X

ಮರುಭೂಮಿಯ ಮಲೆನಾಡು

ರಣಬಿಸಿಲ ಹೊಡೆತಕ್ಕೆ ಇದ್ದೆನೋ ಬಿದ್ದೆನೋ ಎನುತ ಎಲುಬುಗಟ್ಟಿದ ಹಕ್ಕಿಯೊಂದು ಕಷ್ಟಪಟ್ಟು ಹಾರತೊಡಗಿತ್ತು. ಕಾದ ನೀಲಾಕಾಶದಲ್ಲಿ  ಜ್ವಲಿಸುತ್ತಿರುವ ಸೂರ್ಯದೇವನ ಶಕ್ತಿ ವಾತಾವರಣದ ತಾಪಮಾನವನ್ನು 50 ಡಿಗ್ರಿಗಳವರೆಗೂ ತಲುಪಿಸಿದೆ. ಕೆಳನೋಡಿದರೆ ಕಾದ ಮರಳ ದೊಡ್ಡದೊಡ್ಡ ರಾಶಿಗಳು  ಕಳ್ಳ ನೆಪವನ್ನು ಒಡ್ಡಿ ಶಿಕಾರಿಗೆ ಕದ್ದು ಅಣಿಯಾಗಿವೆಯೇನೋ ಎಂದನಿಸುತ್ತಿದೆ. ಬೀಸುವ ಗಾಳಿಯೂ ಮುನಿಸಿಕೊಂಡೋ ಎಂಬಂತೆ ಬಿಸಿಬಿಸಿಯಾಗಿ ಆ ಪುಟ್ಟ ದೇಹಕ್ಕೆ ಬಂದು ಅಪ್ಪಳಿಸಿ ಹಿಂಸಿಸುತ್ತಿದೆ. ಹಕ್ಕಿಗೆ ಯಾವ ದಿಕ್ಕಿನಲ್ಲಿ ಹಾರಬೇಕೆಂದು ತಿಳಿಯಲಿಲ್ಲ. ಗಂಟಲು ಒಣಗಿ ಮರದ ಚಕ್ಕೆಯಂತಾಗಿದೆ. ಕೂಗಿಕೊಳ್ಳಲೂ ಧ್ವನಿಯಲ್ಲಿ ಶಕ್ತಿಯಿಲ್ಲ! ಇನ್ನೇನು ತನ್ನ ಕೊನೆಘಳಿಗೆ ಸಮೀಪಿಸಿತು, ಮರುಭೂಮಿಯ ಕೆನ್ನಾಲಿಗೆಗೆ ತನ್ನೀ ದೇಹ ಸಮರ್ಪಣೆಯಾಯಿತು  ಎನ್ನುವಷ್ಟರಲ್ಲಿ ದೂರದಲ್ಲೆಲ್ಲೋ ಮೋಡ ಕವಿದ ಆಕಾಶ ಅದಕ್ಕೆ ಗೋಚರಿಸಿದಂತನಿಸುತ್ತದೆ. ಬರಡುಭೂಮಿಯ ಕಾನನದಲ್ಲಿ ಮೋಡವೇ? ಕಣ್ಣಿಗೂ ಕೊನೆಗಾಲ ಸಮೀಪಿಸಿರಬಹುದು ಎಂದುಕೊಂಡರೂ, ಪ್ರವಾಹದಲ್ಲಿ ಕರಗುವವನಿಗೆ ಒಂದು ಗರಿಕೆ ಹುಲ್ಲೂ ಆಶ್ರಯವಾದಂತೆ ಹಕ್ಕಿಗೆ ಬತ್ತತೊಡಗಿದ್ದ ಜೀವನೋತ್ಸಾಹ  ಒಮ್ಮೆಲೇ ಕಾರಂಜಿಯಂತೆ ಚಿಮ್ಮತೊಡಗಿತು. ಮೋಡಗಳು ಕಂಡ ದಿಕ್ಕಿಗೆ ತನ್ನ ಶಕ್ತಿಯನ್ನೆಲ್ಲ ಬಿಟ್ಟು ಅದು ಹಾರತೊಡಗಿತು. ಕೆಲನಿಮಿಷಗಳ ಕಾಲ ಅದೇ ದಿಕ್ಕಿನಲ್ಲಿ ಹಾರಿದ ಹಕ್ಕಿಗೆ ತನ್ನ ಊಹೆ ಸುಳ್ಳೆನಿಸಲಿಲ್ಲ! ಹಸಿಮಣ್ಣಿನ ಕನುವು ಚೂರು ಚೂರಾಗಿಯೇ ಮುಖಕ್ಕೆ ಬಡಿಯತೊಡಗಿತು. ಜೀವ ಒಮ್ಮೆಲೇ ಖುಷಿಯಿಂದ ಸಂಭ್ರಮಿಸತೊಡಗಿತು. ರೆಕ್ಕೆಗಳ ವೇಗ ತಾನಾಗಿಯೇ ಹೆಚ್ಚಾಯಿತು. ನೂರಾರು ಕಿಲೋಮೀಟರ್’ಗಳವರೆಗೂ ಮೈಚಾಚಿ ಮಲಗಿರುವ ದೈತ್ಯ ಮರಳುಗಾಡಿನ ಮೂಲೆಯಲ್ಲಿ ವಿಸ್ಮಯವೊಂದು ಎದುರಾಯಿತು ಹಕ್ಕಿಗೆ. ದೂರದಿಂದ  ಹಾರಿ ಬಂದ ಅದಕ್ಕೆ ಸಿಕ್ಕ ಹಸಿಮಣ್ಣಿನ ವಾಸನೆಯ ಮೂಲ ಝರಿ ತೊರೆಗಳಿಂದ ಕೂಡಿದ, ಮೋಡಗಳಿಂದ ತುಂತುರುಗೈಯತೊಡಗಿ ಹಸಿರು ಹೊದಿಕೆಯನ್ನು ಹೊದೆದುಕೊಂಡ ಒಂದು ಭಿನ್ನ ಲೋಕವೇ ಎನ್ನಬಹುದಾದ ನೆಲದಿಂದ. ಹಕ್ಕಿಗೆ  ಸ್ವರ್ಗದ ಬಾಗಿಲು ತೆರೆದಂತಾಯಿತು. ತಾನು ಕಾಣತೊಡಗಿದ ವಿಸ್ಮಯಕ್ಕೆ ಪ್ರತಿಕ್ರಿಯೆ ನೀಡಲೂ ಶಕ್ತವಿರದ ಅದು ಕೂಡಲೇ ಝರಿಯೊಂದರ ಬಳಿಗೆ ಹೋಗಿ ದೊಪ್ಪನೆ ಬಿದ್ದಿತು.

ಅದು ದಿನದ 24 ಘಂಟೆಯೂ ಒಣಗಾಳಿ ಬೀಸುವ ಮರುಭೂಮಿ.. ಸರಾಸರಿ ತಾಪಮಾನವೇ ಸುಮಾರು 40 ರಿಂದ  50 ಡಿಗ್ರಿ.  ಎಸಿ, ಫ್ರಿಜ್ಡ್ ಹಾಗು ಫ್ಯಾನ್ ಗಳೆಂಬ ಆಧುನಿಕ ಆಪತ್ಬಾಂಧವರೇನಾದರು ಇಲ್ಲದೆ ಹೋಗಿದ್ದರೆ ಇಲ್ಲಿನ ದೇಶಗಳು ಇಂದಿಗೂ ಬರಡು ಮರುಭೂಮಿಗಳಾಗಿಯೇ ಉಳಿಯುತ್ತಿದ್ದವೇನೋ? ಇಂತಹ ಬೆಂಕಿಯಂತಹ ಬಿಸಿಲಗೆ ಸವಾಲು ಹಾಕುವಂತೆ ಬೆಳೆದು ಇಂದು ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿವೆ  ಇಲ್ಲಿನ ಹತ್ತು ಹಲವು ದೇಶಗಳು. ವರ್ಷಕ್ಕೊಮೆ ಅಥವಾ ಎರಡು ಬಾರಿ ಅಥವಾ ಒಮ್ಮೆಯೂ ಬಾರದ ಮಳೆಯನ್ನಂತು ಇಲ್ಲಿನ ನರಪಿಳ್ಳೆಯೂ ನಂಬಿಕೊಂಡು ಬದುಕುವುದಿಲ್ಲ. ದಿನಬಳಕೆ ಹಾಗೂ ಇತರೆ ಏನೇ ಕೆಲಸಕ್ಕೂ ಸಮುದ್ರದ ನೀರೇ ಜೀವಾಳ. ಡಿಸಾಲೆನೇಷನ್ (ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ ಕುಡಿಯಲು ಯೋಗ್ಯವಾದ ನೀರನ್ನಾಗಿ ಮಾಡುವ ವಿಧಾನ) ಎಂಬ ಮತ್ತೊಬ್ಬ ಆಪತ್ಬಾಂಧವನೆಂಬ ಪ್ರಕ್ರಿಯೆಯನ್ನು ನಂಬಿ ಬದುಕಲಾಗುತ್ತದೆ ಇಲ್ಲಿನ ಜೀವನ. ಮಧ್ಯಪ್ರಾಚ್ಯ ದೇಶಗಳೆಂದು ಕರೆಯುವ ಇಲ್ಲಿನ ಜನಜೀವನ ಬಿಸಿಲಿನ ರಣಹೊಡೆತಕ್ಕೆ ಮನೆ, ಆಫೀಸ್, ಎಸಿ ತುಂಬಿದ ಕಾರು  ಹಾಗು ಶಾಪಿಂಗ್ಮಾಲುಗಳ ಒಳಗೆಯೇ ಕಳೆಯಲ್ಪಡುತ್ತದೆ. ಅದೂ ಸಹ ಸೂರ್ಯ ಮರೆಯಾದ ರಾತ್ರಿಯ ಘಳಿಗೆಯಲ್ಲಿಯೇ! ಒಂದು ತರಹ ನಿಶಾಚರಿಗಳ ಜೀವನವೆಂದೇ ಹೇಳಿದರೂ ತಪ್ಪಾಗಲಾರದು. ಇನ್ನು ಕಾಡು ಮೇಡು ನದಿ ಜಲಪಾತಗಳೆಂದರೆ ಇವರುಗಳಿಗೆ ಕಾಣದ ಸ್ವರ್ಗದ ಕನಸೆ ಸರಿ! ಹಸಿರು ಹೊದಿಸಿದಂತಿರುವ ಕೃತಕ ಹುಲ್ಲಿನ ನೆಲ ಹಾಗು ಸಮುದ್ರದ ನೀರನ್ನೇ ಪಂಪು ಮೋಟಾರುಗಳ ಮೂಲಕ  ಮೇಲಕ್ಕೂ ಕೆಳಕ್ಕೂ ಹರಿಬಿಟ್ಟು  ಗುಡ್ಡಗಾಡು ಹಾಗು ನದಿ ಜಲಪಾತಗಳ ಅನುಭವವನ್ನು ಪಡೆಯಲಾಗುತ್ತದೆ. ಹೀಗೆ ಸಕಲ ನೈಸರ್ಗಿಕ ಜೀವನವನ್ನು ಇಲ್ಲಿನ ಜನತೆ ಟೆಕ್ನಾಲಜಿ ಎಂಬ ನಾಲ್ಕಕ್ಷರದ ಪದವೊಂದರಿಂದಲೇ ಪಡೆದುಕೊಳ್ಳುತ್ತದೆ. ಎಲ್ಲಿಯವರೆಗೂ ಎಂದರೆ ಮಂಜುಗೆಡ್ಡೆಗಳ ಒಂದು ಮಿನಿ ಅಂಟಾರ್ಟಿಕಾವೇ ಇಲ್ಲಿನ ಶಾಪಿಂಗ್ಮಾಲುಗಳ ಒಳಗೆ ಕಾಣಸಿಗುತ್ತದೆ.
ಇಂತಹ ಒಂದು ಕೃತಕ ಕಾಂಕ್ರೀಟು ನಾಡಿನಲ್ಲಿ ಕಿಲೋಮೀಟರು ಗಟ್ಟಲೆ ವಿಸ್ತೀರ್ಣದ ಪ್ರದೇಶವೊಂದು ವರ್ಷಕ್ಕೆ ನಾಲ್ಕು ತಿಂಗಳು ಮದುವಣಗಿತ್ತಿಯ ಹಸಿರು ಸೀರೆಯ ಹೊಳಪನ್ನು ಧರಿಸಿ ನಲಿಯುತ್ತದೆ ಎಂದರೆ ನೀವು ನಂಬಲೇಬೇಕು. ತುಂತುರು ಮಳೆಯ ಚಿಟಪಟ ಸದ್ದು ಹಗಲು ರಾತ್ರಿಯೆನ್ನದೆ ಆಗಲ್ಲಿ ಕಿವಿಯನ್ನು ಬಡಿಯುತ್ತಿರುತ್ತದೆ. ಬೆಟ್ಟದ ಮೇಲಿನಿಂದ ಇಳಿಯುವ ಸಣ್ಣ ಪುಟ್ಟ ಜಲಧಾರೆಗಳೆಲ್ಲ ಒಂದಾಗಿ ಹೆಚ್ಚು ಕಡಿಮೆ ಒಂದು ನದಿಯ ಆಕಾರವನ್ನೇ ಪಡೆದುಕೊಳ್ಳುತ್ತದೆ! ದೂರ ದೂರದ ದೇಶಗಳಿಂದ ಪಕ್ಷಿಗಳು ಹಾರಾರೀ ಬಂದು ತಮ್ಮ ವಿಧವಿಧವಾದ  ರಾಗಗಳಿಂದ ಮೈದುಂಬಿರುವ ಹಸಿರು ಸಿರಿಗೆ ಒಂದು ಹೊಸ ಮೆರುಗನ್ನೇ ಕೊಡುತ್ತವೆ. ತುಸು ದೂರದ ಮರಳುಗಾಡಿನಲ್ಲಿ ಅಡ್ಡಾದಿಡ್ಡಿ ಅಲೆಯುವ ಒಂಟೆಗಳೂ ಈ ಒಂದು ಲೋಕಾತೀತವಾದ ಜಾಗಕ್ಕೆ ಓಡೋಡಿ ಬಂದು ಹಸಿರ ಕಾನನದಲ್ಲಿ ಮಿಂದು ನಲಿದೇಳುವುದುಂಟು! ಸಮುದ್ರದ ನೀರನ್ನು ತಡೆದಿವೆಯೋ ಎಂಬಂತಿರುವ ಎತ್ತರದ ಬೆಟ್ಟಗುಡ್ಡಗಳ ಒಂದುಬದಿಗೆ ಹೀಗೆ ಹೊಗೆಯಂತೆ ಆವರಿಸಿರುವ ಮೋಡಗಳ ಕೆಳಗೆ ಒಂದು ಹಸಿರು ಸ್ವರ್ಗವೇ ಹರವಿಕೊಂಡರೆ ಬೆಟ್ಟದ ಇನ್ನೊಂದು ಬದಿಗೆ  ಮರಳುಗಾಡಿನ ದೊಡ್ಡ ದೊಡ್ಡ ಮರಳ ದಿಬ್ಬಗಳು ತಮಗಾದ ಅನ್ಯಾಯವನ್ನು ಚೀರಿ ಚೀರಿ ಹೇಳಿಕೊಳ್ಳುತ್ತಿವೆಯೋ ಎಂಬಂತೆ ಭಾಸವಾಗುತ್ತದೆ. ಅದೊಂದು ಮರುಭೂಮಿಯ ನಿಗೂಢ ವಿಸ್ಮಯ!

ಗಂಟಲು ಒಣಗಿ ಇನ್ನೇನು ಸತ್ತೇ ಹೋದೆನೆಂಬ ಘಳಿಗೆಯಲ್ಲಿ ಕಷ್ಟಪಟ್ಟು ಹಾರಾರೀ ಬಂದ ಹಕ್ಕಿಯೂ ಈಗ ಬಂದು ಬಿದ್ದಿರುವುದು ಇದೇ ಜಾಗಕ್ಕೆ. ಅಲ್ಲೊಂದು ಇಲ್ಲೊಂದು ಮರಗಿಡಗಳನ್ನು ಬಿಟ್ಟರೆ ಹೀಗೆ ಅಷ್ಟದಿಕ್ಕುಗಳಿಗೂ ಒಂದೇ ಸಮನಾದ ಹಸಿರನ್ನು ಅದು ತನ್ನ ಜೀವಮಾನದಲ್ಲೇ ಕಂಡಿರಲು ಸಾಧ್ಯವಿಲ್ಲ.ಹತ್ತಾರು ಜಾತಿಯ ಹಕ್ಕಿ, ಚಿಟ್ಟೆ, ಹುಳ ಹುಪ್ಪಟೆ, ಬಣ್ಣ ಬಣ್ಣದ ಹಣ್ಣುಗಳು, ಸಾಲದಕ್ಕೆ ಕತ್ತುದ್ದದ ಹರೆಬರೆ ನೆನೆದ ಒಂಟೆಗಳು.. ಅಹಃ ಎಂದನಿಸಿರಬೇಕು ಹಕ್ಕಿಗೆ. ಸಾಯುವ ಜೀವಕ್ಕೆ ಜೀವಪ್ರೀತಿ ಉಕ್ಕಿದಂತಹ ಅನುಭವ. ಸರಸರನೆ ಹೊಟ್ಟೆಯ ಕಟ್ಟೆ ಒಡೆಯುವಷ್ಟು ನೀರನ್ನು ಹೀರಿ ಹತ್ತಿರದಲ್ಲಿದ್ದ ಯಾವುದೊ ಮರವೊಂದರ ಮೇಲೆ ಕುಳಿತು ಹಾಯಾಗಿ ಸಿಳ್ಳೆಯಾಕತೊಡಗಿ ನೋಡುತ್ತದೆ, ಎಲ್ಲೆಂದರಲ್ಲಿ ಗಂಡು ಹಕ್ಕಿಗಳು ಹಳ್ಳದಂತಿರುವ ನೀರಿಗೆ ಜೋತುಬಿದ್ದಿರುವ ಬಳ್ಳಿಗಳಿಗೆ ವಿಧವಿಧವಾದ ಗೂಡನ್ನು ಹೆಣೆಯುತ್ತಾ ಹೆಣ್ಣು ಹಕ್ಕಿಗಳನ್ನು ಸೆಳೆಯುವಲ್ಲಿ ಮಗ್ನವಾಗಿವೆ!  ದೂರದಲೆಲ್ಲೋ ರಣ ಹದ್ದೊಂದು ಆಹಾರಾನ್ವೇಷಣೆಯಲ್ಲಿ ಭಾರಿ ದೂರದ ನೆಲವನ್ನು ಎಳೆಎಳೆಯಾಗಿ ಪರೀಕ್ಷಿಸುತ್ತಿದ್ದರೆ ಇತ್ತ ಕಡೆ  ಅದರ ನಡುಕಹಿಟ್ಟಿಸುವ ಭಯಾನಕ ಸಿಳ್ಳೆಗೆ  ಮೊಲ, ಅಳಿಲು, ಇಲಿಗಳು ತಮ್ಮ ತಮ್ಮ ಗೂಡನ್ನು ಸೇರಿ ಮರೆಯಾಗುತ್ತಿವೆ. ನೀರಿನ ಒಳಗೆ ಮರಿಮೀನುಗಳು ಅಡ್ಡಾ ದಿಡ್ಡಿ ಆಟವಾಡುತ್ತಿದ್ದರೆ ಇತ್ತಕಡೆ ಕೊಕ್ಕುದ್ದದ ಹಕ್ಕಿಯೊಂದು ಮಿಂಚಿನ ವೇಗದಲ್ಲಿ ಅತ್ತಕಡೆಗೆ ಚಿಮ್ಮಿ ಮರಿಮೀನೊಂದನು ಕಿಡಿದು ಕ್ಷಣಮಾತ್ರದಲ್ಲಿ ನುಂಗಿಬಿಡುತ್ತದೆ! ಗೊಂದಲಗೊಂಡ ನಮ್ಮ ಹಕ್ಕಿ ಉದ್ದಕೊಕ್ಕಿನ ಹಕ್ಕಿಯನ್ನೇ ಅರ್ಧಚಂದ್ರಾಕೃತಿಯಲ್ಲಿ ತನ್ನ ತಲೆಯನ್ನು ತಿರುಗಿಸುತ್ತಾ ನೋಡುತ್ತದೆ.

ಸ್ಥಳದ ಹೆಸರು ಸಲಾಲ್ಹ. ಓಮನ್ ದೇಶದ ಧೋಫಾರ್ ಪ್ರಾಂತ್ಯದ ರಾಜಧಾನಿ. ವರ್ಷದ ಉಳಿದಷ್ಟೂ ದಿನಗಳು ಸರ್ವೇಸಾಮಾನ್ಯವಾದ ಬರಡುಭೂಮಿ. ಅಲ್ಲೊಂದು ಇಲ್ಲೊಂದು ಕುರುಚಲು ಮರಗಿಡಗಳನ್ನು ಬಿಟ್ಟರೆ ಉಳಿದೆಲ್ಲ ಜಾಗ ಒಣಗಿ ಕಮರಿದ ನೆಲದಂತೆಯೇ ಸರಿ. ಆದರೆ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ  ಅರಬ್ಬೀ ಸಮುದ್ರದಿಂದ ಬೀಸುವ ಗಾಳಿ ತನ್ನೊಡಲಲ್ಲಿ ನೀರಿನ ಬುಗ್ಗೆಗಳನ್ನೂ ಹಿಡಿದುಕೊಂಡು ಬರುವುದುಂಟು. ಹೀಗೆ ಬೀಸುವ ಶೀತ ಮಾರುತಗಳೇ ಒಂದು ಪ್ರಾಂತ್ಯದಲ್ಲಿ ನೀರಿನ ಸಿಂಚನವನ್ನು ಮೂಡಿಸುವ ಕಾಣದ  ಕೈಗಳು. ಭಾಗಶಃ ನಮ್ಮ ಉತ್ತರಕನ್ನಡ, ಕೇರಳ ಪ್ರಾಂತ್ಯಗಳಂತೆಯೇ ಮಲೆನಾಡ ಸಿರಿ ಒಮ್ಮೆಲೇ ಅಲ್ಲಿ ವರಿಸಿಬಿಡುತ್ತದೆ. ಅಲ್ಲಿಯವರೆಗೂ ಕೇವಲ ಮರಳುಗಾಡಿನ ಸುಡುಬಿಸಿಲಲ್ಲೆ ಕಣ್ತಂಪುಮಾಡಿಕೊಳ್ಳುವ ಇಲ್ಲಿನ ಜನ ಒಮ್ಮೆಲೇ ಶೀತಗಾಳಿ ಹಾಗೂ ಚಿಗುರೊಡೆಯುವ ಮರಗಿಡಗಳನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ. ದಂಡುಕಟ್ಟಿಕೊಂಡು  ವಾರಗಳ  ಕಾಲ  ಇಲ್ಲಿಗೆ ಬಂದು ಹಾಯಾಗಿ ಕಳೆಯುತ್ತಾರೆ. ಇತ್ತೀಚಿನ ಕೆಲವರ್ಷಗಳಲಂತೂ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಇಲ್ಲಿನ ಸರ್ಕಾರವೇ ಮುಂದಾಗಿಸಲಾಲ್ಹ ಫೆಸ್ಟಿವಲ್ಎಂಬ ಪ್ರವಾಸಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಗೀತ, ನೃತ್ಯ, ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತದೆ. ಕೆಂಡದ ಮೇಲಿನ ನಡಿಗೆಯನ್ನು ನಡೆದು ಒಮ್ಮೆಲೇ ಮಂಜುಗೆಡ್ಡೆಯ ಹಾಸಿಗೆಯ ಮೇಲೆ ಬೀಳುವ  ಅನುಭವದ ಜೊತೆಗೆ ಒಂದು ಮಿನಿ ಹಬ್ಬದ ವಾತಾವರಣವನ್ನೆ ಸೃಷ್ಟಿಸುವ ಇಲ್ಲಿನ ಪರಿಸರ ಪ್ರವಾಸಿಗರನ್ನು ಆಕರ್ಷಿಸದೇ ಇರಲಾರದು.

ಮುಂದಿನ ಕೆಲತಿಂಗಳು ನಮ್ಮ ಹಕ್ಕಿಗೂ ಹಬ್ಬದ ವಾತಾವರಣವೇ ಸರಿ. ಹೊಟ್ಟೆಬಿರಿಯುವಷ್ಟು ಆಹಾರ, ಮುಳುಗೆದ್ದು ಬಿದ್ದು ಒದ್ದಾಡುವಷ್ಟು ನೀರಿನ ಝರಿ, ತಂಪಾದ ಹಿತವಾದ ನೆಮ್ಮದಿಯ ವಾತಾವರಣ. ಕೆಲದಿನಗಳಲ್ಲೇ ಹಕ್ಕಿಯೂ ಗೂಡೊಂದನ್ನು ಕಟ್ಟಲು  ಕಲಿತಿತು. ಮುಂದೆ ಇನ್ನೇನು, ಹೆಣ್ಣಕ್ಕಿಯೊಂದಕ್ಕೆ ಕಾಳಾಕುವುದು. ಒಂದಲ್ಲ ಎರಡಲ್ಲ ಸುಮಾರು ಇಪ್ಪತ್ತು ಇಪ್ಪತ್ತೈದು ಗೂಡನ್ನು ನಿರ್ಮಿಸಿದ ಹಕ್ಕಿ ತನ್ನ ಒಂದು ಜಂಟಿ ಕುಟುಂಬವನ್ನೇ ಅಲ್ಲಿ ಸ್ಥಾಪಿಸಿತು. ದಿನಕಳೆದಂತೆ ಹಚ್ಚಹರಿದ್ವರ್ಣದ ಕಾಡಿನಂತೆ ಹುಬ್ಬಿಕೊಂಡ ಹಸಿರ ಸಿರಿ ಪಕ್ಕದ ತುಸು ದೂರದಲ್ಲಿಯೇ ಸುಟ್ಟು ಕರಕಲಾಗಿಸುವ ಬಿಸಿಲ ರೌದ್ರತಾಂಡವಾಡುವದನ್ನೇ ಮರೆಸಿಬಿಡುತ್ತದೆ.. ಇತ್ತೀಚೆಗೆ ಕೆಲದಿನಗಳಿಂದ ನೋಡ ನೋಡುತ್ತಲೇ ಚಿತ್ರ ವಿಚಿತ್ರವಾದ ಜನರ ಗುಂಪು ಕಾರು ಜೀಪುಗಳಿಂದ ದಂಡು ದಂಡಾಗಿ ಬಂದು ಅಲ್ಲಲಿ ಬಣ್ಣಬಣ್ಣದ ಗುಡಿಸಲನ್ನು ಹಾಕಿ ಗಿಜಿಗಿಜಿಗುಡುತ್ತಾರೆ. ಅವರುಗಳ ಚೀರಾಟ ಕೂಗಾಟಗಳಿಂದ ಕಂಗಾಲಾದ ಹಕ್ಕಿಗಳು ಎಲ್ಲೆಂದರಲ್ಲಿ ಮನಸ್ಸಾಇಚ್ಛೆ ಹಾರಲೂ ಭಯಪಡುತ್ತಿವೆ. ಸಾಲದಕ್ಕೆ ಅವರು ತಿಂದು ಬಿಸುಟುವ ತಿಂಡಿ ತಿನಿಸುಗಳ ಜೊತೆಗೆ ಪ್ಲಾಸ್ಟಿಕ್ ಪದಾರ್ಥಗಳನ್ನೂ ಸೇವಿಸಿ ಅದಾಗಲೇ ಹತ್ತಾರು ಜೀವಗಳು ಅಸುನೀಗಿವೆ. ದೂರದಲ್ಲಿ ಗಡ್ಡ ಮೀಸೆಯನ್ನು ಉದ್ದುದ್ದ ಬಿಟ್ಟಿದ್ದ ಪ್ರಾಣಿಯಂತಿದ್ದ ಮಾನವನೊಬ್ಬ ಬಾಯಲ್ಲಿ ಸಿಗರೇಟಿನ ತುಂಡೊಂದನ್ನು ತೂರಿಸಿಕೊಂಡು ತನ್ನ ಕೈಲಿದ್ದ ಉದ್ದವಾದ ಕ್ಯಾಮರಾದಿಂದ ನಮ್ಮ ಹಕ್ಕಿಯ ಹಾವಭಾವಗಳನ್ನು ಸೆರೆಹಿಡಿಯುತ್ತಿದ್ದಾನೆ.

ದಿನಗಳು ಕಳೆದವು

ಹೊಗೆಯಂತೆ ಆವರಿಸಿದ ಮಂಜಿನ ಕವಚ ಮರೆಯಾಗುವ ಮುನ್ಸೂಚನೆ ಹಕ್ಕಿಗೆ ಸಿಗಲು ಶುರುವಾಗುತ್ತದೆ. ದಂಡುಕಟ್ಟಿಬಂದ ಜನರ ಸಂತೆಯೂ ವಿರಳವಾಗುತ್ತಾ ಒಂದು ದಿನ ಕಣ್ಮರೆಯಾಗಿಬಿಡುತ್ತದೆ.  ತಮ್ಮ ಸವಿ ನೆನಪಿಗಾಗಿ ಕೊಟ್ಟ ಕಾಣಿಕೆಯೋ ಎಂಬಂತೆ  ಕಸದ ರಾಶಿಯ ಒಂದು ದೊಡ್ಡ ಗುಡ್ಡವನ್ನೇ ನಿರ್ಮಿಸಿ ಹೊರಟಿರುತ್ತಾರೆ! ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಸೂರ್ಯದೇವ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾ ನಮ್ಮ ಹಕ್ಕಿಗೆ ಭಯದ ನಡುಕವನ್ನು ಹುಟ್ಟಿಸುತ್ತಾನೆ. ತಮ್ಮ ಉದ್ದ ಕತ್ತಿನಿಂದ ತುತ್ತತುದಿಯ ಚಿಗುರೆಲೆಗಳನ್ನೇ ಕತ್ತರಿಸಿ ಜಗಿಯುತ್ತಿದ್ದ ಒಂಟೆಗಳೂ ಸಹ ಸಾಲಾಗಿ ಮರುಭೂಮಿಯೆಡೆ ಈಗ ಹೆಜ್ಜೆ ಹಾಕಿವೆ. ತಮ್ಮ ಬುಜದ ಮೇಲಿನ ಕುಂಭದಲ್ಲಿ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟಿವೆ. ಅರಬ್ಬೀ ಸಮುದ್ರದಿಂದ ತಣ್ಣನೆಯ ಹನಿಗಳನ್ನು ಹೊತ್ತುತರುತ್ತಿದ್ದ ಗಾಳಿಯೂ ಈಗ ಕಾಣೆಯಾಗತೊಡಗಿದೆ. ಹಸಿರುಗಟ್ಟಿದ್ದ ಮರಗಿಡಗಳು ರೋಗಬಡಿದಂತೆ ಬರಿದುಬರಿದಾಗುತ್ತಿವೆ. ಪರಿಸರದ ಉಷ್ಣಾಂಶ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತನ್ನದೊಂದು ಸಂಸಾರ ಎಂದುಕೊಂಡು ನಲಿಯುತ್ತಿದ್ದ ಹಕ್ಕಿ, ಮರಿಗಳು ಯಾವಾಗ ರೆಕ್ಕೆ ಬಲಿತು ಹಾರಲು ಶುರುಮಾಡಿದವೋ ಅಂದೇ ಅವುಗಳೆಲ್ಲವೂ ಕಾಣದ ದಿಕ್ಕುಗಳಿಗೆ ಎಲ್ಲ ಬಗೆಯ ಸಂಭಂದಗಳನ್ನು ಕಳೆದು ಕೊಂಡು ಹಾರಿವೆ. ಹಸಿರಿದ್ದಾಗ ಮುತ್ತಿಕೊಳ್ಳುತ್ತಿದ್ದ ಜೀವಗಳು ಇಂದು ಹಸಿರು ಕಳೆದಂತೆ ಬೆನ್ನುಮಾಡಿ ಜಾಗಕಿತ್ತಿವೆ. ಎಲ್ಲರ ಹಸಿವು, ದಾಹ, ಚಿಂತೆ, ದುಃಖ ದುಮ್ಮಾನಗಳನ್ನು ದೂರವಾಗಿಸಿದ ನೆಲ ಇಂದು ಯಾರಿಗೂ ಬೇಡವಾಗಿದೆ. ನಮ್ಮ ಹಕ್ಕಿಯೊಂದನ್ನು ಬಿಟ್ಟು!!

ಈಗ ಹಕ್ಕಿ ಒಂಟಿಯಾಗಿದೆ. ತನಗೆ ಜೀವಕರುಣಿಸಿದ ನೆಲವನ್ನು ಒಬ್ಬಂಟಿಯಾಗಿ ಬಿಟ್ಟು ಹೊರಡಲು ಅದಕ್ಕೆ5 ಮನಸ್ಸಿಲ್ಲ. ಬಿಸಿಲಿನ ಪ್ರಖರತೆಗೆ ಝರಿ ತೊರೆಗಳೆಲ್ಲ ಬರಿದಾಗಿವೆ. ಹಕ್ಕಿಯ ಗಂಟಲು ಪುನಃ ಒಣಗತೊಡಗಿದೆ… ಹಕ್ಕಿ ಕಾಯುತ್ತದೆ. ಬರಿದ ನೆಲಕ್ಕೂ ಜೀವಕೊಡುವ ಶೀತಗಾಳಿ ಬೀಸುವವರೆಗೆ. ನಿನ್ನೊಟ್ಟಿಗೆ ನಾನಿರುವೆ ಎಂಬ ಭರವಸೆಯ ಭಾವದೊಂದಿಗೆ…

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post