ನಮ್ಮ ರಾಜಕೀಯ ನಾಯಕರು ಅಗತ್ಯಕ್ಕೆ ತಕ್ಕಂತೆ ಜಡ್ಜ್, ವೈದ್ಯಾಧಿಕಾರಿ, ಪೊಲೀಸ್ ಹೀಗೆ ಬೇರೆ ರೀತಿಯಲ್ಲಿ ವರ್ತಿಸುವುದಿದೆ. ಈ ನಾಯಕರು ಒಮ್ಮೊಮ್ಮೆ ಸಂಶೋಧಕರೂ ಕೂಡಾ ಆಗುತ್ತಾರೆ. ನಾಯಕರೋರ್ವರ ಅಂತಹದ್ದೊಂದು ಹೇಳಿಕೆಯಿಂದಾಗಿ ನಾಲ್ಕೈದು ದಿನಗಳಿಂದ ನಾಯಿಕೊಡೆಗಳಿಗೆ ಎಲ್ಲಿಲ್ಲದ ಪ್ರಾಧಾನ್ಯತೆ ಬಂದುಬಿಟ್ಟಿದೆ. ಈ ಸಂಬಂಧದ ಒಟ್ಟಾರೆ ಬೆಳವಣಿಗೆಗಳನ್ನು ಸೂಚ್ಯವಾಗಿ ನಾಯಿಕೊಡೆಗೆ ಕೋಡು ಮೂಡಿದೆ ಎಂದು ಹೇಳುವ ಮೂಲಕ ವಿಷದಪಡಿಸಬಹುದು. ಆದರೂ ಇಂಥದ್ದೊಂದು ಚರ್ಚೆ ಹುಟ್ಟಿಕೊಳ್ಳುವ ಪರಿ ಹಾಗೂ ಅಂಥ ಹೇಳಿಕೆಗಳನ್ನು ತೂರಿಬಿಡುವ ವೈಖರಿಯನ್ನು ಗಮನಿಸಿದರೆ ನಿಜಕ್ಕೂ ವಿಷಾದವೆನಿಸುತ್ತದೆ. ಅದನ್ನು ಹೊರತುಪಡಿಸಿದಂತೆ ಈ ನೆಪದಲ್ಲಿ ಅಣಬೆಗಂತೂ ಡಿಮ್ಯಾಂಡೋ ಡಿಮ್ಯಾಂಡು. ಏಕೆಂದರೆ ಅಣಬೆಯು ಏಕಾಏಕಿಯಾಗಿ ಕೈತುಂಬಾ ಹಣವಿದ್ದರಷ್ಟೇ ಕೈಗೆಟುಕಬಲ್ಲ ಅತ್ಯಂತ ದುಬಾರಿ ಬೆಲೆಯ ವಸ್ತುವಾಗಿ ಮಾರ್ಪಟ್ಟಿತಲ್ಲ ಹಾಗಾಗಿ. ಇದರ ಬೆಳೆಗಾರರು ಎಷ್ಟೇ ಪಟ್ಟು ಹಿಡಿದರೂ ಇದೆಲ್ಲಾ ನೆರವೇರುವುದು ಅಸಂಭವವೇ ಆಗಿತ್ತು. ಆದರೆ ಒಂದೇ ಒಂದು ಹೇಳಿಕೆ ಫಟಾಫಟ್ ಅಂತ ಅದರ ನಸೀಬನ್ನೇ ಬದಲಾಯಿಸಿಬಿಟ್ಟಿತು ನೋಡಿ. ಹಾಗಾಗಿ ನಾಯಿಕೊಡೆ ಈಗ ಕೇವಲ ಅಣಬೆ ಅಲ್ಲ ಬದಲಾಗಿ ಅದೀಗ “ಹಣ”ಬೆಯೇ ಸರಿ!!
ನಿಗದಿಗಿಂತ ಹೆಚ್ಚು, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಏನಾದರೂ ಕಂಡುಬಂದರೆ ಅದನ್ನು ಹೋಲಿಸಲು “ನಾಯಿಕೊಡೆಗಳಂತೆ” ಎಂಬ ನುಡಿಗಟ್ಟನ್ನು ಕನ್ನಡದಲ್ಲಿ ಬಳಸುತ್ತಾರೆ. ಆದರೆ ಹಿಂದಿನ ವಾರ ಪೂರ್ತಿ ಈ “ನಾಯಿಕೊಡೆ”ಯ ಬಗ್ಗೆಯೇ ಮಾತು. ಇದರ ಬಗ್ಗೆ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಚರ್ಚೆಗಳು ಹುಟ್ಟಿಕೊಂಡವು. ಮಳೆಗಾಲ ಬಂತೆಂದರೆ ಹೇಗೆ ಕಂಡ ಕಂಡಲ್ಲಿ ಅಣಬೆಗಳು ಮೇಲೇಳುತ್ತವೆಯೋ ಹಾಗೆಯೇ ಸಾಮಾಜಿಕ ಜಾಲತಾಣವೆಂಬ ಕಣದಲ್ಲಿಯೂ ಎಲ್ಲಿ ನೋಡಿದರೂ ಅಣಬೆಯದ್ದೇ ಮಾತುಕಥೆ. ಅಲ್ಪೇಶ್ ಅವರ ಹೇಳಿಕೆಯ ಅನುಸಾರ ಅಣಬೆಗೆ ಸೌಂದರ್ಯವರ್ಧಕದ ಸ್ಥಾನಮಾನ ಸಿಕ್ಕಂತಾಯಿತು. ಇನ್ನು ಅಣಬೆಯನ್ನು ಅಣಕಿಸುತ್ತಿದ್ದವರೆಲ್ಲಾ ಅವರು ಹೇಳಿದ ಅದರ ಬೆಲೆಯನ್ನು ಕೇಳಿ ಹಣೆಯ ಮೇಲೆ ಮೂಡಿದ ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಿದ್ದಾರಷ್ಟೇ. ಯಾವುದೋ ಹಣಾಹಣಿಗೆಂಬಂತೆ ಅಣಬೆಯ ಬಗ್ಗೆ ಆಡಿದ ಒಂದು ಮಾತು, “ಸಾಕಷ್ಟು ಹಣ ಇದ್ದರಷ್ಟೇ ಕೈಗೆಟುಕುವ ಅಣಬೆ” ಎಂಬಷ್ಟರ ಮಟ್ಟಿಗೆ ಅದರ ಮಹತ್ವವನ್ನು ಬದಲಾಯಿಸಿಬಿಟ್ಟಿತಲ್ಲ..?! ಯಾರಲ್ಲಾದರೂ ನಾಯಿಕೊಡೆ ಕೊಡು ಎಂದರೆ “ನಾ ಕೊಡೆ, ಕೊಡೆ” ಎನ್ನುವುದಂತೂ ಖಂಡಿತ, ಏಕೆಂದರೆ ಅದೀಗ ಕೋಟಿ ಬೆಲೆಬಾಳುತ್ತೆ ಸ್ವಾಮಿ. ಅಂತೂ ಇಂತೂ ಅಲ್ಪೇಶ್ ಠಾಕೂರ್ ನೀಡಿದ ಒಂದೇ ಒಂದು ಹೇಳಿಕೆಯಿಂದಾಗಿ ಅಲ್ಪ ಅವಧಿಯಲ್ಲೇ ನಾಯಿಕೊಡೆಗೊಂದು ಪ್ರಾಧಾನ್ಯತೆ ಹಾಗೂ ಜನಪ್ರಿಯತೆ ದೊರಕಿದಂತಾಯಿತು ಎನ್ನುವುದನ್ನು ಮಾತ್ರ ಒಪ್ಪಲೇಬೇಕು.
“ಪ್ರಧಾನಿಯವರು ಅಣಬೆ ತಿಂದು ಬೆಳ್ಳಗಾದರು” ಎಂಬ ಟೀಕೆಯ ರೂಪದ ಹೇಳಿಕೆ ಹೊರಬೀಳುತ್ತಲೇ ಸೌಂದರ್ಯಪ್ರಿಯರ ಗಮನವೆಲ್ಲಾ ಅಣಬೆಯತ್ತ ಹೊರಳಿದೆ. ಜನರನ್ನು ಸೆಳೆಯಲು ಯಾವ್ಯಾವುದೋ ಹಣ್ಣು, ಬೇರು, ನಾರು, ಗಿಡ, ಸೊಪ್ಪುಗಳನ್ನೆಲ್ಲಾ ಉಪಯೋಗಿಸಿ ಕ್ರೀಮ್ ಲೋಷನ್‌ಗಳನ್ನು ತಯಾರಿಸುತ್ತಿರುವ ಕಂಪೆನಿಗಳು ಈಗ ಹೊಸತೊಂದು ಉತ್ಪನ್ನವನ್ನು ತಯಾರಿಸುವ ಅವಸರದಲ್ಲಿರಬಹುದು. ಹೇಳಿಕೆಯ ಪರಿಣಾಮವೋ ಎಂಬಂತೆ ಮಶ್ರೂಮ್ ತೆಗೆದುಕೊಂಡು ಹೋಗುವವರನ್ನು ಅನುಮಾನದಿಂದ ನೋಡುವಂತಾಗಿದೆ. ಯಾರಾದರೂ ಹೇರಳವಾಗಿ ಅಣಬೆಯನ್ನು ಬಳಸುತ್ತಾರೆಂದರೆ ಜನ ಅವರ ಆದಾಯದ ಮೂಲವನ್ನೇ ಶಂಕಿಸಿದರೂ ಶಂಕಿಸಿಯಾರು. ಮುಂದುವರಿದು ಅಂತವರ ಮೇಲೆ ಐಟಿ ದಾಳಿಯಾದರೂ ಅಚ್ಚರಿಪಡಬೇಕಾಗಿಲ್ಲ. ನೂರೋ ಇನ್ನೂರೋ ರುಪಾಯಿಗೆ ಸಿಗುವ ಅಣಬೆಯನ್ನು ತಂದು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಿದ್ದವರೆಲ್ಲಾ ಒಳಗೊಳಗೆ ಅಲ್ಪೇಶ್ ಠಾಕೂರ್‌ನನ್ನು ಶಪಿಸುತ್ತಿರುವುದಂತೂ ಸುಳ್ಳಲ್ಲ. ಈತನ ಈ ಹೇಳಿಕೆಯ ಯಡವಟ್ಟಿನಿಂದಾಗಿ ನೆಮ್ಮದಿಯಿಂದ ಅಣಬೆಯನ್ನು ಖರೀದಿಸಿ ತಿನ್ನುವಂತೆಯೂ ಇಲ್ಲ ಎಂದು ಹಿಡಿಶಾಪ ಹಾಕದೇ ಇದ್ದಾರೆಯೇ? ಈ ಹೇಳಿಕೆಯನ್ನು ಗಂಭೀರವಾಗಿ ಸ್ವೀಕರಿಸಿದರೆ ‘ಹಣ ಬೆಳೆಯಬೆಕೆಂದರೆ ಅಣಬೆ ಬೆಳೆಸಿ’ ಎನ್ನುವ ಆಧುನಿಕ ಆರ್ಥಿಕ ಸೂತ್ರವೇ ರೂಪುಗೊಳ್ಳಬಹುದು. ಆದರೆ ನಿಯಮಿತವಾಗಿ ಅಣಬೆಯನ್ನು ಸೇವಿಸಿಯೂ ಚರ್ಮದ ಬಣ್ಣದಲ್ಲಿ ಕಿಂಚಿತ್ತೂ ಬದಲಾವಣೆಯನ್ನು ಕಾಣದವರು ಮಾತ್ರ ಈ ಹೇಳಿಕೆಯ ವಿರುದ್ಧ ತೀವ್ರ ಕೋಪಗೊಂಡಿರಬಹುದು.
ಓವರ್‌ಡೋಸ್: ಬಿಸಿಲಿಗೆ ಹೋಗ್ತಿದೀಯಾ ಬಣ್ಣ ಕಪ್ಪಾಗಬಹುದು, ಕೊಡೆ ಹಿಡಿದು ಹೋಗು ಅಂದ್ರೆ, ಬೇಡಾ ಮತ್ತೆ ‘ನಾಯಿಕೊಡೆ’ ತಿಂದರಾಯಿತು ಎಂದರಂತೆ.
Facebook ಕಾಮೆಂಟ್ಸ್