X

‘ನಾವಲ್ಲ’ – ನಮ್ಮೊಳಗಿಳಿದಾಗ

ಒಂದೊಳ್ಳೆ ಕಥೆ ಹೇಳ್ತೇನೆ ಕೇಳು ಎಂದು ಯಾರಾದರೂ ಹೇಳಿದರೆ, ಆತ ಹೇಳುತ್ತಿರುವುದು ಸ್ವಯಂ ಕಲ್ಪಿತ ವಿಚಾರಗಳು ಅಥವಾ ಇನ್ಯಾರೋ ಕಲ್ಪಿಸಿಕೊಂಡು ಬರೆದ ವಿಚಾರಗಳು ಎಂದು ಸಾಮಾನ್ಯವಾಗಿ ಭಾವಿಸಿರುತ್ತೇವೆ. ಕಥೆ ಬರೆಯಲು ಒಳ್ಳೆಯ ಕಲ್ಪನೆಯಿರಬೇಕು ಎಂದೂ ನಂಬಿದ್ದೇವೆ. ಅದು ನಿಜ. ಆದರೆ ವಾಸ್ತವದಲ್ಲಿ ಒಳ್ಳೆಯ ಕಥೆಗಳ್ಯಾವುದೂ ಕೇವಲ ಕಲ್ಪನೆಯಾಗಿರುವುದಿಲ್ಲ. ಕಥೆಯಲ್ಲಿ ಹಾಸುಹೊಕ್ಕಾದ ಸಂವೇದನೆಗಳು ವಾಸ್ತವದಲ್ಲಿ ಕಥೆಗಾರ ಸ್ವತಃ ಅನುಭವಿಸಿದ ಅಥವಾ ಕೇಳಿ/ನೋಡಿ ಅನುಭವಿಸಿದ ಘಟನೆಗಳೇ ಆಗಿರುತ್ತವೆ. ಎಂದೂ ನಡೆಯದ ವಿಷಯಗಳನ್ನೂ ಕಥೆಯ ರೂಪದಲ್ಲಿ ಬರೆಯಲು ಅಸಾಧ್ಯವೇನಲ್ಲ. ಆಕಾಶದಲ್ಲಿ ತೇಲುತ್ತಿದ್ದ ಚಂದ್ರ ಸೂರ್ಯನ ಬಿಸಿಗೆ ಸುಟ್ಟುಹೋದ ಎಂಬ ಸಾಲನ್ನಿಟ್ಟುಕೊಂಡು ಕಥೆ ಬರೆದರೆ ಓದಲು ಮಜವೆನಿಸೀತು. ಆದರೆ ಅದು ಉಳಿಯುವ ಬರಹವಾಗುವುದಿಲ್ಲ. ಕಾಲ್ಪನಿಕ ವ್ಯಕ್ತಿಗಳನ್ನು ಸೃಷ್ಟಿಸಿ ಅವರ ಮೂಲಕ ಸತ್ಯವನ್ನು, ಸತ್ಯವಾಗಿ ನಡೆದದ್ದನ್ನು ಹೇಳಿದರೆ ಮಾತ್ರ ಆ ಕಥೆ ನೂರ್ಕಾಲ ಉಳಿದೀತು. ಹಾಗೆ ಉಳಿಯುವಂತಹ ಆರು ಕಥೆಗಳನ್ನು ಸಾಹಿತಿ ಸೇತೂರಾಮ್ ಅವರು ‘ನಾವಲ್ಲ’ ಪುಸ್ತಕದ ಮೂಲಕ ಕನ್ನಡಿಗರಿಗೆ ನೀಡಿದ್ದಾರೆ. ಈಗಾಗಲೇ ಮೂರು ಮುದ್ರಣಗಳನ್ನು ಕಂಡಿರುವ ಈ ಕೃತಿಯಲ್ಲಿ ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯಿನಿ ಮತ್ತು ನಾವಲ್ಲ ಎಂಬ ಕಥೆಗಳಿವೆ.

ಈ ಲೇಖನದ ಉದ್ದೇಶ ಸೇತೂರಾಮ್ ಅವರ ಕಥೆ ಪುಸ್ತಕದ ವಿಮರ್ಶೆಯಲ್ಲ; ಕಥೆಗಳನ್ನು ಹೇಳುತ್ತೇನಾ? ಸಾಧ್ಯವೇ ಇಲ್ಲ… ಪಾತ್ರಗಳ ಪರಿಚಯವೆನ್ನೋಣವೆಂದರೆ ಅದೂ ಇಲ್ಲ; ಸ್ತ್ರೀ ಪಾತ್ರಗಳೊಳಗೆ ಒಮ್ಮೆ ಇಳಿಯುವುದು ಎಂದರೆ ಹೆಚ್ಚು ಸೂಕ್ತ.

ಸೇತೂರಾಮ್ ಅವರ ಧಾರಾವಾಹಿಗಳನ್ನು, ನಾಟಕಗಳನ್ನು ನೋಡಿದವರಿಗೆ ಅವರು ಕಟ್ಟಿಕೊಡುವ ಬಲವಾದ ಮಹಿಳಾ ಪಾತ್ರಗಳು ಮತ್ತು ಆ ಪಾತ್ರಗಳ ಮೂಲಕ ಅವರಾಡಿಸುವ ಕಟುಸತ್ಯಗಳು ಮನುಷ್ಯ ಕುಲದ ಬಗ್ಗೆಯೇ ರೇಜಿಗೆ ಹುಟ್ಟಿಸುತ್ತವೆ. ರೇಜಿಗೆ ಹುಟ್ಟಿದ ಮಾತ್ರಕ್ಕೆ ಈ ಪ್ರಪಂಚದಿಂದಲೇ ಮಾಯವಾಗಲು ಸಾಧ್ಯವೇ. ಇಲ್ಲೇ ಇದ್ದು ಆ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು.

ಕಥಾ ಪ್ರವೇಶ

ಆಧುನಿಕ ವೈದ್ಯಕೀಯ ಪದ್ದತಿ, ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳು ಎಷ್ಟೇ ಬೆಳೆದಿದ್ದರೂ, ಮುಂದೆ ಇನ್ನಷ್ಟು ಬೆಳೆದರೂ ಹೆಣ್ಣು ಮದುವೆಯಾದ ನಂತರವೂ ತಾಯಿಯಾಗದಿದ್ದರೆ ಮಾತ್ರ ಆಕೆಯ ಬಾಳು ನರಕ. ಭೂಮಿಗೆ ಕ್ಷುದ್ರಗ್ರಹಗಳು ಅಪ್ಪಳಿಸುವುದಕ್ಕಿಂತ ಹೆಚ್ಚಾಗಿ ನನ್ನ ಸೊಸೆ/ಹೆಂಡತಿಗೆ ಮಗುವಾಗಿಲ್ಲದಿರುವುದೇ ಪ್ರಮುಖ ಸಮಸ್ಯೆಯೆಂದು ಬಹುತೇಕ ಭಾವಿಸುತ್ತಾರೆ. ಈ ಎಳೆಯನ್ನು ಒಂದು ದೊಡ್ಡ ಮರವನ್ನಾಗಿಸಿದ ‘ಮೌನಿ’ ಎಂಬ ಕಥೆಯಿದೆ. ಸಾಮಾನ್ಯರು ಗಮನಿಸದೇ ಇರುವ ಸಹನ ಸಂಗತಿಯೊಂದನ್ನು ಕಥೆಗಾರ ಸೊಗಸಾಗಿ ಮೂರು ಸಾಲಿನಲ್ಲಿ ಬಿಚ್ಚಿಡುತ್ತಾರೆ. ಅದು ಹೀಗೆ…

‘ಈ ಮಕ್ಳು ಅನ್ನೋದು ಒಂದು ತರಹದ ಕ್ಲೀಷೆ. ಗೊತ್ತಾಗೋಕೆ ಮೊದ್ಲು ಆಗಿ ಹೋಗ್ಬೇಕು. ಆಗಿಲ್ಲ ಅಂತ ಗೊತ್ತಾಯ್ತಾ ಮುಂಡೇದಾಗೋದೇ ಇಲ್ಲ. ಇಲ್ಲಾದದ್ದೂ ಅದೇ. ಅವರಜ್ಜಿ ಅನ್ನೋರು, ಸ್ವಾಭಾವಿಕವಾಗಿ ಆದ್ರೆ ಸಲೀಸು ಕಣೆ. ಇಲ್ವಾ ಫಜೀತಿ. ಡಾಕ್ಟ್ರು ನೋಡಿದ್ರು. ಅವರಂದಿದ್ದು. ‘ಏನೂ ಸಮಸ್ಯೆ ಇಲ್ಲ. ನೀವು ಪುರುಸೊತ್ತು ಮಾಡ್ಕಂಡಿಲ್ಲ ಅಷ್ಟೇ’.

ಹೀಗೆ ಅತಿ ಸಹಜ ವಿಷಯಗಳನ್ನೂ ಮರಳಲ್ಲಿ ಬೆರಳೆಳೆದಷ್ಟು ಸಲೀಸಾಗಿ ನಮಗೇ ತಿಳಿಯದಂತೆ ಓದಿಸಿ ನಗಿಸಿಬಿಡುತ್ತಾರೆ. ಕೃತಕ ಗರ್ಭ ಧಾರಣೆಯಲ್ಲಿ ಹೆಣ್ಣೊಂದು ಅನುಭವಿಸುವ ನೋವನ್ನು ಬಹುಶಃ ಈವರೆಗೆ ಯಾರೂ ಬರೆದಿಲ್ಲ. ‘ಒಂದೇ ಮಾತಲ್ಲಿ ಹೇಳೋದಾದ್ರೆ, ವಿಜ್ಞಾನದಲ್ಲಿ ಹೆಂಗಸು, ದನ ಎರಡೂ ಒಂದೇ. ಸುಖದ ಕ್ರಿಯೆಯು ಸೃಷ್ಟಿಯಲ್ಲಿ ಪರ್ಯವಸಾನವಾದರೆ ಎಲ್ಲವೂ ಸಲೀಸು ಸಂಭ್ರಮ. ಸೃಷ್ಟಿಗೇ ಅಂತ ಬಲವಂತವಾಗಿ ಮೈಯೊಡ್ಡಿದರೆ ಎಲ್ಲಾ ನೋವು ಸಂಕಟವೇ’.

ಮಗು ಕಾಣದ, ಗರ್ಭ ಜಾರಿದ ಹೆಣ್ಣು ಹೃದಯದ ತೊಳಲಾಟ, ಹೇಳಲಾಗದ ನೋವು, ಎಲ್ಲರ ಮುಖದ ಮೇಲೆ ಉಗಿಯಬೇಕೆಂದರೂ ಒಳಗೇ ನುಂಗಿಕೊಳ್ಳುವ ಎಂಜಲು, ಎಲ್ಲವೂ ಇಲ್ಲಿ ಬತ್ತಲಾಗಿದೆ. ಆ ಮೌನಿಯ ಮಾತನ್ನೊಮ್ಮೆ ಕೇಳಲೇಬೇಕು.

ಕಾತ್ಯಾಯಿನಿ

ಈ ಕಾತ್ಯಾಯಿನಿಯೂ ನಮ್ಮ ನಿಮ್ಮ ಸುತ್ತಲಿರುವ ಒಂದು ಪಾತ್ರವೇ. ಬಡತನದಲ್ಲಿ ಬೇಯುತ್ತಿದ್ದ ಕುಟುಂಬವೊಂದು ತನ್ನ ಸುಂದರವಾದ ಮಗಳನ್ನು ಶ್ರೀಮಂತನೊಬ್ಬನಿಗೆ ಮದುವೆ ಮಾಡಿಕೊಡುವುದು. ಬದುಕಿನ ಇಟ್ಟಿಗೆ ಸಿಕ್ಕಿಬಿದ್ದು ಮನಸ್ಸಿನ ಆಸೆಗೆ ಮದುವೆಯಾಗದೆ ಹಣಕ್ಕಾಗಿ ಮದುವೆಯಾದರೆ ಆಗಬಹುದಾದ ಎಲ್ಲಾ ಅನಾಹುತಗಳ ಮೂರ್ತರೂಪವೇ ಕಾತ್ಯಾಯಿನಿ. ಇಲ್ಲಿ ಆಕೆಯದ್ದೇನೂ ತಪ್ಪಿಲ್ಲ. ಆದರೆ ಜೀವನದ ಸಂಘರ್ಷಕ್ಕೆ ಸಿಲುಕಿ ನರಳುವ ಜೀವಿ. ಒಂದು ಹೆಣ್ಣು ತನ್ನ ಮನೆಯಲ್ಲಿ ತಾನನುಭವಿಸುವ ಕಷ್ಟಗಳನ್ನು ಸಾಧಾರಣವಾಗಿ ಯಾರಮುಂದೆಯೂ ಹೇಳಿಕೊಳ್ಳುವುದಿಲ್ಲ. ಹೇಳಿಕೊಂಡರೂ ಪೂರ್ಣಪಾಠ ಒಪ್ಪಿಸುವುದಿಲ್ಲ. ಆದರೆ ಕಾತ್ಯಾಯಿನಿ ಪಾತ್ರದ ಮೂಲಕ ಅವೆಲ್ಲವನ್ನು ಬಿಚ್ಚಿಟ್ಟಿದ್ದಾರೆ. ನನ್ನ ಅಮ್ಮ, ಅಕ್ಕ, ಅಜ್ಜಿ, ತಂಗಿ ಏನೆಲ್ಲ ಅನುಭವಿಸುತ್ತಿರಬಹುದು, ಅವರ ತಲ್ಲಣಗಳೇನು ಎಂಬುದೆಲ್ಲ ಕಾತ್ಯಾಯಿನಿಯಿಂದ ಕೇಳಿ ತಿಳಿಯಬಹುದು.

ಹಾಗೆ ನೋಡಿದರೆ ಸಮಾಜದಲ್ಲಿ ಎರಡು ರೀತಿಯ ಕಾತ್ಯಾಯಿನಿಯರಿದ್ದಾರೆ. ಮೊದಲನೆಯದು ಮೇಲಿನದು. ಕಥೆಗಾರ ಅದನ್ನು ಚೆನ್ನಾಗಿ ವರ್ಣಿಸಿದ್ದಾರೆ. ಎರಡನೆಯದ್ದು ಅತಿ ಶ್ರೀಮಂತಿಕೆಯ ಆಸೆಯಿಂದ ಬಾಳನ್ನು ಹಾಳು ಮಾಡಿಕೊಳ್ಳುವ ಕಾತ್ಯಾಯಿನಿಯರು. ಮೊದಲನೆಯವರು ಬದುಕಿನ ಕೈಕೊಂಬೆ, ಎರಡನೆಯವರು ಲಾಲಸೆಯ ಕೈಗೊಂಬೆ.

ಇದೇ ರೀತಿ ಸಂಭವಾಮಿ ಎನ್ನುವ ಮತ್ತೊಂದು ಕಥೆ. ಬೇಜವಾಬ್ದಾರಿ ಗಂಡನನ್ನು ಮಕ್ಕಳ ಮುಂದೆ ಕೊಂಚವೂ ಬೆತ್ತಲುಗೊಳಿಸದ ತಾಯಿ. ಮುಂದೊಂದು ದಿನ ಮಕ್ಕಳ ಕಣ್ಣಲ್ಲಿ ಹೇಗೆ ನಿಕೃಷ್ಟಳಾಗುತ್ತಾಳೆ ಎಂಬುದೇ ಕಥೆ. ಮಕ್ಕಳಿಗಾಗಿ ತಾಯಿ ಜೀವನವನ್ನೇ ತೇಯ್ದಿದ್ದರೂ, ಕಡೆಗಾಲದಲ್ಲಿ ‘ನನ್ನ ಅಪ್ಪ ಇವರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಆ ತಾಯಿಗೇನನಿಸಬಹುದು? ಆಕೆ ಮಾಡಿದ ತ್ಯಾಗ, ತಾನು ಹಸಿದು ಉಣ್ಣುವಾಗ ಮಗು ಕೇಳಿತೆಂದು ಅದಕ್ಕೆ ಊಟ ಮಾಡಿಸಿದ ಕ್ಷಣಗಳು ಇವ್ಯಾವುದೂ ಮಕ್ಕಳಿಗೇಕೆ ನೆನಪಿರುವುದಿಲ್ಲ, ಎಂಬ ನೋವು ಆಕೆಯನ್ನು ಕಾಡುವುದಿಲ್ಲವೇ? ಕಾಡುತ್ತದೆ ಎನ್ನುತ್ತಾರೆ ಕಥೆಗಾರ.

ಅರುವತ್ತರ ನಂತರದ ಸೊಬಗು

ಸ್ತ್ರೀಯೊಬ್ಬಳು ಎಲ್ಲೂ ಹೇಳಿಕೊಳ್ಳಲಾಗದ ಭಾವನೆಗಳಿಗೆ ಕಥೆಗಾರರು ವೇದಿಕೆ ಕೊಟ್ಟಿದ್ದಾರೆ ಎಂದರೆ ಹೊಗಳಿಕೆಯೇನಲ್ಲ. ಸಾಮಾಜಿಕ ಚೌಕಟ್ಟನ್ನು ಮೀರಿ ಸ್ವೇಚ್ಚೆಯನ್ನು ಆಸ್ವಾದಿಸುವುದು, ಪರಪುರುಷರೊಂದಿಗೆ ಸಂಬಂಧ; ಹೀಗೆ ಸಮಾಜದ ಬೆಸುಗೆಯನ್ನು ದುರ್ಬಲಗೊಳಿಸಿ ಅಸ್ಥಿರ ಸ್ಥಿತಿ ನಿರ್ಮಾಣ ಮಾಡುವುದೇ ಸ್ತ್ರೀವಾದದ ಪರಮ ಉದ್ದೇಶವೆಂದು ಭಾವಿಸಿರುವ ಸ್ತ್ರೀವಾದಿಗಳಿಂದ, ಪ್ರತ್ಯೇಕವಾಗಿ ನಿಲ್ಲುವ ಸ್ತ್ರೀ ಸಂವೇದಿ ಸೇತೂರಾಮ್. ಬದುಕು ನಡೆಯುತ್ತಿರುವುದೇ ನೈತಿಕ ಚೌಕಟ್ಟಿನೊಳಗೆ. ದೇಶವು ಹೇಗೆ ಸಂವಿಧಾನದ ಚೌಕಟ್ಟಿನಲ್ಲಿ ನಡೆಯುತ್ತದೋ ಹಾಗೆ. ಸೇತೂರಾಮ್ ಅವರೇ ಹೇಳುವಂತೆ, ಅವರು ಬರೆಯಲು ಪ್ರಾರಂಭಿಸಿದ್ದೇ ಅವರ 60 ವರ್ಷಗಳ ನಂತರ. ಅಲ್ಲಿಯವರೆಗೆ ಅವರು ಕೇವಲ ಓದಿದ್ದರಷ್ಟೇ. ಅವರು ಇಷ್ಟೊಳ್ಳೆಯ ಧಾರವಾಹಿ, ನಾಟಕ, ಕಥೆಗಳನ್ನು ಕೊಟ್ಟಿದ್ದರೂ ತಥಾಕಥಿತ ಸಾಹಿತಿಗಳು ಅವರನ್ನು ಒಪ್ಪಿಕೊಳ್ಳುತ್ತಿಲ್ಲ ಎಂದೊಬ್ಬರು ಹೇಳಿದ್ದರು. ಇದೇ ಮಾತನ್ನು ಸೇತೂರಾಮ್ ಅವರನ್ನು ಕೇಳಿದಾಗ, ‘ಒಪ್ಪಿಕೊಳ್ಳಬೇಕಾದ್ದು ಓದುಗರೇ ಹೊರತು ಸಾಹಿತಿಗಳಲ್ಲ. ಸಾಧ್ಯವಾದರೆ ಮುಂದೊಂದು ದಿನ ಓದುಗರ ಸಮ್ಮೇಳನ ಮಾಡುತ್ತೇನೆ; ಸಾಹಿತಿಗಳ ಸಮ್ಮೇಳನವನ್ನಲ್ಲ’ ಎಂದು ಪ್ರಾಮಾಣಿಕವಾಗಿ ದ್ವೇಷರಹಿತರಾಗಿ ಉತ್ತರಿಸುತ್ತಾರೆ. ಪ್ರತಿಯೊಬ್ಬ ಉತ್ತಮ ಸಾಹಿತಿಯನನ್ನೂ ಜೀವಂತವಾಗಿಡುವ; ಆದರೆ ಯಾವಾಗಲೂ ತಳದಲ್ಲೇ ಇರುವವರು ಇದೇ ಓದುಗರು. ಪ್ರಶಂಸೆ, ಪ್ರಶಸ್ತಿಗೆ ಬರೆಯದೆ ಓದುಗರಿಗಾಗಿ ಬರೆಯುವುದೇ ಸಾಹಿತಿಯಲ್ಲಿರಬೇಕಾದ ತಳಮಟ್ಟದ ಮನಃಸ್ಥಿತಿಯಲ್ಲವೇ?

 

 

ಹೊಸದಿಗಂತ ಪ್ರಕಟಿತ

Facebook ಕಾಮೆಂಟ್ಸ್

Vrushanka Bhat: Editor at Vikrama Kannada Weekly
Related Post