X

ಕನ್ನಡ ಮಹಿಳಾ ಸಾಹಿತ್ಯ – ಅಂದಿನಿಂದ – ಇಂದು

ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಆಚರಿಸಿದ್ದೇವೆ.ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮನಾಗಿ ನಿಂತಿದ್ದಾಳೆ. ಸಾಹಿತ್ಯ, ಸಂಗೀತ,ವೈಧ್ಯಕೀಯ, ವಿಜ್ಞಾನ, ಧಾರ್ಮಿಕ, ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ.. ಇದೊಂದು ಸಾಹಿತ್ಯಕ್ಕೆ ಸಂಬಂದಿಸಿದ ವೇದಿಕೆಯಾಗಿದ್ದರಿಂದ ಅಂದಿನಿಂದ ಇಂದಿನವರೆಗೆ ಮಹಿಳಾ ಸಾಹಿತ್ಯದ ನೆಲೆಗಳ ಬಗ್ಗೆ ಒಂದಷ್ಟು ಗಮನ  ಕೊಡೋಣ.

 ಈ ನಿಟ್ಟಿನಲ್ಲಿ ಜನಪದ ಸಾಹಿತ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ ಅಲ್ಲವೇ? ಅಲ್ಲೂ ಒಂದು ಮಹಿಳಾ ಗುಂಪಿದೆ‌. ಹೆಸರುಗಳು ಕಾಣಸಿಗುವುದಿಲ್ಲವಷ್ಟೇ.ನನಗೆ ಅತೀ ಹೆಚ್ಚು ವಿಭಿನ್ನವೆನಿಸುವ ಸಾಹಿತ್ಯ ಇದು. ದಿನನಿತ್ಯದ ಕಾರ್ಯಗಳ ಬವಣೆ ಮರೆಯಲು ಕಟ್ಟುತ್ತಿದ್ದ ಹಾಡುಗಳೇ ಅಷ್ಟೊಂದು ತೂಕವಾಗಿರಬೇಕಾದರೆ ಸಾಹಿತ್ಯಕ್ಕೇ ಅಂತ ಒಂದಷ್ಟು ಸಮಯ, ಪ್ರೋತ್ಸಾಹ ಸಿಕ್ಕಿದ್ದರೆ ಸಾಹಿತ್ಯಿಕವಾಗಿ ಮಹಿಳೆ ತನ್ನನ್ನು ಇನ್ನೂ ಹೆಚ್ಚು ಗುರುತಿಸಿಕೊಳ್ಳಬಹುದಿತ್ತೇನೋ ಅನ್ನುವುದು ನನ್ನ ಅನಿಸಿಕೆ‌‌. ಕನ್ನಡ ಸಾಹಿತ್ಯಲೋಕ ಇನ್ನೂ ಅಮೂಲ್ಯ ಮಹಿಳಾ ಸಾಹಿತ್ಯ ರತ್ನಗಳನ್ನು ಕಾಣಬಹುದಿತ್ತು..ಈ ಜಾನಪದ ಸಾಹಿತ್ಯಗಳನ್ನು ರಚಿಸಿದವರು ಹೆಚ್ಚಾಗಿ ಮಹಿಳೆಯರೇ.

ಹೀಗೇ ಒಂದು ಸನ್ನಿವೇಶದಲ್ಲಿ ಮಹಿಳೆಯ ಜನಪದ ಸಾಹಿತ್ಯ..

ಒಬ್ಬ ಹೆಣ್ಣು ಮತ್ತೊಬ್ಬಳಿಗೆ
“ಚಿಂತಾಕ ಇಟಗೊಂಡು ಚಿಪ್ಪಾಡಿ ಬಳಿವಾಕಿ
ಚಿಂತಿಲ್ಲ ಏನ ನಿನಗೇಟು| ನಿನಗಂಡ ಅಲ್ಲೊಬ್ಬಳ ಕೂಡ ನಗತಿದ್ದ”

ಅದಕ್ಕೆ ಆ ಮಹಿಳೆ ಅದೆಷ್ಟು ಚಂದ ಸಾಹಿತ್ಯಿಕವಾಗಿಯೇ ಉತ್ತರ ಕೊಡುತ್ತಾಳೆ ನೋಡಿ

” ನಕ್ಕರೆ ನಗಲವ್ವ ನಗುಮೊಗದ ಕ್ಯಾದಿಗಿ
ನಾ ಮುಚ್ಚಿ ಮುಡಿವ ಪರಿಮಳದ ಆ ಹೂವ
ಅವಳೊಂದು ಗಳಿಗೆ ಮುಡಿಯಲಿ”

ಅಂತಹುದೇ ಸೊಗಡು ತುಂಬಿ ಗಂಡನಿಗೆ ಹೇಳುತ್ತಾಳೆ .

“ಅಂಗೀಯ ಮ್ಯಾಲಂಗಿ ಚಂದೇನೋ ನನರಾಯ.
ರಂಭೀಯ ಮ್ಯಾಲ ಪ್ರತಿರಂಭಿ ಬಂದರ
ಚಂದೇನೋ ನನರಾಯ ಮನಿಯಾಗ”

ಇಂತಹ ಸೊಗಡು ತುಂಬಿದ ಇಂಪಿನ ಸಾಹಿತ್ಯ ಕುಟುಂಬ, ಅವಳ ನೋವು ನಲಿವು, ಅವಳವೊಂದಿಷ್ಟು ತಲ್ಲಣಗಳಿಗಷ್ಟೇ ಮೀಸಲಾಗಿತ್ತು. ಕವಿ ಮಹಲಿಂಗರಂಗರು ಹೇಳಿದಂತೆ”ಸುಲಿದ ಬಾಳೆಯ ಹಣ್ಣಿನಂದದ, ಕಳೆದ ಸಿಗುರಿನ ಕಬ್ಬಿನಂದದ, ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ನನಗೆ ಇನ್ನೂ ರುಚಿ ಅನ್ನಿಸಿದ್ದು ಈ ಜಾನಪದ ಸಾಹಿತ್ಯದಿಂದಲೇ. ಇಂತಹ ವಿಭಿನ್ನ ಸಾಹಿತ್ಯವನ್ನು ಆಗಲೇ ಗುರುತಿಸಿದ್ದರೆ ಮಹಿಳೆ ಆ ಚೌಕಟ್ಟಿನಿಂದಾಚೆ ಆಗಲೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿಕೊಳ್ಳುತ್ತಿದ್ದಳೇನೋ.

ವೈದಿಕ ಕಾಲದಿಂದಲೂ ಹೆಚ್ಚೇ ಕಟ್ಟುಪಾಡುಗೊಳಗಾಗಿದ್ದ ಮಹಿಳೆ ಬಸವಣ್ಣನವರ ಅನುಭವ ಮಂಟಪದಲ್ಲಿ ಮುಕ್ತವಾಗಿ ಮಾತಾಡತೊಡಗಿಳು. ವಚನ ಸಾಹಿತ್ಯ ಕಾಲದ ಮಹಿಳೆಯರು ಕವಿಯತ್ರಿಯರೆನ್ನುವ ಬಿರುದು ಪಡೆತುವ ಕಾರಣದಿಂದ ಕಾವ್ಯ ರಚನೆಗಿಳಿದವರಲ್ಲ. ಆದಾಗ್ಯೂ ಅವರ ಕಾವ್ಯ ಅಧ್ಬುತ. ಆದರೆ ಅವರ ಕಾವ್ಯ ರಚನೆ ಇಂತಿಷ್ಟೇ ಮಿತಿಗೊಳಗಾಗಿತ್ತು. ಧಾರ್ಮಿಕತೆಗೆ ಹೆಚ್ಚಿನ‌ ಮಹತ್ತ್ವ ಕೊಟ್ಟಿದ್ದರು. ಒಂದಷ್ಟು ಸ್ತ್ರೀ ಪರ ಧೋರಣೆಗಳು ಬಿಂಬಿತವಾಗುವ ಮೂಲಕ ಮಹಿಳಾ ಸಾಹಿತ್ಯಕ್ಕೆ ಪೂರ್ಣ ಪ್ರಮಾಣದ ಬುನಾದಿ ದೊರೆತಂತಾಯಿತು. ಅದು ಬುನಾದಿ ಹಂತದ ಬೆಳವಣಿಗೆಗಷ್ಟೇ..

ಅಲ್ಲಿಂದ ಮುಂದೆ ಮಹಿಳಾ ಸಾಹಿತ್ಯಕ್ಕೆ ಉಲ್ಲೇಖ ಸಿಕ್ಕಿದ್ದು ವಿಜಯನಗರಕಾಲದಲ್ಲಿ ಗಂಗಾದೇವಿಯ “ವೀರ ಕಂಪಣರಾಯ ಚರಿತ”, ತಿರುಮಲಾಂಬ ಬರೆದಂತಹ “ವರದಾಂಬಿಕ ಪರಿಣಯ.” ವಿಜಯನಗರ ಸಾಮ್ರಾಜ್ಯದ ವೈಭವ ಅದೆಷ್ಟಿತ್ತು ಎನ್ನುವುದನ್ನು ಎಲ್ಲರೂ ಇತಿಹಾಸದಲ್ಲಿ ಓದಿದ್ದೇವೆ. ಆ ಕಾಲದಲ್ಲಿ ಮುತ್ತು,ರತ್ನ,ವಜ್ರ ವೈಡೂರ್ಯಗಳನ್ನು ಸೇರಿನಿಂದ ಅಳೆದು ಮಾರುತ್ತಿದ್ದರಂತೆ. ಶಿಲ್ಪಕಲೆಯ ದೃಷ್ಟಿಯಿಂದಲೂ ಅತ್ಯುನ್ನತ ಸ್ಥಾನದಲ್ಲಿದ್ದ ವಿಜಯನಗರ ಕಾಲದ
ಈ ವೈಭವದಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಕೊಡಲಿಲ್ಲವೋ ಅಥವಾ ಮಹಿಳೆಯರೇ ತಮ್ಮ ಸುತ್ತದ ವೃತ್ತವನ್ನು ಬಿಟ್ಟು ಹೊರಗೆ ಬರಲಿಲ್ಲವೋ ಗೊತ್ತಿಲ್ಲ. ಉಳಿದ ರಾಜ ಮಹಾರಾಜರ ಕಾಲದಲ್ಲೂ ಮಹಿಳಾ ಸಾಹಿತ್ಯ ಪುರುಷ ಸಾಹಿತ್ಯದಷ್ಟು ಅಷ್ಟಾಗಿ ಪ್ರಚಾರಕ್ಕೆ ಬರಲಿಲ್ಲ..

ಇನ್ನು ಒಂದಷ್ಟು ದಾಸ ಸಾಹಿತ್ಯದತ್ತ ಮುಖ‌ ಮಾಡೋಣ. ಹರಿದಾಸ ಸಾಹಿತ್ಯದಲ್ಲಿ ಪುರುಷರಿಗೆ ದೊರೆತಷ್ಟು ಮನ್ನಣೆ ಮಹಿಳೆಯರಿಗೆ ಸಿಗದಿದ್ದರೂ ಅವರ ಸಾಹಿತ್ಯ ಯಾವ ಪುರುಷರ ಸಾಹಿತ್ಯಕ್ಕೂ ಕಡಿಮೆ ಇರಲಿಲ್ಲ.

ಗಲಗಲಿಯ ಅವ್ವ ಹರಿದಾಸ ಸಾಹಿತ್ಯದ ಮೊದಲ ಮಹಿಳಾ ಸಾಹಿತಿ..ಅವರ ಒಂದೆರಡು ಸಾಲುಗಳಲ್ಲೇ ಒಂದು ಅತ್ಯದ್ಭುತ ಪರಿಮಳವಿದೆ

“ಬುಕ್ಕಿಟ್ಟು ಪರಿಮಳ ದ್ರವ್ಯ ಪೊಟ್ಟಣವ ಕಟ್ಟಿ ಥರಥರವು
ದ್ರವ್ಯವ ಕೊಟ್ಟು ಕೊಂಬುವರು ಕಡಮೆಯಿಲ್ಲ
ಸೂಜಿಗವಾಗಿದ್ದ ಜಾಜಿಮಲ್ಲಿಗೆ ಹೂ ಸೂಜಿಮಲ್ಲಿಗೆ ಸರಗಳು
ರಂಗನ ಪೂಜೆಗೆ ಒಯ್ಯೋ ಪುರುಷರು”

ಹರಪನಹಳ್ಳಿ ಭೀಮವ್ವನ

“ಆರತಿಯ ಬೆಳಗ ಬನ್ನಿರೆ
ವಾಲೆಕಟ್ಟಾಣಿ ಚಿಂತಾಕುಮ್ಯಾಲೆ ಸರಿಗೆ ಸರಮುತ್ತಾಗಳು
ಕಾಲಗೆಜ್ಜೆ ಸರಪಳಿನಿಟ್ಟ ಫಾಲಾಕ್ಷನ ಮಡದಿಗೆ”

 ಈವರೆಗೂ ನನಗೆ ಈ ಬುಕ್ಕಿಟ್ಟು ಮತ್ತು ಚಿಂತಾಕ ಪದಗಳ ಅರ್ಥವೆ ಗೊತ್ತಿರಲಿಲ್ಲ‌‌.ಬುಕ್ಕಿಟ್ಟು ಪದದ ಅರ್ಥ ಸುಗಂಧದ ಪುಡಿ ಮತ್ತು ಚಿಂತಾಕು ಅನ್ನುವುದು ಕೊರಳಿನ ಆಭರಣ ಅಂತ ಅರ್ಥ ಹುಡುಕಿದಾಗ ಗೊತ್ತಾಗಿದ್ದು.ಅಂತಹ ಪದಸಂಪತ್ತಿನ ಒಡತಿಯರು ನಮ್ಮ ಹರಿದಾಸ ಸಾಹಿತ್ಯದ ಮಹಿಳೆಯರು.

ನಾಡಿಗರ ಶಾಂತಾಬಾಯಿ, ಹೆಳವನಕಟ್ಟೆ ಗಿರಿಯಮ್ಮ, ತುಳಸಾಬಾಯಿ ಹೀಗೆ ದಾಸ ಸಾಹಿತ್ಯದತ್ತ ಮುಖ ಮಾಡಿದ್ದರೂ ಅವರ ಹೆಸರುಗಳು ಅಷ್ಟಾಗಿ ಬೆಳಕಿಗೆ ಬರದಿರುವುದು ವಿಪರ್ಯಾಸ.ಸಾಮಾನ್ಯವಾಗಿ ದಾಸ ಸಾಹಿತ್ಯ ಬರೆದಂತಹ ಮಹಿಳೆಯರು ವಿಧವೆಯರೇ ಆಗಿದ್ದರಿಂದ ಆಗಿದ್ದರಿಂದ ಅವರ ಸಾಹಿತ್ಯ ಆಧ್ಯಾತ್ಮಿಕ ವಲಯಕ್ಕಷ್ಟೇ ಸೀಮಿತವಾಗಿದ್ದರೂ ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಮಹಾನ್ ಕೊಡುಗೆಯೇ.

ಒಂದಷ್ಟು ಆಧುನಿಕ ಮಹಿಳಾ ಸಾಹಿತ್ಯದತ್ತ ದೃಷ್ಟಿ ಹೊರಳಿಸಿದಾಗ ಈವರೆಗೆ ಅಡುಗೆ ಮನೆಗೆ,ಆಧ್ಯಾತ್ಮಕ್ಕೆ ಮೀಸಲಿದ್ದ ಸಾಹಿತ್ಯವಾಗಿದ್ದ ವಿಭಿನ್ನತೆಯತ್ತ ಸಾಗುತ್ತದೆ. ವಿವರಗಳು ದೊರಕಿರುವ ಪ್ರಕಾರ ತಿರುಮಲಾಂಬಾ ಅವರು ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಪ್ರಥಮ‌ ಕವಯಿತ್ರಿ.ಕಥೆ,ಕವಿತೆ,ನಾಟಕ,ಕಾದಂಬರಿ,ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಮಹಿಳೆ ಇಂದು ಪರಿಣಿತಳಾಗಿದ್ದಾಳೆ.

ಪಿಯುಸಿಯಲ್ಲಿರುವಾಗ ಮೊದಲ ಕಾದಂಬರಿಯ ಓದು ಪ್ರಾರಂಭವಾದಾಗ ನನಗೆ ಅತೀ ಹುಚ್ಚು ಹಿಡಿಸಿದ್ದು ತ್ರಿವೇಣಿಯವರ ಕಾದಂಬರಿಗಳು. ತ್ರಿವೇಣಿ ಎನ್ನುವ ಹೆಸರಿನಿಂದ ಚಿರಪರಿಚಿತರಾದ ಅನಸೂಯಾ ಶಂಕರ್ ಅವರ  “ಅಪಜಯ”ನಾ ಓದಿದಂತಹ ಮೊದಲ ಕಾದಂಬರಿ. ಅದೆಷ್ಟರ ಮಟ್ಟಿಗೆ ಕಾವ್ಯ ಪರಿಣಿತರೋ ಅವರು ಓದುತ್ತ ಓದುತ್ತಾ ತೀರಾ ಭಾವುಕಳಾಗಿದ್ದೆ.ಕಣ್ಣಿಗೆ ಆ ಚಿತ್ರಣವನ್ನೇ ತಂದಿಡುವಂತ ಆ ಪರಿಪೂರ್ಣತೆಯೇ ಅವರನ್ನು ಅಷ್ಟೊಂದು ಪ್ರಸಿದ್ಧಿಗೆ ತಂದಿತ್ತು. ಹಾಗೆಯೇ ಸಾಯಿಸುತೆ, ಉಷಾನವರತ್ನರಾಮಂ ಅವರ ಕಾದಂಬರಿಗಳು ತುಸು ಹೆಚ್ಚೇ ಇಷ್ಟವಾಗುತ್ತವೆ. ಕಥೆ ಹೆಣೆಯುವ ರೀತಿಗೆ ಅವರಿಗೆ ಅವರೇ ಸಮ..

ಹೀಗೆ ಮಹಿಳಾ ಸಾಹಿತ್ಯವನ್ನು‌ ಕಟ್ಟಿ ಇಲ್ಲಿಯವರೆಗೆ ತಂದು ನಿಲ್ಲಿಸಿದ ಕೀರ್ತಿ ನಮ್ಮ  ತಿರುಮಲೆ ರಾಜಮ್ಮ, ಬೆಳಗೆರೆ ಜಾನಕಮ್ಮ, ಜಯದೇವಿ ತಾಯಿ ಲಿಗಾಡೆ,ಮಾಲತಿ ಪಟ್ಟಣಶೆಟ್ಟಿ, ಆರ್ ಕಲ್ಯಾಣಮ್ಮ, ಗೀತಾ ಕುಲಕರ್ಣಿ, ಎಂ.ಕೆ ಇಂದಿರಾ, ಗೀತಾ ನಾಗಭೂಷಣ, ಸಾರಾ ಅಬೂಬಕರ್, ವೈದೇಹಿ, ಬಿ.ಟಿ. ಲಲಿತಾ ನಾಯಕ್.. ಹೀಗೆ ಮೊದಲು ಬೆರಳೆಣಿಕೆಯಿದ್ದ ಹೆಸರುಗಳ‌ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

  ಈಗ ಮತ್ತೊಂದು ಮಹಿಳಾ ವರ್ಗ ಬರೆಯುತ್ತಿದೆ. ಅಂತರ್ಜಾಲ ಮಹಿಳಾ ಸಾಹಿತಿಗಳು ಎನ್ನಬಹುದೇನೋ.. ಮೊದಲೆಲ್ಲ ಪತ್ರಿಕೆಗೆ ಸೀಮಿತಿವಾಗಿದ್ದ ಕಾವ್ಯ ಇಂದು ವಾಟ್ಸಪ್, ಫೇಸ್ಬುಕ್, ಬ್ಲಾಗ್ ಗಳಲ್ಲಿ ಕಾಣಸಿಗುತ್ತಿದೆ. ಒಂದಷ್ಟು ಜನ ಕವಯತ್ರಿಯರ ಸಾಹಿತ್ಯವನ್ನು ನಾನು ಹುಡುಕಿ ಓದುತ್ತೇನೆ‌. ಕಾರಣ ಅಂತಹ ಸೆಳೆತ ಅದರಲ್ಲಿರುತ್ತದೆ. ಒಂದಷ್ಟು ಲೈಕ್,ಕಾಮೆಂಟ್ಸಗೆ ಮಾತ್ರ ಸಾಹಿತ್ಯ ಸೀಮೀತವಾಗಿರದ ಉನ್ನತ ಮಟ್ಟದ ಬರಗಳನ್ನು ಮಹಿಳಾ ಸಾಹಿತಿಗಳು ಬರೆಯುತ್ತಿದ್ದಾರೆ. ಫೇಸ್ಬುಕ್ ಸಾಹಿತ್ಯದ ಬಗ್ಗೆ ವಾದ ವಿವಾದಗಳೇನೇ ಇರಲಿ, ನನಗಂತೂ ಸಾಹಿತ್ಯದ ಸಿಹಿ ಹೂರಣ ದೊರೆತದ್ದು ನಿಜ..

ಕಾಲಘಟ್ಟಗಳು ಬದಲಾದಂತೆ ಮಹಿಳಾ ಸಾಹಿತ್ಯ ಲೋಕ ವಿಭಿನ್ನ ಪ್ರಯತ್ನಗಳತ್ತ ಸಾಗುತ್ತಿದೆ.ಪ್ರವಾಸ,ಕೃಷಿ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ,ಕೌಟುಂಬಿಕ ಹೀಗೇ ಎಲ್ಲವನ್ನೂ ಒಳಗೊಂಡ ಸಾಹಿತ್ಯವನ್ನು ರಚಿಸುವಷ್ಟು ಮಹಿಳೆ ಪ್ರಭಲಳಾಗಿದ್ದಾಳೆ‌. ಹೀಗೇ ವೇದಿಕೆಗಳ‌ ಮೂಲಕ ಇನ್ನೂ ಹೆಚ್ಚೆಚ್ಚು ಪ್ರೋತ್ಸಾಹ ದೊರೆಯುವ ಮೂಲಕ ಮಹಿಳಾ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ ಎಂದು ಆಶಿಸುತ್ತೇನೆ.

ಮಮತಾ.ಚೆನ್ನಪ್ಪ. ಮ್ಯಾಗೇರಿ

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post