X

‘ಮಾಡಿದುಣ್ಣೋ ಮಹರಾಯ’

ಕೆಲವೊಮ್ಮೆ ನಮ್ಮಿಂದ ಕೆಲವು ಕಾರ್ಯಗಳು ನಡೆದು ಹೋಗುತ್ತವೆ. ಅವುಗಳಲ್ಲಿ ಕೆಲವು ನಮ್ಮ ಕೈಮೀರಿ ನಡೆದವಾದರೆ ಇನ್ನೂ ಕೆಲವು ನಮಗೆ ಗೊತ್ತಿದ್ದೆ ಆಗಿರುತ್ತವೆ. ಹೀಗೆ ನಡೆದ ಕಾರ್ಯಗಳು ಕೊಡುವ ಫಲ ಕೂಡ ಕೆಲವೊಮ್ಮೆ ಒಳ್ಳೆಯದು ಮತ್ತೆ ಕೆಲವೊಮ್ಮೆ ಕೆಟ್ಟದ್ದು ಆಗಿರುತ್ತದೆ. ಈ ಒಳಿತು ಕೆಡುಕು ಎನ್ನುವುದು ಕೇವಲ ನಮಗೆ ಸೀಮಿತವಾಗಿದ್ದರೆ ಹೇಗೋ ನಡೆದು ಹೋಗುತ್ತದೆ. ಆದರೆ ನಾವು ಮಾಡಿದ ಕಾರ್ಯದ ಫಲ ಇನ್ನೊಬ್ಬರ ಬದುಕಿಗೆ ತಾಗುವಂತಿದ್ದರೆ ಅದೂ ಒಳಿತಿಗಲ್ಲದಿದ್ದರೆ ಆಗ ನಮ್ಮಲ್ಲಿ ಸಾಮಾನ್ಯವಾಗಿ ‘ಮಾಡಿದುಣ್ಣೋ ಮಹರಾಯ’ ಎನ್ನುವ ಮಾತನ್ನು ಬಳಸುತ್ತೇವೆ. ನಮ್ಮಿಂದ ಯಾರಿಗಾದರೂ ಕೇಡಾದರೆ ಆ ದಿನಕ್ಕೆ ನಾವು ಶಿಕ್ಷೆಯಿಂದ ತಪ್ಪಿಸಿಕೊಂಡು ಮುಂದೊಂದು ದಿನ ಆಕಸ್ಮಾತ್ ಏನಾದರೂ ತೊಂದರೆಗೆ ಒಳಗಾದರೂ ಕೂಡ ಈ ಮಾತನ್ನು ಬಳಸುತ್ತೇವೆ. ಅರ್ಥ ಬಹಳ ಸುಲಭ ನಾವು ಮಾಡಿದ ಕಾರ್ಯಗಳ ಫಲ ನಮ್ಮನ್ನು ಬಿಡದೆ ಹಿಂಬಾಲಿಸುತ್ತದೆ.

ಹೀಗೆ ನಮ್ಮ ಕರ್ಮಫಲಗಳು ಹಲವು ಬಾರಿ ಅದೇ ಸಮಯದಲ್ಲಿ ಸಿಕ್ಕರೆ ಹಲವೊಮ್ಮೆ ವರ್ಷಗಳ ನಂತರ ಅನುಭವಿಸುತ್ತೇವೆ. ವೇಳೆ ಎನ್ನುವುದು ಇಲ್ಲಿ ಅಷ್ಟು ಪ್ರಮುಖವಲ್ಲ. ಇಲ್ಲೇನಿದ್ದರು ನಮ್ಮ ಕರ್ಮ ಮತ್ತು ಅದರ ಫಲಗಳ ಮಾತಷ್ಟೇ ಮುಖ್ಯವಾಗುತ್ತದೆ . ನಮ್ಮ ಒಳ್ಳೆಯತನ ಅಥವಾ ಕೆಟ್ಟತನಗಳು ನಮ್ಮ  ಭವಿಷ್ಯ ನಿರ್ಧರಿಸುತ್ತವೆ. ಇದನ್ನು ನಮ್ಮ ಹಿರಿಯರು ನೀನೇನು ಮಾಡಿದ್ದೀಯ ಅದನ್ನೇ ತಿನ್ನಬೇಕು ಅಂದರು. ಸರಳವಾಗಿ ಎಲ್ಲರಿಗೂ ಇಷ್ಟವಾಗುವ ಊಟದ ಉದಾಹರಣೆ ಮೂಲಕ ಬದುಕಿನ ಪಾಠ ಹೇಳಲು ಯತ್ನಿಸಿದ್ದಾರೆ. ನೀವು ಉಪ್ಪಿಟ್ಟು ಮಾಡಿ ನಂತರ ಅದು ನನಗೆ ಇಷ್ಟವಿಲ್ಲ ಎಂದರೆ ಹೇಗಾಗುತ್ತದೆ? ಬದುಕಿನಲ್ಲೂ ಹಾಗೆಯೇ ನಮಗೇನು ಬೇಕು ಅದನ್ನು ಮಾಡಬೇಕು. ಇಲ್ಲದಿದ್ದರೆ ಇಷ್ಟವಿರಲಿ ಬಿಡಲಿ ಮಾಡಿದ ಉಪ್ಪಿಟನ್ನು ತಿನ್ನಬೇಕಾಗುತ್ತದೆ.

ಇದನ್ನು ಸ್ಪಾನಿಷರು  ‘El que hace la paga (ಎಲ್ ಕೆ ಹಾಸೆ ಲ ಪಾಗ)’ ಎನ್ನುತ್ತಾರೆ. ‘ಯಾರು ಮಾಡಿದ್ದಾರೊ ಅವರು ಬೆಲೆ ತೆರುತ್ತಾರೆ’ ಎನ್ನುವುದು ಯಥಾವತ್ತು ಅನುವಾದ. ತಪ್ಪು ಮಾಡಿದವನು ಅದಕ್ಕೆ ತಕ್ಕ ಬೆಲೆ ತೆರುತ್ತಾನೆ ಎನ್ನುವುದು ನಿಜವಾದ ಅರ್ಥ. ನೀವು ಮಾಡಿದ ಕೆಲಸ ಸರಿಯಾಗಿರದಿದ್ದರೆ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕು ಮತ್ತು ಆ ಬೆಲೆಯನ್ನು ಯಾರು ಆ ಕೃತ್ಯ ಮಾಡಿರುತ್ತಾರೋ ಅವರೇ ತೆರುತ್ತಾರೆ ಎನ್ನುವುದು ಸ್ಪಾನಿಷ್ ಗಾದೆಯ ಅರ್ಥ.

ಇನ್ನು ಇಂಗ್ಲಿಷರು  ‘You’ve made bed, and now you’ll have to lie in it’ ಎನ್ನುತ್ತಾರೆ. ಹಾಸಿಗೆ ಸರಿಯಾಗಿ ಹಾಸದೆ ನಂತರ ಗೊಣಗಿ ಪ್ರಯೋಜನವಿಲ್ಲ; ಅದೇ ಹಾಸಿಗೆಯ ಮೇಲೆ ಮಲಗಬೇಕು ಅಷ್ಟೇ ಎನ್ನುವುದು ಇವರ ಮತ.

ಭಾಷೆ – ದೇಶ ಬದಲಾಗಬಹದು; ಭಾವ ಮಾತ್ರ ಒಂದೇ. ನಮ್ಮ ಮುಂದಿನ ಜನಾಂಗ ಸುಖ ಸಮೃದ್ಧಿಯಿಂದ ಬದುಕಲಿ. ತಪ್ಪು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆ ಶತಸಿದ್ಧ ಎನ್ನುವುದನ್ನು ಹೇಳುವುದು. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಇದ್ದೆ ಇರುತ್ತದೆ ಎನ್ನವುದನ್ನು ಪ್ರಚುರ ಪಡಿಸುವುದು ಎಲ್ಲಾ ಭಾಷೆಯ ಗಾದೆ/ಆಡುಮಾತುಗಳ ಉದ್ದೇಶ. ಅದನ್ನು  ಅರಿತುಕೊಳ್ಳುವ ತಾಳ್ಮೆ, ಸಮಯ ನಮಗಿರಬೇಕಷ್ಟೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

El: ಅವನು ಎನ್ನುವ ಅರ್ಥ. ಯಾರಾದರೂ, ಯಾರು ಎನ್ನುವ ಅರ್ಥದಲ್ಲಿ ಇಲ್ಲಿ ಬಳಸಲಾಗಿದೆ. ಎಲ್ ಎನ್ನುವುದು ಉಚ್ಚಾರಣೆ.

que: ಏನು ಎನ್ನುವ ಅರ್ಥ. ಕೆ ಎನ್ನುವುದು ಉಚ್ಚಾರಣೆ.

hace: ಮಾಡು, ಮಾಡುವುದು ಎನ್ನುವ ಅರ್ಥ. ಹಾಸೆ ಎನ್ನುವುದು ಉಚ್ಚಾರಣೆ.

la paga: ಪೇಮೆಂಟ್, ಬೆಲೆ ಕಟ್ಟುವುದು, ಹಣ ಪಾವತಿಸುವುದು ಎನ್ನುವ ಅರ್ಥ. ಇಲ್ಲಿನ ಸನ್ನಿವೇಶದಲ್ಲಿ ಶಿಕ್ಷೆ ಅನುಭವಿಸುವುದು ಎನ್ನುವ ಅರ್ಥ ಕೊಡುತ್ತದೆ. ಮಾಡಿದ ತಪ್ಪಿಗೆ ಬೆಲೆ ಕಟ್ಟುವುದು ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ಲ ಪಾಗ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post