X

ಸಮಯಕ್ಕಿಂತ ಬೇರೆ ಔಷಧವಿಲ್ಲ!

ಮನುಷ್ಯನ ಜೀವನದಲ್ಲಿ ಒಂದಲ್ಲ ಹಲವು ನೋವುಗಳು ಸಹಜ. ಬದುಕಿನುದ್ದಕ್ಕೂ ಒಂದಲ್ಲ ಒಂದು ಹಂತದಲ್ಲಿ ನೋವು ಎಲ್ಲರನ್ನೂ ಕಾಡಿಯೇ ಕಾಡಿರುತ್ತದೆ. ನೋವಿನ ಆ ದಿನ ಮತ್ತು ಮನಸ್ಥಿತಿ ಸದಾ ಇದ್ದರೆ? ಬದುಕು ಅಸಹನೀಯವಾಗುತ್ತದೆ. ಬದುಕಿನಲ್ಲಿ ನಾವು ಸಾಧಿಸಬೇಕು ಎಂದುಕೊಂಡದ್ದನ್ನು ಮಾಡಲು ಅಸಾಧ್ಯವಾಗುತ್ತದೆ. ಇಂತಹ ನೋವು ಅಥವಾ ಕಹಿ ಘಟನೆ ಮರೆಯಲು ಮತ್ತು ಎಂದಿನಂತೆ ಜೀವನ ಸಾಗಿಸಲು ವೈದ್ಯಕೀಯ ಜಗತ್ತು ಯಾವುದೇ ಔಷಧಿ ಕೊಡಲಿ ಅದರಿಂದ ತಕ್ಷಣ ಗುಣಮುಖರಾಗಲು ಸಾಧ್ಯವಿಲ್ಲ. ಇದಕ್ಕೆ ಉತ್ತಮವಾದ ಮದ್ದು ಸಮಯ. ಹೌದು ವೇಳೆ ಕಳೆದಂತೆ ಮನುಷ್ಯ ಎಂತಹ ನೋವೇ ಇರಲಿ ಮರೆಯುತ್ತಾನೆ. ವೇಳೆ ಕಳೆದಂತೆ ತನ್ನ ನಿತ್ಯದ ಬದುಕಿಗೆ ಮರಳುತ್ತಾನೆ. ಹೀಗಾಗಿ ನಮ್ಮಲ್ಲಿ ‘ಸಮಯ ಎಲ್ಲವನ್ನೂ ಮರೆಸುತ್ತೆ’ ಎನ್ನುವ ಆಡುಮಾತು ಚಾಲ್ತಿಗೆ ಬಂದಿದೆ.  ಚಿಕ್ಕವಯಸ್ಸಿನಲ್ಲಿ ನೋವುಂಡವರಿಗೆ ಮರಳಿ ಬದುಕ ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಹಾಗೆಲ್ಲ ಹಿರಿಯರು ‘ಅವನಿಗೆ /ಆಕೆಗೆ ಸಮಯ ಕೊಡಿ ಸಮಯಕ್ಕಿಂತ ಬೇರೆ ಔಷಧವಿಲ್ಲ, ಅವರಿಗೆ ಮತ್ತೆ ನಿತ್ಯದ ಬದುಕಿಗೆ ಹೊರಳಬೇಕು ಎನ್ನುವ ತವಕ ಬಂದೆ ಬರುತ್ತದೆ’ ಎನ್ನುತ್ತಾರೆ. ಹೀಗಾಗಿ  ಸಮಯವೆನ್ನುವುದು ಬಹಳ ಮುಖ್ಯ. ಕೇವಲ ಇದೊಂದೇ ಅಂತಲ್ಲ, ಸರಿಯಾದ ಸಮಯ ಬದುಕಿನಲ್ಲಿ ಹಲವು ಬದಲಾವಣೆ ತರಬಲ್ಲದು. ಕೆಲವರಿಗೆ ಬದುಕಿನ ಆರಂಭದಲ್ಲಿ ಒಳ್ಳೆಯ ಸಮಯ ಬರುತ್ತದೆ, ಕೆಲವರಿಗೆ ನಂತರ, ನಮ್ಮ ಸಮಯ ಎನ್ನುವುದು ಇದ್ದೇ ಇರುತ್ತದೆ. ನಮ್ಮ ಸಮಯಕ್ಕೆ ಕಾಯುವ ತಾಳ್ಮೆ ಮತ್ತು ಸಂಯಮವಿರಬೇಕು. ಸಮಯ ಸರಿಯಾಗಿರದಿದ್ದರೆ ಔಷಧ ವಿಷವೂ ಆಗುತ್ತದೆ. ಇಂದಿನ ದಿನಗಳಲ್ಲಿ ‘ಟೈಮ್ ಸರಿಯಿಲ್ಲ’ ಅಥವಾ ‘ಸಕತ್ ಟೈಮ್ ನಡಿತಾ ಇದೆ’ ಎನ್ನುವ ಮಾತುಗಳು ಕೂಡ ಸುತ್ತಿಬಳಸಿ ಸಮಯದ ಮಹತ್ತ್ವವನ್ನು ಹೇಳುತ್ತವೆ.

ಸ್ಪಾನಿಷ್ ಭಾಷಿಕರು ಕೂಡ ಈ ವಿಷಯದಲ್ಲಿ ನಮ್ಮಂತೆಯೇ! ಇಂದಿಗೂ ವ್ಯಕ್ತಿಯೋ ಕುಟುಂಬವೂ ಯಾವುದಾದರು ಅಹಿತಕರ ಘಟನೆಯಿಂದ ಸಾಗಿ ಬಂದಿದ್ದರೆ ಅವರನ್ನ ಸಮಾಧಾನ ಪಡಿಸಲು  ‘El tiempo lo cura todo’  (ಎಲ್ ತಿಯಂಪೊ ಲೊ ಕುರಾ ತೊದೊ) ಎನ್ನುವ ಸಾಂತ್ವನದ ಮಾತನ್ನು ಆಡುತ್ತಾರೆ. ಅಂದರೆ ಸಮಯ ಎಲ್ಲವನ್ನು ಗುಣಪಡಿಸುತ್ತದೆ ಎಂದರ್ಥ. ಘಟನೆ ಎಷ್ಟೇ ಕಹಿ ಇರಲಿ, ನೋವು ಎಷ್ಟೇ ದೊಡ್ಡದಿರಲಿ ಸಮಯ ಅದನ್ನು ಸರಿಪಡಿಸುತ್ತದೆ ಎನ್ನುವ ಭಾವ ಇಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಒಳ್ಳೆಯ ಸಮಯದಲ್ಲಿ ಈ ಆಡುಮಾತಿನ ಬಳಕೆ ಅತಿಕಡಿಮೆ ಎನ್ನಬಹುದು. ಹೀಗಾಗಿ ಇದೊಂದು ರೀತಿಯಲ್ಲಿ ನೊಂದ ಮನಸ್ಸಿಗೆ ಸಾಂತ್ವನ ಹೇಳುವ ಮಾತಾಗಿದೆ. ಹೀಗಾಗಿ ಸಮಯಕ್ಕಿಂತ ಉತ್ತಮ ಮದ್ದು ಅಥವಾ ಔಷಧ ಇಲ್ಲ ಎನ್ನುವ ಮಾತು ಕೂಡ ರೂಪುಗೊಂಡಿರಬಹುದು.

ಇನ್ನು ಇಂಗ್ಲಿಷ್ ಭಾಷಿಕರು  ‘Time heals all wounds’  ಮತ್ತು ‘Time is a great healer’ ಎನ್ನುವ ನುಡಿಯನ್ನ ಬಳಸುತ್ತಾರೆ. ಇಲ್ಲಿಯೂ ಅರ್ಥದಲ್ಲಿ ಮಾತ್ರ ಎಳ್ಳಷ್ಟೂ ಬದಲಾವಣೆಯಿಲ್ಲ.  ಟೈಮ್ ಅಥವಾ ವೇಳೆ ಎನ್ನುವುದು ಎಲ್ಲರಿಗಿಂತ /ಎಲ್ಲಕ್ಕಿಂತ  ಉತ್ತಮ ವೈದ್ಯ. ಅದರ ಮುಂದೆ ಎಂತಹ ಹುಣ್ಣಾದರು ವಾಸಿಯಾಗಲೇಬೇಕು ಎನ್ನುವುದನ್ನೇ ಪುನರುಚ್ಚರಿಸಿದ್ದಾರೆ.

ಜಗತ್ತಿನಲ್ಲಿ ಜನರ ಮನಸ್ಸಿನಲ್ಲಿ ಜಾತಿ, ಭಾಷೆ, ಧರ್ಮದ ಕುರಿತು ಇರುವ ಕಹಿಯನ್ನ ಸಮಯ ಮರೆಸುತ್ತದೆಯೇ? ಕಾಲವೇ ಉತ್ತರಕೊಡಬೇಕು.

ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ: 

El tiempo: ಟೈಮ್ ಅಥವಾ ಸಮಯ ಎನ್ನುವ ಅರ್ಥ. ಎಲ್ ತಿಯಂಪೊ ಎನ್ನುವುದು ಉಚ್ಚಾರಣೆ.

lo cura: ವಾಸಿ ಮಾಡುವುದು. ಗುಣಪಡಿಸುವುದು ಎನ್ನುವ ಅರ್ಥ. ಲೊ ಕುರಾ ಎನ್ನುವುದು ಉಚ್ಚಾರಣೆ.

todo: ಎಲ್ಲವನ್ನ, all  ಎನ್ನುವ ಅರ್ಥ. ತೊದೊ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post