ಸ್ಪೇನ್ ದೇಶದಲ್ಲಿ ನೇರವಾಗಿ ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತಿಲ್ಲ. ಇಲ್ಲಿನ ಗಾದೆಯಲ್ಲಿ ಬಳಸಿರುವ ಉಪಮೆ ಬೇರೆ ಇರಬಹದು ಆದರೆ ಕೊಡುವ ಅರ್ಥ ಮಾತ್ರ ಒಂದೇ. ಸ್ಪೇನ್ ನಲ್ಲಿ “chancho limpio nunca engorda” ( ಚಾಂಚೊ ಲಿಂಪಿಯೋ ನುಂಕ ಏನ್ಗೋರ್ದ ) ಎನ್ನುವ ಗಾದೆ ಮಾತಿದೆ.
ಸ್ವಚ್ಛವಾಗಿರುವ ಹಂದಿಯಿಂದ ದಪ್ಪವಾಗುವುದಿಲ್ಲ ಎನ್ನುವ ಅರ್ಥವನ್ನು ಕೊಡುತ್ತದೆ. ಇದೇನಿದು ಸ್ವಚ್ಛವಾಗಿರವ ಹಂದಿಯಿಂದ ದಪ್ಪವೇಕೆ ಆಗುವುದಿಲ್ಲ? ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. ಹಂದಿ ಎಂದ ತಕ್ಷಣ ಅದು ಅಶುದ್ಧಿ ಎನ್ನುವಷ್ಟು ಪ್ರಸಿದ್ದಿ ಅಲ್ಲವೇ? ನೀವು ಎಲ್ಲಾದರೂ ಸ್ವಚ್ಛ ಹಂದಿಯ ರಸ್ತೆಯಲ್ಲಿ ಕಂಡಿದ್ದೀರಾ? ಹಾಗೇನಾದರೂ ಅದು ಪೂರ್ಣ ಶುಚಿಯಾಗಿದ್ದರೆ ಅದನ್ನು ಕೊಂದು ಮಾಂಸ ಪಡೆಯಲು ಶುಚಿ ಮಾಡಿದ್ದಾರೆ ಎಂದರ್ಥವಲ್ಲವೇ? ಹೀಗಾಗಿ ಶುಚಿಯಾಗಿರುವ / ಸ್ವಚ್ಛವಾಗಿರುವ ಹಂದಿ ಖಂಡಿತ ಇನ್ನೊಬ್ಬರ ಸ್ವತ್ತಾಗಿರುತ್ತದೆ. ಇನ್ನೊಬ್ಬರ ಸ್ವತ್ತು ನಮ್ಮ ಹೊಟ್ಟೆ ತುಂಬಿಸುವುದಾದರೂ ಹೇಗೆ? ಹೊಟ್ಟೆಯೇ ತುಂಬದಿದ್ದ ಮೇಲೆ ದಪ್ಪವಾಗುವುದಾದರೂ ಹೇಗೆ? ಹಂದಿ ನಿನ್ನೆ ಹೊಟ್ಟೆ ತುಂಬಿಸಬೇಕಾದರೆ ಅದನ್ನ ಹಿಡಿಯಬೇಕು, ತೊಳೆಯಬೇಕು ಸಾಕಷ್ಟು ವೇಳೆ ವ್ಯಯಿಸಿ ಕಷ್ಟ ಪಡಬೇಕು ಆಗಷ್ಟೇ ಹಂದಿಯ ಮಾಂಸ ಹೊಟ್ಟೆ ತುಂಬೀತು! ದೇಹ ದಪ್ಪವೂ ಆದೀತು!! ಸ್ಪಾನಿಷ್ ಹಿರಿಯರು ಹೇಳಿದ್ದು ಇದನ್ನೇ ಸುಮ್ಮನೆ ಕೂತರೆ ಯಾವುದೂ ನಮ್ಮ ಬಳಿ ಬರುವುದಿಲ್ಲ ಎಲ್ಲಕ್ಕೂ ವೇಳೆ ಮತ್ತು ಶ್ರಮ ಎರಡನ್ನೂ ಹಾಕಿದಾಗ ಮಾತ್ರ ಅದು ಫಲಿತ ಕೊಡುತ್ತದೆ ಎನ್ನುವ ಅರ್ಥದಲ್ಲಿ ಚಾಂಚೊ ಲಿಂಪಿಯೋ ನುಂಕ ಏನ್ಗೋರ್ದ ಎಂದರು.
ಸ್ಪಾನಿಷ್ ಗಾದೆಯಲ್ಲಿನ ಅರ್ಥ ಸ್ವಲ್ಪ ನಿಗೂಢತೆಯಿಂದ ಕೂಡಿತ್ತು. ಆದರೆ ನಮ್ಮಲ್ಲಿ ಹಾಗಲ್ಲ ಕಷ್ಟ ಪಟ್ಟರೆ ಸುಖವಿದೆ ಎನ್ನುವುದನ್ನ ನಮ್ಮ ಹಿರಿಯರು ಸುಲಿದ ಬಾಳೆ ಹಣ್ಣಿನಂತೆ ಸಲುಭವಾಗಿ ಅರ್ಥವಾಗುವ ರೀತಿಯಲ್ಲಿ ‘ ಕೈ ಕೆಸರಾದರೆ ಬಾಯಿ ಮೊಸರು ‘ ಎಂದರು. ಎಷ್ಟು ಸರಳವಾಗಿ ಹೇಳಿದ್ದಾರೆಂದರೆ ಇದಕ್ಕೆ ವಿವರಣೆಯ ಅಗತ್ಯವೇ ಇಲ್ಲ. ಸುಖ ಬೇಕೇ? ಕಷ್ಟ ಪಡು.. ಬಾಯಿ ಮೊಸರಾಗಬೇಕೇ? ಮೊದಲು ಕೈ ಕೆಸರಾಗಬೇಕು. ಅರಸನಾಗಬೇಕೇ ? ಆಳಾಗಿ ದುಡಿಯಲು ಸಿದ್ಧನಿರು ಎನ್ನುವ ಮಾತುಗಳನ್ನು ಒಂದೇ ವಾಕ್ಯದಲ್ಲಿ ಕಟ್ಟಿಕೊಟ್ಟರು ನಮ್ಮ ಹಿರಿಯರು.
ಇನ್ನು ಇಂಗ್ಲಿಷ್ ಭಾಷಿಕರು ಕೂಡ ಅಷ್ಟೇ ಸರಳವಾಗಿ ‘ No pain, no gain’ ಅಥವಾ No gain without pain” ಎಂದರು. ಭಾಷೆ ಬದಲಾದವು. ವೇಳೆ ಬದಲಾಯಿತು ಆದರೂ ಇಂದಿಗೂ ಅವು ಪ್ರಸ್ತುತವಾಗಿವೆ. ಮನುಕುಲವಿರುವರೆಗೂ ಅವುಗಳ ಪ್ರಸ್ತುತತೆ ಪ್ರಶ್ನಾತೀತ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ:
chancho: ಹಂದಿ ಎನ್ನುವುದು ಅರ್ಥ. ಚಾಂಚೊ ಉಚ್ಚಾರಣೆ.
limpio: ಸ್ವಚ್ಛ . ಶುಚಿಯಾಗಿರುವ ಎನ್ನುವ ಅರ್ಥ. ಲಿಂಪಿಯೋ ಉಚ್ಚಾರಣೆ.
nunca: ಎಂದೆಂದಿಗೂ.. ಯಾವತ್ತಿಗೂ ಎನ್ನುವ ಅರ್ಥ ಕೊಡುತ್ತದೆ. ನುಂಕ ಉಚ್ಚಾರಣೆ.
engorda: ದಪ್ಪ, ದಪ್ಪವಾಗುವಿಕೆ ಎನ್ನುವ ಅರ್ಥ ಕೊಡುತ್ತದೆ. ಏನ್ಗೋರ್ದ ಎನ್ನುವುದು ಉಚ್ಚಾರಣೆ.
Facebook ಕಾಮೆಂಟ್ಸ್