X
    Categories: ಕಥೆ

ವಶವಾಗದ ವಂಶಿ – 4

ವಶವಾಗದ ವಂಶಿ – 3

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಹಾಗೆ ನನ್ನ ಕಾಲ್ಪನಿಕ ಕತೆ)

(ಮುಂದುವರಿದ ಭಾಗ..)

ಇಷ್ಟು ಹೇಳಿ ಜೋಯಿಸರು ಮುಂದಿನ ನಿರ್ಧಾರವನ್ನು ನನ್ನ ಮೇಲೆ ಹಾಕಿದರು. ಇನ್ನೂ ಆ ಸನ್ನಿವೇಶ ಕಣ್ಣಲ್ಲಿ ಕಟ್ಟಿದ ಹಾಗಿದೆ. ಅವರ ಮಾತಿನಲ್ಲಿ ಸ್ಪಷ್ಟತೆ ಹಾಗು ಭಯವಿತ್ತು. ಅಂದರೆ ಅವರು ಹೇಳಿದ ಅರ್ಥ ಮೂರ್ತಿಯ ಸ್ಥಳಾಂತರ ಮಾಡಲೇಬೇಕು ಆದರೆ ಅದು ಕೋರಿಕೆಯ ಮೇರೆಗೆ ಆಗದು ಅರ್ಥಾತ್ ಮಾಡುವುದಾದರೆ ಬಲಾತ್ಕಾರದ ಮೂಲಕವೇ ಮಾಡಬೇಕು ಎನ್ನುವುದಾಗಿತ್ತು.

ಒಡೆಯಾ.. ಬಲಾತ್ಕಾರವಾಗಿ ಇಲ್ಲಿಗೆ ತರಬೇಕು ಎಂದರೆ ಆಳುಪರರಿಗೆ ಆಜ್ಞೆ ಮಾಡಿ ತರಿಸುವುದೇ? ಅಥವಾ ನಮ್ಮ ಸೈನಿಕರನ್ನು ಕಳುಹಿಸಿ ತರಿಸುವುದೇ?

ಸಿದ್ದ.. ಜೋಯಿಸರ ಮತ್ತು ನನ್ನ ನಡುವೆ ನಡೆದ ಈ ಮಾತುಕತೆ ಯಾರಿಗೂ ತಿಳಿದಿಲ್ಲ. ವಿಷಯ ಗೌಪ್ಯವಾಗಿರಲೆಂದೇ ನಿನ್ನ ಬಳಿ ಹೇಳುತ್ತಿರುವುದು. ಯತಿಗಳಿಂದ ಬಲಾತ್ಕಾರವಾಗಿ ಕಸಿಯಲು ಆಳುಪರರಿಗೆ ಹೇಳಿದರೆ ಅವರು ಒಪ್ಪಲಾರರು. ಅವರು ಸಾಧುಸಂತರಿಗೆ ತಲೆಬಾಗುವವರು. ಇಂತಹ ಕಾರ್ಯಗಳನ್ನು ಮಾಡಲಾರರು. ಜೊತೆಗೆ ಅವರ ನಾಡಿನಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯ ಶಿಷ್ಯವರ್ಗವಿದೆ ಯತಿಗಳಿಗೆ. ಹಾಗಾಗಿ ಯತಿಗಳ ವಿರೋಧ ಜನರ ದಂಗೆ ಏಳುವಂತೆ ಮಾಡುವುದು. ಈ ಕಾರಣಗಳಿಂದ ಅವರು ಸಹಾಯ ಮಾಡುವುದಿರಲಿ, ವಿಷಯ ತಿಳಿದರೆ ನಮ್ಮ ವಿರುದ್ಧ ನಿಲ್ಲುವ ಮನಸ್ಸು ಮಾಡಿಯಾರು.

ಅವರ ನಡುವೆ ನಮ್ಮ ಸ್ನೇಹ ಬಾಂಧವ್ಯ ಉತ್ತಮವಾಗಿರುವುದರಿಂದ ಅವರ ವಿರೋಧ ನಮ್ಮ ತಂದೆಯವರ ಅಥವಾ ಮಂತ್ರಿಗಳ ಕಿವಿಗೆ ಬಿದ್ದರೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗುತ್ತದೆ. ಹಾಗಾಗಿ ಇದನ್ನು ನಾವೇ ಖುದ್ದಾಗಿ ಗೌಪ್ಯವಾಗಿ ಮಾಡಬೇಕು.

ಅಂದರೆ…ಒಡೆಯಾ… ಯಾರಿಗೂ ತಿಳಿಸದಂತೆ ಮೂರ್ತಿಯನ್ನು ಅಪಹರಿಸುವುದೇ?

ಹೌದು.. ಬೇರೆ ದಾರಿ ತೋಚುತ್ತಿಲ್ಲ.. ಅದೊಂದೇ ಉಳಿಯುವ ಮಾರ್ಗ.. ಸಿದ್ದ..

ಒಡೆಯಾ.. ಇದಕ್ಕೆ ಜೋಯಿಸರು ಒಪ್ಪುತ್ತಾರೆಯೇ?

ಖಂಡಿತವಾಗಿ ಸಿದ್ದ..

ಆಳುಪರರು ಇದನ್ನು ಒಪ್ಪುವುದಿಲ್ಲ ಎಂದು ಅವರಿಗೂ ತಿಳಿದ ವಿಷಯ. ಒಂದುವೇಳೆ ಇದನ್ನು ಅವರು ಒಪ್ಪದವರಾಗಿದ್ದರೆ, ಆಳುಪರರ ನಡವಳಿಕೆಯ ಬಗೆಗೆ ಚೆನ್ನಾಗಿ ಅರಿತ ಅವರು ಈ ವಿಷಯವನ್ನು ನನ್ನ ಬಳಿ ಪ್ರಸ್ತಾಪಿಸುತ್ತಲೇ ಇರಲಿಲ್ಲ.

ಯತಿಗಳೂ ಒಪ್ಪಲಾರರು, ಆಳುಪರರೂ ಒಪ್ಪಲಾರರು ಎಂದು ತಿಳಿದೂ ಈ ವಿಷಯವನ್ನು ನನ್ನ ಬಳಿ ಪ್ರಸ್ತಾಪಿಸಿದ್ದಾರೆಂದರೆ ಯಾವ ರೀತಿಯಲ್ಲಿ ತಂದರೂ ಅವರ ಅಭ್ಯಂತರವಿಲ್ಲವೆಂದೇ ಅರ್ಥ. ಹೀಗಿರುವಾಗ ಅದರ ಚಿಂತೆ ಬೇಡ.

ಒಡೆಯಾ.. ಅಪಹರಿಸಿ ತರುವುದೇನೋ ಸರಿ ಆದರೆ ಅದನ್ನು ಇಲ್ಲಿ ಪ್ರತಿಷ್ಠಾಪಿಸುವುದಾದರೂ ಹೇಗೆ? ಅಪಹರಣದ ವಿಷಯ ಎಲ್ಲೆಡೆ ಪ್ರಸಾರವಾಗುವುದು. ಇದು ಅಲ್ಲಿಂದಲೇ ಅಪಹರಿಸಿದ್ದೆಂದು ಯಾರಿಗಾದರೂ ಸಂಶಯ ಬಾರದೇ ಇರುವುದೇ?

ಬರಲಾರದು ಸಿದ್ದ. ಅದಕ್ಕೆ ತಕ್ಕ ಯೋಜನೆ ಮನಸ್ಸಿನೊಳಗಿದೆ. ಅದನ್ನು ಕಾರ್ಯಗತ ಮಾಡಬೇಕಷ್ಟೇ.

ಅದು ಹೇಗೆ ಒಡೆಯಾ?

(ಮುಂದುವರೆಯುವುದು..)

Facebook ಕಾಮೆಂಟ್ಸ್

Vikram Jois:
Related Post