X
    Categories: ಕಥೆ

ವಶವಾಗದ ವಂಶಿ – 2

ವಶವಾಗದ ವಂಶಿ – 1

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ನನ್ನ ಕಾಲ್ಪನಿಕ ಕತೆ.)

ದೇವಸ್ಥಾನದ ಮೂರ್ತಿಯೊಂದರ ಸ್ಥಾನಪಲ್ಲಟವೇ?

ಅಷ್ಟೇ ತಾನೆ. ಹೇಳಿ ಯಾವ ದೇವಸ್ಥಾನದ ಮೂರ್ತಿಯನ್ನು ಎಲ್ಲಿಗೆ ತಂದು ಸ್ಥಾಪಿಸಬೇಕು?

ಇದೆಂತಹ ಗಹನವಾದ ವಿಷಯ ಜೋಯಿಸರೇ. ನಮ್ಮ ರಾಜ್ಯದಲ್ಲಿ ಇರುವ ಯಾವುದೇ ದೇವಸ್ಥಾನ ಆಗಲಿ ನಮ್ಮ ಆಜ್ಞೆಯ ಮೇರೆಗೆ ಸ್ಥಳಾಂತರಗೊಳ್ಳುವುದಿಲ್ಲವೇ?

ಹೇಳಿ ಎಲ್ಲಿದೆ ಆ ದೇವಾಲಯ?

ಎಲ್ಲಿಗೆ ತರಬೇಕು?

ರಾಜ ಅಷ್ಟು ಸುಲಭದ ವಿಷಯವಾಗಿದ್ದರೆ ಯಾಕಿಷ್ಟು ಚಡಪಡಿಸುತ್ತಿದ್ದೆ. ಎಂದೋ ನಿಮ್ಮ ಬಳಿ ಹೇಳುತ್ತಿದ್ದೆ. ಆದರೆ ಇದು ಸೂಕ್ಷ್ಮಾತಿಸೂಕ್ಷ್ಮ ವಿಷಯ. ನಮ್ಮ ರಾಜ್ಯದಲ್ಲೇ ಇದ್ದು ಕೇವಲ ಯಾರೋ ಪುರೋಹಿತರು ಪೂಜಿಸುತ್ತಿರುವ ದೇವಾಲಯವಾಗಿದ್ದರೆ ಎಂದೋ ಸ್ಥಳ ಬದಲಾವಣೆ ಮಾಡಬಹುದಿತ್ತು.

ಆದರೆ ರಾಜ…

ಅದು ಇರುವುದು ನಮ್ಮ ಆಪ್ತ ಸಾಮಂತರಾದ “ಆಳುಪರ”ರ ರಾಜ್ಯದಲ್ಲಿ.

ಹೌದೇ..

ಆಳುಪರರ ಸಾಮ್ರಾಜ್ಯದಲ್ಲಿ ತಾನೇ.. ಯಾರೋ ಶತೃಗಳ ರಾಜ್ಯದಲ್ಲಾಗಿದ್ದರೆ ಯೋಚಿಸಬೇಕಾಗಿತ್ತು. ಆಳುಪರರು ನಮ್ಮ ಸಾಮಂತರು. ಅದಕ್ಕೂ ಹೆಚ್ಚಾಗಿ ನಮ್ಮೊಡನೆ ಸ್ನೇಹ ಬಾಂಧವ್ಯ ಹೊಂದಿದವರು. ಕೇವಲ ರಾಜತಾಂತ್ರಿಕವಾಗಿ ಮಾತ್ರವಲ್ಲ‌ ಅಥವಾ  ವ್ಯಾವಹಾರಿಕವಾಗಿ ಮಾತ್ರವಲ್ಲ ಹೃತ್ಪೂರ್ವಕವಾಗಿಯೂ ನಮ್ಮ ಏಳ್ಗೆಯನ್ನು ಬಯಸುವವರು. ನಾವು ಸಹಾಯವೊಂದನ್ನು ಅಪೇಕ್ಷಿಸುವ ವಿಷಯ ಅವರ ಕಿವಿಗೆ ಬಿದ್ದರೆ ಸಾಕು, ಸ್ವತಃ ಅವರೇ ಮುತುವರ್ಜಿ ವಹಿಸಿ ನಮ್ಮ ಕಾರ್ಯ ಮಾಡಿಕೊಡುವರು. ಅದರಲ್ಲಿ ಯಾವ ಚಿಂತೆಯೂ ಬೇಡ ಜೋಯಿಸರೇ. ನಿಮ್ಮ ಆದೇಶದಂತೆ ಕಾರ್ಯ ನಡೆಯಲಿ.

ಯಾವ ದೇವಸ್ಥಾನವದು. ಹೇಳಿ.. “ಬಾರಹಕನ್ಯಾಪುರ”ಕ್ಕೆ ಈಗಲೇ ನಮ್ಮವರನ್ನು ಕಳಿಸಿ ಆಳುಪರರಿಗೆ ವಿಷಯ ಮುಟ್ಟಿಸುತ್ತೇವೆ. ಮುಂದಿನದ್ದೆಲ್ಲಾ ಅವರೇ ಮಾಡುವರು.

ರಾಜಾ.. ಆಳುಪರರ ರಾಜ್ಯಕ್ಕೂ ನಮ್ಮ ರಾಜ್ಯಕ್ಕೂ ಎಂದಿಗೂ ನಾನು ಭೇದ ಎಣಿಸಿಲ್ಲ. ಅವರು ನಮ್ಮ ಸಸ್ನೇಹಿ ಸಾಮಂತರೆಂದು ನನಗೂ ತಿಳಿದ ವಿಷಯವೇ. ಜೊತೆಗೆ ಆಳುಪರರೂ ಆಗಾಗ ನನ್ನಲ್ಲಿ ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕೇಳಿ ಬರುತ್ತಾರೆ. ಅವರು ನನ್ನ ಮಾತಿಗೆ ಎಂದೂ ಇಲ್ಲವೆಂದವರಲ್ಲ. ವಿಷಯ ಅಷ್ಟೊಂದು ಸರಳವಾಗಿದ್ದರೆ ತಮಗೆ ತಿಳಿಸುವ ಮೊದಲೇ ಅವರಲ್ಲಿ ವಿಷಯ ಪ್ರಸ್ತಾಪಿಸಿ ಬೇಕಾದ ವ್ಯವಸ್ಥೆಗಳನ್ನೆಲ್ಲಾ ಖುದ್ದಾಗಿ ನಾನೇ ಮಾಡಿಸುತ್ತಿದ್ದೆ. ಕಾರ್ಯದ ಹೊರೆಯನ್ನು ನಿಮ್ಮ ಮೇಲೆ ಹಾಕುತ್ತಿರಲಿಲ್ಲ. ಆದರೆ ಇದು ಅತ್ಯಂತ ಕ್ಲಿಷ್ಟಕರ ಕಾರ್ಯ. ಮಾಡಿದ್ದೇ ಆದರೆ ಎಲ್ಲರಿಗೂ ಒಳಿತೇ. ಎಂದಿಗೂ ರಾಜ್ಯಕ್ಕಾಗಲೀ ರಾಜಮನೆತನಕ್ಕಾಗಲೀ ಯಾವ ಕಷ್ಟಗಳೇ ಒದಗಿಬರದು. ಆದರೆ ಮೂರ್ತಿ ಸ್ಥಳಾಂತರ ಅಷ್ಟು ಸುಲಭವಾಗಿಲ್ಲ.

ಯಾಕೆ?

ಅಂತಹ ಸಮಸ್ಯೆಯಾದರೂ ಏನಿದೆ ಜೋಯಿಸರೇ? ವಿವರಿಸಿ.

ಅದು ಯಾವ ದೇವಾಲಯ?

ಯಾವ ಊರಿನಲ್ಲಿದೆ?

ರಾಜಾ.. ಅದು ಕರಾವಳಿಯ “ಶಿವಳ್ಳಿ”ಯಲ್ಲಿರುವ ದೇವಾಲಯ.

ಏನು?

ಶಿವಳ್ಳಿಯ ದೇವಾಲಯವೇ??

ಪುರಾಣ ಪ್ರಸಿದ್ಧ ಈಶ್ವರನ ದೇವಾಲಯವೇ?

ಅದನ್ನು ಸ್ಥಳಾಂತರಿಸುವುದಿರಲಿ ನಮ್ಮಂತಹವರಿಂದ ಮುಟ್ಟಲು ಸಾಧ್ಯವಾದೀತೆ?

ಕಷ್ಟಸಾಧ್ಯ ಜೋಯಿಸರೇ.

ರಾಜಾ.. ಈಶ್ವರ ದೇವಸ್ಥಾನವಾಗಿದ್ದರೆ ಅಷ್ಟಬಂಧ ಪ್ರಶ್ನೆಯ ಮೂಲಕ ಸರಿಯಾದ ಮಾರ್ಗ ಕಂಡುಕೊಂಡು ಸ್ಥಳಾಂತರಿಸಬಹುದಿತ್ತು. ಆಗಮ ಶಾಸ್ತ್ರದಲ್ಲಿ ಉಕ್ತವಾಗಿರುವಂತೆ ಆಯಾದಿಗಳನ್ನು ಮಾಡಿ ಅಲ್ಲಿಯ ದೇವಾಲಯದಂತಯೇ ಮತ್ತೊಂದು ದೇವಾಲಯ ನಿರ್ಮಿಸಿ ಅಲ್ಲಿಯ ಲಿಂಗವನ್ನು ತಂದು ಪ್ರತಿಷ್ಠಾಪಿಸಬಹುದಿತ್ತು. “ಬೋಳಾಶಂಕರ” ಅರ್ಥಾತ್ ಕೇಳಿದ್ದನ್ನೆಲ್ಲಾ ಕೊಡುವವ ಎಂದೇ ಕರೆಯಲ್ಪಡುವ ಶಿವನನ್ನು ಭಕ್ತಿಯಿಂದ ತನ್ನ ಲಿಂಗವನ್ನು ಸ್ಥಳಾಂತರ ಮಾಡಲು ಕೋರಿಕೊಂಡರೆ ಅಷ್ಟಮಂಗಳ ಪ್ರಶ್ನೆಯ ಮುಖೇನ ಅವನ ಒಪ್ಪಿಗೆ ಪಡೆಯಬಹುದಿತ್ತೇನೋ. ಆದರೆ ಸ್ಥಳಾಂತರಗೊಳಿಸಬೇಕಾದದ್ದು ಈಶ್ವರ ಲಿಂಗವಲ್ಲ. ಅಲ್ಲೇ ಸನಿಹದಲ್ಲಿರುವ ವೇಣುಗೋಪಾಲನ ವಿಗ್ರಹ.

(ಮುಂದುವರೆಯುವುದು..)

Facebook ಕಾಮೆಂಟ್ಸ್

Vikram Jois:
Related Post