ಸಮಾನಾರ್ಥಕ ಸ್ಪಾನಿಷ್ ಗಾದೆ Donde hay humo, hay calor.
ಜಗತ್ತಿನಾದ್ಯಂತ ಮನುಷ್ಯನ ಮೂಲ ನಡವಳಿಕೆ ಇಂದಿಗೂ ಸೇಮ್ ! ವೇಷ , ಭಾಷೆ , ಆಹಾರ, ವಿಚಾರ ಬದಲಾದಂತೆ ಕಂಡರೂ ಮನುಷ್ಯನ ಮೂಲಭೂತಗುಣಗಳು ಮಾತ್ರ ಅಚ್ಚರಿ ಹುಟ್ಟಿಸುವಂತೆ ದೇಶ ಕಾಲ ಮೀರಿ ಒಂದೇ ಎನ್ನುವುದು ಮಾತ್ರ ಸತ್ಯ .
ಸ್ಪೇನ್ ದೇಶದಲ್ಲಿ ನನ್ನ ಮೊದಲ ವರ್ಷಗಳು ಅಲ್ಲಿನ ಭಾಷೆ ಕಲಿತು ಆಗಷ್ಟೇ ಅಲ್ಲಿನ ಸಂಸೃತಿಗೆ ಮನಸ್ಸನ್ನು ಒಗ್ಗಿಸಿಕೊಳುತ್ತಿದ್ದ ಕಾಲ. ಅಲ್ಲಿಯವರೆಗೆ ಅವರು ಸಕಲ ಗುಣ ಸಂಪನ್ನರು ! ನಿಧಾನವಾಗಿ ಅಲ್ಲಿನ ಜೀವನದಲ್ಲಿ ಬೆರೆತು ಹೋದಂತೆ ತಿಳಿದ ಸತ್ಯ ಅಲ್ಲಿಯೂ ಜನ ಗಾಸಿಪ್ ಮಾಡುವುದು ಇಷ್ಟ ಪಡುತ್ತಾರೆ ಎನ್ನುವುದು . ಯಾವುದಾದರೊಬ್ಬ ವ್ಯಕ್ತಿ ಎದುರಿಗಿದ್ದಾಗ ಸಭ್ಯತೆ ಮೆರೆಯುವ ಜನ ಆತನ ಹಿಂದೆ ಆತನ ಕುರಿತು ಮಾತನಾಡುವುದು ಕೂಡ ಸಹಜ . ನಾವು ಅಂದುಕೊಂಡಂತೆ ಪಾಶ್ಚಾತ್ಯರು ತಮ್ಮ ಜೊತೆಗಾರ/ಗಾತಿಯನ್ನು ಬಟ್ಟೆ ಬದಲಿಸಿದಂತೆ ಬದಲಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು. ಅಲ್ಲಿಯೂ ಬ್ರೇಕ್ ಅಪ್ ನಂತರದ ತಳಮಳಗಳು ನೋವು ಇದ್ದದ್ದೆ. ಒಬ್ಬ ವ್ಯಕ್ತಿಯ ಬಗ್ಗೆ ಯಾರಾದರೂ ನೆಗಟಿವ್ ಅಥವಾ ಗಾಸಿಪ್ ಹೇಳಿದರೆ ಅದರ ಕುರಿತು ಗೊತ್ತಿಲ್ಲದಿದ್ದರೂ ‘ ಏನೋ ಇರಬೇಕು ಏನೂ ಇಲ್ಲದೆ ಸುಮ್ಮನೆ ಅವರ ಬಗ್ಗೆ ಕೆಟ್ಟ ಮಾತನಾಡುವರೇಕೆ? ‘ ಎನ್ನುವ ಅರ್ಥ ಕೊಡಲು ಸ್ಪಾನಿಷ್ ಭಾಷೆಯಲ್ಲಿ ‘ Donde hay humo, hay calor.’ ಎನ್ನುವ ಗಾದೆಯನ್ನ ಬಳಸುತ್ತಾರೆ .
ನಮ್ಮಲ್ಲಿ ಕೂಡ ಒಮ್ಮೆ ಗಾಳಿ ಸುದ್ದಿ ಹಬ್ಬಿದರೂ ಅದನ್ನು ಪರಾಮರ್ಶಿಸುವ ಬದಲಾಗಿ ‘ ಬಿಡ್ರಿ ಬೆಂಕಿಯಿಲ್ಲದೆ ಹೊಗೆಯಾಡುತ್ತಾ ‘ ಎನ್ನುವುದು ಸಾಮಾನ್ಯವಾಗಿ ಕೇಳಿ ಬರುವ ಮಾತು .
ಇಂಗ್ಲಿಷ್ ಭಾಷಿಕರಲ್ಲಿ There’s no smoke without fire ಎನ್ನುವದು ಸಾಮಾನ್ಯವಾಗಿ ಬಳಸುವ ಆಡುಮಾತು . ಅಲ್ಲದೆ ಇಂಗ್ಲಿಷರಲ್ಲಿ ಬೆಂಕಿಯಿದೆ ಅದಕ್ಕೆ ಹೊಗೆ ಬಂದಿದೆ ಎಂದು ಹರಡಿದ ಸುದ್ದಿಯ ಒಪ್ಪುವ ತರದ ಮಾತು ಕೂಡ ಹಲವು ಬಾರಿ Where there’s smoke, there’s fire ಎಂದೂ ಬಳಸುವುದು ಉಂಟು .
ಇವೇನೇ ಇರಲಿ ಇದರ ಸಾಮಾನ್ಯ ಅರ್ಥ ಮಾತ್ರ ಒಂದೇ ., ಘಟನೆ ಜರುಗದೆ ಜನ ಅದರ ಬಗ್ಗೆ ಸುಮ್ಮನೆ ಮಾತನಾಡುವುದಿಲ್ಲ ಎನ್ನವುದೇ ಅದಾಗಿದೆ .
ಇಂದಿನ ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Donde : ಎಲ್ಲಿ ಎನ್ನುವ ಅರ್ಥ ಕೊಡುತ್ತದೆ . ದೊಂದೆ ಎನ್ನುವುದು ಉಚ್ಚಾರಣೆ .
Hay : ಇದೆ ಎನ್ನುವ ಅರ್ಥ ಕೊಡುತ್ತದೆ . ಹಾಯ್ ಎನ್ನುವುದು ಉಚ್ಚಾರಣೆ
humo : ಹೊಗೆ ಎನ್ನುವ ಅರ್ಥ ಕೊಡುತ್ತದೆ . ಹುಮೂ ಎನ್ನುವುದು ಉಚ್ಚಾರಣೆ .
calor. : ಬಿಸಿ ಎನ್ನವುದು ಶಬ್ದಕೋಶದ ಅರ್ಥ ಭಾವಾರ್ಥ ಬೆಂಕಿ . ಕಾಲೊರ್ ಎನ್ನುವುದು ಉಚ್ಚಾರಣೆ .