ಸ್ಪ್ಯಾನಿಷ್ ಗಾದೆಗಳು

ಅವರವರ ತಲೆಗೆ ಅವರವರದೇ ಕೈ !

ನಮ್ಮ ಜೀವನದಲ್ಲಿ ನಾವು ಎಷ್ಟೊಂದು ಕೆಲಸ ಮಾಡುತ್ತೇವೆ, ಎಷ್ಟೊಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಲ್ಲವೇ ? ಕೆಲವೊಮ್ಮೆ ಇಂತಹ ಕೆಲಸಗಳು ಅಥವಾ ನಿರ್ಧಾರಗಳು ನಮ್ಮದಾಗಿರುವುದಿಲ್ಲ . ಯಾವುದೊ ಕಟ್ಟುಪಾಡಿಗಾಗಿ ಅಥವಾ ಸಂಧರ್ಭದ ಒತ್ತಾಯಕ್ಕೆ ನಾವು ಆ ಕೆಲಸ ಮಾಡಿರುವ ಸಾಧ್ಯತೆ ಇರುತ್ತದೆ . ಕೆಲವೊಂದು ನಿರ್ಧಾರಗಳು ನಮ್ಮ ಮನಸ್ಸಿಗೆ ಒಪ್ಪಿಗೆಯಾಗದಿದ್ದರೂ ಅದಕ್ಕೆ ನಮ್ಮ ಒಪ್ಪಿಗೆಯ ಮುದ್ರೆಯಂತೂ ಬಿದ್ದಿರುತ್ತದೆ . ನಾವೆಷ್ಟೇ ನಿಯಮಬದ್ದರಾದರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಹೀಗೆ ‘ ನಮ್ಮದಲ್ಲದ ‘ ನಡವಳಿಕೆ ನಮ್ಮಿಂದಲೇ ಆಗಿ ಹೋಗಿರುತ್ತದೆ . ಇದರಿಂದ ಆಗುವ ಪರಿಣಾಮ ಒಳಿತಾಗಿದ್ದರೆ ಅದರಿಂದ ಕೆಡುಕಿಲ್ಲ ಅಕಸ್ಮಾತ್ ಇಂತಹ ಘಟನೆಗಳಿಂದ ಆಗುವ ಪರಿಣಾಮ ಕೆಡುಕಿನದಾಗಿದ್ದರೆ ಮಾತ್ರ ಮುಗಿಯಿತು . ! ನಮ್ಮೊಂದಿಗೆ ನಮ್ಮ ಆ ನಡವಳಿಕೆಗೆ ಅಪರೋಕ್ಷವಾಗಿ ಜೊತೆ ನೀಡಿದ್ದ ನಮ್ಮವರು ಮಾತ್ರ ಅಲ್ಲಿಂದ ಮಾಯವಾಗಿರುತ್ತಾರೆ . ಇಂತಹ ಸನ್ನಿವೇಶಗಳನ್ನ ನಮ್ಮ ಹಿರಿಯರು ಅನುಭವಿಸಿದ್ದರು ಮತ್ತು ತಮ್ಮಿಂದಾದ ತಪ್ಪು ನಮ್ಮ ನಂತರದ ತಲೆಮಾರು ಮಾಡದಿರಲಿ ಎನ್ನುವ ಉದ್ದೇಶದಿಂದ ‘ ನಿಮ್ಮ ನಿರ್ಧಾರಗಳಿಗೆ ಅಥವಾ ನಿಮ್ಮ ಕಾರ್ಯಕ್ಕೆ ನೀವೇ ಹೊಣೆಗಾರರು ‘ ಎನ್ನುವುದನ್ನ ಅವರವರ ತಲೆಗೆ ಅವರವರದೇ ಕೈ ಎಂದರು .

ಸುಖದ ವಿಷಯ ಬೇರೆ ಕಷ್ಟದ ವಿಷಯದಲ್ಲಿ ಮಾತ್ರ ಅವರವರ ತಲೆಗೆ ಅವರವರದೇ ಕೈ  ಹೆಚ್ಚು ಹೊಂದುತ್ತದೆ .  ಮಾಡಿದುಣ್ಣೋ ಮಹರಾಯ ಎನ್ನುವ ಇನ್ನೊಂದು ಕನ್ನಡ ಗಾದೆ ಕೂಡ ಹೆಚ್ಚು ಕಡಿಮೆ ನಮ್ಮ ಕರ್ಮಕ್ಕೆ  ತಕ್ಕ  ಫಲ ನಾವೇ ಅನುಭವಿಸಬೇಕು ಎನ್ನುವುದನ್ನ ಹೇಳುತ್ತದೆ .

ಸ್ಪಾನಿಷ್ ಗಾದೆ  ‘Con su pan se lo coma.’   ( ಕೋನ್ ಸು ಪಾನ್ ಸೆ ಲೊ ಕೊಮ ) ಅರ್ಥ ನಮ್ಮ ಬ್ರೆಡ್ಡು ನಾವೇ ತಿನ್ನಬೇಕು ಎನ್ನುತ್ತದೆ . ನಮ್ಮ ಕನ್ನಡ ಗಾದೆ ಮಾಡಿದುಣ್ಣೋ ಮಹರಾಯ ಇದಕ್ಕೆ ಹೆಚ್ಚು ಸೂಕ್ತವಾಗಿ ಹೊಂದುತ್ತದೆ . ಅರ್ಥದಲ್ಲಿ ಕೂಡ ಎಳ್ಳಷ್ಟೂ ವ್ಯತ್ಯಾಸವಿಲ್ಲ . ನಿಷ್ಠೆಯಿಂದ ಗಮನವಿಟ್ಟು ಬ್ರೆಡ್ಡು ತಯಾರಿಸದರೆ ಬ್ರೆಡ್ಡು ಅತ್ಯಂತ ಉತ್ತಮ ಗುಣಮಟ್ಟದಾಗಿರುತ್ತದೆ . ಮಾಡುವ ಕೆಲಸದಲ್ಲಿ ಶ್ರದ್ದೆ ಇರದೇ ಹೋದರೆ ಮಾಡಿದ ಬ್ರೆಡ್ಡು ಗಬ್ಬೆದ್ದು ಹೋಗಬಹದು ಆದರೇನು ಅದನ್ನೇ ತಿನ್ನಬೇಕಾಗುತ್ತದೆ . ಹೀಗಾಗಿ ಇದರಲ್ಲಿ ಎರಡು ಸಂದೇಶಗಳನ್ನ ರವಾನಿಸಿದ್ದಾರೆ . ಒಂದು ಮಾಡುವ ಕೆಲಸ ಸರಿಯಾಗಿ ಮಾಡಬೇಕು . ಎರಡು ಸರಿಯಾಗಿ ಕೆಲಸ ಮಾಡದಿದ್ದರೆ ಅದರ ಫಲವನ್ನ ಅನುಭವಿಸಬೇಕು ಮತ್ತು ಇದರಿಂದಾದ ಕೆಟ್ಟ ಪರಿಣಾಮ ಮಾತ್ರ ನಾವೇ ಅನುಭವಿಸಬೇಕು ಅದನ್ನ ಮತ್ತ್ಯಾರೂ ಅನುಭವಿಸಲು ಸಿದ್ಧರಿರುವುದಿಲ್ಲ .

ಇಂಗ್ಲಿಷ್ ಭಾಷಿಕರಲ್ಲಿ It’s his / her own lookout ಎನ್ನುವುದು ಸಾಮಾನ್ಯ . ಜೊತೆಯಲ್ಲಿ ನಮ್ಮ ಗಾದೆಯಲ್ಲಿರುವಂತೆ ಕೆಟ್ಟ ಕೆಲಸ ಮಾಡಿದವನು ಶಿಕ್ಷೆ ಅನುಭವಿಸಲಿ ಎನ್ನುವ ಅರ್ಥ ಕೊಡುವ “may he (the thief) choke on it” ಎನ್ನುವ ವಾಕ್ಯವನ್ನ ಕೂಡ ಬಹಳವಾಗಿ ಬಳಸುತ್ತಾರೆ .

ಶತಮಾನಗಳೇ ಕಳೆದರೂ ನಮ್ಮ ಕ್ರಿಯೆಗೆ ನಾವೇ ಜವಾಬ್ಧಾರರು ಎನ್ನುವುದು ಮಾತ್ರ ಸುಳ್ಳಲ್ಲ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

con   : ಜೊತೆಗೆ ಎನ್ನುವ ಅರ್ಥ , ಕೋನ್ ಎನ್ನುವುದು ಉಚ್ಚಾರಣೆ .

su  : ಅವರವರ  ಅಥವಾ ನಿಮ್ಮ ಎನ್ನುವ ಅರ್ಥ ಕೊಡುತ್ತದೆ . ಸು ಎನ್ನುವುದು ಉಚ್ಚಾರಣೆ .

pan   : ಬ್ರೆಡ್ಡು  ಎನ್ನುವ ಅರ್ಥ . ಪಾನ್ ಎನ್ನುವುದು ಉಚ್ಚಾರಣೆ .

se  : ಅವರೇ , ಅಥವಾ ನೀವೇ ಎನ್ನುವ ಅರ್ಥ ಸೆ ಎನ್ನುವುದು ಉಚ್ಚಾರಣೆ .

lo  :  ಇಂಗ್ಲಿಷ್ ನ ದಿ ಎನ್ನುವ ಅರ್ಥ . ಲೊ ಎನ್ನುವುದು ಉಚ್ಚಾರಣೆ .

coma : ತಿನ್ನುವುದು , ತಿನ್ನು ಎನ್ನುವ ಅರ್ಥ ಕೊಡುತ್ತದೆ . ಕೊಮ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!