X

ಕೆಲವೊಂದನ್ನ ಪಡೆಯಲು ಕೆಲವೊಂದನ್ನ ಬಿಡಬೇಕು ! 

ಬಾರ್ಸಿಲೋನಾ ನಗರಕ್ಕೆ ಬಂದು ಆರು ತಿಂಗಳು ಕಳೆದಿತ್ತು ಗೆಳೆಯ ಸಾಲ್ವದೂರ್  ಕೇಳಿದ ‘ ರಂಗ ನಿನ್ನ ಮನೆಯಲ್ಲಿ ಈಗ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತಾರ? ಎಲ್ಲರೂ ಖುಷಿಯಾಗಿದ್ದಾರ ?? ‘  ನನಗೆ ಆತನ ಮಾತು ಅತ್ಯಂತ ಆಶ್ಚರ್ಯ ತಂದಿತು. ನನ್ನ ಬದುಕಿನಲ್ಲಿ ಬವಣೆಯಿದೆ ಎಂದು ನಾನು ಎಂದೂ ಆತನ ಬಳಿ ಹೇಳಿಕೊಂಡಿಲ್ಲ ಹಾಗಿದ್ದೂ ಈ ರೀತಿಯ ಪ್ರಶ್ನೆಯೇಕೆ ಕೇಳಿದ ?  ನೇರವಾಗಿ ಆತನನ್ನ ನಿನ್ನ ಮಾತಿನ ಅರ್ಥವೇನು ? ಹಾಗೇಕೆ ಕೇಳುತ್ತಿದೀಯಾ ಎಂದು ಪ್ರಶ್ನಿಸಿದೆ . ಅದಕ್ಕೆ ಆತನ ಕಿಂಚಿತ್ತೂ ವಿಚಲಿತನಾಗದೆ ‘ನೀನು ನಿನ್ನ ದೇಶವನ್ನ ಬಿಟ್ಟು ಇಷ್ಟು ದೂರ ಕೇವಲ ಕೆಲಸಕ್ಕಾಗಿ ಬಂದಿದ್ದೀಯಾ ಎಂದರೆ ನಿನಗೆ ನಿಜವಾಗಿ ಕಷ್ಟವಿರಬೇಕು ಅಲ್ಲಿ ಎಲ್ಲವೂ ಸರಿಯಾಗಿದ್ದರೆ ನೀನೇಕೆ ಇಲ್ಲಿಗೆ ಬರುತ್ತಿದ್ದೆ ?’  ಹಾಗಾಗಿ ನಿನ್ನ ಹಾಗೆ ಕೇಳಿದೆ ಎಂದ  ಮತ್ತು ಮುಂದುವರಿದು, ನನಗೆ ಗೊತ್ತು, ಬದುಕು ಅಂದುಕೊಂಡಷ್ಟು ಸುಲಭವಲ್ಲ ‘ El que algo quiere, algo le cuesta.’ ನಿನ್ನವರನ್ನೆಲ್ಲ ಬಿಟ್ಟು ಇರುವುದು ಕಷ್ಟ ಅಲ್ವಾ ? ಎಂದು ಪ್ರಶ್ನಿಸಿದ .
‘ ಎಲ್ ಕೆ ಅಲ್ಗೊ ಕಿಯರೇ ಅಲ್ಗೊ ಲೇ ಕ್ವೆಸ್ತಾ ‘ ಹಾಗೆಂದರೇನು ? ಎಂದೇ . ಅದಕ್ಕೆ ಆತನ ಹೇಳಿದ್ದು, ಏನಾದರು ಪಡೆಯಬೇಕೆಂದರೆ ಅದಕ್ಕೆ ತಕ್ಕ ಬೆಲೆ ತೆರಬೇಕು ಎಂದು . ಹೌದಲ್ಲ ಎಷ್ಟು ನಿಜ ಎನಿಸಿತು. ತಕ್ಷಣವೇ ನಮ್ಮ ಆಡುಮಾತು ಏನಾದರು ಪಡೆಯಲು ಏನಾದರು ಬಿಡಬೇಕು ಎನ್ನುವುದು ನೆನಪಿಗೆ ಬಂತು . ಭಾಷೆ , ಬಣ್ಣ ಬದಲಿರಬಹದು ಆದರೆ ಮೂಲ ಆಶಯವೊಂದೇ ! ಬದುಕಿನಲ್ಲಿ ಯಾವುದೂ ಪುಕ್ಕಟೆ ಬರುವುದಿಲ್ಲ, ನಮಗೇನು ಬೇಕು ಅದಕ್ಕೆ ಸರಿಯಾದ ಬೆಲೆಯನ್ನ ಅದು ಪಡೆದುಕೊಳ್ಳುತ್ತದೆ . ಕೆಲವೊಮ್ಮೆ ನಾವೇನು ಕೊಟ್ಟೆವು ಎನ್ನುವುದು ನಮ್ಮ ಅರಿವಿಗೆ ಬರದೇ ಹೋಗಬಹದು, ಆದರೆ ಬದುಕು ಮಾತ್ರ ಅದನ್ನ ನಮ್ಮಿಂದ ವಸೂಲಿ ಮಾಡಿಯೇ ಇರುತ್ತದೆ .
ನಮಗೇನು ಬೇಕು ಎನ್ನುವುದು ಎಷ್ಟು ದೊಡ್ಡದು ಎನ್ನುವುದರ ಮೇಲೆ ಅದಕ್ಕೆ ತಕ್ಕಂತೆ ಅದು ತ್ಯಾಗ , ಬಲಿದಾನ ಬೇಡುತ್ತದೆ . ಅದು ಸಮಯದ ರೂಪದಲ್ಲಿ , ನಮ್ಮವರಿಂದ ದೂರ ಹೋಗುವ ರೂಪದಲ್ಲಿ ಅಥವಾ ಇನ್ನ್ಯಾವುದೇ ರೂಪದಲ್ಲಿ ವಸೂಲಿ ಮಾಡುತ್ತದೆ . ಅತ್ಯಂತ ಯಶಸ್ವೀ ವ್ಯಕ್ತಿಗಳಿಗೆ ತಮ್ಮ ಕುಟುಂಬದೊಂದಿಗೆ ಕಳೆಯಲು ವೇಳೆಯೇ ಇರುವುದಿಲ್ಲ . ತಮ್ಮ ಯಶಸ್ಸಿಗೆ ಅವರು ಕೊಟ್ಟ ಅಥವಾ ಕೊಡುತ್ತಿರುವ ಬೆಲೆಯದು ! ಹೀಗೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹಾಗೆಯೇ ಒಂದಲ್ಲ ಒಂದು ರೀತಿಯಲ್ಲಿ ಆತನಿಗೆ ಸಂದಾಯವಾಗಿರುವ ಯಶಸ್ಸಿಗೆ ಋಣ ಸಂದಾಯ ಕೂಡ ಆಗಿಯೇ ಇರುತ್ತದೆ . ಕೆಲವೊಮ್ಮೆ ಆತನಿಗೆ ನಾನು ಅದಕ್ಕೆ ಬೆಲೆ ತೆತ್ತಿದ್ದೇನೆ ಎನ್ನುವ ಅರಿವು ಇರುವುದಿಲ್ಲ ಎನ್ನುವುದು ಮಾತ್ರ ವಿಷಾದನೀಯ . ಆದರೆ ಬದುಕು ಮಾತ್ರ ಈ ವಿಷಯದಲ್ಲಿ ಅತ್ಯಂತ ನಿಷ್ಪಕ್ಷಪಾತಿ ಯಾವುದೇ ಮುಲಾಜಿಲ್ಲದೆ ವ್ಯಕ್ತಿಯ ಹುದ್ದೆ ಯಶಸ್ಸು ಆತನ ಮಹತ್ವಾಕಾಂಕ್ಷೆಗೆ ತಕ್ಕಂತೆ ಬೆಲೆಯನ್ನ ವಸೂಲಿ ಮಾಡದೆ ಬಿಡದು .
ಇಂಗ್ಲಿಷ್ ಭಾಷಿಕರು one who wants  fruit must climb the tree. ಎನ್ನುತ್ತಾರೆ . ಅಂದರೆ ಹಣ್ಣಿಗೆ ಆಸೆ ಪಟ್ಟರೆ ಮರ ಹತ್ತುವುದು ಕಲಿಯಬೇಕು ಅಥವಾ ಮರ ಹತ್ತಬೇಕು ಅನ್ನುವುದು ಅರ್ಥ . ಜೊತೆಗೆ no pain no gain ಎನ್ನುವುದನ್ನ ಕೂಡ ಇವರು ಪರ್ಯಾಯವಾಗಿ ಬಳಸುತ್ತಾರೆ . ನೋವಿಲ್ಲದೆ ಯಾವುದೂ ದಕ್ಕುವುದಿಲ್ಲ ಎನ್ನುವುದು ಇವರಲ್ಲಿರುವ ನಂಬಿಕೆ .  ಭಾಷೆ ಹಲವು ಭಾವವೊಂದು ಎನ್ನುವುದನ್ನ ತಿಳಿಸುವುದು ಈ ಗಾದೆಗಳ ಉದ್ದೇಶ ಅದು ಮತ್ತೊಮ್ಮೆ ಸಾಬೀತಾಗಿದೆ ಅಷ್ಟೆ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
 
 El que  : ಯಾರಾದರೂ  .,  ಎನ್ನುವ ಅರ್ಥ ಕೊಡುತ್ತದೆ . ಎಲ್ ಕೆ ಎನ್ನುವುದು ಉಚ್ಚಾರಣೆ .
 
algo    :  ಏನಾದರು ಎನ್ನವುದು ಅರ್ಥ , ಅಲ್ಗೊ ಎನ್ನುವುದು ಉಚ್ಚಾರಣೆ .
 
 quiere  : ಬೇಕು , ಬೇಕಾ ಎನ್ನುವ ಅರ್ಥ, ಕಿಯರೇ ಉಚ್ಚಾರಣೆ
 
 algo le cuesta.  : ಏನಾದರೂ ಬೆಲೆ ಕೊಡಬೇಕು ಎನ್ನುವ ಅರ್ಥ . ಅಲ್ಗೊ ಲೇ ಕ್ವೆಸ್ತಾ  ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post