X

ಬೊಮ್ಮನೊ ಒಬ್ಬಂಟಿ, ತನ್ನೊಡನಾಡುತ ಆಗುವ ಜಂಟಿ..!

ಮಂಕುತಿಮ್ಮನ ಕಗ್ಗ ಟಿಪ್ಪಣಿ-೮೦.

ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್|

ಆಟವಾಡುತಲಿ ತನ್ನೊರ್ ತನವ ಮರೆವಾ ||

ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |

ಪಾಟಿಯಲಿ ಮರೆತಿಹನು – ಮಂಕುತಿಮ್ಮ || ೦೮೦ ||

ಬಿನದಿ – ವಿನೋದಿ,

ಪಾಟಿ – ಪಾಸಟಿ, ರೀತಿ.

ಚೀಟಿಯಾಟ ಎಂದರೆ ಇಬ್ಬರು ಸೇರಿ ಆಡುವ ಚದುರಂಗ, ಇಸ್ಪೀಟು, ಪಗಡೆಯಂತಹ ಆಟ. ಒಂದೇ ಸಮನೆ ಕೆಲಸ ಮಾಡುತಿದ್ದರೆ ಯಾರಿಗೆ ತಾನೆ ಬೇಸರವಾಗುವುದಿಲ್ಲ? ನಡುನಡುವೆ ಏನಾದರು ವಿನೋದವಿದ್ದರೆ ಆ ಕೆಲಸದ ಆಯಾಸ ಪರಿಹಾರಕ್ಕೊಂದು ದಾರಿಯಿದ್ದಂತಾಗುವುದಲ್ಲವೆ? ಈಗ ನಾವು ಕೆಲಸ ಮಾಡುವ ಕಂಪನಿಗಳಲ್ಲೂ ಟೀಮ್ ಬಿಲ್ಡಿಂಗ್ ಹೆಸರಿನಲ್ಲಿ ಮಾಡಿಸುವ ಎಷ್ಟೊ ಚಟುವಟಿಕೆಗಳು, ಆಡಿಸುವ ಎಷ್ಟೊ ಆಟಗಳು ಈ ಮಾದರಿಯವೇ ತಾನೆ ?

ಪರವಶತೆಯಿಂದ, ತಲ್ಲೀನತೆ, ತನ್ಮಯತೆಯಿಂದ ತನ್ನ ಸೃಷ್ಟಿಯ ಕಾರ್ಯದಲ್ಲಿ ತೊಡಗಿಸಿಕೊಂಡ ಬೊಮ್ಮನೂ ಇದಕ್ಕೆ ಹೊರತಲ್ಲ. ಅವನಿಗೂ ಈ ‘ಬ್ರೇಕ್‘ ಬೇಕು; ಆದರೆ ಆಟವಾಡಲು ಜೊತೆಗೊಬ್ಬರಾದರೂ ಇರಬೇಕಲ್ಲವೆ? ಪರಬ್ರಹ್ಮದ ಪರಿಕಲ್ಪನೆಯೆ ಒಬ್ಬಂಟಿ, ಒಬ್ಬನೆ ಎನ್ನುವ ತತ್ವದ ಮೇಲೆ ಆಧಾರಿತವಾದದ್ದು ( ತನ್ಮೂಲಕ ಪರಬ್ರಹ್ಮದ ಏಕತ್ವವನ್ನು ಈ ಕಗ್ಗದಲ್ಲಿ ಪರೋಕ್ಷವಾಗಿ ಸೂಚಿಸಿರುವುದನ್ನು ಗಮನಿಸಿ). ಅಂದ ಮೇಲೆ ತನ್ನ ವಿನೋದ, ಆಮೋದದ ಬಯಕೆಯನ್ನು ಪರಬೊಮ್ಮ ತೀರಿಸಿಕೊಳ್ಳುವುದಾದರೂ ಹೇಗೆ?

ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ |

ಆಟವಾಡುತಲಿ ತನ್ನೊರ್ ತನವ ಮರೆವಾ||

ನೋಡಿ, ಇಲ್ಲಿ ಪರಬೊಮ್ಮನ ಉಪಾಯ, ಬುದ್ದಿವಂತಿಕೆ. ‘ತಾನೊರ್ವನಿರ್ವರವೊಲ್’ ಅಂದರೆ ‘ತಾನು-ಓರ್ವನ್-ಇರ್ವರ- ವೋಲು (ರೀತಿ)’ ಅರ್ಥಾತ್ ತಾನೊಬ್ಬನೆ ಇಬ್ಬರ ರೀತಿ ಪ್ರವರ್ತಿಸುವನಂತೆ ! ಹೀಗಾಗಿ ತನ್ನ ವಿನೋದಾದಾಟದಲ್ಲಿ ಒಂದು ಕಡೆ ಕೂತು ತನ್ನ ಆಟ ಆಡಿದರೆ, ಮತ್ತೊಮ್ಮೆ ಎದುರು ಬದಿಗೆ ಕೂತು ಎದುರಾಳಿಯ ಪರವಾಗಿ ಆಡುತ್ತ ಕಾಯಿ ನಡೆಸುವನಂತೆ! ಇಲ್ಲಿ ಎಷ್ಟೊಂದು ಗೂಡಾರ್ಥ ಹುದುಗಿದೆ ನೋಡಿ :  ಪರಬೊಮ್ಮ ಈ ಜಗವನ್ನು ಸೃಜಿಸಿದ ಮೇಲೆ ಅದು ನೀರಸವಾಗದಿರಲೆಂದು ನಾನಾ ರೀತಿಯ ಮಾಯೆಯ ಹೂರಣದಲ್ಲಿ ಕಲಸಿಟ್ಟುಬಿಟ್ಟ. ಒಮ್ಮೆ ಆ ಮಾಯೆಯ ಮೂಲಕ ಆಟ ಆಡಿಸಿದರೆ ಮತ್ತೊಮ್ಮೆ ತಾನು ನೇರ ಆಡಿಸುತ್ತಾನೆ. ಅವೆರಡು ಅವನದೇ ಆವೃತ್ತಿಗಳಾದ ಕಾರಣ ಅದು ಕೂಡ ವಿನೋದಕ್ಕೆ ಅವನಾಡಿಸುವ ಆಟದಂತೆ ಭಾಸವಾಗುತ್ತದೆ. ಆದರೆ ಹಾಗೆ ಆಡುವಾಗ ನಿಷ್ಪಕ್ಷಪಾತದಿಂದ ಎರಡು ಕಡೆ ಅನ್ಯಾಯವಾಗದಂತೆ ನಡೆಸುತ್ತಾನಂತೆ – ಒಬ್ಬನಾದ ತಾನೆ ಇಬ್ಬರಂತೆ ನಟಿಸುತ್ತಿರುವುದು ಗೊತ್ತಿರುವುದರಿಂದ.

ಒಂದೆಡೆ ಹೀಗೆ ಆಟವಾಡುತ್ತ ತನ್ನ ವಿನೋದದ ಅಗತ್ಯವನ್ನು ಪೂರೈಸಿಕೊಳ್ಳುತ್ತಿದ್ದರೆ ನಮಗೇನೊ ಅವನ ಕಾರ್ಯದ ನಡುವಿನ ವಿರಾಮದಲ್ಲಿ ವಿನೋದಕ್ಕಾಗಿ ಆಡಿಕೊಳ್ಳುತ್ತಿದ್ದಾನೆಂದು ಅನಿಸಬಹುದು. ಆದರೆ ಇದು ನೈಜದಲ್ಲಿ ತನ್ನ ಒಂಟಿತನವನ್ನು ನೀಗಿಸಲೆಂದು ಅವನೇ ಕಂಡುಕೊಂಡ ದಾರಿ. ಏಕಾಂಗಿತನದಿಂದ ಅವನಿಗು ಬೇಸರ , ಯಾತನೆ ಕಾಡುವುದು ಅಸಹಜವೇನಲ್ಲ. ಆ ಹುಳು ಅವನನ್ನು ಕೊರೆಯಬಿಡದಂತೆ ಸದಾ ಕೆಲಸದಲ್ಲಿ ಮಗ್ನನಾಗಿರುತ್ತಾನಂತೆ; ಇಲ್ಲವೆ ಈ ರೀತಿಯ ವಿನೋದದಾಟದಲ್ಲಿ ತೊಡಗಿಸಿಕೊಂಡು ತನ್ನ ಒಂಟಿತನವನ್ನು  ಮರೆಯುತ್ತಾನಂತೆ.

ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |

ಪಾಟಿಯಲಿ ಮರೆತಿಹನು – ಮಂಕುತಿಮ್ಮ ||

ಹೀಗೆ ಬೊಮ್ಮನು ಕೂಡ, ಈ ರೀತಿಯಲ್ಲಿ ಚಾಕಚಕ್ಯತೆಯಿಂದ , ಚಾಣಾಕ್ಷತೆಯಿಂದ (ಮಾಟದಲಿ) ತನ್ನ ಏಕತೆಯ (ಒಬ್ಬಂಟಿತನದ) ಜೀವನದಲ್ಲಿರಬಹುದಾದ ಬೇಗುದಿ, ಬೇಸರವನ್ನೆಲ್ಲ ಮರೆಯುತ್ತಿದ್ದಾನೆ. ಆ ಒಬ್ಬಂಟಿತನ ಕಾಡದ ಹಾಗೆ ಏನಾದರು ಕಾರ್ಯದಲ್ಲಿ ನಿರತನಾಗಿ ಅದರಿಂದಾಗಬಹುದಾದ ಕ್ಲೇಷವನ್ನೆಲ್ಲ ಅಧಿಗಮಿಸುವ ಮಾರ್ಗ ತೋರಿಸಿಕೊಡುತ್ತಿದ್ದಾನೆ.

ನಾವೂ ಕೂಡ ಬಂದಾಗ ಒಬ್ಬಂಟಿ, ಹೋಗುವಾಗಲು ಒಬ್ಬಂಟಿ – ಬೊಮ್ಮನ ಹಾಗೆಯೆ. ನಡುವಲಿ ಸಂಸಾರ ಬಂಧನದ ಹೆಸರಿನಲ್ಲಿ  ಮಾಡುವುದೆಲ್ಲವೂ ಒಬ್ಬಂಟಿಯಾಗಿಯೆ. ಕರ್ಮಶ್ರದ್ಧೆಯಿಂದ ಅದನ್ನೆಲ್ಲಾ ನಿಭಾಯಿಸುವಾಗ ಆಯಾಸ, ಬೇಸರದ ಪರಿಹಾರಕ್ಕೆ ನಾವೂ ಕೂಡ ವಿನೋದದಾಟದಲ್ಲಿ ತೊಡಗಿಕೊಂಡು ಮತ್ತೆ ಯಥಾರೀತಿ ದೈನಂದಿನ ಕಾರ್ಯಕ್ಕೆ ಮರಳುತ್ತೇವೆ. ಬೊಮ್ಮನ ಕಾರ್ಯ ನಿರ್ವಹಣೆಯ ವಿಧಾನವೂ ಹೆಚ್ಚುಕಡಿಮೆ ಇದೇ ರೀತಿಯದೆ. ಒಂಟಿತನದ ನಿಭಾವಣೆಗೆ ಬೊಮ್ಮನಂತೆ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡುಬಿಡುವುದೆ ಅದಕ್ಕಿರುವ ಪರಿಹಾರ. ಹೀಗಾಗಿ ಬ್ರಹ್ಮನಿಗು ಬ್ರಹ್ಮಸೃಷ್ಟಿಗು ಪರಸ್ಪರ ಹೋಲಿಕೆಯಲ್ಲಿ ಅದ್ಭುತ ಸಾಮೀಪ್ಯತೆಯಿರುವುದನ್ನು ಕಾಣಬಹುದು.

#ಕಗ್ಗಕೊಂದು_ಹಗ್ಗ

#ಕಗ್ಗ_ಟಿಪ್ಪಣಿ

 

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post