ಮಣಿಪುರದ ಮೇಲಿನ ಸಾಂಸ್ಕೃತಿಕ ದಾಳಿ 19ನೇ ಶತಮಾನದಿಂದ ಪ್ರಾರಂಭಗೊಂಡಿತು. ಸೇವೆಯ ಸೋಗಿನಲ್ಲಿ ಬಂದ ಕ್ರಿಶ್ಚಿಯನ್ ಮಿಷನರಿಗಳು ಮಣಿಪುರದ ಗುಡ್ಡಗಾಡುಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಪ್ರಕೃತಿಯನ್ನು ಆರಾಧಿಸುತ್ತಿದ್ದ ಸ್ಥಳೀಯರ ಕೈಗೆ ಶಿಲುಬೆಯನ್ನಿಟ್ಟರು. ನೆನಪಿರಲಿ, ಮಿಷನರಿಗಳಿಗೆ ಮತಾಂತರಕ್ಕಾಗಿ ಗುಡ್ಡಹತ್ತುವ ಮುನ್ನ ಕಣಿವೆ ಪ್ರದೇಶದಲ್ಲಿದ್ದ ವೈಷ್ಣವರನ್ನೂ ಕ್ರಿಶ್ಚಿಯನ್ ರಿಲಿಜನ್ ಎಡೆಗೆ ಎಳೆಯಲು ಪ್ರಯತ್ನಿಸಿದ್ದವು. ಕಣಿವೆಯ ಜನ ಕೇಳಿದ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸೋತ ಮಿಷನರಿಗಳು, ಮುಖ ಮಾಡಿದ್ದು ಗುಡ್ಡ ಕಾಡುಗಳಲ್ಲಿ ವಾಸವಿದ್ದ ಅರಣ್ಯವಾಸಿಗಳ ಕಡೆಗೆ. ಇಂದು ಮಣಿಪುರವನ್ನು ನಾಶಪಡಿಸಲು ಹಲವು ಶಕ್ತಿಗಳು ಶತ್ರುಗಳಾಗಿ ನಿಂತಿವೆ. ಅವುಗಳಲ್ಲಿ ಮುಖ್ಯವಾದವು ಕ್ರಿಶ್ಚಿಯನ್ ಮಿಷನರಿಗಳು, ಡ್ರಗ್ಸ್ ಮಾಫಿಯಾ, ಬಾಂಗ್ಲಾದೇಶಿ ನುಸುಳುಕೋರರು, ಇಸ್ಲಾಂಮಿಕ್ ಮೂಲಭೂತವಾದ ಮತ್ತು ಎಡಪಂಥೀಯರು. ಈ ದುಷ್ಟ ಶಕ್ತಿಗಳ ಉಪಟಳದಿಂದಾಗಿ ಇಂದು ಮಣಿಪುರದಲ್ಲಿ ಮಣಿಪುರಿ ಹೊರತುಪಡಿಸಿ ಬೇರಾವುದೇ ಭಾಷೆಯ ಸಿನಿಮಾ ಪ್ರದರ್ಶನ ಕಾಣುವುದಿಲ್ಲ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವಗಳನ್ನು ಶಾಲೆಗಳಲ್ಲೂ ಆಚರಿಸುತ್ತಿಲ್ಲ. ಸಾರ್ವಜನಿಕವಾಗಿ ತ್ರಿವರ್ಣವನ್ನು ಹಾರಿಸಿ ರಾಷ್ಟ್ರಗೀತೆ ಹಾಡಿ, ಭಾರತ್ ಮಾತಾ ಕೀ ಜೈ ಎಂದರೆ ಗುಂಡೇಟು ತಿನ್ನಬೇಕಾದೀತು. ಇದರೊಟ್ಟಿಗೆ ಮಹಾಭಾರತದ ಬಬ್ರುವಾಹನನ ಮೂಲಕ ಐತಿಹಾಸಿಕ ಸ್ಥಾನ ಪಡೆದಿರುವ ರಾಜ್ಯ ಮಣಿಪುರ. ಆದರೆ ಅಲ್ಲಿಯ ಜನರಿಗೆ ಈ ಇತಿಹಾಸಗಳು ಮರೆತು ಹೋಗಿವೆ. ಮಣಿಪುರವನ್ನು ನುಂಗಲು ಸಿದ್ಧವಾಗಿರುವ ಈ ತಿಮಿಂಗಿಲಗಳಿಂದ ಆ ರಾಜ್ಯವನ್ನು ರಕ್ಷಿಸಿರುವುದು ವೈಷ್ಣವ ಪಂಥ ಮತ್ತು ನೃತ್ಯ!
ಮಹಾರಾಜ ಭ್ಯಾಗ್ಯಚಂದ್ರನ ಮೂಲಕ ಮಣಿಪುರದಲ್ಲಿ ವೈಷ್ಣವಪಂಥ ಪ್ರವರ್ಧಮಾನಕ್ಕೆ ಬಂತು. ಅದರೊಟ್ಟಿಗೇ ಕಲೆಗಳು. ಮುಖ್ಯವಾಗಿ ನೃತ್ಯ. ಮಣಿಪುರದ ನೃತ್ಯ ಪ್ರಾಕಾರಗಳ ಬಗ್ಗೆ ಒಂದಷ್ಟು ತಿಳಿಯೋಣ. ಲೇಖನದ ಮುಂದಿನ ಭಾಗಗಳನ್ನು ಓದುವಾಗ ತೀರಾ ಅಕಾಡೆಮಿಕ್ ಎನಿಸಬಹುದು. ಸ್ವಲ್ಪ ಸಹಿಸಿಕೊಳ್ಳಿ.
ಮಣಿಪುರಿ ನೃತ್ಯವನ್ನು ಭಾರತದ ಪ್ರಮುಖ ಶಾಸ್ತ್ರೀಯ ನೃತ್ಯಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ. ವಿಶೇಷವಾಗಿ ವೈಷ್ಣವಸಿದ್ಧಾಂತದ ಅಡಿಯಲ್ಲಿ ಹುಟ್ಟಿಕೊಂಡಿರುವ ರಾಸ್ ಲೀಲಾ ಅತ್ಯಂತ ಸಂದರವಾದ ರಚನೆ. ರಾಧೆ ಮತ್ತು ಕೃಷ್ಣರ ನಡುವಿನ ಪ್ರೀತಿಯನ್ನು ಈ ನೃತ್ಯ ಅಭಿವ್ಯಕ್ತಗೊಳಿಸುತ್ತದೆ. ಶೈವ ಮತ್ತು ಶಕ್ತಿ ಪಂಥಗಳ ವಿಚಾರಗಳನ್ನೂ ಮಣಿಪುರ ನೃತ್ಯದಲ್ಲಿ ಕಾಣಬಹುದು. ಮಣಿಪುರಿ ನೃತ್ಯದ ಬೇರುಗಳನ್ನು ಹುಡುಕುತ್ತ ಹೊರಟರೆ ಅದು ಇಳಿಯುವುದು ಭರತನ ನಾಟ್ಯಶಾಸ್ತ್ರದೊಳಗೆ. ಈ ನಾಟ್ಯಗಳಲ್ಲಿ ಭಾರತ ಮತ್ತು ಆಗ್ನೇಯ ಏಶಿಯಾದ ಸಂಸ್ಕೃತಿಯ ಮಿಶ್ರಣವಿದೆ. ಮಣಿಪುರ ನೃತ್ಯ ವ್ಯಕ್ತವಾಗಿರುವುದೇ ಭಾರತೀಯ ಇತಿಹಾಸ ಆಧಾರಿತ ರಾಮಾಯಣ ಮತ್ತು ಮಹಾಭಾರತಗಳಿಂದ. ಹಿಂದು ಉತ್ಸವಗಳು ಮತ್ತು ಮದುವೆಯಂತಹ ಇತರ ಪ್ರಮುಖ ಸಾಂಸ್ಕೃತಿಕ ಸಂದರ್ಭಗಳಲ್ಲಿ ಈ ನೃತ್ಯಗಳನ್ನು ಕಾಣಬಹದು. ಆಧ್ಯಾತ್ಮಿಕ ಮೌಲ್ಯಗಳನ್ನು ವ್ಯಕ್ತಪಡಿಸುವುದು ಇದರ ಹಿಂದಿರುವ ಉದ್ದೇಶ. ಮಣಿಪುರದಲ್ಲಿ ನಡೆಯುವ ಮದುವೆ ಹಾಗೂ ಇತರ ಶುಭಸನ್ನಿವೇಶಗಳಲ್ಲಿ ನಡೆಯುವ ನೃತ್ಯ ಹಾಗೂ ಸಂಗೀತವನ್ನು ಆಸ್ವಾದಿಸುವುದೇ ದೊಡ್ಡ ಹಬ್ಬ.
ಇತಿಹಾಸ
ಮಣಿಪುರದ ಜನರು ತಮ್ಮನ್ನು ದೇವತೆಗಳ ಆಸ್ಥಾನದಲ್ಲಿ ಹಾಡಿ-ಕುಣಿಯುವ ಗಂಧರ್ವರ ವಂಶಸ್ಥರೆಂದು ನಂಬುತ್ತಾರೆ. ವೇದಗಳಲ್ಲಿ ಗಂಧರ್ವರ ಉಲ್ಲೇಖವಿದೆ. ಹಿಂದು ದೇವಸ್ಥಾನಗಳಲ್ಲಿ ಗಂಧರ್ವರ ಶಿಲ್ಪಗಳನ್ನು ಕಾಣಬಹುದು. ಮಣಿಪುರ ಪ್ರಚೀನ ಕೃತಿಗಳಲ್ಲಿ ಈ ಪ್ರದೇಶವನ್ನು ಗಂಧರ್ವದೇಶವೆಂದೇ ಕರೆಯಲಾಗಿದೆ. ಉಷಾ ದೇವಿಯೇ ಮಹಿಳೆಯರಿಗಾಗಿ ಹೊಸ ನೃತ್ಯಶೈಲಿಯನ್ನು ರಚಿಸಿ ಅದನ್ನು ಮಣಿಪುರದ ಮಹಿಳೆಯರಿಗೆ ಹೇಳಿಕೊಟ್ಟಳು ಎಂಬುದು ಪ್ರತೀತಿ.
ರಾಜರ್ಶ್ರೀ ಭಾಗ್ಯಚಂದ್ರನ ಕಾಲದಲ್ಲಿ ಮಣಿಪುರದಲ್ಲಿ ನೃತ್ಯಕಲೆಗೆ ರಾಸಲೀಲೆ ಸೇರಿಕೊಂಡಿತು. ರಾಸಲೀಲೆ ನೃತ್ಯಪ್ರಾಕಾರವನ್ನು ಪ್ರಾರಂಭಿಸಿದ ಶ್ರೇಯಸ್ಸು ಆತನಿಗೇ ಸೇರುತ್ತದೆ.
ನೂಪಾ, ಪುಂಗ್ ಚೋಲಮ್, ಖಾಂಬಾ ಥೋಯ್ಬಿ, ಧೋಲ್ ಚೋಲಮ್ ಮಣಿಪುರಿ ನೃತ್ಯ ಪ್ರಕಾರದ ಪ್ರಮುಖ ಉಪವಿಭಾಗಗಳು.
ಮಿಷನರಿಗಳಿಂದ ನೃತ್ಯ ವಿರೋಧಿ ನೀತಿ!
ಸಂಗೀತ-ನೃತ್ಯಗಳೇ ಜೀವಾಳವಾಗಿರುವ ಗಂಧರ್ವರಿಗೆ ನಾಳೆಯಿಂದ ನೃತ್ಯ ಮಾಡಬೇಡಿ ಎಂದರೆ ಹೇಗಾದೀತು? ಮೀನಿಗೆ ನಾಳೆಯಿಂದ ಈಜಬೇಡ ಎಂದಂತೆ! ಅಂತಹ ಪರಿಸ್ಥಿತಿ ಉದ್ಭವಿಸಿದ್ದು 19ನೇ ಶತಮಾನದಲ್ಲಿ. 1891ರಲ್ಲಿ ಮಣಿಪುರವನ್ನು ಬ್ರಿಟಿಷರು ತಮ್ಮ ಹಿಡಿತಕ್ಕೆ ಪಡೆದ ನಂತರ ಮಣಿಪುರದ ನೃತ್ಯ ವೈಭವವು ಕಲೋನಿಯಲ್ ದಾಳಿಗೆ ಒಳಪಟ್ಟಿತು. ಮಣಿಪುರಿ ನೃತ್ಯಗಾರರು ಇಂಫಾಲದ ಗೋವಿಂದಜೀ ದೇವಸ್ಥಾನ ಹಾಗೂ ಇತರ ದೇವಸ್ಥಾನಗಳಲ್ಲಿ ಆಶ್ರಯ ಪಡೆದು ಕಲೆಯನ್ನು ಮುಂದುವರೆಸಿದರು. 1892ರಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನೃತ್ಯ ವಿರೋಧಿ ನೀತಿಯನ್ನು ಜಾರಿಗೆ ತಂದವು. ನಂತರ 1910ರಲ್ಲಿ ಮದ್ರಾಸ್ ಪ್ರೆಸೆಡೆನ್ಸಿಯು ದೇವಸ್ಥಾನಗಳಲ್ಲಿ ನೃತ್ಯ ಮಾಡುವುದನ್ನು ನಿಷೇಧಿಸಿತು. ಆಹೊತ್ತಿಗಾಗಲೇ ಪ್ರಖರವಾಗಿ ಉರಿಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಮತ್ತಷ್ಟು ಪ್ರಜ್ವಲಿಸಿತು. ಬ್ರಿಟಿಷರ ಅಸಹಿಷ್ಣುತೆ ವಿರುದ್ಧ ತಿರುಗಿಬಿದ್ದ ಕಲಾವಿದರು ಭಾರತದ ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ 1920-1950ರ ನಡುವೆ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು.
ಠ್ಯಾಗೋರರು ಮತ್ತು ಮಣಿಪುರಿ ನೃತ್ಯ
ರವೀಂದ್ರನಾಥ್ ಠ್ಯಾಗೋರರು ಮಣಿಪುರಿ ನೃತ್ಯವನ್ನು ಪುನರುಜ್ಜೀವನಗೊಳಿಸಿದವರು ಎಂದರೆ ತಪ್ಪಾಗಲಾರದು. 1919ರಲ್ಲಿ ಸಿಲ್ಹೆಟ್ಟ್ ನಲ್ಲಿ (ಈಗಿನ ಬಾಂಗ್ಲಾದೇಶದಲ್ಲಿ) ನಡೆದ ಗೋಸ್ಥಾ ಲೀಲವನ್ನು ವೀಕ್ಷಿಸಿ ಆಕರ್ಷಿತರಾದರು. ಭಾರತೀಯ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾದ ಶಾಂತಿನಿಕೇತನದಲ್ಲಿ ನೃತ್ಯ ಶಿಕ್ಷಕಿಯಾಗಿ ಬರುವಂತೆ ಮಣಿಪುರದ ಬಹುದೊಡ್ಡ ನೃತ್ಯಪಟು ಗುರು ಬುಧಿಮಾಂತ್ರ ಸಿಂಗ್ ಅವರನ್ನು ಆಹ್ವಾನಿಸಿದರು. ರಾಸ್ ಲೀಲಾವನ್ನು ಹೇಳಿಕೊಡುವ ಶಿಕ್ಷಕರಾಗಿ ಸೇರುವಂತೆ ಗುರು ನಾಬಾ ಕುಮಾರ್ ಅವರನ್ನು ಠ್ಯಾಗೋರರು ಕೇಳಿಕೊಂಡು. ಗುರು ನಾಬಾ ಕುಮಾರರು ಶಾಂತಿನಿಕೇತನ ಸೇರಿದ್ದು 1926ರಲ್ಲಿ. ಮುಂದಿನ ದಿನಗಳಲ್ಲಿ ಅತೋಂಬ ಸಿಂಗ್, ನೀಲೇಶ್ವರ್ ಮುಖರ್ಜೀ, ಸೇನರಿಕ್ ಸಿಂಗ್ ರಾಜ್ ಕುಮಾರ್ ಮುಂತಾದವರು ಶಾಂತಿನಿಕೇತನಕ್ಕೆ ಸೇರ್ಪಡೆಗೊಂಡರು. ಈ ಮಹಾ ನಾಟ್ಯಗಾರರ ಸೃಜನಶೀಲತೆಯಿಂದಾಗಿ ಠ್ಯಾಗೋರರು ಹಲವಾರು ಪ್ರದರ್ಶನಗಳನ್ನು ಏರ್ಪಡಿಸಿದರು.
ವಸ್ತ್ರವಿನ್ಯಾಸ
ಮಣಿಪುರಿ ನೃತ್ಯಗಳಲ್ಲಿ ಪುರುಷರು ಬಿಳಿ ಬಣ್ಣದ ಧೋತಿ ತೊಡುತ್ತಾರೆ. ಡೋಲು, ಮೃದಂಗ ಬಾರಿಸುತ್ತಾ ನೃತ್ಯ ಮಾಡುವುದು ಕಂಬ ತೊಯ್ಬಿ, ಪುಂಗ್ ಚೋಲಮ್ ಗಳಲ್ಲಿ ಕಂಡುಬರುತ್ತದೆ.
ಅದನ್ನು ಧೋರಾ ಅಥವಾ ಧೋತ್ರಾ ಎಂದೂ ಕರೆಯುತ್ತಾರೆ. ಮಹಿಳೆಯರ ಉಡುಪು ವಿಭಿನ್ನ ಶೈಲಿಯಲ್ಲಿರುತ್ತದೆ. ಮಣಿಪುರದ ಮದುಮಗಳ ವಸ್ತ್ರ ಮತ್ತು ಮಹಿಳಾ ನೃತ್ಯ ಪಟುಗಳ ವಸ್ತ್ರಕ್ಕೆ ಹೋಲಿಕೆಯಿದೆ. ನವಿಲುಗರಿಯ ಕಿರೀಟ, ಬಣ್ಣ-ಬಣ್ಣದ ವಸ್ತ್ರ, ಆಭರಣಗಳಿಂದ ಕೂಡಿದ ನೃತ್ಯಗಾರ್ತಿ ಎದುರು ಬಂದು ನಿಂತರೆ, ನೋಡುವವರಿಗೆ ದೇವಲೋಕದ ಒಡ್ಡೋಲಗ ನೆನಪಾಗದೇ ಇರದು.
ಒಟ್ಟಿನಲ್ಲಿ, ಬಂಡುಕೋರರ ಉಗ್ರವಾದ, ಎಡಪಂಥೀರ ದೇಶ ಒಡೆಯುವ ಕೆಲಸ, ಮಾರಿಯಂತೆ ಹಬ್ಬುತ್ತಿರುವ ಎಚ್.ಐ.ವಿ. ಸೋಂಕು ಇವುಗಳಿಂದ ಜರ್ಜರಿತವಾಗಿ, ತನ್ನ ಅಸ್ಮಿತೆಯನ್ನೇ ಮರೆಯುತ್ತಿರುವ ಮಣಿಪುರಕ್ಕೆ ಬೆನ್ನೆಲುಬಾಗಿ ನಿಂತಿರುವುದು ಅಲ್ಲಿನ ನೃತ್ಯ ಎಂದರೆ ತಪ್ಪಾಗಲಾರದು.
ಹೊಸದಿಗಂತದಲ್ಲಿ ಪ್ರಕಟಿತ ಬರಹ
Facebook ಕಾಮೆಂಟ್ಸ್