ನಮ್ಮಲ್ಲಿ ಮಾತ್ರ ಹೀಗೆ ಅಂತ ಹೇಳ್ತಿದೀನಿ ಅಂದ್ಕೋಬೇಡಿ .., ಜಗತ್ತಿನ ಎಲ್ಲಾ ಕಡೆ ಸೇಮ್ . ವಿವಾದ ಹೆಚ್ಚು ಜನರನ್ನ ಸೆಳೆಯುತ್ತೆ . ಒಂದೊಳ್ಳೆ ಮೆಸೇಜ್,ಒಂದೊಳ್ಳೆ ಜೋಕ್ ಕೊಳ್ಳುವರಿಲ್ಲದೆ ಕೊಳೆತು ಹೋಗುತ್ತೆ . ಒಂದೊಳ್ಳೆ ಸಾಹಿತ್ಯದ ಪುಸ್ತಕ ನಲವತ್ತು ಪರ್ಸೆಂಟ್ ಡಿಸ್ಕೌಂಟ್’ನಲ್ಲಿ ಮಾರಬೇಕು (ಭೈರಪ್ಪ ಅವರ ಕೃತಿ ಹೊರತುಪಡಿಸಿ ) ಅಶ್ಲೀಲ ಸಾಹಿತ್ಯವನ್ನು ಹುಡುಕಿಕೊಂಡು ಹೋಗಿಕೊಳ್ಳುತ್ತಾರೆ . ಒಂದು ಹಳೆ ಕತೆ ಯಾರೋ ಹೇಳಿದ್ದು ಹಾಲನ್ನ ಮನೆ ಬಾಗಿಲಿಗೆ ತಲುಪಿಸುತ್ತಾರೆ . ಅಲ್ಕೊಹಾಲನ್ನ ಹುಡುಕಿಕೊಂಡು ಹೋಗಿ ಕೊಂಡು ಕುಡಿಯುತ್ತಾರೆ ಅಂತ . ನಮ್ಮಲ್ಲಿ ನಿಜವಾಗಿ ಚರ್ಚೆಯಾಗಬೇಕಾದ ಸಮಸ್ಯೆ ಬೆಟ್ಟದಷ್ಟಿದೆ ಅವಕ್ಕೆಲ್ಲಾ ಉತ್ತರ ಹುಡುಕಬೇಕಾದ ದರ್ದು ಯಾರಿಗೂ ಇಲ್ಲ
ಕುಂಭಮೇಳದಲ್ಲಿ ಸತ್ತರೆ ಅದು ತೃತೀಯ ವಿಶ್ವ ,ಡಿಸ್ಕೋ ಥೆಕ್’ನಲ್ಲಿ ಕಾಲ್ತುಳಿತಕ್ಕೆ ಸಿಕ್ಕು ಸತ್ತರೆ ಅದು ಮುಂದುವರಿದ ವಿಶ್ವ ,ಮೊದಲನೆಯವರನ್ನು ಮೂರ್ಖರಂತೆ ಚಿತ್ರಿಸಿ , ಎರಡನೆಯವರನ್ನು ನವಯುಗದ ನಾಗರೀಕ ಎಂದು ತೋರಿಸುವ , ಬರೆಯುವ ಜನಕ್ಕೆ ಬುದ್ದಿ ಹೇಳುವುದು ಹೇಗೆ?, ಅದು ಫೆಬ್ರವರಿ ೨೦೧೧ ರ ಸಮಯ ಬೆಳೆಗ್ಗೆಯಿಂದ ಸ್ಪ್ಯಾನಿಷ್ ಮಿತ್ರರು ನ್ಯೂಸ್ ನೋಡಿ ಒಂದೇ ಸಮ ಏಕೆ ನಿಮ್ಮ ದೇಶ ಹೀಗೆ? ಎಂದು ಕೇಳಲು ಶುರು ಮಾಡಿದರು . ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ನೂರಾರು ಜನ ಸತ್ತದ್ದು ಇಂಟೆರ್ನ್ಯಾಷನಲ್ ನ್ಯೂಸ್ ಆಗಿತ್ತು . ಈ ಸಮಯಕ್ಕಾಗಲೇ ನನ್ನ ಸ್ಪಾನಿಷ್ ಭಾಷೆಯ ಗ್ರಹಿಕೆ ಮಜಬೂತಾಗಿತ್ತು . ಅಲ್ಲಿನ ಗಾದೆಗಳು ಆಡುಮಾತುಗಳನ್ನ ಮಾತಿನ ಮಧ್ಯೆ ಉದಾಹರಿಸುವ ಮಟ್ಟಕ್ಕೆ ಅವರ ಸಂಸ್ಕಾರದಲ್ಲಿ ಒಂದಾಗಿ ಹೋಗಿದ್ದೆ . ಅವರಿಗೆ ತಿಂಗಳ ಕೆಳಗೆ ಮ್ಯಾಡ್ರಿಡ್’ನ ಮ್ಯೂಸಿಕ್ ಕಾನ್ಸರ್ಟ್’ನಲ್ಲಿ ಹೀಗೆ ಕಾಲ್ತುಳಿತದಲ್ಲಿ ೫/೬ ಜನ ಸತ್ತದ್ದನ್ನೆ ಉದಾಹರಿಸಿ ಹೇಳಿದೆ. Cada uno habla de la feria segun le va en ella. ( ಕಾದ ಉನೊ ಹಬ್ಲಾ ದೇ ಲ ಫೆರಿಯ ಸೆಗುನ್ ಲೇ ವ ಇನ್ ಯೆಯ್ಯಾ ) . ನನ್ನ ಸ್ಪಾನಿಷ್ ಮಿತ್ರರು ಸುಮ್ಮನಾದರು . ಈ ಗಾದೆಯ ಅರ್ಥ ಇಷ್ಟೇ ಪ್ರತಿಯೊಬ್ಬರೂ ತಾವು ಕಂಡ ಜಾತ್ರೆಯ ಚಿತ್ರಣ ತಮಗೆ ಕಂಡಂತೆ ಚಿತ್ರಿಸುತ್ತಾರೆ ಎನ್ನುವುದು . ಎಷ್ಟು ನಿಜ ಅಲ್ವಾ? ನಮ್ಮ ಅರ್ಥಕ್ಕೆ ನಮ್ಮ ಅನುಭವಕ್ಕೆ ದಕ್ಕಿದ್ದರ ಬಗ್ಗೆ ನಾವು ಬರೆಯುತ್ತೇವೆ , ಮಾತನಾಡುತ್ತೇವೆ . ವಸ್ತುಸ್ಥಿತಿ ಅದಕ್ಕಿಂತ ಭಿನ್ನವಿರಬಹುದಲ್ಲ ?
ನಮ್ಮಲ್ಲಿ ಇದನ್ನ ಅವರವರ ಭಾವನೆ ಅವರವರ ಭಕುತಿ ಎಂದರು . ನಮ್ಮ ಹಿರಿಯರ ವಿಶಾಲ ಮನೋಭಾವನೆ ಎಲ್ಲರ ಭಾವನೆಯನ್ನ, ವಿಚಾರವನ್ನ ಗೌರವಿಸುವ, ನಮ್ಮ ಸಂಸ್ಕಾರವನ್ನ ಈ ಆಡುಮಾತು ನಮಗೆ ತಿಳಿಸುತ್ತದೆ . ಜೊತೆಗೆ ನಾವು ಈಗೆಷ್ಟು ಸಂಕುಚಿತವಾಗಿಬಿಟ್ಟಿದ್ದೇವೆ ಎನ್ನುವುದನ್ನ ಅವಲೋಕಿಸಿಕೊಳ್ಳಲು ಕೂಡ ಪ್ರೇರೇಪಿಸುತ್ತದೆ .
ಇಂಗ್ಲಿಷ್ ಭಾಷಿಕರು Everyone sees things from his / her own point of view. ಎನ್ನುತ್ತಾರೆ . ಜಗತ್ತಿನೆಲ್ಲೆಡೆ ಜನ ತಮ್ಮ ಮೂಗಿನ ನೇರಕ್ಕೆ ಮಾತನಾಡುವುದು ನಗ್ನಸತ್ಯ ಎನ್ನುವುದು ಇದರಿಂದ ತಿಳಿಯುತ್ತದೆ .
ದೇಶ, ಭಾಷೆ, ಬಣ್ಣ , ಬದಲಾಗಬಹುದು ಆದರೆ ಮನುಷ್ಯನ ಮೂಲ ಒಂದೇ , ದೇವರು ಕರುಣಿಸಿರುವ ಸಮಯವನ್ನು ಕಳೆಯಲು ನಾನಾ ಆಟ.ಅವರವರ ಭಾವನೆ ಅವರವರ ಭಕ್ತಿ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
cada uno : ಪ್ರತಿಯೋಬ್ಬ ಎನ್ನುವುದು ಅರ್ಥ . ಕಾದ ಉನೊ ಉಚ್ಚಾರಣೆ
habla : ಮಾತನಾಡು ., ಮಾತು ಎನ್ನುವ ಅರ್ಥ ಕೊಡುತ್ತದೆ . ಹಬ್ಲಾ ಎನ್ನುವುದು ಉಚ್ಚಾರಣೆ
De la feria : ಜಾತ್ರೆಯ ಬಗ್ಗೆ ಎನ್ನುವುದು ಅರ್ಥ . ದೇ ಲ ಫೆರಿಯ ಎನ್ನುವುದು ಉಚ್ಚಾರಣೆ .
Segun le va en ella : ಅವರಗನಿಸಿದಂತೆ , ಅವರು ಕಂಡಂತೆ ., ಅವರ ಭಾವಕ್ಕೆ ಎನ್ನುವ ಅರ್ಥ ಸೆಗುನ್ ಲೇ ವ ಯೆಯ್ಯಾ ಎನ್ನುವುದು ಉಚ್ಚಾರಣೆ . ಗಮನಿಸಿ ಎರಡು ಎಲ್ ಗಳು ಸ್ಪಾನಿಷ್’ನಲ್ಲಿಯ ಎನ್ನುವ ಉಚ್ಚಾರಣೆ ಪಡೆದುಕೊಳ್ಳುತ್ತದೆ .
Facebook ಕಾಮೆಂಟ್ಸ್