X

“ಬಲೆಂಗಾರನ್ ತೂಯರ ಕುಡ್ಲಗು ಬಲೆ” – ಮಂಗಳೂರಿನಲ್ಲಿ ಜೇಡ ಮೇಳ

“ಏನು ಜೇಡಮೇಳವೇ? ಅಯ್ಯಪ್ಪ, ಮನೆಯನ್ನು ಗಲೀಜು ಮಾಡುವ ಜೇಡವೇ ಸಾಕು. ಇದರಲ್ಲೇನು ಹೊಸತು? ತಿಂಗಳಿಗೊಮ್ಮೆ ಮನೆಯೊಳಗೂ ಹೊರಗೂ ಬಲೆ ತೆಗೆದು ಸಾಕಾಗುತ್ತದೆ. ಸಾಲದಕ್ಕೆ ಅದನ್ನು ಕಂಡರೆ ಭಯ ಬೇರೆ. ಅಂಥಾ ಜೇಡಗಳಿಗೂ ಒಂದು ಮೇಳವೇ? ಈ ಅಷ್ಟಪದಿಯಲ್ಲಿ ಅಂಥಾ ಅಂದವೇನಿದೆ? ನಮಗೆ ಉಪಯೋಗವೇನಿದೆ?” ಎಂದು ತಿಳಿಯಲು ಮೇಳಕ್ಕೆ ಬನ್ನಿ. ಜುಲೈ ತಿಂಗಳ ಒಂದನೇ ತಾರೀಖು, ಭಾನುವಾರ ಬೆಳಗ್ಗೆ ಹತ್ತರಿಂದ ಸಂಜೆ ನಾಲ್ಕರವರೆಗೆ ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ಕರ್ಣಾಟಕ ಬ್ಯಾಂಕಿನ ಸಭಾಭವನದಲ್ಲಿ 150ಕ್ಕೂ ಮಿಕ್ಕಿ ಜೇಡ ಪ್ರಭೇದಗಳ ಛಾಯಾಚಿತ್ರ ಪ್ರದರ್ಶನವಿರುತ್ತದೆ. ಮಂಗಳೂರಿನ ಡಿ.ವಿ.ಜಿ. ಬಳಗ ಪ್ರತಿಷ್ಠಾನದವರು ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಮೈಸೂರಿನ ‘ಸಾಲಿಗ’ ತಂಡವು “ಊರ್ಣನಾಭನಿಗೊಂದು ನಮಸ್ಕಾರ” ಎಂಬ ಶೀರ್ಷಿಕೆಯಡಿ ಇಡೀ ದಿನದ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದಿಂದ ರಾಜ್ಯದ ಹಲವೆಡೆ ಮಾಡಿಕೊಂಡು ಬರುತ್ತಿದೆ. ಇದೀಗ ಮಂಗಳೂರಿನ ಸರದಿ. ಮಂಗಳೂರಿನವರೇ ಆದ ಖ್ಯಾತ ಪಶುವೈದ್ಯ ಡಾ.ಮನೋಹರ ಉಪಾಧ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಪಶ್ಚಿಮಘಟ್ಟ ಮತ್ತು ಮೈಸೂರಿನ ಸುತ್ತಮುತ್ತ ಸಿಗುವ ಸಾಲಿಗಗಳ ವೈವಿಧ್ಯಮಯ ಜಗತ್ತನ್ನು ಛಾಯಾಚಿತ್ರಗಳ ಮೂಲಕ ಪ್ರದರ್ಶಿಸಲಿದ್ದಾರೆ. ಜೇಡಗಳಿಂದ  ನಮಗೇನು ಲಾಭವೆಂದು ಉತ್ತರಿಸಲಿದ್ದಾರೆ. ಬಲೆ ಬಲದ ಜೇಡನ ಬಲೆಗೆ ಪ್ರತಿನಿತ್ಯ ಅದೆಷ್ಟು ಕೀಟಗಳು ಬಲಿಯಾಗುತ್ತವೆ, ಈ ಮೂಲಕ ಪರಿಸರ ಸಮತೋಲನದಲ್ಲಿ ಜೇಡದ ಪಾತ್ರವೇನು ಎಂದು ತಿಳಿಸಲಿದ್ದಾರೆ.  ಛಾಯಾಚಿತ್ರಪ್ರದರ್ಶನದ ಜೊತೆಗೆ ಜೇಡಗಳ ಬಗೆಗಿನ ಸಾಕ್ಷ್ಯಚಿತ್ರವನ್ನೂ ಪ್ರದರ್ಶಿಸಲಾಗುವುದು.

ವೈಶಿಷ್ಟ್ಯತೆ

ಜೇಡಗಳು  ಕೀಟಗಳಿಗಿಂತ ಹೇಗೆ ವಿಭಿನ್ನ? ಜೇಡಗಳಲ್ಲಿ ಎಷ್ಟು ಪಂಗಡಗಳಿವೆ? ಜೇಡಗಳ ಆಹಾರ ಕ್ರಮ, ಅವುಗಳ ಸಂತಾನೋತ್ಪತ್ತಿಯ ಸೋಜಿಗ, ಸಾಲಿಗನ ಬುದ್ದಿವಂತಿಕೆ, ಆಧುನಿಕ ತಂತ್ರವಿದ್ಯೆಗಳಲ್ಲಿ ಜೇಡಗಳ ಬಳಕೆ. ಇಂಥಹವುಗಳ ಬಗೆಗೆ ಸವಿವರವಾಗಿ ‘ಸಾಲಿಗ’ ತಂಡ ಹೇಳಲಿದೆ. Spider man ಚಲನಚಿತ್ರವನ್ನು ನೋಡಿರುವ ಮಕ್ಕಳಿಗೆ ನಿಜವಾದ Spider ನ ಗುಣವನ್ನು ಅರಿಯುವ, ಆ ಮೂಲಕ ತಮ್ಮ ಪರಿಸರದಲ್ಲಿ ಜೇಡಗಳನ್ನು ಗುರುತಿಸಲು ಈ ಕಾರ್ಯಕ್ರಮ ಅನುವು ಮಾಡಿಕೊಡಲಿದೆ.

‘ಐಟಿಯಿಂದ  ಮೇಟಿಗೆ’

ಇದೇ  ಸಂದರ್ಭದಲ್ಲಿ  ಶ್ರೀ ವಸಂತಕಜೆಯವರು ಸಾಫ್ಟ್’ವೇರ್ ವೃತ್ತಿ ತೊರೆದು ಕೃಷಿ ಆರಂಭಿಸಿದ ಮೇಲೆ ಬರೆದ ಚೊಚ್ಚಲ ಪುಸ್ತಕ  ‘ಐಟಿಯಿಂದ  ಮೇಟಿಗೆ’ ಲೋಕಾರ್ಪಣೆಗೊಳ್ಳಲಿದೆ. ಜೇಡಗಳ ಚಿತ್ರಗಳನ್ನು ನೋಡಬಂದವರು (ಜೇಡಗಳೊಳಗೊಂಡ ಪ್ರಕೃತಿ) ಬಂದವರ ಅನುಭವವನ್ನೂ ಪಡೆಯಬಹುದು.

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post