ಸ್ಪ್ಯಾನಿಷ್ ಗಾದೆಗಳು

ಸಂಸಾರ ಗುಟ್ಟು  ವ್ಯಾದಿ ರಟ್ಟು !

ಸ್ಪೇನ್’ನಲ್ಲಿ ಜನರ ನಡುವೆ ಇಂದಿಗೂ ಈ ಒಂದು ಆಡು ಮಾತು ಬಳಕೆಯಲ್ಲಿದೆ . ಜಗತ್ತು ವೇಗವಾಗಿ ಬದಲಾಗುತ್ತ ಬಂದಿದೆ . ಅದರಲ್ಲೂ ಯೂರೋಪಿನ ಜನ ತಾವಾಯಿತು ತಮ್ಮ ಕಣ್ಣಿನಲ್ಲಿನ ಬೊಂಬೆಯಾಯಿತು ಅನ್ನುವಷ್ಟು ಸಂಕುಚಿತ ಜೀವನದಲ್ಲಿ ಮುಳುಗಿ ಹೋಗಿದ್ದಾರೆ . ಹಿಂದೆಲ್ಲಾ ಕುಟುಂಬಗಳು ದೊಡ್ಡದಿದ್ದವು , ಅಲ್ಲಿನ ನೋವು ನಲಿವು ಎರಡೂ ಹೆತ್ತವರ ಅಥವಾ ಹಿರಿಯರ ಮುಂದೆ ಮುಕ್ತವಾಗಿ ಚರ್ಚಿಸಿ ಅದಕೊಂದು ಉತ್ತರ ಕಂಡುಕೊಳ್ಳುತ್ತಿದ್ದರು . ಸ್ಪೇನ್’ನ ಹಿಂದಿನ ತಲೆಮಾರಿನ ಜನರು Desgracia compartida, menos sentida.(ದಿಸ್ ಗ್ರಾಸಿಯಾ  ಕೋಂಪಾರ್ತಿದ ಮೆನೊಸ್ ಸೆಂತಿದ  ) ಎಂದು ಹೇಳುತ್ತಿದ್ದರು . ಅಂದರೆ ನಿಮ್ಮ ನೋವು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಅಥವಾ ಹೇಳಿಕೊಂಡರೆ ಅದರ ತೀವ್ರತೆ ಕಡಿಮೆಯಾಗುತ್ತದೆ ಎನ್ನುವ ಅರ್ಥ . ನಮ್ಮ ನೋವು ಅಥವಾ ಕಷ್ಟವನ್ನ ಇನ್ನೊಬರ ಮುಂದೆ ಹೇಳಿಕೊಂಡರೆ ಅದಕ್ಕೆ ತಕ್ಷಣ ಪರಿಹಾರ ಸಿಗದೇ ಇರಬಹದು ಆದರೆ ಮನಸ್ಸು ಒಂದಷ್ಟು ಹಗುರವಾಗುತ್ತದೆ ಎನ್ನುವ ತಮ್ಮ ಅನುಭವದ ಮಾತನ್ನ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿದ್ದಾರೆ . ಮೊದಲೇ ಹೇಳಿದಂತೆ ಇಂದಿಗೂ ಆಡುಮಾತಿನಲ್ಲಿ ಜನ ಇದನ್ನ ಬಳಸುತ್ತಾರೆ . ಆದರೇನು ಹೇಳಿಕೊಳ್ಳಲು ನಮ್ಮವರು ಎನ್ನುವರಿಲ್ಲದೆ ಮನೋಶಾಸ್ತ್ರಜ್ಞರ ಮುಂದೆ ಸುಖ ದುಃಖ ಹೇಳಿಕೊಳ್ಳುವಂತಾಗಿದೆ . ಇರಲಿ .

ನಮ್ಮಲ್ಲಿ ಕೂಡ ಅದೇ ಅರ್ಥ ಕೊಡುವ ಗಾದೆ  ಇದೆ . ಆದರೆ ನಾವು ಇನ್ನೊಂದು ಹೆಜ್ಜೆ ಈ ವಿಷಯದಲ್ಲಿ ಮುಂದಿದ್ದೇವೆ ಎನ್ನಬಹದು . ನಮ್ಮ ಗಾದೆಯ ಪ್ರಕಾರ ಸಂಸಾರದಲ್ಲಿ ಸಣ್ಣ ಪುಟ್ಟ ಕಲಹಗಳು ಅಥವಾ ಬಿನ್ನಬಿಪ್ರಾಯಗಳು ಸಹಜ. ಆದರೆ ಅದನ್ನ ದೊಡ್ಡದು ಮಾಡಿ ಎಲ್ಲರ ಮುಂದೆ ಹೇಳದೆ ಮನೆಯಲ್ಲಿ ಇರಿಸಬೇಕು ಮತ್ತು ಅದನ್ನ ತಮ್ಮ ನಡುವೆಯೇ ಬಗೆಹರಿಸಿಕೊಳ್ಳಬೇಕು . ಆದರೆ ವ್ಯಾಧಿ ( ಖಾಯಿಲೆ , ದುಃಖ , ಅಡಚಣೆಗಳು ಇತ್ಯಾದಿ ನೋವು ನೀಡುವ ವಿಷಯಗಳು ಎಂದು ಅರ್ಥೈಸಿಕೊಳ್ಳಬಹು )ಯನ್ನ ಮುಚ್ಚಿಡಬಾರದು ಅದನ್ನ ಹತ್ತು ಜನರ ಎದಿರು ಕೂತು ಮಾತನಾಡಿ ಅದಕ್ಕೊಂದು ಪರಿಹಾರ ಹುಡುಕಬೇಕು ಎನ್ನುತ್ತದೆ ನಮ್ಮ ಗಾದೆ .

ಇನ್ನು ಇಂಗ್ಲಿಷ್ ಭಾಷಿಕರಲ್ಲಿ Two in distress makes sorrow less. ಎನ್ನುವ ಆಡು ಮಾತು ಪ್ರಚಲಿತದಲ್ಲಿದೆ . ದುಃಖದಲ್ಲಿ ಒಬ್ಬರಿಗಿಂತ ಇಬ್ಬರಿದ್ದರೆ ದುಃಖ ಕಡಿಮೆಯಾಗುತ್ತೆ ಎನ್ನುವ ಅರ್ಥ ಕೊಡುತ್ತದೆ . ಚೂರು ಹೆಚ್ಚು ಕಡಿಮೆ ಈ ಎಲ್ಲಾ ಗಾದೆ ಅಥವಾ ಆಡು ಮಾತುಗಳ ಸಾರಾಂಶ ಮಾತ್ರ ಒಂದೇ ಎನ್ನುವುದು ಗಮನಿಸಿಬೇಕಾದ ಅಂಶ .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

Desgracia  : ದುರಾದೃಷ್ಟ  ಎನ್ನುವ ಅರ್ಥ ಕೊಡುತ್ತದೆ.  ದಿಸ್ ಗ್ರಾಸಿಯಾ ಎನ್ನುವುದು ಉಚ್ಚಾರಣೆ .

compartida : ಹಂಚು , ಹಂಚಿಕೊಂಡ ಎನ್ನುವ ಅರ್ಥ ಕೊಡುತ್ತದೆ . ಕೋಂಪಾರ್ತಿದ ಎನ್ನುವುದು ಉಚ್ಚಾರಣೆ

menos  : ಕಡಿಮೆ ಎನ್ನುವ ಅರ್ಥ ಕೊಡುತ್ತದೆ . ಮೆನೊಸ್ ಎನ್ನುವುದು ಉಚ್ಚಾರಣೆ .

sentida  : ಭಾವಿಸುವಿಕೆ , ಅನುಭವಿಸುವಿಕೆ  felt like  ಎನ್ನುವ ಅರ್ಥ ಕೊಡುತ್ತದೆ . ಸೆಂತಿದ ಎನ್ನುವುದು ಉಚ್ಚಾರಣೆ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!