X

‘ಕುಣಿಯಲು ಬಾರದ ವ್ಯಕ್ತಿ ನೆಲ ಡೊಂಕು ಎಂದನಂತೆ’

ಕೆಲಸ ಯಾವುದೇ ಇರಲಿ ನಾವು ಅದನ್ನು ಪೂರ್ಣಗೊಳಿಸುವಲ್ಲಿ, ಯಶಸ್ಸು ಪಡೆಯುವಲ್ಲಿ ವಿಫಲವಾದರೆ ತಕ್ಷಣ ನಾವು ಅದಕ್ಕೆ ಕಾರಣ ಹುಡುಕಿ ಯಾರನ್ನಾದರೂ ಆ ಸೋಲಿಗೆ ಕಟ್ಟಿಬಿಡುತ್ತೇವೆ.  ಸೋಲಿಗೆ ಕಾರಣ ಏನೇ ಇರಲಿ ಸೋತಿದ್ದು ನನ್ನಿಂದ ಎನ್ನುವದನ್ನು ಮಾತ್ರ ಮನುಷ್ಯ ಒಪ್ಪಲಾರ. ಇದೊಂದು ಜಾಗತಿಕ ಸಮಸ್ಯೆ. ಮನುಷ್ಯ ಮೂಲದಲ್ಲಿ ಒಂದೇ ಎನ್ನವುದಕ್ಕೆ ಇನ್ನೊಂದು ತಾಜಾ ಉದಾಹರಣೆ . ಕೈಬರಹ ಚನ್ನಾಗಿಲ್ಲ ಎಂದು ಹೆತ್ತವರೊ ಅಥವಾ ಗುರುಗಳೋ ಹೇಳಿದರೆ ಮುಗಿಯಿತು. ತಕ್ಷಣ ಪೆನ್ನಿನ ಮೇಲೆ ಗೂಬೆ ಕೂರಿಸುವುದು ಸಾಮಾನ್ಯ. ಕೊನೆಗೆ ಪೆನ್ನಲ್ಲದಿದ್ದರೆ ಇಂಕು ಅಥವಾ ಹಾಳೆ ಯಾವುದಾದರೂ ಸರಿಯೇ ತಪ್ಪು ಅವುಗಳದ್ದೇ ಬರೆದ ನನ್ನದಲ್ಲ ಎನ್ನುವ ಭಾವನೆ ಚಿಕ್ಕ ವಯಸ್ಸಿನಿಂದ ಬೆಳೆಸಿಕೊಂಡು ಬಂದುಬಿಡುತ್ತೇವೆ. ತಿದ್ದಬೇಕಿರುವ ಗುರುಗಳು ಅಥವಾ ಪೋಷಕರು ಇಂದಿನ ವೇಗದ ಯುಗದಲ್ಲಿ ಸಮಯವೆಲ್ಲಿಂದ ತಂದಾರು?

ನನಗೆ ಪ್ರೈಮರಿ ಶಾಲೆಯಲ್ಲಿ ಒಂದು ಪದ್ಯ ಇತ್ತು. ನೂಲ್ಲ್ಯಾಕ ಚೆನ್ನಿ, ನೂಲ್ಲ್ಯಾಕ ಚೆನ್ನಿ… ಅಲ್ಲಿ ಹೆಂಡತಿ ಮೊದಲು ದಾರ ಇಲ್ಲ, ರಾಟೆ ಇಲ್ಲ ಹೀಗೆ ಇಲ್ಲದ ಪಟ್ಟಿ ಕೊಡುತ್ತಾಳೆ. ಗಂಡ ಎಲ್ಲಾ ತಂದುಕೊಡುತ್ತಾನೆ. ಆದರೂ ಆಕೆ ನೇಯ್ಗೆ ಮಾಡದಿದ್ದಾಗ ಗಂಡ ಏಕೆ ಎಂದು ಪ್ರಶ್ನಿಸುತ್ತಾನೆ. ಕೊನೆಗವಳು ‘ನಂಗೆ ಬರೋದಿಲ್ಲ ಜಾಣ’, ‘ನಂಗೆ ಬರೋದಿಲ್ಲ ಜಾಣ’ ಎನ್ನುತ್ತಾಳೆ. ಬರುವುದಿಲ್ಲ ಎಂದು ಮೊದಲೇ ಒಪ್ಪಿಕೊಂಡಿದ್ದರೆ ಕಲಿಕೆಗೆ ತಯಾರು ಮಾಡಬಹುದಿತ್ತು . ನಮ್ಮಲ್ಲಿರುವ ಅವಗುಣವ ಎಷ್ಟು ದಿನ ಮುಚ್ಚಿಡಬಹುದು? ಎಷ್ಟು ದಿನ ಬೇರೆಯ ವಸ್ತು, ವ್ಯಕ್ತಿಯನ್ನು ಸೋಲಿಗೆ ಹೊಣೆ ಮಾಡಬಹುದು?

ಇದಕ್ಕೆ ಸಮನಾಗಿ ಸ್ಪ್ಯಾನಿಷ್ ಗಾದೆ  ‘El mal escribano le echa la culpa a la pluma’ ಇದೆ. (ಎಲ್ ಮಾಲ್ ಎಸ್ಕಿರಿಬನೋ ಲೇ ಎಚ್ಚ ಲ ಕುಲ್ಪಾ ಆ ಲ ಪ್ಲುಮ) ‘ಸರಿಯಾಗಿ ಬರೆಯಲು ಬಾರದವನು ಲೇಖನಿ(ನವಿಲು ಗರಿ)ಯನ್ನು ದೂರಿದನಂತೆ’ ಎನ್ನುವುದು  ಇದರ ಅರ್ಥ. ಇದರ ಅರ್ಥವನ್ನು ಪುನಃ ಬಿಡಿಸಿ ಹೇಳುವ ಅಗತ್ಯ ಇರಲಾರದು. ಇದಕ್ಕೆ ಹತ್ತಿರದ ಕನ್ನಡ ಗಾದೆ ‘ಕುಣಿಯಲು ಬಾರದ ವ್ಯಕ್ತಿ ನೆಲ ಡೊಂಕು ಎಂದನಂತೆ’ ಎನ್ನುವುದು. ಅಲ್ಲಿ ಬರೆಯಲು ಬರದವನ ಉದಾಹರಣೆ ಇಲ್ಲಿ ಕುಣಿಯಲು ಬರದವನದು ಅಷ್ಟೇ ವ್ಯತ್ಯಾಸ. ಹೇಳಬೇಕಿರುವ ಸಂದೇಶ ಮಾತ್ರ ಒಂದೇ.

ಇದನ್ನು ಇಂಗ್ಲಿಷ್ ಭಾಷಿಕರು  ‘The poor writer places the blame on the pen’ ಎಂದರು. ಪ್ರತಿ ಗಾದೆಗಳು ಮೂಲದಲ್ಲಿ ನಾವೆಲ್ಲಾ ಎಷ್ಟು ಸಮಾನಮನಸ್ಕರು ಎನ್ನುವುದನ್ನು ಎತ್ತಿ ಹೇಳುತ್ತವೆ.

ಇಂತಹ ಗಾದೆ, ಜನಪದಗಳ ಸಾರ ಒಂದೇ .. ‘ಯಸ್’ ಅಥವಾ ‘ನೋ’ ಅನ್ನುವುದನ್ನು ನಿಖರವಾಗಿ ಹೇಳುವುದು ನಮ್ಮ ಮತ್ತು ಇತರರ ವೇಳೆ ಗೌರವ ಎರಡೂ ಉಳಿಸುತ್ತವೆ. ನಮ್ಮಲ್ಲಿರುವ ನ್ಯೂನ್ಯತೆ ಕೊನೆಗೊಳಿಸಲು ಕೆಲಸ ಮಾಡಬೇಕೆ ಹೊರತು, ಹೊರಗಿನ ವಿಷಯಗಳ ದೂಷಿಸುವುದರಿಂದ ಫಲವಿಲ್ಲ ಎನ್ನುವುದು ಈ ಗಾದೆಗಳ ಸಾರ. ಭಾಷೆ ಬೇರೆಯಾದರೇನು ನೀಡುವ ಅರಿವು, ಸಂದೇಶ ಮಾತ್ರ ಒಂದೇ.

ಸ್ಪಾನಿಷ್ ಪದಗಳ ಆರ್ಥ ಮತ್ತು ಉಚ್ಚಾರಣೆ :

El mal: ಎಲ್ ಮಾಲ್ ಎನ್ನುವುದು ಉಚ್ಚಾರಣೆ. ಒಬ್ಬ ಕೆಟ್ಟ ಎನ್ನುವ ಅರ್ಥ ನೀಡುತ್ತದೆ.

escribano: ಎಸ್ಕಿರಿಬನೋ  ಎನ್ನುವುದು ಉಚ್ಚಾರಣೆ. ಬರಹಗಾರ ಎನ್ನುವುದು ಅರ್ಥ.

le echa la culpa: ಲೇ ಎಚ್ಚ ಲ ಕುಲ್ಪಾ ಎನ್ನುವುದು ಉಚ್ಚಾರಣೆ. ತಪ್ಪನ್ನು ಬೇರೆಯೆಡೆಗೆ ಎಸೆಯುವುದು. ತನ್ನ ತಪ್ಪನ್ನು ವರ್ಗಾಯಿಸುವುದು ಎನ್ನುವ ಅರ್ಥ ನೀಡುತ್ತದೆ.

a la pluma: ಆ ಲ ಪ್ಲುಮ ಎನ್ನುವುದು ಉಚ್ಚಾರಣೆ. ನವಿಲುಗರಿ ಅಥವಾ ಪಕ್ಷಿಯ ಪುಕ್ಕ ಎನ್ನುವುದು ಅರ್ಥ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post