‘ಏಯ್.. ಇದು ತೋಳ್ ಅಲ್ಲ ಕಣ್ರೋ.. ತೊಲೆ, ತೊಲೆ! ನನ್ನ ಇಲ್ಲಿವರ್ಗು ಯಾರು ಮುಟ್ಟಿಲ್ಲ, ಮುಂದೆ ಮುಟ್ಟೋದು ಇಲ್ಲ‘
‘ಹೋದ್ ತಿಂಗ್ಳು ನಾನೇ ತದ್ಕಿದ್ದೆ!?’
‘ಅದು ಹೋದ್ ತಿಂಗ್ಳು,,ನಾನ್ ಏಳ್ತಿರೋದು ಈ ತಿಂಗ್ಳು..’
ರಾಮಕೃಷ್ಣ ಚಿತ್ರದ ಈ ಒಂದು ಸಂಭಾಷಣೆ ಸಾಕು, ಗುಂಗುರು ತಲೆಯ, ಅಚ್ಚಕಪ್ಪಿನ, ತನ್ನ ಡೈಲಾಗ್ ಡೆಲಿವೆರಿಗಳಲ್ಲೇ ಪ್ರೇಕ್ಷಕರ ಹೊಟ್ಟೆಯನ್ನು ಹುಣ್ಣಾಗಿಸಬಲ್ಲ ಹಾಸ್ಯನಟನೊಬ್ಬನನ್ನು ಪರಿಚಯಿಸಲು. ಕೇವಲ ಹಾಸ್ಯನಟ? ಛೆ, ಇದು ಆತನ ಸಾಧನೆಗಳಷ್ಟಕ್ಕೂ ಮಸಿಬಳಿದಂತಾಗುತ್ತದೆ! ಅಲ್ಲದೆ ಮತ್ತೇನು? ಈತ ಒಬ್ಬ ಹಾಸ್ಯನಟನೆಂಬುದು ಬಹುಪಾಲು ಮಂದಿಗೆ ತಿಳಿದಿರುವ ವಿಷಯ ಬಿಟ್ಟರೆ ಈತನೊಳಗಿರುವ ಒಬ್ಬ ಪ್ರತಿಭಾವಂತ ಸಂಗೀತಗಾರ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಹಾಗು ಸಾಹಿತಿ ಇವರುಗಳೆಲ್ಲರ ಪರಿಚಯ ಬಹಳಷ್ಟು ಮಂದಿಗೆ ಇರುವುದೇ ಇಲ್ಲ. ಹೌದು ಸಾಧು ಮಹಾರಾಜ್ ಅಥವಾ ಸಾಧು ಕೋಕಿಲ ಎಂದು ಪ್ರಸಿದ್ದಿ ಹೊಂದಿ ಬಹುಕೋಟಿ ಕನ್ನಡಿಗರ ನಗುವಿನ ಚಿಲುಮೆಯಾಗಿರುವ ಬೆಂಗಳೂರಿನ ‘ಸಹಾಯ ಶಿಲಾನ್ ಶದ್ರಚ್‘ (ಸಾಧುವಿನ ಅಸಲಿ ಹೆಸರು) ರನ್ನು ಅವರ ಸಾಧನೆಗೆ ಅನುಗುಣವಾಗಿ ನಾವುಗಳು ಗುರುತಿಸುವುದೇ ಕಡಿಮೆ. ಇಡೀ ಭಾರತದಲ್ಲೇ ಅತಿ ವೇಗವಾಗಿ ಕಿಬೋರ್ಡನ್ನು ನುಡಿಸಬಲ್ಲವರಲ್ಲಿ ಒಬ್ಬರಾಗಿರುವ(!) ಸಾಧುವಿನ ಬಗೆಗೆ ಹೆಚ್ಚಾಗಿ ತಿಳಿಯಲು ವೀಕೆಂಡ್ ವಿಥ್ ರಮೇಶ್ರ ಆವೊಂದು ಎಪಿಸೋಡನ್ನೂ ನೋಡಿದರೂ ಸಾಕು. ವಿ ಮನೋಹರ್, ಉಪೇಂದ್ರರಂತಹ ದಿಗ್ಗಜರ ಗರಡಿಯಲ್ಲಿ ಬೆಳೆದು ಕನ್ನಡ ಚಿತ್ರರಂಗದಲ್ಲಿ ನಾಯಕ ನಾಯಕಿಯರ ಮಟ್ಟಕ್ಕೆ ಜನಪ್ರಿಯವಾದದ್ದೇನು ಕಡಿಮೆ ಸಾಧನೆಯಲ್ಲ.
ಆದರೆ ಈಗ ವಿಷಯ ಅದಲ್ಲ. ವಿಷಯವಿರುವುದು ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಇಂದಿನ ಸಿನಿಪ್ರಪಂಚದ ಬಗ್ಗೆ. ಪ್ರತಿಭೆಗಳನ್ನು ಬೆಳೆಸುವುದಕ್ಕೂ ಈ ನಮ್ಮ ಸಾಧು ಕೋಕಿಲನಿಗೂ ಅದ್ಯಾವ ಸೀಮೆಯ ನಂಟು ಎನ್ನಬಹುದು. ಇಂದು ನಮ್ಮ ಒಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದರೆ ಅದು ಒಂದಿಷ್ಟು ಒಳ್ಳೆಯ ಕಥಾಹಂದರಕ್ಕಾಗಿಯೇ ಆಗಿರುತ್ತದೆ ವಿನಃ ನಟನೆ, ನಿರ್ದೇಶನ (ಒಂದೆರೆಡು ಚಿತ್ರಗಳು ಈ ಮಾತಿಗೆ ಅಪವಾದವಿರಬಹುದು), ಸಂಗೀತ ಅಥವಾ ಸಾಹಿತ್ಯದಲ್ಲಂತೂ ಅಲ್ಲ. ದಕ್ಷಿಣ ಭಾರತದ ಇತರೆ ರಾಜ್ಯಗಳ ಚಿತ್ರಗಳು ದೇಶವ್ಯಾಪ್ತಿ ಹುಬ್ಬೇರುವಂತೆ ಹೆಸರು ಮಾಡುತ್ತಿದ್ದದೂ ನಮ್ಮಲ್ಲಿ ಮಾತ್ರ ಆಗೊಂದು ಈಗೊಂದು ಚಿತ್ರವನ್ನು ಬಿಟ್ಟರೆ ಉಳಿದೆಲ್ಲ ಚಿತ್ರಗಳು ಪಲ್ಟಿ ಹೊಡೆಯುತ್ತಿರುವುದೇಕೆ? ಇಂದು ನಮ್ಮ ಕನ್ನಡ ಚಿತ್ರರಂಗ ಅದ್ಯಾವ ಮೇರು ಮಟ್ಟಕ್ಕೆ ಬೆಳೆದಿದೆ ಎಂದು ವಾದಿಸಿದರೂ ರಾಜಕೀಯ ವಲಯದಂತೆ ಇಲ್ಲಿಯೂ ಸಹ ವಂಶವೃಕ್ಷದ ಛಾಪೇ ಎದ್ದು ಕಾಣುತ್ತದೆ. ನಟನೆ, ನಿರ್ದೇಶನ, ಸಾಹಿತ್ಯ ಎಂಬ ಡೆಪಾರ್ಟ್ಮೆಂಟುಗಳು ಬಹುಪಾಲು ಅಪ್ಪ-ಮಕ್ಕಳ ವಲಯದಂತೆಯೇ ಆಗಿವೆ. ಕಷ್ಟಪಟ್ಟು ಜಾಲಾಡಿದರೆ ಅಲ್ಲೊಬ್ಬ ಇಲ್ಲೊಬ್ಬ ಗಾಡ್ ಫಾದರ್ ಗಳಿಲ್ಲದ ಆರ್ಟಿಸ್ಟ್ಗಳು ಸಿಗಬಹುದು. ಅವರಿಗೋ ಹತ್ತಾರು ವರ್ಷಗಳು ಇದೇ ಇಂಡಸ್ಟ್ರಿಯಲ್ಲಿ ಕಳೆದರೂ ಇಂದಿಗೂ ಪ್ರತಿಭೆಗನುಗುಣವಾಗಿ ಒಂದು ಸ್ಥಾನ ಮಾನಗಳೆಂಬುದು ದೊರೆತೇ ಇರುವುದಿಲ್ಲ. ಸಾಧು ಈ ಮಾತಿಗೊಂದು ಉದಾಹರಣೆ. ಕೇವಲ ತನ್ನ ಮುಖಭಾವದಲ್ಲೇ ನೋಡುಗರನ್ನು ನಗೆಯ ಕಡಲಲ್ಲಿ ಮುಳುಗೇಳಿಸಬಲ್ಲ, ‘ಹೂವೇ ಹೂವೇ‘ ಎಂಬ H2O ಚಿತ್ರದ ಮಧುರ ಹಾಡಿನ ಸಂಯೋಜನೆಗೆ ಗಿರಿಶಿಖರವನ್ನೆಲ್ಲ ಅಲೆದಾಡಿ ನಂತರ ಬಾಲಿವುಡ್ ನ ಖ್ಯಾತ ಹಾಡುಗಾರ್ತಿ ಕವಿತಾ ಕೃಷ್ಣಮೂರ್ತಿಯವರನ್ನು ಕರೆತಂದು ಹಾಡಿಸಬಲ್ಲ, ‘ರಕ್ತಕಣ್ಣೀರಿ‘ನಂತಹ ಸೂಪರ್ಹಿಟ್ ಚಿತ್ರಗಳನ್ನು ನಿರ್ದೇಶಿಸಬಲ್ಲ ಒಬ್ಬ ಕಲಾಕಾರನಿಗೆ ಇಂದೂ ಸಹ ಚಿಂದಿ-ಚಿಂದಿಯಾಗಿರುವ ಬಟ್ಟೆಯನ್ನು ತೊಡಿಸಿ, ಹುಚ್ಚರೂ ಕೂಡ ನೋಡಿ ನಗಲಾಗದಂತಹ ಸಂಭಾಷಣೆಗಳನ್ನು ಕೊಟ್ಟು, ಮೀಸೆ ಚಿಗುರದ ನಾಯಕರ ಮುಂದೆ ತೀರಾ ಕನಿಷ್ಠವಾಗಿ ತೋರ್ಪಡಿಸುವುದು ಮಾತ್ರ ಅವನ ಸೀನಿಯರಿಟಿಗೆ ಮಾಡುವ ಅವಮಾನವಷ್ಟೇ ಅಲ್ಲದೆ ಒಬ್ಬ ಬಹುಮುಖ ಪ್ರತಿಭೆಯನ್ನು ಪೋಲಾಗಿಸುವುದೂ ಆಗಿದೆ. ನಟನೆಯಲ್ಲಿ ಮೇಲು ಕೀಳು ಎಂಬುದೆಲ್ಲ ಇದೆಯೇ? ನಟನಿಗೆ ಯಾವ ಪಾತ್ರ ಆದರೇನು? ಎಂದೆಲ್ಲ ಪ್ರೆಶ್ನೆಗಳು ಮೂಡಬಹುದು. ಸಹಜವೇ. ಹಾಗಾದರೆ ರಾಜ್ ಕುಮಾರ್ ಅಥವಾ ವಿಷ್ಣುವರ್ಧನ್ ಅವರೇನಾದರೂ ಬದುಕಿದ್ದರೆ ಇಂದಿಗೂ ಸಹ ಅವರುಗಳು ತಮ್ಮ ಆರಂಭದ ದಿನಗಳಲ್ಲಿ ಮಾಡುತಿದ್ದಂತಹ ಸಣ್ಣ ಪುಟ್ಟ ಅತಿ ಕನಿಷ್ಠವೆಂಬಂತಹ ಪಾತ್ರಗಳನ್ನೇ ಇಂಡಸ್ಟ್ರಿ ಅವರುಗಳಿಗೆ ನೀಡುತ್ತಿದ್ದಿತೇ? ಹರಿದ ಅಂಗಿಯನ್ನು ತೊಡಿಸಿ ಘಂಟೆಗಳ ಚಿತ್ರದಲ್ಲಿ ಕೇವಲ ನಿಮಿಷಗಳಷ್ಟೇ ಪರದೆಯ ಮೇಲೆ ಮೂಡುವಂತೆ ಮಾಡುತ್ತಿದ್ದಿತೇ? ನಟನೆಯಲ್ಲಿ ಎಲ್ಲರೂ ಒಂದೆಯಾದರೆ ಅವರಿಗೂ ಇವನಿಗೂ ಇರುವ ವ್ಯತ್ಯಾಸವಾದರೂ ಏನು? ಮೇಲಾಗಿ ಅವರುಗಳು ಕೇವಲ ನಟನೆಯಲ್ಲಿ ಮಾತ್ರ ದಿಗ್ಗಜರಾಗಿದ್ದರು ಎಂಬುದನ್ನು ಮರೆಯಬಾರದು. ಒಬ್ಬ ಹಿರಿಯ ನಟನ ಹಿರಿತನದ ಕಲೆಯನ್ನು ಕಡೆಗಾಣಿಸುವುದೇ ಹಲವು ಬಾರಿ ಚಿತ್ರದ ಹೊಳಪು ಕಮರಲು ಕಾರಣವಾಗುತ್ತದೆ. ಸಾಧುವಿನಂಥ ಇನ್ನೂ ಹಲವರ ಪಾಡು ಹಾಗೆಯೆ ಇದೆ. ಉದಾಹರಣೆಗೆ ಅಲ್ಲೆಲ್ಲೋ ದೂರದ ಸ್ಪೇನ್ ನಲ್ಲಿ ನಡೆದ ಫಿಲಂ ಫೆಸ್ಟಿವಲ್ ನಲ್ಲಿ ಗುರುತಿಸಿಕೊಂಡು ‘ಉತ್ತಮ ನಟ‘ ಎಂಬ ಖ್ಯಾತಿಗೆ ಪಾತ್ರರಾಗಿ ದೇಶವ್ಯಾಪಿ ಪ್ರಸಿದ್ದಿಯನ್ನು ಪಡೆದ ವೈಜನಾಥ್ ಬಿರಾದಾರ್ ಇಂದಿಗೂ ಸಹ ದೊರಕುವ ಸಣ್ಣ ಪುಟ್ಟ ಪಾತ್ರಗಳಲ್ಲೇ ತೃಪ್ತಿಪಡಬೇಕಿದೆ. ಅವರಿಗಾಗಿ, ಅವರ ನಟನ ಹಿರಿಮೆಗೆ ತಕ್ಕನಾದ ಅರ್ಥಪೂರ್ಣ, ಭಾವಭರಿತ ಚಿತ್ರವನ್ನು ಸೃಷಿಸಬಲ್ಲ ಕಲೆಯಾಗಲಿ, ‘ಧೈರ್ಯ‘ವಾಗಲಿ ನಮ್ಮ ಇಂಡಸ್ಟ್ರಿಯ ಅದೆಷ್ಟು ನಿರ್ಮಾಪಕರಿಗಿದೆ?
ಒಂದು ಕ್ಷಣ ಎಂಬತ್ತರ ದಶಕದ ಸೂಪರ್’ಹಿಟ್ ಹಿಂದಿ ಚಿತ್ರಗಳನ್ನು ಗಮನಿಸೋಣ. ಆಕ್ರೋಶ್, ಅರ್ಧಸತ್ಯ, ಮಾಸೂಮ್, ಬಾಝರ್, ಸ್ಪರ್ಶ್, ಪಾರ್, ಆರೋಹಣ್ ಹೀಗೆ ಉದ್ದದೊಂದು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನು ಈ ಎಲ್ಲ ಚಿತ್ರಗಳಲ್ಲಿ ನಟಿಸಿರುವ ನಾಯಕ ನಾಯಕಿರಂತೂ ಮುಖದ ಮೆಲ್ಲೆಲ ಸಿಡುಬಿನ ಕಲೆಗಳಿಂದ ಭಯ ಹುಟ್ಟಿಸುವ, ಕಪ್ಪು ಮೈಯ್ಯ ಬಣ್ಣದ, ಇವರು ಹೀರೋ ಅಥವಾ ಹೀರೋಯಿನ್ ಮೆಟೀರಿಯಲ್ ಗಳೆ ಎಂದು ಹಂಗಿಸಿಕೊಂಡು ನಗೆಪಾಟಲಿಗೆ ಗುರಿಯಾಗುತಿಯಿದ್ದ ಓಂ ಪೂರಿ, ಅಮರೀಶ್ ಪೂರಿ, ನಾಸಿರುದ್ದೀನ್ ಷಾ, ಅನುಪಂ ಖೇರ್, ಸ್ಮಿತಾ ಪಟೇಲ್, ಶಬನಾ ಆಜ್ಮಿ ಹಾಗು ಪರೇಶ್ ರಾವಲ್ ನಂತವರು. ಅಂದು ಅಮಿತಾಬ್ ಬಚ್ಚನ್, ರಿಷಿ ಕಪೂರ್, ರೇಖಾ, ಶ್ರೀದೇವಿ ರವರಂತಹ ದೇಶವ್ಯಾಪಿ ಬೇಡಿಕೆಯ ಕಲಾಕಾರರ ಪ್ರಭೆಯಲ್ಲಿ ಮೇಲಿನ ಇತರ ನಟ ನಟಿಯರೂ ಸಹ ತಮ್ಮ ಕಲೆಯನ್ನು ‘ಕಲೆ‘ಯಂತೆಯೇ ಅಚ್ಚೊತ್ತಿದ್ದರು. ತಮ್ಮ ಅವರ್ಣನೀಯ ಅಮೋಘ ನಟನೆಯ ಮೂಲಕ. ಪಕ್ಕಾ ಕ್ಲಾಸಿಕ್ ಚಿತ್ರಗಳೆಂದು ಕರೆಸಿಕೊಂಡ ಇವರುಗಳ ಮೇಲಿನ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಮನೆಮಾಡಿಕೊಂಡಿವೆ. ಹಸಿರಾಗಿವೆ. ತೀರಾ ಸಾಧಾರಣ ಮೈಕಟ್ಟು, ವಿಕಾರಕೊಂಡ ಮುಖಚಹರೆಯನ್ನು ಒಳಗೊಂಡಿದ್ದ ಇವರುಗಳೆಲ್ಲಾ ಏನಾಗಿದ್ದಾರೆ? ಅವರಿಂದು ಬಾಲಿವುಡ್ನ ದಂತಕತೆಗಳು. ಇಂದಿಗೂ ಚಿತ್ರಗಳಲ್ಲಿ ತೂಕಭರಿತ / ಬಹುಮುಖ್ಯ ಪಾತ್ರಗಳಲ್ಲೇ ನಟಿಸುವ ಇವರುಗಳಿಗೇನು 6 ಪಾಕ್ಸ್ ಆಬ್ಸ್ ಗಳಾಗಲಿ, ಬಿಸಿರಕ್ತದ ಹರೆಯವಾಗಲಿ, ಜುಟ್ಟುಕಟ್ಟುವಷ್ಟುದ್ದದ ಕೂದಲಾಗಲಿ ಇಲ್ಲ. ದಶಕಗಳ ಮೊದಲೇ ತಮ್ಮ ಉತ್ಕೃಷ್ಟ ಪ್ರತಿಭೆಯನ್ನು ಹೊರಹಾಕಿದ ಮೇಲೆ ಇಂಡಸ್ಟ್ರಿ ಅವರನ್ನು ಕಬ್ಬಿನ ಜಲ್ಲೆಯಂತೆ ಹಿಂಡಿ ಒಂದೆಡೆ ಬಿಸಾಡಲಿಲ್ಲ. ಹಿಡಿದ ಕೈಯನ್ನು ಬಿಡಲಿಲ್ಲ. ಇಂದಿಗೂ ಒಬ್ಬ ನಾಯಕ ಅಥವಾ ನಾಯಕಿಯ ಸರಿಸಮನಾಗಿಯೇ ಅವರುಗಳಿಗೆ ಪಾತ್ರಗಳನ್ನೂ ಕೊಟ್ಟು ಅಂತಹದ್ದೇ ಅನುಭವದ ನಟನೆಯನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ನಮ್ಮಲ್ಲಿ? ಅನಂತ್ ನಾಗ್ ಹಾಗೂ ಅಂಬರೀಷ್ ರಂತಹ ಕೇವಲ ಒಂದೆರಡು ಬೆರಳೆಣಿಕೆಯ ನಟರನ್ನು ಬಿಟ್ಟರೆ ಇಂದಿಗೂ ಸಹ ಶಿಳ್ಳೆ ಹೊಡೆದು ಚಪ್ಪಾಳೆಗಳಿಂದ ಸ್ವಾಗತ ಪಡೆದುಕೊಳ್ಳುವ ನಾಯಕರು ಉಳಿದಿಲ್ಲ, ನಾವು ಉಳಿಸಿಕೊಂಡಿಲ್ಲ.
ಕಷ್ಟದಲ್ಲಿ ಇಷ್ಟವಾಗೊನೆ ಕಾಮಿಡಿಯನ್. ತನ್ನೊಳಗಿರುವ ನೂರಾರು ನೋವು ಹತಾಶೆಗಳ ಹಸಿವನ್ನು ಹಿಂಗಿಸಿಕೊಂಡು ಮುಂದಿರುವ ಪ್ರೇಕ್ಷಕರ ಮೈಮನಸ್ಸನ್ನು ಹಗುರಾಗಿಸುವ ಈತನಿಗೆ ಅದ್ಯಾವ ಹೀರೊ ಹೀರೋಯಿನ್ ಗಳು ಸಮ? ಒಂದು ವೇಳೆ ಆ ಕಾಮಿಡಿಯನ್ ಏನಾದರೂ ನಮ್ಮ ಸಾಧು ಮಹಾರಾಜ್ ನಂತವರಾಗಿದ್ದರಂತೂ ‘ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು..!‘ ಎಂಬ ಮಾತುಗಳಲ್ಲೇ ನೋಡುಗರ ಅರ್ಧ ಡಜನ್ ಹಲ್ಲುಗಳು ಹೊರಬಂದಿರುತ್ತವೆ. ಚಿತ್ರ ಬಿಡುಗಡೆಗೊಂಡಾಗ ‘ನಮ್ಮ ಚಿತ್ರ ನೋಡಿ, ನಮ್ಮನು ಬೆಳೆಸಿ‘ ಎಂಬಂತಹ ಸೆಂಟಿಮೆಂಟಲ್ ಮಾತುಗಳನ್ನು ನಂಬುವುದನ್ನು ನಾವುಗಳು ನಿಲ್ಲಸಬೇಕಿದೆ. ಚಿತ್ರ ಚೆನ್ನಾಗಿದ್ದರೆ ಇಂದಲ್ಲ ನಾಳೆ ನಾವುಗಳು ನೋಡಿಯೇ ನೋಡುತ್ತೇವೆ. ಇಂತಹ ಕಳಪೆ ಸ್ಟೇಟ್ಮೆಂಟ್ ಗಳನ್ನು ಕೊಟ್ಟು ಕಳಪೆ ಚಿತ್ರಗಳನ್ನೇ ನೀಡುವ ಬಹುಮಂದಿಯನ್ನು ಬೆಳೆಸುವ ವಿಪರ್ಯಾಸ ನಮಗ್ಯಾಕೆ ಸ್ವಾಮಿ? ಬದಲಿಗೆ ಕನ್ನಡ ಚಿತ್ರರಂಗದ ಅಮೋಘ ರತ್ನಗಳಲ್ಲಿ ಒಬ್ಬನಾಗಿರುವ ಸಾಧುವಿನಂತಹ ಅತಿರಥರಿಗೆ ಅವರ ಪ್ರತಿಭೆಗನುಗುಣವಾಗಿಯಾದರೂ ಪಾತ್ರಗಳನ್ನು ನೀಡಿ. ಕಡೆ ಪಕ್ಷ ಚಿತ್ರ ಚೆನ್ನಾಗಿಲ್ಲದಿದ್ದರೂ ಪಾತ್ರಗಳನ್ನು ಪಾತ್ರಧಾರಿಗಳನ್ನು ದೂರದಿರರು ಪ್ರೇಕ್ಷಕರು.
Facebook ಕಾಮೆಂಟ್ಸ್