X

ರಾಝೀ – ಕಮರ್ಷಿಯಲ್ ಸಿನೆಮಾ ಅಲ್ಲದಿದ್ದರೂ ಕಮರ್ಷಿಯಲಿ ಸಕ್ಸಸ್’ಫುಲ್

ಭಾರತೀಯ ಗುಪ್ತಚರ ದಳದ ಆಫೀಸರುಗಳು, ಗೂಢಚಾರಿಗಳ(spy) ಬಗ್ಗೆ  ಸಾಕಷ್ಟು ಸಿನಿಮಾಗಳು ಬಂದಿವೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಸಲ್ಮಾನ್ ಖಾನನ ಟೈಗರ್ ಸಿನಿಮಾಗಳು, ಅಕ್ಷಯ್ ಕುಮಾರನ ಬೇಬಿ ಮತ್ತು ಆಲಿಯಾ ಭಟ್ ಳ ರಾಝೀ…

ಇವತ್ತು ರಾಝೀ ಸಿನಿಮಾ ನೋಡಿದೆ.. ನೈಜ ಘಟನೆಗಳಿಂದ ಸ್ಫೂರ್ತಿಪಡೆದು ಹರಿಂದರ್ ಎಸ್. ಸಿಕ್ಕಾ ಅವರು 2008ರಲ್ಲಿ ಬರೆದಿದ್ದ ‘Calling Sehmat’ ಎಂಬ ಕಾದಂಬರಿಯನ್ನಾಧರಿಸಿರುವ ಈ ಚಿತ್ರ ವಾಸ್ತವಕ್ಕೆ ಹತ್ತಿರವಾಗಿ, ಮನಮುಟ್ಟುವಂತಿದೆ.. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾಗಳ ಬಗ್ಗೆ ನನಗೆ ಅಂಥಾ ಒಳ್ಳೆ ಅಭಿಪ್ರಾಯವೇನೂ ಇಲ್ಲವಾದರೂ ಬೇಬಿ ಇಷ್ಟವಾಗಿತ್ತು.. ಆದರೆ ವಸ್ತುನಿಷ್ಠತೆಯ ದೃಷ್ಟಿಯಿಂದ ನೋಡುವಾಗ ರಾಝೀ ಗೆ ಮೊದಲ ಸ್ಥಾನ.. ಈ ಚಿತ್ರದ ಮುಖ್ಯಪಾತ್ರ ಸಹಮತ್ ಸಯ್ಯದ್ ಳಾಗಿ ನಟಿಸಿರುವ ಆಲಿಯಾ ಭಟ್ ನಿಜಕ್ಕೂ ಅಭಿನಂದನಾರ್ಹಳು! ಹೈವೇ, ಉಡ್ತಾ ಪಂಜಾಬ್ ನಂತರ ಪ್ರಬುದ್ಧವೂ, ಸವಾಲೂ ಎನಿಸುವಂಥ ಪಾತ್ರವನ್ನ ಇದರಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾಳಾಕೆ.. ಟೈಗರ್, ಬೇಬಿಗಳಲ್ಲಿರುವಂತೆ ಅತಿಮಾನುಷವೆನಿಸುವ ಯಾವುದೇ ಸ್ಟಂಟ್ಸ್, ಫೈಟಿಂಗ್, ಅನಾವಶ್ಯಕ ಹಾಡುಗಳು, ಹೀರೋಯಿಸಂ ಇವೇನೂ ಇಲ್ಲದೇ ರಾಝೀ ಸಹಜವಾಗಿ ಮೂಡಿಬಂದಿದೆ..

ನಿರ್ದೇಶಕಿ ಮೇಘನಾ ಗುಲ್ಝಾರ್ ತಮ್ಮ ಹಿಂದಿನ ಸಿನಿಮಾಗಳಿಗಿಂತ ಈಗ ಪಳಗಿದ್ದಾರೆ.. ಗುಲ್ಝಾರರು ಬರೆದಿರುವ “ಏ ವತನ್” ಹಾಡು ಬಹಳ ಇಷ್ಟವಾಯ್ತು.. ಅವರೇ ಬರೆದಿರುವ ಉಳಿದೆರಡು ಹಾಡುಗಳೂ ಚೆನ್ನಾಗಿವೆ.. ಸಿನಿಮಾದುದ್ದಕ್ಕೂ ಒಂದು ಬಗೆಯ subtle sensibility ಕಾಯ್ದುಕೊಂಡಿರುವುದು ಆಪ್ತವೆನಿಸಿತು.. ಇಂಥ ಸಬ್ಜೆಕ್ಟಿನ ಸಿನಿಮಾದಲ್ಲಿ ಅದು ಬಹಳ ಕಷ್ಟ!  ತಮ್ಮ ವೈಯಕ್ತಿಕ ಜೀವನಕ್ಕೆ ಬೆಂಕಿಯಿಟ್ಟು ದೇಶಕ್ಕಾಗಿ, ನಮ್ಮ ರಕ್ಷಣೆಗಾಗಿ ಇಂಥವರು ಅದೆಷ್ಟು ಜನ ಆಗಿಹೋಗಿದ್ದಾರೋ, ಅಜ್ಞಾತರಾಗಿದ್ದುಕೊಂಡು ಕೆಲಸ ಮಾಡುತ್ತಿದ್ದಾರೋ ಎಂದು ಯೋಚಿಸುವಾಗ ಸಂಕಟವಾಗುತ್ತದೆ.. ಅದರ ಹಿಂದೆಯೇ ಅವರ ಬಗ್ಗೆ ಹೆಮ್ಮೆ, ಗೌರವ, ಕೃತಜ್ಞತೆಯ ಭಾವ ಮನಸ್ಸನ್ನಾವರಿಸಿಕೊಳ್ಳುತ್ತವೆ..

ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ಭಾರತ ಆ ದೇಶಕ್ಕೆ ತನ್ನ ಬೆಂಬಲ ಘೋಷಿಸಿದ್ದ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಸಾಮಾನ್ಯ ಹುಡುಗಿಯೊಬ್ಬಳು ತನ್ನ ತಂದೆಯ (ಅವರೂ ಸ್ಪೈ ಆಗಿರುತ್ತಾರೆ) ನಿರ್ಧಾರ ಮತ್ತು ಸಂಸ್ಕಾರಕ್ಕೆ ತಕ್ಕಂತೆ ದೇಶದ ಕಣ್ಣು, ಕಿವಿಯಾಗಿ ಶತ್ರುದೇಶ ಪಾಕಿಸ್ತಾನದ ಮಿಲಿಟರಿ ಆಫೀಸರ್ ಮನೆಯ ಸೊಸೆಯಾಗಲು ‘ರಾಝೀ'(ರಾಜಿ)ಯಾಗುತ್ತಾಳೆ.. ಅದಕ್ಕಾಗಿ ಸೂಕ್ತ ತರಬೇತಿ ಪಡೆದು ಗಂಡನ ಮನೆ ಸೇರಿ ಅಲ್ಲಿ ಎಲ್ಲರ ಪ್ರೀತಿಗೂ ಪಾತ್ರಳಾಗುವ ಅವಳು ಗೂಢಚಾರಿಯಾಗಿ ತನ್ನ ಕೆಲಸವನ್ನೂ ದಿಟ್ಟತನದಿಂದ ನಿರ್ವಹಿಸುತ್ತಾಳೆ.. ಭಾರತೀಯ ಯುದ್ಧನೌಕೆ INS Vikrant ಅನ್ನು ಧ್ವಂಸಮಾಡಲು ಶತ್ರುಗಳು ಸಿದ್ಧಪಡಿಸಿದ್ದ ಯೋಜನೆಯ ಸುಳಿವು ನೀಡುತ್ತಾಳೆ.. ಆದರೆ ಅಷ್ಟರಲ್ಲೇ ಪರಿಸ್ಥಿತಿ ಅವಳ ವಿರುದ್ಧವಾಗುತ್ತದೆ..  ತನ್ನವರನ್ನು ತಾನೇ ಕೊಲ್ಲಬೇಕಾದ ಅನಿವಾರ್ಯ ಒದಗಿದಾಗ ಭಾರತದ ಬಗೆಗಿನ ಅಖಂಡ ಪ್ರೀತಿ/ನಿಷ್ಠೆ ಅವಳನ್ನು ಗಟ್ಟಿಗೊಳಿಸಿದ್ದರೂ ಅವಳ ಮೃದು ಮನಸ್ಸಿಗಾಗುವ ಘಾಸಿ ಅಪಾರ! ಕೊನೆಯಲ್ಲಿ ಎಲ್ಲರನ್ನೂ ಕಳೆದುಕೊಂಡು ಗರ್ಭಿಣಿಯಾಗಿ ಭಾರತಕ್ಕೆ ಮರಳುವ ಸೆಹಮತ್ ಸೆಯ್ಯದ್ ಜೀವನವಿಡೀ ಜನರಿಗೆ ಅಜ್ಞಾತಳಾಗಿದ್ದುಕೊಂಡೇ ಬದುಕಿಬಿಟ್ಟದ್ದನ್ನು ಸಿನಿಮಾದಿಂದಾಚೆಗೆ ನಾವೇ ವಿವರವಾಗಿ ಕಲ್ಪಿಸಿಕೊಂಡಾಗ ಹೃದಯಹಿಂಡಿದಂತಾಗುತ್ತದೆ.. ಮುಂದೆ ಅವಳ ಮಗನೂ ಭಾರತೀಯ ಸೈನ್ಯವನ್ನು ಸೇರಿದನು ಎಂಬ ಸೂಕ್ಷ್ಮ ವಿವರವನ್ನು ಕಾಣಿಸುವುದರೊಂದಿಗೆ ಸಿನಿಮಾ ಕೊನೆಗೊಳ್ಳುತ್ತದೆ..

ಕಮರ್ಷಿಯಲ್ ಎನ್ನಬಹುದಾದ ಯಾವ ಅಂಶವೂ ಸಿನಿಮಾದಲ್ಲಿ ಇಲ್ಲದಿದ್ದರೂ ಸಿನಿಮಾ ಕಮರ್ಷಿಯಲಿ ಸಕ್ಸಸ್ಫುಲ್ ಆಗಿರುವುದು ಖುಷಿಯ ವಿಷಯ! ಭಾರತೀಯ ಸಿನೆಮಾ ಪ್ರೇಕ್ಷಕರಲ್ಲಿ ಆಗುತ್ತಿರುವ ಈ ಬದಲಾವಣೆ ಸ್ವಾಗತಾರ್ಹ! 

  • Anagha Nagabhushana

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post