ನಮ್ಮಲ್ಲಿ ನಾವೆಲ್ಲ ಒಂದೇ ಎನ್ನುವುದಕ್ಕೆ ದೇವನೊಬ್ಬ ನಾಮ ಹಲವು ಎನ್ನುವುದನ್ನ ಬಳಸುತ್ತೇವೆ . ಇಲ್ಲಿ ದೇವರನ್ನ ಹಲವು ಹೆಸರುಗಳಿಂದ ಕರೆದರೂ ದೇವನೊಬ್ಬನೇ ಇರುವುದು ಎನ್ನುವುದನ್ನ ಸಾರುವುದು ಉದ್ದೇಶ , ಜೊತೆಗೆ ಬೇರೆ ಧರ್ಮದವರು ಕೂಡ ತಮ್ಮ ದೇವರ ಹೆಸರನ್ನ ಏನೇ ಹೇಳಲಿ ಎಲ್ಲವೂ ಕೊನೆಗೆ ಆತನಿಗೆ ಸಮರ್ಪಿತ ಎನ್ನುವ ವಿಶಾಲ ಮನೋಭಾವನೆ ಬಿತ್ತುವುದರಲ್ಲಿ ಕೂಡ ಸಫಲವಾಗಿದೆ . ಇಷ್ಟೇ ಅಲ್ಲದೆ ಯಾವುದೇ ಕೆಲಸವನ್ನ ಅಥವಾ ಇನ್ನ್ಯಾವುದೇ ವಿಷಯವನ್ನ ಪೂರ್ಣಗೊಳಿಸಲು ಒಂದೇ ರೀತಿ ಇರುವುದಿಲ್ಲ, ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಅಥವಾ ತಮಗೆ ಸರಿ ಅನ್ನಿಸಿದ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ. ಆಗೆಲ್ಲಾ ಕೂಡ ದೇವನೊಬ್ಬ ನಾಮ ಹಲವು ಎನ್ನುವಂತೆ ಮಾಡುವ ವಿಧಾನ ಬೇರೆಯಿರಬಹದು. ಆದರೇನು ಅದು ನೀಡುವ ಫಲಿತಾಂಶ ಮಾತ್ರ ಒಂದೇ ಎನ್ನುವುದನ್ನ ಹೇಳಲು ಕೂಡ ಈ ಆಡು ಮಾತನ್ನ ಬಳಸುತ್ತೇವೆ . ಇದು ನಮ್ಮ ಮಾತಾಯಿತು. ಇನ್ನು ಸ್ಪೇನ್ ದೇಶದಲ್ಲಿ ಕೂಡ ‘ Es igual uno que otro.’ (ಈಸ್ ಇಗ್ವಾಲ್ ಉನೋ ಕೆ ಒತ್ರೋ ) ಅಂದರೆ ‘ ಇದು ಅದು ಎರಡೂ ಒಂದೇ ‘ ಅಥವಾ ‘ಇದು ಅದು ಎರಡೂ ಸಮ’ ಎನ್ನುವ ಆರ್ಥ ಕೊಡುವ ನಮ್ಮ ದೇವನೊಬ್ಬ ನಾಮ ಹಲವು ಎನ್ನುವ ಆಡು ಮಾತನ್ನ ನೆನಪಿಸುವ ನಾಣ್ಣುಡಿಯಿದೆ .
ಹಿಂದಿನವರು ಮಾಡಿದ ಈ ಗಾದೆಮಾತಿನಲ್ಲಿ ಅರ್ಥ ದೇಶ ಭಾಷೆ ಮೀರಿ ಸಮವಿದೆ . ಜಗತ್ತಿನಲ್ಲಿ ಸಾಮರಸ್ಯ ಕಾಪಾಡುವುದು ಅವರ ಉದ್ದೇಶವಿದ್ದಿರಬಹದು . ಆದರೆ ಬದಲಾದ ಸನ್ನಿವೇಶ ಮತ್ತು ಕಾಲಘಟ್ಟದಲ್ಲಿ ಸ್ಪೇನ್ ನಲ್ಲಿ ಈ ಪದವನ್ನ ಬೇರೆಯ ರೀತಿಯಲ್ಲಿ ಬಳಸುತ್ತಾರೆ . ಈ ಸಮಾಜದಲ್ಲಿ ಗಂಡು ಹೆಣ್ಣು ನಡುವಿನ ಅಂತರ ಬಹಳ ಕಡಿಮೆ . ಹೆಣ್ಣು ಗಂಡಿನ ಭುಜಕ್ಕೆ ಭುಜಕೊಟ್ಟು ಎಲ್ಲಾ ಕ್ಷೇತ್ರದಲ್ಲೂ ಸಮವಾಗಿ ದುಡಿಯುತ್ತಿದ್ದಾಳೆ . ಆದರೇನು ಒಂದು ವಿಷಯದಲ್ಲಿ ಮಾತ್ರ ಹೆಣ್ಣು ಜಗತ್ತಿನ ಎಲ್ಲಾ ಹೆಣ್ಣಿನಂತೆಯೇ ಸಮಾನಮನಸ್ಕಳು . ಗಂಡು ಅಷ್ಟೇ ದೇಶ ಭಾಷೆಗಳ ಗಡಿ ಮೀರಿ ಹಲವು ವಿಷಯದಲ್ಲಿ ಗಂಡು ಪ್ರಾಣಿ ಜಗತ್ತಿನ ಎಲ್ಲಾ ದೇಶದಲ್ಲಿಯೂ ಸೇಮ್ ! ತನ್ನ ಹುಡುಗ ಅಥವಾ ಗಂಡ ಅಥವಾ ಪ್ರಿಯಕರ ಇನ್ನೊಂದು ಹೆಣ್ಣಿನೊಂದಿಗೆ ಸಲುಗೆಯಿಂದ ಇರುವುದನ್ನು ಯಾವ ಹೆಣ್ಣೂ ಸಹಿಸುವುದಿಲ್ಲ. ಇದು ಜಗತ್ತಿನ ಎಲ್ಲಾ ಹೆಂಗಸರ ಸಾಮಾನ್ಯ ಗುಣ . ಹಾಗೆಯೇ ಪಕ್ಕದ ಮನೆಯ ಹೆಂಗಸು, ತನ್ನ ಹೆಂಡತಿ ಅಥವಾ ಹುಡುಗಿಗಿಂತ ಸುಂದರಿ ಎನ್ನವುದು ಅವರತ್ತ ವಾರೆನೋಟ ಬೀರುವುದು ಜಗತ್ತಿನ ಎಲ್ಲಾ ಗಂಡಸರ ಸಾಮಾನ್ಯ ಗುಣ . ಗಂಡಸರ ಈ ಗುಣವನ್ನ ಎತ್ತಿ ಆಡಲು ಅಥವಾ ಹೀಯಾಳಿಸುವ ದೃಷ್ಟಿಯಿಂದ ‘ ಎಲ್ಲಾ ಗಂಡಸರು ಒಂದೇ ‘ ಎನ್ನುವ ಅರ್ಥದಲ್ಲಿ ಈಸ್ ಇಗ್ವಾಲ್ ಉನೋ ಕೆ ಒತ್ರೋ ಎನ್ನುವುದನ್ನ ಇಲ್ಲಿನ ಮಹಿಳೆಯರು ಹೆಚ್ಚು ಉಪಯೋಗಿಸುತ್ತಾರೆ .
ಇನ್ನು ಇಂಗ್ಲಿಷ್ ಭಾಷಿಕರು It’s Six of one and half a dozen of the other ಎನ್ನುತ್ತಾರೆ . ನೀವು ಆರು ಎನ್ನಿ ಅಥವಾ ಅರ್ಧ ಡಜನ್ ಎನ್ನಿ ಉತ್ತರ ಮಾತ್ರ ಸೇಮ್ ಅಲ್ವಾ ? ಎನ್ನುವುದು ಇಂಗ್ಲಿಷರ ಪ್ರಶ್ನೆ . ಜಗತ್ತಿನಲ್ಲಿ ಮೂಲಭೂತವಾಗಿ ಇರುವುದು ಎರಡೇ ಜಾತಿ. ಒಂದು ಹೆಣ್ಣು ಜಾತಿ ಇನ್ನೊಂದು ಗಂಡು ಜಾತಿ. ಇರುವುದು ಎರಡೇ ವರ್ಗ ಒಂದು ಶ್ರೀಮಂತ ವರ್ಗ ಇನ್ನೊಂದು ಬಡ ವರ್ಗ . ಇವುಗಳ ನಡುವಿನ ಅಂತರ ಕಡಿಮೆ ಮಾಡಲಷ್ಟೇ ಜಟಾಪಟಿ ಆಗಬೇಕಿರುವುದು. ಉಳಿದೆಲ್ಲಾ ನಾವು ಸೃಷ್ಟಿಸಿಕೊಂಡ ವಿವಾದಗಳು ಅಷ್ಟೇ . ಜಗತ್ತಿನ ಎಲ್ಲಾ ಕೊನೆಗಳ ಹೆಣ್ಣು ಗಂಡಿನ ಭಾವನೆಗಳು ಹೇಗೆ ಒಂದೇ ಆಗಿರುತ್ತವೆ ಎನ್ನುವುದು ಮಾತ್ರ ಕೌತುಕ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
Es igual : ಬದಲಾಣೆ ಇಲ್ಲ , ಅದು ಒಂದೇ ., ಅಥವಾ ಸೇಮ್ ಅಥವಾ ಡಸ್ ನಾಟ್ ಮ್ಯಾಟರ್ ಎನ್ನುವ ಅರ್ಥ ಕೊಡುತ್ತದೆ . ಈಸ್ ಇಗ್ವಾಲ್ ಎನ್ನುವುದು ಉಚ್ಚಾರಣೆ
uno : ಒನ್ ., ಒಂದು ಎನ್ನುವ ಅರ್ಥ ಇದು ಎನ್ನುವುದು ಇಲ್ಲಿನ ಸನ್ನಿವೇಶದ ಅರ್ಥ . ಉನೋ ಎನ್ನುವುದು ಉಚ್ಚಾರಣೆ .
que otro : ಒತ್ರೋ ಎಂದರೆ ಅದು ಎನ್ನುವ ಅರ್ಥ . ಕೆ ಅಂದರೆ ದಟ್ ಎನ್ನುವ ಅರ್ಥ . ಆ ಇನ್ನೊಂದು ಎಂದು ಅರ್ಥೈಸಬಹದು . ಕೆ ಒತ್ರೋ ಉಚ್ಚಾರಣೆ .