ಬದುಕು ಎಷ್ಟು ವಿಚಿತ್ರ ಅಲ್ವಾ ? ಒಬ್ಬ ವ್ಯಕ್ತಿಯ ಎರಡು ಸನ್ನಿವೇಶದಲ್ಲಿ ನಿಲ್ಲಿಸಿ ನೋಡಿ ಅವನ ವರ್ತನೆ ಹೇಗೆ ಬದಲಾಗುತ್ತದೆ ಎನ್ನುವುದು ತಿಳಿಯುತ್ತದೆ . ದಿನ ,ವಾರದ ಕಥೆಯಿರಲಿ ಒಂದಷ್ಟು ತಾಸು ತಿನ್ನಲು ಸಿಗದಿದ್ದರೆ ಮನುಷ್ಯನ ಸ್ವಭಾವ ಬದಲಾಗುವುದು ಕಾಣಬಹದು . ಹೀಗೆ ಬಹಳ ಹಸಿದು ತಿಂದರೆ ತಿಂದ ಪದಾರ್ಥ ಹೆಚ್ಚು ರುಚಿಸುತ್ತದೆ . ಹಸಿಯದೆ ಮೃಷ್ಟಾನ್ನ ತಿಂದರೂ ಅದರಲ್ಲಿ ತೃಪ್ತಿ ಮತ್ತು ಆಸ್ವಾದನೆ ಇಲ್ಲದಿದ್ದರೆ ಏನು ಪ್ರಯೋಜನ ? ಮೇಲ್ನೋಟಕ್ಕೆ ಇದು ಊಟದ ಬಗ್ಗೆ ಹೇಳುವ ಗಾದೆ ಎನಿಸಿದರೂ ನಿಜಾರ್ಥದಲ್ಲಿ ಬೇರೆಯದೇ ಗುಟ್ಟಿದೆ . ನಾವು ಮಾಡುವ ಕೆಲಸದಲ್ಲಿ ಶ್ರದ್ದೆ ಮತ್ತು ಆಸಕ್ತಿ ಇದ್ದರೆ ನಾವು ಮಾಡುತ್ತಿರುವ ಕೆಲಸ ಯಾವುದೇ ಇರಲಿ ಅದು ನಮಗೆ ಇಷ್ಟವಾಗುತ್ತದೆ . ಇಲ್ಲದಿದ್ದರೆ ಜಗತ್ತಿನ ದೃಷ್ಟಿಯಲ್ಲಿ ಆ ಕೆಲಸ ಎಷ್ಟೇ ಮಹತ್ವದ್ದಿರಲಿ ನಮ್ಮ ಪಾಲಿಗೆ ಅದು ಮುಳ್ಳಾಗೆ ಕಾಣುತ್ತದೆ .
ಸ್ಪೇನ್ ದೇಶಕ್ಕೆ ಸ್ಪಾನಿಷ್’ನ ಒಂದಕ್ಷರ ಜ್ಞಾನವಿಲ್ಲದೆ ಬಂದ ನನಗೆ ಗುರುವಿನ ರೂಪದಲ್ಲಿ ದೊರಕಿದ್ದು ಸಹೋದ್ಯೋಗಿ ಎವಾ (ಇವಾ ) . ಇನ್ನೊಬ್ಬಳು ಸಹೋದ್ಯೋಗಿ ಮಾನ್ಸೆ ಜೊತೆಗೆ ಆಕೆಯ ಸಂಭಾಷಣೆ ಕೇಳಿ ಕೇಳಿ ಸಾಯಂಕಾಲದ ಹೊತ್ತಿಗೆ ನನ್ನ ತಲೆ ಸಿಡಿದು ಹೋಗುವಷ್ಟು ನೋಯಲು ಪ್ರಾರಂಭವಾಗುತ್ತಿತ್ತು . ಹೊಸ ಭಾಷೆ ಕಲಿಯುವುದು ಸುಲಭದ ವಿಷಯವಲ್ಲ . ಆ ಭಾಷೆಯ ಉಚ್ಚಾರಣೆ ಶಬ್ದಗಳ ಏರಿಳಿತ ಬಹಳ ಮುಖ್ಯ . ಕೇಳಿರದ ಭಾಷೆ ಅರ್ಥ ಕೂಡ ಆಗದೆ ಇರುವಾಗ ದಿನಪೂರ್ತಿ ಅದೆ ಉಚ್ಚಾರಣೆಗಳ ಕೇಳಿಕೇಳಿ ತಲೆ ನೋವು ಬರುವುದು ಸಹಜ ಕೂಡ . ಇದನ್ನೇ ಎವಾಳಿಗೆ ಹೇಳಿದೆ . ಆಗವಳು Cuando hay hambre, no hay mal pan (ಕ್ವಾoದೂ ಹಾಯ್ ಹಮ್ಬ್ರೆ ನೋ ಹಾಯ್ ಮಾಲ್ ಪಾನ್ ) ಎಂದಳು . ಸಹಜವಾಗೆ ಕುತೂಹಲದಿಂದ ಹಾಗೆಂದರೇನು ಎಂದೆ ? ನಿಜವಾದ ಹಸಿವಿದ್ದರೆ ಬ್ರೆಡ್ಡು ಕೆಟ್ಟಿದೆ /ಹಳಸಿದೆ ಅನ್ನಿಸುವುದಿಲ್ಲ ಎಂದಳು . ಇಲ್ಲಿನ ಭಾಷೆಯಯಲ್ಲಿ ಕೂಡ ಮೇಲ್ನೋಟಕ್ಕೆ ಕಾಣುವ ಅರ್ಥಕ್ಕಿಂತ ಅದು ನೀಡುವ ಸಂದೇಶ ಗಾಢವಾದದ್ದು . ಭಾಷೆಯ ಕಲಿಯಬೇಕೆಂಬ ಹಂಬಲವಿದ್ದರೆ ತಲೆ ನೋವು ಹೇಗೆ ಬಂದೀತು ? ಎನ್ನುವುದನ್ನ ಆಕೆ ಅಪರೋಕ್ಷವಾಗಿ ಗಾದೆಯ ಮೂಲಕ ಕೇಳಿದ್ದಳು .
ಇಂಗ್ಲಿಷ್ ಭಾಷಿಕರು Hunger never saw bad bread / food. ಅಥವಾ When one is hungry everything tastes good. ಹಾಗೂ For a good appetite there is no hard bread.ಮತ್ತು Hunger is the best sauce. ಎನ್ನುವ ವಿವಿಧ ನಾಣ್ನುಡಿಗಳನ್ನ ಬಳಸುತ್ತಾರೆ . ಅವುಗಳ ಒಳಾರ್ಥ ನಮ್ಮ ಗಾದೆಯ ಮಾತಿನ ಅರ್ಥವನ್ನೇ ಪ್ರತಿಧ್ವನಿಸುತ್ತವೆ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
cuando : ಯಾವಾಗ ಎನ್ನುವ ಅರ್ಥ ಕೊಡುತ್ತದೆ . ಕ್ವಾoದೂ ಎನ್ನುವುದು ಉಚ್ಚಾರಣೆ .
hay: ಇದೆ ಎನ್ನುವ ಅರ್ಥ . ಹಾಯ್ ಎನ್ನುವುದು ಉಚ್ಚಾರಣೆ
hambre: ಹಸಿವು ಎನ್ನುವ ಅರ್ಥ . ಹಮ್ಬ್ರೆ ಎನ್ನುವುದು ಉಚ್ಚಾರಣೆ
No: ಇಲ್ಲ ಎನ್ನುವುದು ಅರ್ಥ , ನೋ ಎನ್ನುವುದು ಉಚ್ಚಾರಣೆ
mal: ಬ್ಯಾಡ್ ಅಥವಾ ಕೆಟ್ಟದ್ದು ಎನ್ನುವು ಅರ್ಥ ಕೊಡುತ್ತದೆ . ಮಾಲ್ ಎನ್ನುವುದು ಉಚ್ಚಾರಣೆ
pan: ಬ್ರೆಡ್ಡು. ಬ್ರೆಡ್ಡಿಗೆ ಸ್ಪಾನಿಷ್ ನಲ್ಲಿ ಪಾನ್ ಎನ್ನುತ್ತಾರೆ. ಪಾನ್ ಎನ್ನುವುದು ಉಚ್ಚಾರಣೆ