ಸ್ಪೇನ್’ನಲ್ಲಿ ಜನರ ನಡುವೆ ಇಂದಿಗೂ ಈ ಒಂದು ಆಡು ಮಾತು ಬಳಕೆಯಲ್ಲಿದೆ . ಜಗತ್ತು ವೇಗವಾಗಿ ಬದಲಾಗುತ್ತ ಬಂದಿದೆ . ಅದರಲ್ಲೂ ಯೂರೋಪಿನ ಜನ ತಾವಾಯಿತು ತಮ್ಮ ಕಣ್ಣಿನಲ್ಲಿನ ಬೊಂಬೆಯಾಯಿತು ಅನ್ನುವಷ್ಟು ಸಂಕುಚಿತ ಜೀವನದಲ್ಲಿ ಮುಳುಗಿ ಹೋಗಿದ್ದಾರೆ . ಹಿಂದೆಲ್ಲಾ ಕುಟುಂಬಗಳು ದೊಡ್ಡದಿದ್ದವು , ಅಲ್ಲಿನ ನೋವು ನಲಿವು ಎರಡೂ ಹೆತ್ತವರ ಅಥವಾ ಹಿರಿಯರ ಮುಂದೆ ಮುಕ್ತವಾಗಿ ಚರ್ಚಿಸಿ ಅದಕೊಂದು ಉತ್ತರ ಕಂಡುಕೊಳ್ಳುತ್ತಿದ್ದರು . ಸ್ಪೇನ್’ನ ಹಿಂದಿನ ತಲೆಮಾರಿನ ಜನರು Desgracia compartida, menos sentida.(ದಿಸ್ ಗ್ರಾಸಿಯಾ ಕೋಂಪಾರ್ತಿದ ಮೆನೊಸ್ ಸೆಂತಿದ ) ಎಂದು ಹೇಳುತ್ತಿದ್ದರು . ಅಂದರೆ ನಿಮ್ಮ ನೋವು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಅಥವಾ ಹೇಳಿಕೊಂಡರೆ ಅದರ ತೀವ್ರತೆ ಕಡಿಮೆಯಾಗುತ್ತದೆ ಎನ್ನುವ ಅರ್ಥ . ನಮ್ಮ ನೋವು ಅಥವಾ ಕಷ್ಟವನ್ನ ಇನ್ನೊಬರ ಮುಂದೆ ಹೇಳಿಕೊಂಡರೆ ಅದಕ್ಕೆ ತಕ್ಷಣ ಪರಿಹಾರ ಸಿಗದೇ ಇರಬಹದು ಆದರೆ ಮನಸ್ಸು ಒಂದಷ್ಟು ಹಗುರವಾಗುತ್ತದೆ ಎನ್ನುವ ತಮ್ಮ ಅನುಭವದ ಮಾತನ್ನ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿದ್ದಾರೆ . ಮೊದಲೇ ಹೇಳಿದಂತೆ ಇಂದಿಗೂ ಆಡುಮಾತಿನಲ್ಲಿ ಜನ ಇದನ್ನ ಬಳಸುತ್ತಾರೆ . ಆದರೇನು ಹೇಳಿಕೊಳ್ಳಲು ನಮ್ಮವರು ಎನ್ನುವರಿಲ್ಲದೆ ಮನೋಶಾಸ್ತ್ರಜ್ಞರ ಮುಂದೆ ಸುಖ ದುಃಖ ಹೇಳಿಕೊಳ್ಳುವಂತಾಗಿದೆ . ಇರಲಿ .
ನಮ್ಮಲ್ಲಿ ಕೂಡ ಅದೇ ಅರ್ಥ ಕೊಡುವ ಗಾದೆ ಇದೆ . ಆದರೆ ನಾವು ಇನ್ನೊಂದು ಹೆಜ್ಜೆ ಈ ವಿಷಯದಲ್ಲಿ ಮುಂದಿದ್ದೇವೆ ಎನ್ನಬಹದು . ನಮ್ಮ ಗಾದೆಯ ಪ್ರಕಾರ ಸಂಸಾರದಲ್ಲಿ ಸಣ್ಣ ಪುಟ್ಟ ಕಲಹಗಳು ಅಥವಾ ಬಿನ್ನಬಿಪ್ರಾಯಗಳು ಸಹಜ. ಆದರೆ ಅದನ್ನ ದೊಡ್ಡದು ಮಾಡಿ ಎಲ್ಲರ ಮುಂದೆ ಹೇಳದೆ ಮನೆಯಲ್ಲಿ ಇರಿಸಬೇಕು ಮತ್ತು ಅದನ್ನ ತಮ್ಮ ನಡುವೆಯೇ ಬಗೆಹರಿಸಿಕೊಳ್ಳಬೇಕು . ಆದರೆ ವ್ಯಾಧಿ ( ಖಾಯಿಲೆ , ದುಃಖ , ಅಡಚಣೆಗಳು ಇತ್ಯಾದಿ ನೋವು ನೀಡುವ ವಿಷಯಗಳು ಎಂದು ಅರ್ಥೈಸಿಕೊಳ್ಳಬಹು )ಯನ್ನ ಮುಚ್ಚಿಡಬಾರದು ಅದನ್ನ ಹತ್ತು ಜನರ ಎದಿರು ಕೂತು ಮಾತನಾಡಿ ಅದಕ್ಕೊಂದು ಪರಿಹಾರ ಹುಡುಕಬೇಕು ಎನ್ನುತ್ತದೆ ನಮ್ಮ ಗಾದೆ .
ಇನ್ನು ಇಂಗ್ಲಿಷ್ ಭಾಷಿಕರಲ್ಲಿ Two in distress makes sorrow less. ಎನ್ನುವ ಆಡು ಮಾತು ಪ್ರಚಲಿತದಲ್ಲಿದೆ . ದುಃಖದಲ್ಲಿ ಒಬ್ಬರಿಗಿಂತ ಇಬ್ಬರಿದ್ದರೆ ದುಃಖ ಕಡಿಮೆಯಾಗುತ್ತೆ ಎನ್ನುವ ಅರ್ಥ ಕೊಡುತ್ತದೆ . ಚೂರು ಹೆಚ್ಚು ಕಡಿಮೆ ಈ ಎಲ್ಲಾ ಗಾದೆ ಅಥವಾ ಆಡು ಮಾತುಗಳ ಸಾರಾಂಶ ಮಾತ್ರ ಒಂದೇ ಎನ್ನುವುದು ಗಮನಿಸಿಬೇಕಾದ ಅಂಶ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Desgracia : ದುರಾದೃಷ್ಟ ಎನ್ನುವ ಅರ್ಥ ಕೊಡುತ್ತದೆ. ದಿಸ್ ಗ್ರಾಸಿಯಾ ಎನ್ನುವುದು ಉಚ್ಚಾರಣೆ .
compartida : ಹಂಚು , ಹಂಚಿಕೊಂಡ ಎನ್ನುವ ಅರ್ಥ ಕೊಡುತ್ತದೆ . ಕೋಂಪಾರ್ತಿದ ಎನ್ನುವುದು ಉಚ್ಚಾರಣೆ
menos : ಕಡಿಮೆ ಎನ್ನುವ ಅರ್ಥ ಕೊಡುತ್ತದೆ . ಮೆನೊಸ್ ಎನ್ನುವುದು ಉಚ್ಚಾರಣೆ .
sentida : ಭಾವಿಸುವಿಕೆ , ಅನುಭವಿಸುವಿಕೆ felt like ಎನ್ನುವ ಅರ್ಥ ಕೊಡುತ್ತದೆ . ಸೆಂತಿದ ಎನ್ನುವುದು ಉಚ್ಚಾರಣೆ .
Facebook ಕಾಮೆಂಟ್ಸ್