X

ಅವರು ವಿಜ್ಞಾನಕ್ಕೆ ಅಂಬೆಗಾಲಿಡುವ ಕಾಲಕ್ಕೆ ಇವನು ಶನಿಗ್ರಹದ ಉಪಗ್ರಹಗಳ ಮೇಲೆ ತನ್ನ ದೃಷ್ಟಿಯನ್ನು ಇಟ್ಟಿದ್ದ!

ಸೌರಮಂಡಲ, ಗ್ರಹಗಳ ಚಲನೆ, ಅವುಗಳ ನಡುವಿನ ಅಂತರ, ಚಂದಿರನ ಕಾಂತಿ, ಬೆಳಕಿನ ವೇಗ, ಭೂಮಿಯ ಸುತ್ತಳತೆ, ಗುರುತ್ವಾಕರ್ಷಣೆ ಮುಂತಾದವುಗಳ ಸಂಶೋಧಕರನ್ನು ಹೆಸರಿಸುತ್ತಾ ಹೋದಂತೆ ಕಲಿಯುಗದ ವಿಜ್ಞಾನದ ಪುಸ್ತಕಗಳನ್ನಷ್ಟೇ ಓದುತ್ತಾ, ಕಲಿಯುತ್ತಾ ಬೆಳೆದ ನಮಗೆ ಬೆಳ್ಳನೆಯ ಕೂದಲಿನ ಬಿಳಿಯ ವಿಜ್ಞಾನಿಗಳೇ ಕಣ್ಣ ಮುಂದೆ ಬರುತ್ತಾರೆಯೇ ವಿನಃ ಆ ಬೆಳ್ಳನೆಯ ಕೂದಲಿನ ಆಯಸ್ಸಿನ ಸಹಸ್ರಾರು ವರ್ಷಗಳ ಹಿಂದೆಯೇ ಇಂತಹ ನೂರಾರು ಸಂಶೋಧನೆಗಳನ್ನೂ, ಸಿದ್ಧಾಂತಗಳನ್ನೂ ಕಂಡುಹಿಡಿದು ಸರ್ವವಲ್ಲಭ ಪಂಡಿತರಾಗಿದ್ದ ನಮ್ಮ ದೇಶೀ ಮಹಾನುಭಾವರು ಅರಿವಿಗೆ ಬಾರರು. ತಿಳಿಸುವವರೇ ತಿಳಿಯದ ಮೇಲೆ ಇನ್ನು ಕಲಿಯುವವರು ಹೇಗೆ ಕಲಿವರು? ಇಂದು ಜಯಂತಿ, ಆಚರಣೆ, ಕಸಕಡ್ಡಿ ಎನ್ನುತ್ತಾ ಅತ್ತ ಆರಕ್ಕೂ ಏರದ ಇತ್ತ ಮೂರಕ್ಕೂ ಇಳಿಯದ ವಿಚಾರಗಳ ಬಗೆಯುವಿಕೆಯನ್ನೇ ತಿರುಚಿರುವ ಇತಿಹಾಸಕ್ಕೆ ಸಲ್ಲಿಸಬಹುದಾದ ನ್ಯಾಯವೆಂದುಕೊಂಡು ಬೊಬ್ಬೆಯೊಡೆಯುವವರಿಗೆ ಇತಿಹಾಸದ ಕಾಲಘಟ್ಟದ ಇಂತಹ ಮಹಾನ್ ತಿರುಚುವಿಕೆಗಳು ಕಣ್ಣಿಗೆ ಕಾಣವೇ? ಜಗತ್ತಿನ ಅತಿದೊಡ್ಡ ವಿಶ್ವವಿದ್ಯಾಲಯವೆನಿಸಿಕೊಂಡಿದ್ದ ನಳಂದ ವಿಶ್ವವಿದ್ಯಾಲಯವನ್ನು ಹಾಳುಗೆಡವಿ ಅಲ್ಲಿದ್ದ ನೂರಾರು ವಿಶ್ವಪ್ರಸಿದ್ಧ ಸಂಶೋಧನಾ ಗ್ರಂಥಗಳನ್ನೂ, ಖಗೋಳ ವೀಕ್ಷಣಾಲಯವನ್ನೂ ಸುಟ್ಟು ಕರಕಲಾಗುವಂತೆ ಮಾಡಿದ ರಾಜರುಗಳಾಗಲಿ,  ವಿಮಾನದಿಂದ ಹಿಡಿದು ಬೆಳಕಿನ ವೇಗದ ಬಗೆಗೂ ರಚಿಸಿದ ದೇಶಿಯ ಸಿದ್ಧಾಂತಗಳನ್ನು ಮೂಲೆಗುಂಪಾಗಿಸಿ  ಪರಕೀಯರೇ ಪರಮಜಾಣರು ಎಂಬಂತೆ ಬಿಂಬಿಸಿದ ಇತಿಹಾಸಕಾರರಾಗಲಿ, ಸುಮಾರು ಎರಡೂವರೆ ಶತಮಾನಗಳಿಗೂ ಹೆಚ್ಚಿನ ಕಾಲ ಭಾರತವನ್ನು ದೋಚಿ, ಹಸಿವೆಯಲ್ಲೂ ಒಂದಿಷ್ಟೂ ಆಹಾರವನ್ನು ಕೊಡಲೊಪ್ಪದೆ ನಲ್ವತ್ತು ಲಕ್ಷ ಭಾರತೀಯರ ಮರಣ ಮೃದಂಗಕ್ಕೆ ಇಂಬುಕೊಟ್ಟ (1943ರ ಬೆಂಗಾಲದ ಕ್ಷಾಮ) ಬಿಳಿಯರ ವಿಕೃತ ಕಾರ್ಯಗಳಾಗಲಿ ಇವುಗಳನ್ನೆಲ್ಲ ಪ್ರಶ್ನಿಸುವವರ್ಯಾರು? ಇಂತಹ ವಿಷಯಗಳಿಗೂ ನಾವುಗಳು ಬೀದಿಗೆ ಬಂದು ಹೋರಾಟ ಮಾಡಬಾರದೇಕೆ? ನ್ಯಾಯ ಅಥವಾ ಪರಿಹಾರವನ್ನು ಕೊಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಕೇಳಬಾರದೇಕೆ?

ಅದೇನೇ ಇರಲಿ ಸದ್ಯಕ್ಕಂತೂ ಆಗದ ಕಾರ್ಯಗಳ ಬಗ್ಗೆ ಚಿಂತಿಸುವ ಬದಲು ಮೂಲವಿಚಾರದ ಬಗೆಗೆ ಗಮನವನ್ನು ಹರಿಸೋಣ. ಸಹಸ್ರವರ್ಷಗಳ ಮೊದಲೇ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಬಲ್ಲ ಕ್ಷಮತೆಯನ್ನು ಹೊಂದಿದ್ದ ಭಾರತೀಯರು ನಂತರ ಬಂದ ಸಹಸ್ರಾರು ವರ್ಷಗಳವರೆಗೂ ಇನ್ನೂ ಏನೆಲ್ಲಾ ಸಂಶೋಧನೆ, ಆವಿಷ್ಕಾರಗಳನ್ನು ಮಾಡಿರಬಹುದು ಎಂದು ಯೋಚಿಸುತ್ತಾ ಹೋದಂತೆ ನಮ್ಮಲ್ಲಿ ಕುತೂಹಲ ಬೆಟ್ಟದಷ್ಟಾಗುವುದಂತೂ ಸುಳ್ಳಲ್ಲ. ಅಂತಹ ಅದ್ಭುತ ಹೆಮ್ಮರವನ್ನು ಬಡಿದು, ಕಡಿದು ಕೊನೆಗೆ ಕಟ್ಟಿಗೆಯ ಕೋಲಿನಂತೆ ಮಾಡಿ ದಂಡೆತ್ತಿ ಬಂಡ ಮೊಂಡ ಜನಗಳ ಮುಂದೆ ಹಾವಾಡಿಗರು ಎಂದೆನಿಸಿಕೊಂಡೆವೆಂದರೆ ಅದು ನಮ್ಮೆಲ್ಲರ ವಿಪರ್ಯಾಸ. ಅದು ದೇಶವನ್ನಾಳುವ ರಾಜ ಮಾರನೇ ದಿನ ಕಸಗುಡಿಸುವ ಕೂಲಿಯವನಾದಂತೆ! ಸಿಹಿಯ ಕಲ್ಪನೆಯಿದ್ದರೂ ಅನುಭವಿಸಲು ನಾಲಿಗೆಯಿಲ್ಲದಂತೆ ಅಂದು ನಮ್ಮ ಇತಿಹಾಸದ ದಿನಗಳು ಮಾರ್ಪಾಡಾದವು!  

ಆದರೆ ಇಂದಿಗೂ ಸಹ ಅದೇ ಇತಿಹಾಸವನ್ನು ಕೆದಕಿದರೆ, ಭಾರತೀಯ ಪಂಡಿತರ ಬದುಕುಳಿದ ಕೆಲವೇ ಕೆಲವು ಬರಹಗಳನ್ನು ಗಮನಿಸಿದರೆ ವಿಶ್ವದ ಏಳು ಅದ್ಭುತಗಳಿಗೆ ಇಂತಹ ನೂರಾರು ವಿಷಯಗಳು, ಪಂಡಿತರು ಸೇರಬಹುದೇನೋ?!

ಆರ್ಯಭಟ ಈ ಹೆಸರನ್ನು ಕೇಳದಿರುವವರು ಇರಬಹುದೇ? ಅದೇ, ನಮ್ಮ ದೇಶ ಮೊದಲು ಹಾರಿಸಿದ ಉಪಗ್ರಹದ ಹೆಸರು, 1975ರಲ್ಲಿ  ಎನ್ನುವವರನ್ನು ಕೇಳಬಹುದು. ಅಷ್ಟೇ ಅಲ್ಲ, ಸೊನ್ನೆಯನ್ನು ಕಂಡುಹಿಡಿದವನೂ ಅವನೇ ಅಂತೇ?! ಎಂದು ಮತ್ತೊಬ್ಬ ಹೇಳಿದರೆ ಇತ್ತಕಡೆ ಗೊಳ್ಳೆಂದು ನಗುವವರು ಹಲವರು. ಸೊನ್ನೆ ಎಂದರೆ ಅಷ್ಟು ತಿರಸ್ಕಾರ ಇರುವಂತವರು. ಅಲ್ಲಿಗೆ ಆರ್ಯಭಟನ ಬಗೆಗಿನ ಸಾಧನೆಯಷ್ಟನ್ನೂ ಕಲಿತು ಬೀಗಿದಂತೆಯೇ ಸರಿ. ಸುಮಾರು ಹದಿನೈದು ಶತಮಾನಗಳ ಮೊದಲೇ ಶನಿಗ್ರಹದ ಸುತ್ತ ಉಪಗ್ರಹಗಳು ಸುತ್ತುತಿವೆ ಎಂಬುದನ್ನು ಖಚಿತವಾಗಿ ಹೇಳಬಲ್ಲ, ಭೂಮಿಯ ವಿಸ್ತೀರ್ಣವನ್ನು ಅಷ್ಟೇ ಏಕೆ ಯಾವುದೇ ವೃತ್ತದ/ಗೋಲದ ಪರಿಧಿಯನ್ನು ಕಂಡುಹಿಯಲು ಪೈಯ ನಿಖರ ಮೌಲ್ಯವನ್ನು ಗೊತ್ತುಮಾಡಿದ, ಸಂಖ್ಯಾಶಾಸ್ತ್ರಕ್ಕೆ ಶೂನ್ಯವನ್ನು ಪರಿಚಯಿಸಿದ (ಶೂನ್ಯದ ಕಲ್ಪನೆ ಮೊದಲೇ ಇದ್ದರೂ ಅದನ್ನು ಅಂಕೆಗಳ ಮೂಲಕ ಬಳಸಲು ಮೊದಲು ಮಾಡಿದ್ದು ಮಾತ್ರ ಆರ್ಯಭಟ), ವರ್ಷದ ದಿನಗಳನ್ನು ನಿಖರವಾಗಿ ಹೇಳಿದ್ದ,  ಗುರುತ್ವಾಕರ್ಷಣೆಯ ಬಗೆಗೆ ಬರೆದಿದ್ದ(!), ಸೂರ್ಯನ ಸುತ್ತ ಗ್ರಹಗಳ ಚಲನೆಯನ್ನು ವಿವರಿಸಿದ್ದ, ಸೂರ್ಯ ಹಾಗು ಇತರ ಗ್ರಹಗಳ ನಡುವಿನ  ಅಂತರವನ್ನು ಕಂಡುಹಿಡಿದಿದ್ದ. ಭೂಮಿ ತನ್ನ ಅಕ್ಷದ ಮೇಲೆಯೇ ಸುತ್ತುತ್ತದೆ ಎಂದು ಹೇಳಿ ಆಗಿನ ಕಾಲಕ್ಕೆ ಕೇಳಿದವರನ್ನು ದಂಗು ಬಡಿಸುತ್ತಿದ್ದ ಒಬ್ಬನಿದ್ದನೆಂದರೆ ಅದು ಆರ್ಯಭಟ. ಆತನ ಜೀವಿತಾವಧಿಯ ಸಾವಿರಾರು  ವರ್ಷಗಳ ನಂತರ ಕಂಡುಹಿಡಿದೋ ಅಥವಾ ಕಾಪಿ ಹೊಡೆದೋ ಇದು ನನ್ನದು ಎಂದು ವಿಶ್ವವನ್ನೇ ಗೆದ್ದವರಂತೆ ಆಡುವವರು ಆರ್ಯಭಟನ ಹೆಸರನ್ನು ಕೇಳಿಯೂ ಕೇಳದವರಂತೆ ಇದ್ದರೆನ್ನಬಹುದು!

ಕ್ರಿಸ್ತಶಕ ಸುಮಾರು 476 ರಲ್ಲಿ ಜನಿಸಿರಬಹುದಾದ ಈತನ ಜನ್ಮ ಸ್ಥಳ ಈಗಿನ ಬಿಹಾರ ರಾಜ್ಯದ ಪಟ್ನಾ ಎಂದು ಅಂದಾಜಿಸಲಾಗಿದೆ. ತನ್ನ 24 ನೇ ವಯಸ್ಸಿಗೇ ಆರ್ಯಭಟೀಯಎಂಬ ಖಗೋಳ ಆಧ್ಯಯನ ಗ್ರಂಥವನ್ನು ಈತ ಬರೆಯುತ್ತಾನೆ. ಸುಮಾರು 121 ಗದ್ಯಮಾಲೆಗಳಿರುವ ಈ ಮಹಾನ್ ಪುಸ್ತಕ  ಕಾಲವನ್ನು ಅಳೆಯುವ ಪ್ರಮಾಣಗಳು (ಕಲ್ಪ, ಮನ್ವಂತರ, ಯುಗ), ಕ್ಷೇತ್ರಗಣಿತ,  ಅಂಕಗಣಿತ ಹಾಗೂ ರೇಖಾಗಣಿತದ  ಪ್ರಗತಿ (Progression), ಗ್ರಹಗಳ ಗತಿ ಹಾಗು ಸ್ಥಾನಪಲ್ಲಟ, ಗ್ರಹಣ, ಸಮಭಾಜಕ ವೃತ್ತ, ಭೂಮಿಯ ಆಕಾರ ಹೀಗೆ ಖಗೋಳಗಣಿತದ ವಿಸ್ತೃತ ರೂಪವನ್ನು ಪ್ರಸ್ತುತ ಪಡಿಸುತ್ತಾ ಸಾಗುತ್ತದೆ. ಅಷ್ಟೇ ಅಲ್ಲದೆ ತ್ರಿಕೋನದ ವಿಸ್ತೀರ್ಣವನ್ನು ಕಂಡುಹಿಡಿಯುವ ಸೂತ್ರವನ್ನು, ಸೈನ್ ವೇವ್’ಗಳ ಬಗ್ಗೆ, ಭೂಮಿ ತನ್ನ ಅಕ್ಷದ ಸುತ್ತ ಸುತ್ತುವಿಕೆ, ಗ್ರಹಗಳ ಅಂಡಾಕಾರದ (ಎಲಿಪ್ಸ್)  ರಚನೆ ಹೀಗೆ ಕೇಳಿದವನು ನಂಬಲಸಾಧ್ಯವಾದಂತಹ ಸಂಶೋಧನೆಗಳನ್ನು ಆತ ಅಂದಿನ ಕಾಲಕ್ಕ ರಚಿಸಿ, ಸಾಧಿಸಿ ತೋರಿಸಿದ್ದ.

ಯಂತ್ರಗಳ ಬಗೆಗೆ ಅತೀವ ಆಸಕ್ತಿ ಹಾಗು ದೂರದೃಷ್ಟಿಯನ್ನು ಹೊಂದಿದ್ದ ಆರ್ಯಭಟ ಅವುಗಳ ಮಹತ್ತ್ವವನ್ನೂ ಆಗಿನ ಕಾಲಕ್ಕೆ ಬಹುಮಟ್ಟಿಗೆ ಅರಿತಿರುತ್ತಾನೆ. ಇಲ್ಲವಾದರೆ ಅದೆಷ್ಟೋ ಜ್ಯೋತಿರ್ವರ್ಷಗಳ ದೂರದ ಗ್ರಹಗಳಾಗಲಿ, ಅವುಗಳ ಉಪಗ್ರಹಗಳ ಬೆಗೆಗಾಗಲಿ ಕನಸು ಬಿದ್ದವನಂತೆ ಕರಾರುವಕ್ಕಾಗಿ ಹೇಗೆ ಹೇಳುವುದು? (ನಳಂದ ವಿಶ್ವವಿದ್ಯಾಲಯದಲ್ಲಿದ್ದ ಖಗೋಳ ವೀಕ್ಷಣಾಲಯಗಳನ್ನೂ ಇಲ್ಲಿ ಸ್ಮರಿಸಬಹುದು.) ಆದರೆ ವೀಕ್ಷಣಾಲಯವೊಂದು ಇದ್ದ ಮಾತ್ರಕ್ಕೆ, ದೂರದ ಗ್ರಹಗಳನ್ನು ನೋಡಿದ ಮಾತ್ರಕ್ಕೆ ಅವುಗಳ ಅಂತರ, ಗತಿ, ಆಕಾರ ಇವುಗಳನ್ನೆಲ್ಲ ಕರಾರುವಕ್ಕಾಗಿ‘  ಅದೂ ಸಹ ಇಂದಿನ  ಆಧುನಿಕ ಯಂತ್ರಗಳಿಗೆ ಸರಿಸಮಾನವಾಗುವಂತೆ ಹೇಳಲು ಸಾಧ್ಯವಾದದ್ದು ಹೇಗೆ ಎಂಬುದು ಮಾತ್ರ ಕುತೂಹಲದ ಸಂಗತಿ. ಆರ್ಯಭಟನ ಅಂತಹ ಕೆಲವು ಸಂಶೋಧನೆಗಳನ್ನು ಇತ್ತೀಚಿನ ಅಂಕಿ ಅಂಶಗಳೊಟ್ಟಿಗೆ ತಾಳೆ ಹಾಕಿ ನೋಡಿದರೆ ಈ ಕುತೂಹಲ ದ್ವಿಗುಣವಾಗುವುದಂತೂ ಸುಳ್ಳಲ್ಲ!

ಆರ್ಯಭಟನ  ಅಂಕಿಅಂಶಗಳು ಪ್ರಸ್ತುತ ಅಂಕಿಅಂಶಗಳು
ಭೂಮಿಯ ಸುತ್ತಳತೆ 39,968.05 KMs 40,075.01 KMs
ವಾಯುಮಂಡಲದ  ಎತ್ತರ 80 KMs 80 KMs*
ಸೂರ್ಯನಿಂದ ಭುದ ಗ್ರಹಕ್ಕಿರುವ ದೂರ 0.375 AU* 0.387 AU
ಸೂರ್ಯನಿಂದ ಶುಕ್ರ 0.725 AU 0.723 AU
ಸೂರ್ಯನಿಂದ  ಮಂಗಳ   1.538 AU 1.523 AU
ಸೂರ್ಯನಿಂದ  ಗುರು   4.16 AU 4.20 AU
ಸೂರ್ಯನಿಂದ  ಶನಿ 9.41 AU 9.54 AU
ವರ್ಷದ ಒಟ್ಟು ದಿನಗಳು 365.25868 Days 365.25636 Days
ಚಂದಿರ ಭೂಮಿಯ ಸುತ್ತ ಸುತ್ತಲು ತೆಗೆಯುವ ಸಮಯ 27.32167 Days 27.32166 Days

* ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ವಾಯುಮಂಡಲದ  ಎತ್ತರ 80 ಕಿಲೋಮೀಟರ್ಗಿಂತಲೂ ಹೆಚ್ಚಿದೆ ಆದರೆ ಭಾಗಶಃ ವಾಯುಮಂಡಲದ ಎತ್ತರ ಭೂಮಿಯ ಮೇಲ್ಮೈಯ 80 ಕಿಲೋಮಿಟರ್ನೊಳಗೆಯೇ ಬರುತ್ತದೆ. ಉಳಿದಂತೆ ಬರುವುದು ಅದರ ಅಳಿದುಳಿದ ಅಂಶ ಮಾತ್ರ.

*AU (Astronomical Unit) : ಭೂಮಿ ಮತ್ತು ಸೂರ್ಯನ ನಡುವಿರುವ ಸರಾಸರಿ ದೂರ – 150 ಮಿಲಿಯನ್ ಕಿಲೋಮೀಟರ್ ಗಳು.

ಇಂದು ಕಾಪರ್ನಿಕಸ್, ನ್ಯೂಟನ್, ಜೋಸೆಫ್ ಪೋರಿಯರ್, ಕ್ರಿಸ್ಟಿಯನ್ ಯುಗೇನ್ ಎಂಬ ಹಲವು ಆಧುನಿಕ ವಿಜ್ಞಾನಿಗಳ ಹೆಸರುಗಳನ್ನೇ ಅರೆಬರೆಯಾಗಿ ತೊದಲು-ತೊದಲು ಬಾಯಿಪಾಠ ಮಾಡಿ ಕಲಿಯುವ ಪೀಳಿಗೆಗೆ ಇವರೆಲ್ಲರ ಹೆಸರುಗಳನ್ನೂ ಸಮೀಕರಿಸಿ ಆರ್ಯಭಟನೆಂಬೋದು  ಹೆಸರನ್ನು ಆ ಸ್ಥಾನದಲ್ಲಿ ಇರಿಸಿ ತೋರಿಸಬೇಕಿದೆ. ಇತಿಹಾಸದ ಪುಟಗಳಲ್ಲಿ ಇಂತಹ ಇನ್ನೂ ಹಲವು ಮಹಾನುಭಾವರಿಗೂ ಅವರವರ ಮಹಾನತೆಗನುಗುಣವಾಗಿ ಸ್ಥಾನ ದೊರಕಿಸಬೇಕಿದೆ. ಆದರೆ ದಶಕಗಳಿಂದ ಬೆಳೆಸಿಕೊಂಡು ಬಂದಿರುವ ಚಾಳಿಗೆ ಲಗಾಮು ಹಾಕುವವರ್ಯಾರು?  ವೇದ ಉಪನಿಷತ್ತುಗಳು ಭಾರತದ ಬಹುಮುಖ್ಯ ಹಳೆಯ ಗ್ರಂಥಗಳು ಎಂದಷ್ಟೇ ಅಲ್ಲದೆ ಅವುಗಳು ವೈಚಾರಿಕತೆ ಹಾಗು ವೈಜ್ಞಾನಿಕತೆಯ ಅಕ್ಷಯ ಪಾತ್ರೆಗಳಂತೆ ಎಂಬುದನ್ನು ಅರಿತುತಿಳಿಸುವವರ್ಯಾರು? ಇಂದು ಅಂತರಿಕ್ಷ, ಖಗೋಳಶಾಸ್ತ್ರ ಶಾಸ್ತ್ರವೆಂದರೆ ದೊಡ್ಡ ದೊಡ್ಡ ಕಟ್ಟಡಗಳ ಒಳಗೆ ಬಿಳಿಯ ಬಟ್ಟೆಗಳನ್ನು ಧರಿಸಿಕೊಂಡು ರಾಕೆಟ್, ಸ್ಯಾಟಲೈಟ್, ಸ್ಪೇಸ್ ಸ್ಟೇಷನ್ ಎಂಬ ಆಧುನಿಕ ತಂತ್ರಜ್ಞಾನಗಳೊಟ್ಟಿಗೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ವಿಜ್ಞಾನಿಗಳ ಚಮತ್ಕಾರಗಳು ಎಂಬಂತೆ ಅರಿತಿರುವ ನಮ್ಮಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ದೇಶದ ಸುಂದರ ನಿರ್ಮಲ ಪರಿಸರದಲ್ಲಿ, ಹಕ್ಕಿ ಪಕ್ಷಿಗಳ ಮಧುರ ಸ್ವರಗಳ ನಡುವೆಯೇ ಆಧುನಿಕ ಜಗತ್ತು ಮಾರ್ವೆಲಸ್ಎಂಬುವ ಅದೆಷ್ಟೋ ಸಂಶೋಧನೆಗಳನ್ನು ಮಾಡಿ ಜಗತ್ತನೇ ನಿಬ್ಬೆರಗಾಗಿಸಿದ ಆರ್ಯಭಟನೆಂಬ ಹೆಸರು ಮರೆಯಾಗತೊಡಗಿದೆ. ಹಿರಿಯರ ಜ್ಞಾನದಿಂದಷ್ಟೇ ಅಲ್ಲದೆ ಕಿರಿಯರ ಪಠ್ಯ ಪುಸ್ತಕಗಳಿಂದಲೂ! ಸಂಪೂರ್ಣವಾಗಿ ಮರೆಯಾಗುವ ಮೊದಲು ಅದರ ಉಳಿವಿಕೆ ಹಾಗು ಬೆಳೆಯುವಿಕೆಯ ಬಗ್ಗೆ ಜಾಗೃತರಾಗಬೇಕಿದೆ. ದೇಶೀ ಸಾಧನೆಗಳ ಇಂತಹ ಹಲವು ಸಾಧಕರನ್ನು ಪರಿಚಯಿಸಿಕೊಳ್ಳಬೇಕಿದೆ.

ಮುಂದಿನ ಸಂಚಿಕೆಯಲ್ಲಿ ಇಂತಹ ಮಗದೊಂದು  ದೇಶೀ ವಿಜ್ಞಾನಿ ಹಾಗು ಅವನ ಸಂಶೋಧನೆಗಳೊಟ್ಟಿಗೆ ಭೇಟಿಯಾಗೋಣ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post