ಸ್ಪ್ಯಾನಿಷ್ ಗಾದೆಗಳು

ಅವರವರ ಭಾವ .. ಅವರವರ ಭಕುತಿ !

ನಮ್ಮಲ್ಲಿ ಮಾತ್ರ ಹೀಗೆ ಅಂತ ಹೇಳ್ತಿದೀನಿ ಅಂದ್ಕೋಬೇಡಿ .., ಜಗತ್ತಿನ ಎಲ್ಲಾ ಕಡೆ ಸೇಮ್ . ವಿವಾದ ಹೆಚ್ಚು ಜನರನ್ನ ಸೆಳೆಯುತ್ತೆ . ಒಂದೊಳ್ಳೆ ಮೆಸೇಜ್,ಒಂದೊಳ್ಳೆ ಜೋಕ್ ಕೊಳ್ಳುವರಿಲ್ಲದೆ ಕೊಳೆತು ಹೋಗುತ್ತೆ . ಒಂದೊಳ್ಳೆ ಸಾಹಿತ್ಯದ ಪುಸ್ತಕ ನಲವತ್ತು ಪರ್ಸೆಂಟ್ ಡಿಸ್ಕೌಂಟ್’ನಲ್ಲಿ ಮಾರಬೇಕು (ಭೈರಪ್ಪ ಅವರ ಕೃತಿ ಹೊರತುಪಡಿಸಿ ) ಅಶ್ಲೀಲ ಸಾಹಿತ್ಯವನ್ನು ಹುಡುಕಿಕೊಂಡು ಹೋಗಿಕೊಳ್ಳುತ್ತಾರೆ . ಒಂದು ಹಳೆ ಕತೆ ಯಾರೋ ಹೇಳಿದ್ದು ಹಾಲನ್ನ ಮನೆ ಬಾಗಿಲಿಗೆ ತಲುಪಿಸುತ್ತಾರೆ . ಅಲ್ಕೊಹಾಲನ್ನ ಹುಡುಕಿಕೊಂಡು ಹೋಗಿ ಕೊಂಡು ಕುಡಿಯುತ್ತಾರೆ ಅಂತ . ನಮ್ಮಲ್ಲಿ ನಿಜವಾಗಿ ಚರ್ಚೆಯಾಗಬೇಕಾದ ಸಮಸ್ಯೆ ಬೆಟ್ಟದಷ್ಟಿದೆ ಅವಕ್ಕೆಲ್ಲಾ ಉತ್ತರ ಹುಡುಕಬೇಕಾದ ದರ್ದು ಯಾರಿಗೂ ಇಲ್ಲ

ಕುಂಭಮೇಳದಲ್ಲಿ ಸತ್ತರೆ ಅದು ತೃತೀಯ ವಿಶ್ವ ,ಡಿಸ್ಕೋ ಥೆಕ್’ನಲ್ಲಿ ಕಾಲ್ತುಳಿತಕ್ಕೆ ಸಿಕ್ಕು  ಸತ್ತರೆ ಅದು ಮುಂದುವರಿದ ವಿಶ್ವ ,ಮೊದಲನೆಯವರನ್ನು ಮೂರ್ಖರಂತೆ ಚಿತ್ರಿಸಿ , ಎರಡನೆಯವರನ್ನು ನವಯುಗದ ನಾಗರೀಕ ಎಂದು ತೋರಿಸುವ , ಬರೆಯುವ ಜನಕ್ಕೆ ಬುದ್ದಿ ಹೇಳುವುದು ಹೇಗೆ?, ಅದು ಫೆಬ್ರವರಿ ೨೦೧೧ ರ ಸಮಯ ಬೆಳೆಗ್ಗೆಯಿಂದ ಸ್ಪ್ಯಾನಿಷ್ ಮಿತ್ರರು ನ್ಯೂಸ್ ನೋಡಿ ಒಂದೇ ಸಮ ಏಕೆ ನಿಮ್ಮ ದೇಶ ಹೀಗೆ? ಎಂದು ಕೇಳಲು ಶುರು ಮಾಡಿದರು . ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ನೂರಾರು ಜನ ಸತ್ತದ್ದು ಇಂಟೆರ್ನ್ಯಾಷನಲ್ ನ್ಯೂಸ್ ಆಗಿತ್ತು . ಈ ಸಮಯಕ್ಕಾಗಲೇ ನನ್ನ ಸ್ಪಾನಿಷ್ ಭಾಷೆಯ ಗ್ರಹಿಕೆ ಮಜಬೂತಾಗಿತ್ತು . ಅಲ್ಲಿನ ಗಾದೆಗಳು ಆಡುಮಾತುಗಳನ್ನ ಮಾತಿನ ಮಧ್ಯೆ ಉದಾಹರಿಸುವ ಮಟ್ಟಕ್ಕೆ ಅವರ ಸಂಸ್ಕಾರದಲ್ಲಿ ಒಂದಾಗಿ ಹೋಗಿದ್ದೆ . ಅವರಿಗೆ  ತಿಂಗಳ ಕೆಳಗೆ ಮ್ಯಾಡ್ರಿಡ್’ನ ಮ್ಯೂಸಿಕ್ ಕಾನ್ಸರ್ಟ್’ನಲ್ಲಿ ಹೀಗೆ ಕಾಲ್ತುಳಿತದಲ್ಲಿ ೫/೬ ಜನ ಸತ್ತದ್ದನ್ನೆ   ಉದಾಹರಿಸಿ  ಹೇಳಿದೆ. Cada uno habla de la feria segun le va en ella. ( ಕಾದ ಉನೊ ಹಬ್ಲಾ ದೇ ಲ ಫೆರಿಯ ಸೆಗುನ್ ಲೇ ವ ಇನ್ ಯೆಯ್ಯಾ ) . ನನ್ನ ಸ್ಪಾನಿಷ್ ಮಿತ್ರರು ಸುಮ್ಮನಾದರು . ಈ ಗಾದೆಯ ಅರ್ಥ ಇಷ್ಟೇ ಪ್ರತಿಯೊಬ್ಬರೂ ತಾವು ಕಂಡ ಜಾತ್ರೆಯ ಚಿತ್ರಣ ತಮಗೆ ಕಂಡಂತೆ ಚಿತ್ರಿಸುತ್ತಾರೆ ಎನ್ನುವುದು . ಎಷ್ಟು ನಿಜ ಅಲ್ವಾ? ನಮ್ಮ ಅರ್ಥಕ್ಕೆ ನಮ್ಮ ಅನುಭವಕ್ಕೆ ದಕ್ಕಿದ್ದರ ಬಗ್ಗೆ ನಾವು ಬರೆಯುತ್ತೇವೆ , ಮಾತನಾಡುತ್ತೇವೆ . ವಸ್ತುಸ್ಥಿತಿ ಅದಕ್ಕಿಂತ ಭಿನ್ನವಿರಬಹುದಲ್ಲ ?

ನಮ್ಮಲ್ಲಿ ಇದನ್ನ ಅವರವರ ಭಾವನೆ ಅವರವರ ಭಕುತಿ ಎಂದರು . ನಮ್ಮ ಹಿರಿಯರ ವಿಶಾಲ ಮನೋಭಾವನೆ ಎಲ್ಲರ ಭಾವನೆಯನ್ನ, ವಿಚಾರವನ್ನ ಗೌರವಿಸುವ, ನಮ್ಮ ಸಂಸ್ಕಾರವನ್ನ ಈ ಆಡುಮಾತು ನಮಗೆ ತಿಳಿಸುತ್ತದೆ . ಜೊತೆಗೆ  ನಾವು ಈಗೆಷ್ಟು ಸಂಕುಚಿತವಾಗಿಬಿಟ್ಟಿದ್ದೇವೆ ಎನ್ನುವುದನ್ನ ಅವಲೋಕಿಸಿಕೊಳ್ಳಲು ಕೂಡ ಪ್ರೇರೇಪಿಸುತ್ತದೆ .

ಇಂಗ್ಲಿಷ್ ಭಾಷಿಕರು Everyone sees things from his / her own point of view. ಎನ್ನುತ್ತಾರೆ . ಜಗತ್ತಿನೆಲ್ಲೆಡೆ ಜನ ತಮ್ಮ ಮೂಗಿನ ನೇರಕ್ಕೆ ಮಾತನಾಡುವುದು ನಗ್ನಸತ್ಯ ಎನ್ನುವುದು ಇದರಿಂದ ತಿಳಿಯುತ್ತದೆ .

ದೇಶ, ಭಾಷೆ, ಬಣ್ಣ , ಬದಲಾಗಬಹುದು ಆದರೆ ಮನುಷ್ಯನ ಮೂಲ ಒಂದೇ , ದೇವರು ಕರುಣಿಸಿರುವ ಸಮಯವನ್ನು ಕಳೆಯಲು ನಾನಾ ಆಟ.ಅವರವರ ಭಾವನೆ ಅವರವರ ಭಕ್ತಿ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

cada uno   :    ಪ್ರತಿಯೋಬ್ಬ  ಎನ್ನುವುದು ಅರ್ಥ . ಕಾದ ಉನೊ ಉಚ್ಚಾರಣೆ

habla    :  ಮಾತನಾಡು ., ಮಾತು ಎನ್ನುವ ಅರ್ಥ ಕೊಡುತ್ತದೆ . ಹಬ್ಲಾ ಎನ್ನುವುದು ಉಚ್ಚಾರಣೆ

De la  feria   : ಜಾತ್ರೆಯ ಬಗ್ಗೆ  ಎನ್ನುವುದು ಅರ್ಥ .  ದೇ ಲ ಫೆರಿಯ ಎನ್ನುವುದು ಉಚ್ಚಾರಣೆ .

Segun le va  en ella : ಅವರಗನಿಸಿದಂತೆ , ಅವರು ಕಂಡಂತೆ ., ಅವರ ಭಾವಕ್ಕೆ ಎನ್ನುವ ಅರ್ಥ   ಸೆಗುನ್ ಲೇ ವ ಯೆಯ್ಯಾ ಎನ್ನುವುದು ಉಚ್ಚಾರಣೆ . ಗಮನಿಸಿ ಎರಡು ಎಲ್ ಗಳು ಸ್ಪಾನಿಷ್’ನಲ್ಲಿಯ ಎನ್ನುವ ಉಚ್ಚಾರಣೆ ಪಡೆದುಕೊಳ್ಳುತ್ತದೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!