ನೋಟುಗಳ ಬಗೆಗಿನ ಜನರ ಸಾಮಾನ್ಯ ನೋಟ ಹಾಗೂ ಒಳನೋಟಗಳನ್ನೆಲ್ಲಾ ಬದಲಾಯಿಸಿ, ನೋಟುಗಳನ್ನು ಬದಲಾಯಿಸುವಂತೆ ಹಾಗೂ ಒಳಗೊಳಗೆ ಹುದುಗಿಟ್ಟಿದ್ದ ನೋಟುಗಳೂ ಬದಲಾವಣೆಗೆ ಒಡ್ಡಿಕೊಳ್ಳುವಂತೆ ಮಾಡಿದ್ದ ನೋಟ್ ಬ್ಯಾನ್ ಗೆ ಮೊನ್ನೆ ಮೊನ್ನೆಯಷ್ಟೇ ವರುಷ ತುಂಬಿತು. ಇದು ನಿಜಕ್ಕೂ ಭಾರತದ ಇತಿಹಾಸದಲ್ಲಿಯೇ ಒಂದು ಮಟ್ಟಿಗೆ ‘ನೋಟ್’ಬಲ್ ದಿನವೇ ಸರಿ. ‘ಹಣ ನೋಡಿದರೆ ಹೆಣವೂ ಬಾಯಿಬಿಡುತ್ತದೆ’ ಎಂಬ ಮಾತು ಅಂದಿಗೆ ‘ಹಣ ಇಟ್ಟುಕೊಂಡ ಮನುಷ್ಯ ಬಾಯಿ ಬಾಯಿ ಬಡಿದುಕೊಂಡ’ ಎಂದು ಬದಲಾಯಿಸಿದಂತಿತ್ತು!
ಈ ನಿರ್ಧಾರ ಘೋಷಿಸಿದವರು ಇದು ದೇಶದ ಆರ್ಥಿಕತೆ ಹಾಗೂ ಕಪ್ಪು ಹಣ ಮಟ್ಟಹಾಕುವ ನಿಟ್ಟಿನಲ್ಲಿ ‘boon’ ಆಗಿ ಪರಿಣಮಿಸಲಿದೆ ಎಂದರೆ, ವಿರೋಧಿಗಳು ಮಾತ್ರ ತಪ್ಪು ತಪ್ಪು ಇದರಿಂದ ಕಪ್ಪು ಹಣವನ್ನು ಮಟ್ಟಹಾಕಬಹುದು ಎನ್ನುವುದನ್ನು ಒಪ್ಪದೇ, ಇದು ಬಡವರಿಗೆ ‘bane’ ಎಂದು ಬಡಬಡಾಯಿಸಲಾರಂಭಿಸಿದರು. ನೋಟ್ ಬ್ಯಾನ್ ಮಾಡಿದ್ದರಿಂದ ಉಂಟಾದ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳಾಗಿವೆ. ಆದರೆ ನೋಟ್ ಬ್ಯಾನ್ ಮಾಡದೇ ಇದ್ದಿದ್ದರೆ ಏನೆಲ್ಲಾ ಮಿಸ್ ಆಗ್ತಿತ್ತು ಅನ್ನೋದರ ಬಗ್ಗೆ ಇಲ್ಲೊಂದಷ್ಟು ಶಾರ್ಟ್ ನೋಟ್ಸ್ ಗಳಿವೆ. ಹಾಗೆ ನೋಡ್ಕೊಂಡ್ ಬಿಡಿ, ಸಾರಿ ಓದ್ಕೊಂಡ್ ಬಿಡಿ.
● ನೂಕು ನುಗ್ಗಲು ಉಂಟಾಗಬಾರದು ಎನ್ನುವುದು ಗೊತ್ತಿತ್ತು ಆದರೆ ಅನಿವಾರ್ಯ ಸಂದರ್ಭದಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದೂ ಮಹಾನ್ ಪ್ರಮಾದ ಎನಿಸಿಕೊಳ್ಳುತ್ತದೆ ಎನ್ನವುದು ನೋಟ್ ಬ್ಯಾನ್ ಆಗದೇ ಹೋಗಿದ್ದರೆ ಗೊತ್ತಾಗುತ್ತಿರಲಿಲ್ಲ.
● ಬಣ್ಣ ಮೆತ್ತಿಕೊಂಡು ನಟಿಸಿದರೆ ಚಿತ್ರರಂಗ, ಹಾಗೆಯೇ ನಟಿಸಿದರೆ ರಾಜಕೀಯ ರಂಗ ಎಂಬ ಅವಕಾಶವಾದಿ ತತ್ವವನ್ನು ನೆಚ್ಚಿಕೊಂಡಿರುವ ಯಂ(ಎ)ಗ್ ಸ್ಟಾರ್ ನಾಯಕಿಯ ತುಟಿಗೆ ರಂಗೇ ತುಂಬುತ್ತಿರಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಇನ್ನು ಎಷ್ಟೋ ಜನರ ಅಸಲಿ ಬಣ್ಣವೂ ಬಯಲಾಗುತ್ತಿರಲಿಲ್ಲ.
● “ನನ್ನಲ್ಲೂ ಹಣ ಇದೆ” ಎಂದು ಖುದ್ದು ಜನರೇ ಪ್ರಾಮಾಣಿಕವಾಗಿ ಬೇರೆಯವರ ಮುಂದೆ ಹೇಳುವುದನ್ನು ಕೇಳುವ ಅವಕಾಶವೇ ದೊರಕುತ್ತಿರಲಿಲ್ಲ.
● ಯಾವುದೂ ನೆಟ್ಟಗೆ ಗೊತ್ತಿಲ್ಲದಿದ್ದರೂ ದೇಶದ ಆರ್ಥಿಕತೆಯ ಬಗ್ಗೆ ತಮ್ಮ ಮೂಗಿನ ನೇರಕ್ಕೆ ಚರ್ಚೆ ಮಾಡುತ್ತಾ ಎಡಬಿಡಂಗಿತನ ಮೆರೆವ ಪೊಳ್ಳು ಆರ್ಥಿಕ ತಜ್ಞರು ಇಷ್ಟೊಂದು ಸಂಖ್ಯೆಯಲ್ಲಿ ಉದಯವಾಗುತ್ತಲೇ ಇರಲಿಲ್ಲ.
● ನೋಟ್ ನಲ್ಲಿ ಚಿಪ್ ಅಳವಡಿಸಿದ್ದಾರೆಂದು ಚಪ್ಪರಿಸಿಕೊಂಡು ಚರ್ಚೆ ಮಾಡುವ ಮೂಲಕ ಕೆಲವರ ತಲೆಯಲ್ಲಿರುವ ಜ್ಞಾನದ ಚಿಪ್ ಎಷ್ಟೊಂದು ಚೀಪ್ ಕ್ವಾಲಿಟಿಯದ್ದು ಎನ್ನುವುದು ಹೊರಜಗತ್ತಿಗೆ ಖುಲ್ಲಾಂಖುಲ್ಲಾ ಆಗುತ್ತಿರಲಿಲ್ಲ.
● ಮಾತು ಮಾತಿಗೂ ಜನಸಾಮಾನ್ಯರು, ಬಡವರ ಪರ ಎಂದು ಬಡಾಯಿ ಕೊಚ್ಚಿಕೊಂಡವರಲ್ಲಿ ಬಹುತೇಕರು, ಬಡಾ ಆದಮಿಗಳು ಹಾಗೂ ಕಾಳಧನಿಕರ ಪರವಷ್ಟೇ ಎನ್ನುವ ಅಂಶ ಸ್ಪಷ್ಟವಾಗುತ್ತಲೇ ಇರಲಿಲ್ಲ.
● ಸಾಸಿವೆ ಡಬ್ಬಿಗಳಲ್ಲಿ, ಮಡಚಿಟ್ಟ ಬಟ್ಟೆಗಳ ಸಂಧಿಯಲ್ಲಿ ವರ್ಷಾನುವರ್ಷಗಳಿಂದ ಅಡಗಿಸಿಟ್ಟಿದ್ದ ಹಳೆಯ ನೋಟುಗಳಿಗೆ ಬಂಧ ಮುಕ್ತಿ ಪ್ರಾಪ್ತವಾಗುವ ಅವಕಾಶವೇ ದೊರಕುತ್ತಿರಲಿಲ್ಲ.
● ಹಿಂದಿನ ಸರ್ಕಾರದ ಅವಧಿಯಲ್ಲಿ ನಾಲ್ಕಾಣೆಯ ನಾಣ್ಯಗಳನ್ನು ನಿಷೇಧಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡ ಸಂಗತಿಯೊಂದು ಜನರ ಗಮನಕ್ಕೆ ಬಾರದೆ ಕಾಲಗರ್ಭದಲ್ಲಿ ಹೂತುಹೋಗುವ ಅಪಾಯವಿತ್ತು.
● ನೋಟ್ ಕೊಟ್ಟು ಓಟ್ ಪಡೆಯುವವರ ನಡುವೆ ಓಟ್ ಕೊಟ್ಟವರದ್ದೇ ನೋಟ್ ಹಿಂಪಡೆಯುವಂತಹ ವಿಶಿಷ್ಟ ಬೆಳವಣಿಗೆಯೊಂದು ದಾಖಲಾಗುತ್ತಲೇ ಇರಲಿಲ್ಲ.
● ಚಿಲ್ಲರೆ ಕಾಸಿದ್ದವರನ್ನೆಲ್ಲಾ ಚಿಲ್ರೆ ಮನುಷ್ಯರಂತೆ ಕಾಣುತ್ತಿದ್ದ ದೊಡ್ಡ ದೊಡ್ಡ ನೋಟಿನವರೂ ಚಿಲ್ಲರೆಗಾಗಿ ತಡಕಾಡುವ ಅಪರೂಪದ ದೃಶ್ಯ ಕಾಣಲು ಸಿಗುತ್ತಿರಲಿಲ್ಲ.
● ಅಕೌಂಟ್’ನಲ್ಲಿ ಹಣ ಇದ್ದರೆ ಖರ್ಚಿಗೆ ಮಿತಿಯಿರುತ್ತಿರಲಿಲ್ಲ. ಅಂತದ್ದರಲ್ಲಿ ಬೇಕಾದಷ್ಟು ದುಡ್ಡಿದ್ದರೂ ಸ್ವಲ್ಪವೇ ಸ್ವಲ್ಪ ಡ್ರಾ ಮಾಡಿಸಿಕೊಂಡು ಅಳತೆ ಮೀರದಂತೆ ಖರ್ಚು ಮಾಡುವ ಎಚ್ಚರಿಕೆ ಒಂದಷ್ಟು ದಿನಗಳಿಗಾದರೂ ಮೂಡುತ್ತಿರಲಿಲ್ಲ.
● ಹಣವಿಲ್ಲದವ ವೈರಾಗ್ಯ ತಾಳುವುದು ಸಾಮಾನ್ಯ ಆದರೆ ಹಣವಿಟ್ಟವನನ್ನೂ ವೈರಾಗ್ಯ ಕಾಡಿದ ಅಪರೂಪದ ಬೆಳವಣಿಗೆಗೆ ಸಾಕ್ಷಿಯಾಗುತ್ತಿರಲಿಲ್ಲ.
ಓವರ್ ಡೋಸ್: ನೋಟ್ ಬ್ಯಾನ್ ಕೆಲವರಲ್ಲಿ ಯಾವ ಪರಿ ಆಘಾತ ಉಂಟು ಮಾಡಿದೆಯೆಂದರೆ ವರ್ಷ ಕಳೆದರೂ ದುಃಸ್ವಪ್ನದಂತೆ ಕಾಡುತ್ತಿದೆ. ಹಾಗಾಗಿಯೇ ಅದಕ್ಕೆ ವರ್ಷ ತುಂಬಿದ ಕಾರಣಕ್ಕೆ ಮೊನ್ನೆ ಕೆಲವರು ಕರಾಳದಿನವನ್ನು ಆಚರಿಸಿದ್ದು!!
Facebook ಕಾಮೆಂಟ್ಸ್