X

ಗೋಡೆಗೂ ಕಿವಿಯಿದೆ !

ನಮ್ಮಲ್ಲಿ ರಹಸ್ಯ ಮಾತುಕತೆ ನಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ‘ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನು ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು. ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ ಸರಳವಾದ ಮತ್ತು ಅತ್ಯಂತ ಜನಪ್ರಿಯ ಆಡುಮಾತು. ಏನಾದರು ರಹಸ್ಯ ಅಥವಾ ಗುಟ್ಟಿನ ವಿಷಯವನ್ನು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹೇಳುವ ಸಂದರ್ಭಕ್ಕಿಂತ ಅವರಿಬ್ಬರೂ ಇರುವ ಸ್ಥಳ ಈ ಆಡುಮಾತನ್ನು ಬಳಸಲು ಪ್ರೇರೇಪಿಸುತ್ತದೆ. ಉದಾಹರಣೆಗೆ ಇಂತಹ ಗುಟ್ಟಿನ ವಿಚಾರ ಇಬ್ಬರಲ್ಲೊಬ್ಬರ ವಿಶ್ವಾಸಕ್ಕೆ ಪಾತ್ರವಾದ ಜಾಗದಲ್ಲಿ ಆಗುತ್ತಿದ್ದರೆ ಈ  ಮಾತನ್ನು ಬಳಸುವ ಪ್ರಮೇಯವೇ ಬರುತ್ತಿರಲಿಲ್ಲ. ಅಂದರೆ ರಹಸ್ಯ ಮಾತುಕತೆ ಇಬ್ಬರು ವ್ಯಕ್ತಿಗಳ ವಿಶ್ವಸಾರ್ಹ ಸ್ಥಳವಲ್ಲದಲ್ಲಿ ನಡೆದಾಗ ಇಬ್ಬರಲ್ಲಿ ಯಾರಾದರೊಬ್ಬರು ಸ್ವಲ ಧ್ವನಿ ಎತ್ತರಿಸಿ ಮಾತನಾಡಿದರೆ ‘ಮೆಲ್ಲಗೆ ಇಲ್ಲಿ ಗೋಡೆಗೂ ಕಿವಿಯಿದೆ’ ಎನ್ನುವ ಉದ್ಗಾರ ಸಹಜವಾಗೇ ಹೊರಡುತ್ತದೆ. ಈ ಆಡುನುಡಿ ಎಲ್ಲಿ? ಹೇಗೆ? ಮತ್ತು ಯಾಕೆ? ಶುರುವಾಯಿತು ಎನ್ನುವುದಕ್ಕೆ ನಿಖರ ಉತ್ತರವಿಲ್ಲ.

ಸ್ಪಾನಿಷ್ ಭಾಷೆಯಲ್ಲಿ ಸಹ ಇಂತಹ ಒಂದು ಅತ್ಯಂತ ಪ್ರಸಿದ್ಧ ಆಡುಮಾತಿದೆ. ಅವರು Hay ropa tendida (ಹಾಯ್ ರೋಪ ತೆಂದಿದ ) ಎನ್ನುತ್ತಾರೆ. ಅಂದರೆ ಇಬ್ಬರ ಮಾತು ಕೇಳಿಸಿಕೊಳ್ಳಲು ಮೂರನೇ ವ್ಯಕ್ತಿ  ಕಾಣದಿದ್ದರೂ ಅವನ ‘ಬಟ್ಟೆ ಇಲ್ಲಿ ಬಿದ್ದಿದೆ’ ಎನ್ನುವ ಅರ್ಥದಲ್ಲಿದೆ. ರಹಸ್ಯದ ಅಥವಾ ಇನ್ನೊಬ್ಬರಿಗೆ ತಿಳಿಸುವ ಅವಶ್ಯಕತೆ ಇಲ್ಲದ ಮಾತನಾಡುವಾಗ ಜಾಗರೂಕರಾಗಿರಬೇಕು ಎನ್ನುವುದು ಅರ್ಥ. ‘ಹಾಯ್ ರೋಪ ತೆಂದಿದ’ ಅಂದರೆ ಇಲ್ಲಿ ಬಟ್ಟೆ ಬಿದ್ದಿದೆ ಎನ್ನುವುದು ಯಥಾವತ್ತು ಅನುವಾದದ ಅರ್ಥ .

 

ಈ ಆಡುಮಾತು ಹೇಗೆ ಬಂತು ಎನ್ನುವುದಕ್ಕೆ ಇಲ್ಲಿನ ಜನ ಒಂದು ಕಥೆ ಹೇಳುತ್ತಾರೆ.

ಮುಕ್ಕಾಲು ಪಾಲು ನಮ್ಮ ಆಡುಮಾತಿನ ಉಗಮಕ್ಕೂ ಕಾರಣ ಇದೆ ಇರಬಹುದೇನೂ? ಜೈಲಿನಲ್ಲಿದ್ದ ಕೈದಿಗಳು ಹೇಗಾದರೂ ಮಾಡಿ ಜೈಲಿನಿಂದ ಪರಾರಿ ಆಗಬೇಕೆನ್ನುವ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದರಂತೆ, ಅವರ ನಡುವೆ ಪ್ಲಾನ್ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಒಬ್ಬ ಕೈದಿ ಸ್ವಲ್ಪ ದೂರದಲ್ಲಿ ಬಂದಿಖಾನೆಯ ಅಧಿಕಾರಿಯ ಬಟ್ಟೆ ನೆಲದ ಮೇಲೆ ಬಿದ್ದದ್ದ ನೋಡಿದಂತೆ ‘ಹಾಯ್ ರೋಪ ತೆಂದಿದ’ ಅಂದನಂತೆ; ಅಂದರೆ ಅಧಿಕಾರಿಯ ಬಟ್ಟೆ ಇಲ್ಲಿದೆ ಎಂದರೆ ಅಧಿಕಾರಿಯು ಅಕ್ಕಪಕ್ಕದಲ್ಲೇ ಇರುತ್ತಾನೆ ನಾವು ಮಾತನಾಡುವಾಗ ಜಾಗರೂಕರಾಗಿರಬೇಕು ಎನ್ನುವ ಅರ್ಥದಲ್ಲಿ ಹೇಳಿದನಂತೆ. ಅಂದಿನಿಂದ ಈ ಮಾತು ಅದೆಷ್ಟು ಜನಪ್ರಿಯವಾಗಿದೆ ಎಂದರೆ ಇಂದಿಗೂ ಕಛೇರಿಯಲ್ಲಿ ತಮ್ಮ ಬಾಸ್ ಬಗ್ಗೆ ಏನಾದರೂ ಗೇಲಿ ಮಾಡುವಾಗ ಯಾರಾದರೂ ಈ ನುಡಿಯನ್ನ ಬಳಸುತ್ತಾರೆ.

ಇಂಗ್ಲಿಷ್ ಭಾಷಿಕರು ಇದನ್ನೇ  Walls have ears ಎಂದದ್ದು. ಇವರ ಮಾತಿನ ಅರ್ಥವೂ ಅಷ್ಟೆ ಯಾವುದಾದರೂ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇಲ್ಲದಿದ್ದರೆ ಹೇಗೂ ಆ ವ್ಯಕ್ತಿಗೆ ನೀವು ಆಡಿದ ಮಾತು ತಲುಪಿಬಿಡುತ್ತದೆ ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಮೂಲದಲ್ಲಿ ನಾವೆಲ್ಲ ಒಂದೇ. ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಮಾತನ್ನು ನಮ್ಮ ಪಂಪ ಮಹಾಕವಿ ಹತ್ತನೇ ಶತಮಾನದಲ್ಲಿ ಹೇಳಿದ್ದಾರೆ. ಅದನ್ನು ನಾವೀಗ ಅರ್ಥಮಾಡಿಕೊಳ್ಳಬೇಕಿದೆ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

HAY : ಇದೆ ಎನ್ನುವ ಅರ್ಥ. ಹಾಯ್ ಎನ್ನುವುದು ಉಚ್ಚಾರಣೆ.

ROPA:  ರೋಪ ಎನ್ನುವುದು ಉಚ್ಚಾರಣೆ ಬಟ್ಟೆ ಎನ್ನುವುದು ಅರ್ಥ.

TENDIDA: ಲಯಿಂಗ್ , ಬಿದ್ದಿದೆ  ಎನ್ನುವುದು ಅರ್ಥ. ತೆಂದಿದ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post