X
    Categories: ಕಥೆ

ನೆನಪುಗಳ ಸಹವಾಸ: ನನ್ನ ಪ್ರೀತಿಯ ಆಟೋಗ್ರಾಫ್

ಮೊನ್ನೆ ಊರಿನ ಹಳೆಪೇಟೆ ಬಸ್‌ಸ್ಟ್ಯಾಂಡ್ ಬಳಿ ನಿಂತಿದ್ದೆ. ಕಾಲು ಗಂಟೆ ಕಾದು ಕಾಲು ಸುಸ್ತಾದರೂ ಬಸ್ಸು ಕಾಣಲೇ ಇಲ್ಲ. ತುಸು ದೂರದಲ್ಲಿ ಒಬ್ಬಳು ಸ್ನಿಗ್ದ ಸೌಂದರ್ಯದ ಯುವತಿ ಬಿರುಬೀಸು ನಡಿಗೆಯಲ್ಲಿ ಬಂದವಳೇ ಮೊಬೈಲ್‌ನಲ್ಲಿ ರೀಚಿಡ್ ಬಸ್ ಸ್ಟ್ಯಾಂಡ್ ಡಿಯರ್ ಅಂದಳು. ತುಸು ದೂರದ ಮುಖ ಹತ್ತಿರ ಬಂದಾಗ ಪರಿಚಿತೆ, ಒಂದೊಮ್ಮೆ ಸಹಪಾಠಿಯಾಗಿದ್ದಳು ಎಂದು ತಿಳಿದು ಹಾಯ್ ಎಂದು ಡೈರೆಕ್ಟಾಗಿ ಏನು ವಿಷಯಾ ಎಂದು ರಾಗ ಹರಿಯ ಬಿಟ್ಟೆ, ಆಕೆಯ ಮುಖ ನುಸುಕೆಂಪಾಗಿ ’ಮೇಡ್ ಫಾರ್ ಈಚ್ ಅದರ್’ ಪ್ರೀತಿಸಿ ಮದುವೆಯಾಗುತ್ತಿದ್ದೇವೆ ಮನೆಯಲ್ಲಿ ಓಕೆ ಅಂದಿದ್ದಾರೆ ಎಂದು ಖಷಿಯಿಂದ ಪ್ರೀತಿಯ ಬಗೆ ಅರುಹಿದ್ದಳು. ವಿಷಯ ಇಂಟ್ರೆಸ್ಟಿಂಗ್ ಅನಿಸೋ ಟೈಮ್‌ನಲ್ಲಿ ಗಡಗಡ ಶಬ್ದ ಮಾಡಿಕೊಂಡು ಕೆ.ಎಸ್.ಆರ್.ಟಿ.ಸಿ. ಬಸ್ಸು ಬಂತು. ಬಸ್ಸು ಏರಬೇಕಾದ ನಾನು ಕಮಾನ್ ಲೆಟ್ಸ್ ಟಾಕ್ ಇನ್ ಬಸ್ ಎಂದು ಹರುಕುಮುರುಕು ಇಂಗ್ಲಿಷ್ ಬಿಟ್ಟೆ. ನೀನು ಹೋಗು ವುಡ್‌ಬಿ ವಿಲ್ ಕಮ್ ಅಂದಿದ್ದಳು ವಿಷಯ ಇಂಟ್ರೆಸ್ಟಿಂಗ್ ಆದರೇನು ಬಸ್‌ನ ಮಿಸ್‌ಟೈಮಿಂಗ್. ಹತ್ತಿಯೇ ಬಿಟ್ಟೆ ಬಸ್ಸು. ಕಿಟಕಿ ಸೈಡ್ ಸೀಟು ಸಿಕ್ಕಿತು. ರುಯ್ಯನೆ ತಂಗಾಳಿ ಬೀಸುತ್ತಿತ್ತು. ಮನಸ್ಸು ನನ್ನ ಪ್ರೀತಿಯ ಗೋಪುರಕ್ಕೆ ನುಸುಳಿತ್ತು. ಹೌದು ನನ್ನ ’ಹಳೇಯ’ ಹಳಸಿದ ಪ್ರೀತಿ. ಆಕೆ ಆಕಾಂಕ್ಷ…

ಮನೆ ಪಕ್ಕ ಗುಡ್ಡದ ಬದಿಯ ತೊರೆ ದಾಟಿ ಇಳಿಜಾರು ಪ್ರದೇಶದಲ್ಲಿ ಜಾರಿದರೆ ಆಕೆಯ ಮನೆ.. ಎರಡು ಮಹಡಿಯ ಬಂಗಲೆಯಂತಹ ಮನೆ. ಮನೆ ಮುಂದೆ ದೊಡ್ಡ ಕಂಪೌಂಡ್ ಆಕೆಯ ಮನೆ ಎದುರಲ್ಲಿದ್ದ ಅಂಗಡಿಯಿಂದ ಪೇಪರ್, ಹಾಲನ್ನು ಮನೆಗೆ ತರುವ ಕೆಲಸ ನನ್ನದಾಗಿತ್ತು. ಕಂಪೌಂಡ್ ದಾಟಿ ಮುಂದೆ ಹೋದಾಗ ಹಸಿರ ವನ. ಎರಡು ಮರದ ನಡುವೆ ಒಂದು ಉಯ್ಯಾಲೆ. ಸಂಜೆ ಹೊತ್ತಲ್ಲಿ ಉಯ್ಯಾಲೆಯಲ್ಲಿ ಕೂತು ಹಾಡುತ್ತಿದ್ದಳು ಆಕಾಂಕ್ಷ… ಹೆಣ್ಣು ಹೇಗಿರಬೇಕು ಎಂಬ ಆಕಾಂಕ್ಷೆ ಹುಡುಗರಲ್ಲಿರುತ್ತೋ ಅದಕ್ಕೆ ಪ್ರತಿರೂಪ ಆಕಾಂಕ್ಷ..

“ರೀ ಟಿಕೆಟ್ ತೊಗೊಳ್ರೀ’’ ಎಂದು ಕಂಡೆಕ್ಟರ್ ದಬಾಯಿಸಿದಾಗ ಎಚ್ಚರವಾಯಿತು. ನೆನಪುಗಳ ಲೋಕದ ಮಧುರ ಪಯಣಕ್ಕೆ ಜರ್ಕ್ ಬ್ರೇಕ್ ಬಿತ್ತು. ಪಟ್ಟಣಕ್ಕೆ ಎಂದು ಟಿಕೆಟ್ ಪಡೆದೆ. ಟಿಕೆಟ್… ಟಿಕೆಟ್ ಎಂದು ಜೋರಾಗಿ ಬೊಬ್ಬಿಡುತ್ತಾ ಮುಂದೆ ಸಾಗಿದ ಕಂಡೆಕ್ಟರ್… ಬಸ್ಸು ವೇಗ ಪಡೆದುಕೊಂಡು ಹರಿವ ತೊರೆ ದಾಟುತ್ತಿತ್ತು… ಪಟ್ಟಣಕ್ಕೆ ಸುಮಾರು ಐದು ಗಂಟೆಯ ಪಯಣ. ಮತ್ತೆ ನೆನಪು ಆಕಾಂಕ್ಷ ಮನದಲ್ಲಿ…

ಕಾಲ ಕಾಣದ ತೊಟ್ಟಿಲ ಕಟ್ಟಿ ತೂಗಿದೆ. ಆಕಾಂಕ್ಷಳಂತೆ ನನ್ನ ಮನೆ ಎರಡು ಮಹಡಿದ್ದಲ್ಲ. ತಕ್ಕುದಾಗಿ ಹಳೆಯ ಕಾಲದ ಗುತ್ತಿನ ಮನೆ, ನಡು ಛಾವಡಿ. ಸುತ್ತ ಕೋಣೆ. ತಳಿರುತೋರಣ ಸಿಂಗಾರ. ಆಕಾಂಕ್ಷ ಹಾಗೂ ನನ್ನ ಕುಟುಂಬಕ್ಕೂ ದೂರದ ಸಂಬಂಧವಾದರೂ ಬಂಧನ ಬಿಗಿಯಾಗಿ ಹಳಸಿಹೊಗಿತ್ತು. ಮನೆ-ಮನಗಳಲ್ಲಿ ಮುನಿಸಿತ್ತು. ಆದರೆ ಮಕ್ಕಳಾಟಿಕೆಯಿಂದ ಹಿಡಿದು ಮನೆಯಲ್ಲಿ ಗದ್ದಲವಿದ್ದರೂ ನೀರಾಟವಾಡುತ್ತಾ ಬೆಳೆದವರು ನಾವು. ದೊಡ್ಡವರಾಗುತ್ತಿದ್ದಂತೆ ಕಂದಕಗಳು ಬೆಳೆದವು. ಬೆಳಗ್ಗಿನ ಮಂಜು ಅತಿಯಾದರೆ ಹೂವುಗಳು ಬಾಡುತ್ತವಂತೆ ಹಾಗೆ ನಮ್ಮಿಬ್ಬರ ಗೆಳೆತನ ಇನ್ನೇನು ಪ್ರೀತಿಯ ಹಾದಿ ಹಿಡಿಯಬೇಕೆನ್ನಿಸುವಷ್ಟರಲ್ಲಿ ಹಿರಿಯರ ಮುನಿಸು ಮೃದು ಮನಸ್ಸುಗಳ ಆಕಾಂಕ್ಷೆಗಳಿಗೆ ಕರಿಛಾಯೆ ಬಿತ್ತು.

ಧಪ್ ಎಂದು ಶಬ್ದ ಬಸ್ಸಿನ ಚಕ್ರ ಗುಂಡಿಗೆ ಬಿದ್ದು ಎದ್ದಿತ್ತು. ಸೀಟಿಂದ ಹಾರಿದಂತಾಗಿ ಒಮ್ಮೆ ಬೆನ್ನು ನೋವಿನ ಅನುಭವ. ಎಲ್ಲವೂ ಸರಿಯಿಲ್ಲ. ಹಳಸಿದ ಪ್ರೀತಿಯ ಕಥೆಯ ನಡುವೆ ಹಾಳಾದ ರೋಡು. ಮನಸ್ಸು ತಲ್ಲಣವಾಗಿತ್ತು. ಅದೆಷ್ಟು ಮಧುರ ಆ ಪ್ರೇಮ. ಮನೆ ದಾಟಿ ಗುಡ್ಡ ಹತ್ತಿ ಕರೆದರೆ ಆಕೆ ಓಡೋಡಿ ಬರುತ್ತಿದ್ದಳು. ಚಿಕ್ಕಂದಿನಿಂದಲೇ ತೊರೆಯ ನೀರಾಟ ಆಡಿ ಬೆಳದ ನಾವೀಗ ಹದಿಹರೆಯ ಸ್ಥಿತಿಗೆ ತಲುಪಿದರೂ ಆ ಮಕ್ಕಳಾಟಿಕೆ ಇನ್ನೂ ಇತ್ತು. ಇಬ್ಬರೂ ಬೆಳೆದು ದೊಡ್ಡವರೆನಿಸಿಕೊಂಡಿದ್ದರೂ ಮುಗ್ದ ಮನಸ್ಸುಗಳ ನಿರ್ಮಲ ಪ್ರೀತಿ. ದಿನಕ್ಕೊಂದು ಬಾರಿ ಕಾಣದೆ ಹೋದರೆ ದಿನ ಉರುಳದು, ಮನಸ್ಸು ಮಿಡಿಯದು. ಯಾರಿಗೋ ಅವೈದ್ಯ ಮತ್ಯಾರಿಗೋ ನೈವೇದ್ಯ. ನೆನಪುಗಳು ಮಾತ್ರ ಮಧುರ. ಬಸ್ಸು ಘಾಟಿಯ ತಪ್ಪಲು ಹತ್ತುವಾಗ ಗುಡ್ಡಗಳ ರಾಶಿ ಮನಸ್ಸಿಗೆ ಮುದ ನೀಡುತ್ತಿತ್ತು. ಹಾಗೇ ನಿದಿರೆ ಆವರಿಸಿತ್ತು. ಕನಸಿನಲ್ಲೂ ನೆನಪುಗಳು ಮರುಕಳಿಸಿದವು.

ಅದು ಏಳು ವರ್ಷಗಳ ಪ್ರೀತಿ, ಏಳು ಜನ್ಮಗಳ ಸಂಬಂಧ, ಏಳು ವರ್ಣ ಕಾಮನಬಿಲ್ಲಿನ ಸಂಕೇತ, ಸಪ್ತಸ್ವರಗಳ ಸಲ್ಲಾಪ, ಸಪ್ತನದಿಗಳಷ್ಟೇ ಪರಿಶುದ್ಧ, ಹೀಗೆ ಪ್ರೀತಿಯ ಹೋಲಿಕೆ ಕೇಳಲು ನಯವೇ.. ಅವಳಷ್ಟು ನನ್ನನ್ನು ಯಾರೂ ಕಾಡಿರಲಿಲ್ಲವೇನೋ ಎನ್ನುವ ತಕರಾರು ಮನಸ್ಸಿನ ಪ್ರಕ್ಷುಬ್ದ ಅಲೆಗಳಲ್ಲಿ ರುಜುವಾತಾಗಿತ್ತು. ನನಗೆ ನೀನು ನಿನಗೆ ನಾನು ಎಂಬಂತೆ ಇದ್ದೆವು. ಆದರೆ ಪ್ರೀತಿಯ ಕಥೆಯಲ್ಲಿ ಬಿರುಕಿನ ವ್ಯಥೆ ಎದ್ದು ಮನೆಯಲ್ಲಿ ನನಗೆ ಬೇರೆ ಮದುವೆ ವಿಚಾರ ಮಾಡಿ ನಿಘಂಟು ಮಾಡಿದರೂ ಗಂಟು ಮಾತ್ರ ಅವಳಲ್ಲಿ ಉಳಿದಿತ್ತು. ಹಳೇಯ ಪ್ರೀತಿಯ ಗಂಟು, ನೆನಪಿನ ಗಂಟು, ಮನಸ್ಸಿನ ಗಂಟು ದೂರಾಗಿ ಸಡಿಲಗೊಂಡರೂ ಕಡೆಯ ಎಳೆ ಸಿಕ್ಕಿ ಹಾಕಿಕೊಂಡಿತ್ತು.

“ಹೊಟ್ಟೆ ನೋವಿಗೆ ಈ ಮದ್ದು ತೊಗೊಳ್ಳಿ ಬೇಗನೇ ಕಮ್ಮಿಯಾಗುತ್ತೆ ಕೇವಲ ಪ್ಯಾಕೇಟ್‌ಗೆ ೧೦ ರೂ. ಪ್ಯಾಕೇಟ್‌ಗೆ ೧೦ ರೂ.” ಎಂದು ಬೊಬ್ಬಿಡುವ ಸದ್ದು ಕೇಳಿ ದಿಗ್ಗನೆ ಎಚ್ಚರಗೊಂಡಿತು ಮನಸ್ಸು. ಬಸ್ಸು ಅದ್ಯಾವುದೋ ಊರಲ್ಲಿ ನಿಂತಿತ್ತು. ಇತರೆ ಬಸ್ಸುಗಳು ಹೊಗೆಯಾಡುತ್ತಿದ್ದವು. ಘಾಟಿ ಹತ್ತಿದ ಬಳಿಕ ಸಿಗುವ ಪುಟ್ಟ ಊರು ತಲುಪಿದೆವೋ ಏನೋ, ಘಾಟಿ ಹತ್ತುವ ವೇಳೆ ತಿರುವು ಮುರುವಿನಲ್ಲಿ ಕಲಕಿದ ಹೊಟ್ಟೆಗೆ ಈತನ ದಿವ್ಯೌಷಧ.! ಪ್ರೀತಿ ಸೋತು ಮನ ಕಲಕಿದವರಿಗೆ ಔಷಧ ಉಂಟೇ? ಕಾಣದ ಗಾಯಕ್ಕೆ ಇಲ್ಲದ ಮುಲಾಮು ಹಚ್ಚುವವರಾರು.. ಜಾತ್ರೆಯ ತೇರು ದೇವರ ಭಾರ ತಾಳಲಾರದೆ ಮುರಿದುಹೋಗಿದೆ. ಪ್ರೀತಿಯ ಗಾಯನ ಕರ್ಕಶವಾಗಿದೆ. ಮೌನದಲೇ ಮಾತನಾಡಿ, ಪ್ರೀತಿಯ ಅರ್ಥ ಗ್ರಹಿಸಿ, ಮತ್ತಷ್ಟು ಮೌನ ಸೇರಿಸಿ ಮುದ್ದಿಸಿ ಹೇಳಲಾಗದ ಭಾವವನ್ನು ಸೇರಿಸಿ ತುಸು ಮೌನ ಉಳಿಸಿ ದೂರ ಸರಿದಿದ್ದೇವೆ. ವರುಷಗಳೇ ಉರುಳಿವೆ. ಮತ್ತೆ ಹೊಸ ಪ್ರೀತಿಯ ತೇರಿನ ಮಧುರಯಾತ್ರೆ. ಮನಸ್ಸಿನ ನೆನಪುಗಳ ಸ್ಪರ್ಶ ವಾಸ್ತವತೆಯತ್ತ ಉರುಳುತ್ತಿದೆ.

ಆಕಾಂಕ್ಷ ಬರಿಯ ನೆನಪು ಮಾತ್ರ. ದೂರದ ನಕ್ಷತ್ರದ ಹೊಳಪಿದ್ದಂತೆ. ಬಹುಶಃ ಮೊದಲ ಪ್ರೀತಿ ಯಾವತ್ತೂ ಕೈಕೊಡುತ್ತದೆ ಎಂಬ ಮಾತು ಮತ್ತೆ ಸತ್ಯವಾಯಿತು. ೭ ವರ್ಷಗಳ ಗೆಳೆತನ ಪ್ರೀತಿ ಎಂಬ ಸಂಬಂಧದ ಅಧ್ಯಾಯ ಮುಗಿದು ಅವಳಿಗೂ ಮದುವೆ ಗೊತ್ತಾಗಿದೆ. ನನಗೂ ನಿಘಂಟಾಗಿದೆ ಬಂಧನ. ಆಕೆ ಅನುರೂಪ ನನ್ನ ಜೀವನದ ಹೊಸ ರೂಪ, ಇನ್ನು ಮುಂದಿನ ಪ್ರತಿರೂಪ.

ಮೊದಲ ಪ್ರೀತಿಗೆ ಮನಸ್ಸೇ ಒಡೆಯಿತು. ಜೀವನವೇ ಇಲ್ಲ ಎಂದು ತಿಳಿದು ಸೊರಗಿದ್ದ ನನಗೆ ಅನುರೂಪ ಮತ್ತೆ ಪ್ರೀತಿಯ ಸೆಲೆ ನೀಡಿದ್ದಾಳೆ. ಕಾಣದ ಕಡಲಿಗೆ ಹಂಬಲಿಸಿದ ಮನಕ್ಕೆ ಆಕೆಯ ಮನಸ್ಸಿನ ಕಡಲನ್ನೇ ನೀಡಿದ್ದಾಳೆ. ಮೋಡ ಮರೆಯಾಗಿ ಹೊಂಬೆಳಕು ಹರಿಸಿದ್ದಾಳೆ. ತುಟಿಯಲ್ಲಿ ಪ್ರೀತಿಯ ಸಪ್ಪಳ ಮೂಡಿಸಿದ್ದಾಳೆ. ಆಕಾಂಕ್ಷಳ ನೆನಪುಗಳ ನಡುವೆ ಅನುರೂಪಳೊಂದಿಗೆ ಜೀವನ. ಇದು ಜೀವನದ ಅನುರೂಪ.

ಟೀ ಎಸ್ಟೇಟ್, ಟೀ ಎಸ್ಟೇಟ್ ಇಳಿಯುವವರು ಇಳಿದುಕೊಳ್ಳಿ ಎಂದು ಶಿಳ್ಳೆ ಊದುತ್ತಾ ಕಂಡಕ್ಟರ್ ಬಸ್ ನಿಲ್ಲಿಸಲು ಸೂಚಿಸಿದ. ತತ್‌ಕ್ಷಣ ಯೋಚನಾ ಲಹರಿಯ ಮನಸ್ಸು ಮನಸ್ಸು ವಾಸ್ತವ ಸ್ಥಿತಿ ತಲುಪಿತು ಕಣ್ಣು ಅರಳಿತು. ಟೀ ಎಸ್ಟೇಟ್ ಆಕಾಂಕ್ಷ ನೆನಪಿನಲ್ಲಿದ್ದ ನನಗೆ ಅನುರೂಪ ಮೊದಲು ಭೇಟಿ ಮಾಡಿದ ಜಾಗ ಟೀ ಎಸ್ಟೇಟ್…ಪ್ರೀತಿಯ ಕಹಾನಿ ಪ್ರಾರಂಭವಾದದ್ದು ಇಲ್ಲೆ. ಬಸ್ಸು ಮುಂದೆ ಸಾಗುತ್ತಿದೆ. ಈಗ ಮನತುಂಬಾ ಅನುರೂಪಾಳದ್ದೇ ನೆನಪು…

ಆ ದಿನಗಳು ಆಕಾಂಕ್ಷ ಇಲ್ಲದೆ ಬದುಕಿಲ್ಲ ಎಂದುಕೊಂಡು ಮೌನಿಯಾಗಿ ಕುಳಿತಿದ್ದೆ. ಪ್ರೀತಿಗಾಗಿ ಚಡಪಡಿಸುತ್ತಿದ್ದೆ. ಅಂದು ಅಮ್ಮ ನೋಡೋ ದೂರದ ಪಟ್ಟಣದಿಂದ ನಮ್ಮ ಮನೆಗೆ ಅನುರೂಪ ಬರುತ್ತಿದ್ದಾಳೆ. ಒಂಡೆರಡು ತಿಂಗಳು ಇರುತ್ತಾಳೆ. ಅದೇ ಬಾಲ ಮಾವನ ಮಗಳು. ಕರೆದುಕೊಂಡು ಬಾ. ಟೀ ಎಸ್ಟೇಟ್ ಬಳಿ ಇಳಿದುಕೊಳ್ಳುತ್ತಾಳೆ. ಅಲ್ಲಿಂದ ಘಾಟಿ ಇಳಿದು ಊರು ತೋರಿಸಿಕೊಂಡು ಬಾ ಎಂದು ಅಮ್ಮ ಅವಳನ್ನು ಮನೆಗೆ ಕರೆತರಲು ಕಳುಹಿಸಿದ್ದಳು. ಬೇಡ, ಅವಳಿಗೆ ನೇರ ಬರಲಿಕ್ಕೆ ಹೇಳು ಎಂದು ಅಮ್ಮನ ಬಳಿ ಹೇಳಿದರೂ ಬಿಡದ ಅಮ್ಮನಿಗಾಗಿ ಒಲ್ಲದ ಮನಸ್ಸಿನಿಂದ ಟೀ ಎಸ್ಟೇಟ್‌ಗೆ ಭಾರದ ಪಯಣ ಆರಂಭಿಸಿ, ಟಿ ಎಸ್ಟೇಟ್ ತಲುಪುವಷ್ಟರಲ್ಲಿ ಆಕೆ ನನಗಾಗಿ ಕಾದಿದ್ದಳು. ಪಟ್ಟಣದ ಹುಡುಗಿ, ಕೂಲಿಂಗ್ ಗ್ಲಾಸ್ ಹಾಕಿ, ಜೀನ್ಸ್ ಟಾಪ್ ಹಾಕಿಕೊಂಡು ಪ್ರಕೃತಿ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಳು. ಆಕೆಯ ಬಳಿ ಮೆಲ್ಲಗೆ ನಡೆದೆ. ಪಟ್ಟಣದ ಹುಡುಗಿ ಜೋರಿರುತ್ತಾರೆ, ಹಿತಮಿತವಾಗಿ ಮಾತನಾಡಬೇಕೆಂದು ಮೆಲುವಾಗಿ ಹೊರೊಡೋಣವೇ ಎಂದೆ. ಯಸ್ ಲೆಟ್ ಅಸ್ ಎಂದಳು. ಬಸ್ಸು ಸಿಕ್ಕಿತು. ಆಕೆ ಕುಳಿತು ಕೊಂಡಳು, ನಿಂತೇ ಇದ್ದ ನನ್ನನ್ನು ಕರೆದು ಬಳಿ ಕೂರಲು ಹೇಳಿದಳು ಆಕಾಂಕ್ಷಳನ್ನು ಹೊರತುಪಡಿಸಿ ಮೊದಲ ಬಾರಿಗೆ ಬೇರೆ ಹೆಣ್ಣಿನ ಜೊತೆ ಸಹವಾಸ… ಮೆಲ್ಲನೆ ಮಾತುಗಳ ಧ್ವನಿಗೂಡಿದವು

ಮುಂದೆ ಹೋಗಿ, ಜಾಗ ಇದೆ ತುಂಬ, ಮುಂದೆ ಹೋಗೋಕೂ ಹೇಳ್ಬೇಕು, ಚಿಲ್ಲರೆ ಕೊಡ್ತೇನೆ, ಇಳಿಯುವಾಗ ಟಿಕೆಟ್ ತೋರಿಸಿ, ಈಗ ಮುಂದೆ ಹೋಗಿ ಎಂದು ಕಂಡೆಕ್ಟರ್ ಒಬ್ಬರಿಗೆ ಹೇಳುತ್ತಿದ್ದ. ಪಟ್ಟಣಕ್ಕೆ ಅದೆಷ್ಟು ಮಂದಿ ಪ್ರಯಾಣಿಸುತ್ತಾರೆ. ಬಸ್ಸಿನಲ್ಲಿ ನೂಕುನಗ್ಗಲಾಗುತ್ತು. ನನ್ನ ಮೇಲೆ ಒಂದಿಬ್ಬರು ಒರಗಿದ ಅನುಭವವಾಗಿ ಜಾಗೃತನಾಗಿ ಪಟ್ಟಣಕ್ಕೆ ದಿನನಿತ್ಯ ಹೋಗಲು ಸಾಹಸ ಪಡಬೇಕು ಅಂದುಕೊಂಡೆ. ಕಂಡೆಕ್ಟರ್ ಟಿಕೆಟ್ ಕೋಡೋದರಲ್ಲಿ ಬ್ಯುಸಿ. ಕೆಲ ಹುಡುಗರ ಹಿಂಡು ಹರಟೆ ಹೊಡೆಯುತ್ತಿತ್ತು. ನಿಂತಿದ್ದರೂ ಹರಟೆ… ಅನುರೂಪ ನಮ್ಮೂರಲ್ಲಿದ್ದ ಆ ಮೂರು ತಿಂಗಳಲ್ಲಿ ಆಕೆ ಅದೆಷ್ಟು ಹರಟೆ ಹೊಡೆದಿದ್ದಳು…

ಟೀ ಎಸ್ಟೇಟ್ನಿಂದ ಮನೆಗೆ ಕರೆದುಕೊಂಡ ಬಂದವಳೇ ಅಮ್ಮನೊಂದಿಗೆ ಹರಟೆ, ಬಳಿಕ ಊರು ಸುತ್ತಿಸು ಎಂದು ನನ್ನನ್ನು ಎಳೆದೊಯ್ಯುತ್ತಿದ್ದಳು. ಆಗ ತಾನೆ ಡಿಗ್ರಿ ಮುಗಿಸಿ ಊರಿಗೆ ಬಂದಿದ್ದಳು. ಪಟ್ಟಣದಲ್ಲಿದ್ದ ಕಾರಣ ಹಳ್ಳಿ ಎಂದರೆ ಆಕೆಗೆ ಪ್ರೀತಿ. ಕಾಲ ಎಲ್ಲವನ್ನೂ ಮರೆಸುತ್ತೆ ಎನ್ನುವಂತೆ ಹಳೆ ಪ್ರೀತಿ ಮರೆಯಾಗಿ ಅನುರೂಪಳೊಂದಿಗೆ ಹರಟೆ ಹೊಡೆಯುತ್ತಿದ್ದೆ. ಸಂತಸ ಪಡುತ್ತಿದ್ದೆ. ಪೇಟೆಯ ಹುಡುಗಿಯಾದರೂ ಮಿತವಾಗಿ ಹಿತವಾಗಿ ಮಾತನಾಡುತ್ತಿದ್ದಳು. ಎರಡು ತಿಂಗಳಲ್ಲೇ ಮನಸ್ಸು ಅನುರೂಪಾಳಿಗೊಂದು ಗೂಡು ಕಟ್ಟುತ್ತಿತ್ತು. ಊರು ಸುತ್ತಿಸೋ ನೆಪದಲ್ಲಿ ಆಕಾಂಕ್ಷ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದೂ ಆಗಿತ್ತು. ಅನುರೂಪ ಮೈ ಬೆಸ್ಟ್ ಫ್ರೆಂಡ್ ಎಂದು ಆಕಾಂಕ್ಷಳಲ್ಲಿ ತಿಳಿಸಿ, ಆಕಾಂಕ್ಷಳೂ ನನ್ನ ಮದುವೆ ನಿಶ್ಚಯವಾಗಿದೆ ಎಂದು ಯಾರದ್ದೋ ಫೋಟೋ ತೋರಿಸಿದಳು ಹ್ಯಾಪಿ ಮ್ಯಾರೀಡ್ ಲೈಫ್ ಅಡ್ವಾನ್ಸ್ ಎಂದು ವಿಶ್ ಮಾಡಿ ಮನೆಯಿಂದ ಹೊರಬಂದಿದ್ದೂ ಆಗಿತ್ತು. ಹಿಂದಿದ್ದ ಪ್ರೀತಿಯ ಅಗಾಧತೆ ಈಗ ಆಕಾಂಕ್ಷ ಹಾಗೂ ನನ್ನಲ್ಲಿ ಇರಲಿಲ್ಲ. ಇಬ್ಬರ ಮನಸ್ಸು ತಿಳಿಯಾಗಿ ಬೇರೆ ಏನನ್ನೂ ಬಯಸುತ್ತಿತ್ತು ಎಂದು ಅರಿವಿಗೆ ಬಂತು. ಈ ನಡುವೆ ಅನುರೂಪ ಬಂದು ಮೂರು ತಿಂಗಳಾಗಿತ್ತು. ಪಟ್ಟಣಕ್ಕೆ ವಾಪಸ್ಸು ಹೋಗುವ ತರುವಾಯ ತರಾತುರಿಯ ಸಿದ್ಧತೆಯಲ್ಲಿದ್ದಳು. ಮತ್ತೆ ಬಸ್‌ಸ್ಟ್ಯಾಡ್ ತನಕ ಬಿಡುವ ಕೆಲಸ ನನ್ನದಾಗಿತ್ತು. ಮತ್ತೆ ಭಾರದ ಮನಸ್ಸು, ಈ ಬಾರಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂಬ ಕಾರಣ.

ಮೊಬೈಲ್ ಸದ್ದಾಯಿತು. ನೋಡಿದಾಗ ಅನುರೂಪ ಕರೆ ಮಾಡಿದ್ದಳು. ಹಾಂ ನಿನ್ನನ್ನು ಊರಿಗೆ ಕರೆದುಕೊಂಡು ಬರಲು ಪಟ್ಟಣಕ್ಕೆ ಬರುತ್ತಿದ್ದೇನೆ ಇನ್ನೂ ಒಂದೆರಡು ಗಂಟೆಯಲ್ಲಿ ನಿಮ್ಮ ಮನೆಯಲ್ಲಿ. ಎಂದು ಫೋನ್ ಕಟ್ ಮಾಡಿದೆ. ಅನುರೂಪ ಫೋನ್ ಮಾಡಿ ಬರುವಂತೆ ಸೂಚಿಸಿದ್ದಳು. ಪಟ್ಟಣಕ್ಕೆ ಹಿಂತಿರುಗುವ ವೇಳೆ ಆಕೆ ಮೊಬೈಲ್ ನಂಬರ್ ಕೊಟ್ಟು ಕೀಪ್ ಇನ್ ಟಚ್ ಅಂದಿದ್ದಳು. ಮನೆಗೆ ರೀಚ್ ಆದ ತಕ್ಷಣ ಕರೆ ಮಾಡುತ್ತೇನೆ ಎಂದಿದ್ದಳು. ಅಂತೆಯೇ ದಿನವೂ ನಮ್ಮ ಮಾತುಕತೆ ನಡೆಯುತ್ತಿತ್ತು. ಕಾಲ್ ಮೆಸೇಜ್ ಮಾಡುತ್ತಲೇ ಇದ್ದಳು. ನಾನು ಮಾಡತೊಡಗಿದ್ದೆ. ಒಂದು ವರುಷ ಕಾಲ ನಿರಂತರ…ಮತ್ತೆ ಮನಸ್ಸು ಪ್ರೀತಿಯ ಹಳಿಗೆ ಬಿದ್ದಿತ್ತು.. ಮನೆಯಲ್ಲಿ ಒಪ್ಪದಿದ್ದರೆ ಸಹಿಸಿಕೊಳ್ಳುವಷ್ಟು ಗಟ್ಟಿತನ ಮನಸ್ಸಿನಲ್ಲಿತ್ತು. ವಾಸ್ತವತೆಯಲ್ಲಿ ಪ್ರೀತಿ ಇತ್ತು. ಮನೆಯಲ್ಲಿ ಅಮ್ಮನ ಬಳಿ ಪ್ರೀತಿಯ ವಿಷಯ ತಿಳಿಸಲಾಗಿ, ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆಯಿತು. ಹಳ್ಳಿಯಲ್ಲಿಯಾದರೂ ಉತ್ತಮ ಉದ್ಯೋಗದಲ್ಲಿದ್ದ ನನ್ನನ್ನು ಆಕೆಯೂ ಒಪ್ಪಿ, ಆಕೆಗೂ ಪ್ರೀತಿಯ ಭಾವನೆ ಮೂಡಿದ್ದನ್ನು ವ್ಯಕ್ತಪಡಿಸಿದಳು. ಇನ್ನು ಒಂದು ವಾರದಲ್ಲಿ ಎಂಗೇಜ್ಮೆಂಟ್. ಮತ್ತೆ ಬರುತ್ತಿದ್ದಾಳೆ ಅನುರೂಪ, ಈ ಬಾರಿ ಹಳ್ಳಿ ಸುತ್ತುವಾಗ ಹೊಸ ತೆರೆನಾದ ಬಾಂಧವ್ಯ, ವಸಂತ ಕೋಗಿಲೆಯ ಶಿಶಿರ ಗೀತೆ. ಆಕಾಂಕ್ಷ ಮನೆಗೆ ತೆರಳಿ ವಿ ಆರ್ ಮೇಡ್ ಫಾರ್ ಈಚ್ ಅದರ್ ಎಂದು ನನ್ನ ಅನುರೂಪ ಎಂಗೇಜ್ಮೆಂಟ್ ಹಾಗೂ ಮದುವೆಗೆ ಕರೆಯೋಲೆ ನೀಡಬೇಕು ಎಂಬ ಹುಮ್ಮಸ್ಸು ಮನದಲ್ಲಿ.

-ಚಂದ್ರಶೇಖರ್ ಎಸ್. ಅಂತರ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post