ಬಯಕೆಗಳಿಗೆ ಬಡವರಿಲ್ಲ ಎನ್ನುವುದು ಎಷ್ಟು ಸರಳವಾದ ಮತ್ತು ಸಹಜವಾದ ಮಾತು. ಜಗತ್ತಿನ ಸಕಲ ಜೀವಿಗಳೂ ತಮ್ಮ ಮಿತಿಯಲ್ಲಿ ಏನನ್ನಾದರೂ ಬಯಸುವುದು ಸಹಜ. ಗಮನಿಸಿ ನೋಡಿ, ಇಲ್ಲಿ ಬಡವ-ಶ್ರೀಮಂತ ಎನ್ನುವ ಭೇದಭಾವವಷ್ಟೇ ಅಳಿಯುವುದಿಲ್ಲ. ಜೊತೆಗೆ ವಯಸ್ಸು ಮತ್ತು ಲಿಂಗದ ನಡುವೆ ಉಂಟಾಗುವ ತಾರತಮ್ಯ ಕೂಡ ದೂರವಾಗುತ್ತದೆ. ಹುಟ್ಟಿದ ಮಗುವಿನಿಂದ ಹಿಡಿದು ನಾಳೆ ಮಣ್ಣು ಸೇರುವವರೆಗೆ ಬಯಕೆಗಳು ಯಾರನ್ನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ . ಹಾಗೆ ನೋಡಲು ಹೋದರೆ ಬಯಕೆಗಳು ಇರದಿದ್ದರೆ ಬದುಕೇ ಇರುತ್ತಿರಲಿಲ್ಲ. ಹೀಗಾಗಿ ಬಯಕೆಯೇ ಬದುಕು ಎನ್ನಬಹುದು. ಬಯಕೆಗಳಿಗೆ ಸಮಾಜದಲ್ಲಿ ಒಂದು ಬೌಂಡರಿ ನಿರ್ಮಿಸಿದ್ದಾರೆ. ಬಯಸಿದ್ದೆಲ್ಲಾ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನ ಹಿರಿಯರು ಕಿರಿಯರ ತಲೆಗೆ ತುಂಬಿ ಬಿಡುತ್ತಾರೆ. ಜೀವನದಲ್ಲಿ ಹೊಂದಾಣಿಕೆ ಬಹಳ ಮುಖ್ಯ, ಅಂದುಕೊಂಡದ್ದು, ಬಯಸಿದ್ದೆಲ್ಲಾ ನೆರವೇರುವುದಿಲ್ಲ ಎನ್ನುವುದು ಸಾಧಾರಣವಾಗಿ ನಮ್ಮಲ್ಲಿ ತುಂಬಿ ಬಿಡುತ್ತಾರೆ .
ಬಯಕೆಗಳು ಬದುಕನ್ನ ಹಸನಾಗಿಸುತ್ತವೆ, ಜೊತೆಗೆ ಸಹಜವಲ್ಲದ ಬಯಕೆಗಳು ಬದುಕನ್ನ ಬರಡಾಗಿಸುತ್ತವೆ ಕೂಡ. ಹೀಗಾಗಿ ಸಮಾಜದಲ್ಲಿ ಬಯಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಕಷ್ಟು ಕಟ್ಟುಕಟ್ಟಳೆಗಳಿವೆ. ಇಂದಿನ ದಿನದಲ್ಲಿ ತಮಗೇನು ಬೇಕು ಎನ್ನುವುದರ ಬಗ್ಗೆ ಜನ ಹೆಚ್ಚು ಹೆಚ್ಚಾಗಿ ಮಾತನಾಡಲು ಶುರು ಮಾಡಿದ್ದಾರೆ. ಬಯಕೆ ಇರದಿದ್ದರೆ ಬದುಕು ಇಂದಿನಷ್ಟು ಸುಂದರವಾಗಂತೂ ಇರುತ್ತಿರಲಿಲ್ಲ. ಬಯಕೆ ಎನ್ನುವುದು ಒಂಥರಾ ಇಂಧನವಿದ್ದ ಹಾಗೆ, ಬದುಕೆಂಬ ಬಂಡಿ ಸಾಗಲು ಬಯಕೆ ಬೇಕೇ ಬೇಕು. ಬಯಕೆಗಳು ಇಲ್ಲದಿದ್ದರೆ ಬದುಕಿಲ್ಲ, ಎಲ್ಲವೂ ನಿಂತು ಹೋಗಿ ಬಿಡುತ್ತದೆ. ನಾಳೆ ನಾನು ಬಯಸಿದ್ದು ಸಾಧಿಸುತ್ತೇನೆ ಅಥವಾ ನನ್ನ ಬಯಕೆ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಬದುಕಿಗೆ ಇನ್ನೊಂದು ಇಂಧನ. ಬೇಕುಗಳಿಲ್ಲದ ಬದುಕನ್ನ ಊಹಿಸಿಕೊಳ್ಳುವುದು ಕಷ್ಟ. ಬೇಕು ಎನ್ನುವುದು ಹಿತವಾಗಿರಬೇಕು, ಮಿತವಾಗಿರಬೇಕು. ಒಟ್ಟಿನಲ್ಲಿ ಬೇಕು ಎನ್ನುವುದು ಬೇಕೇ ಬೇಕು!
ಇದನ್ನ ಸ್ಪಾನಿಶರು El querer es todo en nuestra vida. (ಎಲ್ ಕೆರೇರ್ ಈಸ್ ತೊದೊ ಎನ್ ನ್ಯೂಸ್ತ್ರ ವಿದಾ) ಎನ್ನುತ್ತಾರೆ. ಬಯಕೆಗಳೆ ನಮ್ಮ ಜೀವನ ಎನ್ನುವ ಅರ್ಥ ಕೊಡುತ್ತದೆ. ಕೆರೇರ್ ಎಂದರೆ ವಾಂಟ್, ಬೇಕು ಅಥವಾ ಬಯಕೆ ಎನ್ನುವ ಅರ್ಥದ ಜೊತೆಗೆ ಪ್ರೀತಿ, ಲವ್ ಎನ್ನುವ ಅರ್ಥವನ್ನ ಸಹ ಕೊಡುತ್ತದೆ. ನಮ್ಮ ಕನ್ನಡದಲ್ಲಿ ಬಯಕೆಗೆ ಬಡವರಿಲ್ಲ ಎಂದು ಬಯಕೆಯ ಅರ್ಥದ ವಿಶಾಲತೆಯನ್ನ ಬಹಳಷ್ಟು ಹೆಚ್ಚಿಸಿದ್ದಾರೆ. ನಮಗೆ ಹೇಗೆ ಬೇಕು ಹಾಗೆ ಅದನ್ನ ಅರ್ಥ ಮಾಡಿಕೊಳ್ಳಬಹದು. ಅದೇ ಸ್ಪಾನಿಷ್ ಗಾದೆಯಲ್ಲಿ ಆ ಮಟ್ಟದ ವಿಶಾಲ ಅರ್ಥ ಕಾಣಲು ಸಾಧ್ಯವಿಲ್ಲ. ಪ್ರೀತಿಯೆ ನಮ್ಮ ಬದುಕು ಎನ್ನುವ ಅರ್ಥದಲ್ಲಿ ಈ ಮಾತನ್ನ ಇಲ್ಲಿ ಬಳಸುತ್ತಾರೆ. ಆದರೆ ಕೆರೇರ್ ಎನ್ನುವುದು ಕೇವಲ ಪ್ರೀತಿ ಎನ್ನುವ ಅರ್ಥಕ್ಕೆ ಸೀಮಿತವಾಗುವಿರುವುದಿಲ್ಲ, ಬಯಕೆ ಎನ್ನುವುದು ವಿಶಾಲ ಅರ್ಥ ಕೊಡುತ್ತದೆ. ಅದು ಪರೀಕ್ಷೆ ಪಾಸಾಗುವ ಬಯಕೆಯಿರಬಹದು, ಹೊಸ ಕೆಲಸ ಗಳಿಸುವ ಬಯಕೆ; ಹೀಗೆ ಅದು ಕೇವಲ ಪ್ರೀತಿಗಷ್ಟೇ ಏಕೆ ಸೀಮಿತವಾಗಬೇಕು? ಎನ್ನುವುದು ಹಲವು ನಾಗರಿಕರ ಅಭಿಪ್ರಾಯ. ಭಾಷೆಯಲ್ಲಿ ಕೂಡ ಕೆರೇರ್ ಎಂದರೆ ಪ್ರೀತಿ ಎಂದಷ್ಟೇ ಅರ್ಥವೇನಿಲ್ಲ, ಹೀಗಾಗಿ ಸ್ಪಾನಿಷ್ ಹಿರಿಯರು ಕೂಡ ಈ ಮಾತನ್ನ ವಿಶಾಲ ಅರ್ಥದಲ್ಲಿ ಬಳಸಿದ್ದಾರೆ. ಆದರೆ ದೇಹಕ್ಕೆ , ಮತ್ತು ದೈಹಿಕ ಕ್ರಿಯೆಗೆ ಹೆಚ್ಚು ಮನ್ನಣೆ ನೀಡುವ ಪ್ರಕ್ರಿಯೆ ಯೂರೋಪಿನಲ್ಲಿ ಹೆಚ್ಚಾಗಿರುವುದರಿಂದ ಈ ಮಾತು ಸೀಮಿತ ಅರ್ಥದಲ್ಲಿ ಉಪಯೋಗಿಸಲ್ಪಡುತ್ತಿದೆ.
ಇನ್ನು ಇಂಗ್ಲಿಷರು ‘The want / love is everything in our life’ ಎನ್ನುತ್ತಾರೆ . ಇಲ್ಲಿ ಕೂಡ ವಾಂಟ್ ಮತ್ತು ಲವ್ ನಡುವಿನ ಅಂತರದಲ್ಲಿ ನಿಖರತೆಯಿಲ್ಲ. ಗಮನಿಸಿ, ಬೇಕು ಅನ್ನಿಸಿದ್ದೆಲ್ಲ ಪ್ರೀತಿಸಬೇಕು ಅಂತೇನಿಲ್ಲ. ಯೂರೋಪಿನ ಹಿರಿಯರಲ್ಲಿ ಬಯಕೆ ಮತ್ತು ಪ್ರೀತಿಯ ನಡುವಿನ ತಾಕಲಾಟ ನಿರ್ಧಿಷ್ಟವಾಗಿ ಹೇಳಲು ಸೋತಿದ್ದಾರೆ ಎನ್ನಲು ಅಡ್ಡಿಯಲ್ಲಿ. ಅದೇ ನಮ್ಮ ಕನ್ನಡ ಆಡು ಮಾತಾದ ‘ ಬಯಕೆಗೆ ಬಡವರಿಲ್ಲ ‘ ಎನ್ನುವುದನ್ನ ಅವರವರ ಸಂಸ್ಕಾರ ಮತ್ತು ಅನುಭವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹದುದಾಗಿದೆ .
ಇದೇನೇ ಇರಲಿ ನಾನು -ನೀನು -ಅವನು ಯಾರಾದರೇನು ? ಬಯಕೆಗಳ ಬಂದಿಖಾನೆಯಲ್ಲಿ ಬಂಧಿ/ಖೈದಿಗಳೆ ಅಲ್ಲವೇ ?
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
El querer : ವಾಂಟ್ ಅಥವಾ ಲವ್ ಎನ್ನುವ ಅರ್ಥ ಕೊಡುತ್ತದೆ . ಎಲ್ ಕೆರೇರ್ ಎನ್ನುವುದು ಉಚ್ಚಾರಣೆ .
es todo : ಎಲ್ಲವೂ, ಸಕಲವೂ ಎನ್ನುವ ಅರ್ಥ ಕೊಡುತ್ತದೆ . ಈಸ್ ತೊದೊ ಎನ್ನುವುದು ಉಚ್ಚಾರಣೆ .
en nuestra : ನಮ್ಮ ಎನ್ನುವ ಅರ್ಥ ಕೊಡುತ್ತದೆ , ಎನ್ ನ್ಯೂಸ್ತ್ರ ಎನ್ನುವುದು ಉಚ್ಚಾರಣೆ .
vida. : ಬದುಕು , ಜೀವನ ಎನ್ನುವ ಅರ್ಥ ಕೊಡುತ್ತದೆ . ವಿದಾ ಎನ್ನುವುದು ಉಚ್ಚಾರಣೆ .