್ತಿ ನ ಪ್ರಿಯಃ |

ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ||

– ನಾನು ಸಮಸ್ತ ಪ್ರಾಣಿಗಳಲ್ಲಿ ಸಮಭಾವದಿಂದ ವ್ಯಾಪಿಸಿರುವೆನು. ನನಗೆ ಪ್ರಿಯರು ಅಪ್ರಿಯರು ಯಾರೂ ಇಲ್ಲ. ಆದರೆ ಭಕ್ತಿಯಿಂದ ನನ್ನನ್ನು ಭಜಿಸುವ ಭಕ್ತರು ನನಲ್ಲಿ ನೆಲೆಸಿದ್ದಾರೆ ಮತ್ತು ನಾನೂ ಅವರಲ್ಲಿ ಪ್ರತ್ಯಕ್ಷವಾಗಿ ಪ್ರಕಟವಾಗುತ್ತೇನೆ.

ಯೋ ಮಾಂ ಪಶ್ಯತಿ ಸರ್ವತ್ರಂ ಸರ್ವಂ ಚ ಮಯಿ ಪಶ್ಯತಿ |

ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ||

–  ಯಾರು ಎಲ್ಲದರಲ್ಲಿಯೂ ನನ್ನನ್ನೇ ಕಾಣುತ್ತಾರೋ ಯಾರು ಎಲ್ಲಕಡೆಯಲ್ಲಿಯೂ ನನ್ನನ್ನೇ ನೋಡುತ್ತಾರೋ ಅವರು ನನಗೆ ಕಾಣಿಸದೇ ಇರುವುದಿಲ್ಲ ಹಾಗೆಯೇ ಅವರಿಗೂ ನಾನು ಕಾಣಿಸದೇ ಇರುವುದಿಲ್ಲ

*ಸ್ವಸ್ತಿ*

Facebook ಕಾಮೆಂಟ್ಸ್

Vikram Jois:
Related Post