ಆರೋಗ್ಯ

ಖಾರ ಆರೋಗ್ಯಕ್ಕೆ ಒಳ್ಳೆಯದ್ದಾ?

ನಮ್ಮ ನಾಲಿಗೆಯ ಚಪಲತೆಯನ್ನು ತಣಿಸಲು ಖಾರವಾದ ಆಹಾರದಿಂದಲೇ ಸಾಧ್ಯ. ಹಾಗೆಂದ ಮಾತ್ರಕ್ಕೆ ಖಾರವಾದ ಆಹಾರ ತಿನ್ನುವುದರಿಂದ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ? ಖಾರವೆಂದ ಕೂಡಲೆ ನಮಗೆ ನೆನಪಾಗುವುದು ಹಸಿ ಹಾಗು ಕೆಂಪು ಮೆಣಸಿನಕಾಯಿಗಳು ಹಾಗೂ ಇವುಗಳಿಂದ ತಯಾರಾದ ಭಕ್ಷ್ಯ ಭೋಜ್ಯಗಳು. ಭಾರತೀಯ ಆಹಾರ ಕ್ರಮದಲ್ಲಿ ಉಪ್ಪು ಎಷ್ಟು ಮುಖ್ಯ ಪಾತ್ರವಹಿಸುತ್ತದೆಯೋ ಅಷ್ಟೇ ಮೆಣಸಿನಕಾಯಿ ಕೂಡ. ಭಾರತೀಯರಿಗೆ ಖಾರವೆಂದರೆ ಪ್ರಿಯವೆಂದು ತಿಳಿದ ಪೋರ್ಚುಗೀಸರು ಹಸಿ ಹಾಗು ಕೆಂಪು ಮೆಣಸನ್ನು ನಮಗೆ ಪರಿಚಯಿಸಿದರು. ಆ ಸಮಯದಲ್ಲಿ ನಮ್ಮಲ್ಲಿ ಬೆಳೆಯುತಿದ್ದ ಕಾಳುಮೆಣಸನ್ನು ಪರದೇಶಕ್ಕೆ ರವಾನಿಸಿದರು.

ಹಸಿಮೆಣಸಿರಲಿ, ಒಣಮೆಣಸಿರಲಿ, ಅಚ್ಚಖಾರ ಪುಡಿಯಿರಲಿ ಇವುಗಳಲ್ಲಿ ‘ಕ್ಯಾಪ್ಸಿಸಿನ್’ ಎಂಬ ರಾಸಾಯನಿಕ ಘಟಕವಿದ್ದು, ಇದು ನಮ್ಮ ಜೀರ್ಣನಾಳದ ಒಳಗಿರುವ ಲೋಳೆ ಪದರವನ್ನು ಕರಗಿಸುತ್ತದಲ್ಲದೆ ಸೂಕ್ಷ್ಮ ರಂಧ್ರಗಳನ್ನೂ ಉಂಟುಮಾಡುತ್ತದೆ. ಹೀಗಾದಲ್ಲಿ ನಮ್ಮ ಜೀರ್ಣನಾಳದಿಂದ ಬಿಡುಗಡೆಯಾಗುವ ಆಮ್ಲ ದ್ರವಗಳು ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾಗುವುದಿಲ್ಲ. ಮಾತ್ರವಲ್ಲ ಲೋಳೆಪದರದ ನಾಶದಿಂದಾಗಿ ಜಠರದ ಉರಿ ಹಾಗೂ ಊತವನ್ನುಂಟು ಮಾಡುತ್ತದೆ. ಇದರಿಂದಾಗಿ ನಾವು ತಿಂದ ಆಹಾರವು ಸರಿಯಾಗಿ ಜೀರ್ಣ ಆಗುವುದಿಲ್ಲ. ಜೀರ್ಣವಾದರೂ ಲೋಳೆಪದರದ ನಾಶದಿಂದ ಸರಿಯಾಗಿ ಸತ್ವ ಹೀರುವುದಿಲ್ಲ. ಹೊಟ್ಟೆ ಮತ್ತು ಕರುಳಿನಲ್ಲಿ ಹುಣ್ಣುಗಳು ಕಾಣತೊಡಗುತ್ತವೆ. ಹೊಟ್ಟೆಯುಬ್ಬರ, ಎದೆಉರಿ, ತಲೆನೋವು, ಅನಿದ್ರೆ, ಮಲಬದ್ಧತೆ, ಮೈಕೈ ನೋವು, ಜಡತ್ವ ನಮ್ಮನ್ನು ಕಾಡುತ್ತದೆ.

ಒಮ್ಮೆ ನಮ್ಮಲ್ಲಿಗೆ ವಿಪರೀತ ತಲೆನೋವಿನಿಂದ ಪೀಡಿತನಾದ ಯುವಕನು ಬಂದ. ಕಳೆದ ಎರಡು ವರ್ಷಗಳಿಂದ ತಲೆನೋವು ಎಂದು ವಿವಿಧ ಔಷಧ ಸೇವಿಸುತ್ತಿದ್ದ. ಆದರೆ ಪರಿಹಾರ ಕಾಣದೆ ಬೇಸತ್ತು ಹೋಗಿದ್ದನು. ಈತ ಉಪ್ಪಿನಕಾಯಿ ಪ್ರಿಯ. ತನ್ನ ಆಹಾರದಲ್ಲಿ ಉಪ್ಪಿನಕಾಯಿ ಬೇಕೇ ಬೇಕು. ಮಧ್ಯಾಹ್ನ ಅನ್ನ+ಉಪ್ಪಿನಕಾಯಿ ಇವನ ಭೋಜನ. ಇವನಿಗೆ ಕಡ್ಡಾಯವಾಗಿ ಖಾರವಾದ ಆಹಾರದ ಬಳಕೆಯನ್ನು ನಿಲ್ಲಿಸಲು ಸಲಹೆ ನೀಡಿದೆವು.‘ನಿನಗೆ ಔಷಧದ ಅಗತ್ಯವೇ ಇಲ್ಲ. ಮೊದಲಿಗೆ ಉಪ್ಪಿನಕಾಯಿಯನ್ನು ನಿಲ್ಲಿಸು’ ಎಂದೆ. ಅದು ಸಾಧ್ಯವೇ ಇಲ್ಲ ಎಂದನು ನಂತರ ಒಂದು ವಾರ ಕಷ್ಟದಲ್ಲಿ ನಿಲ್ಲಿಸಬಹುದು ಎಂದ. ಒಂದು ವಾರ ಶಿಸ್ತಿನಲ್ಲಿ ಆಹಾರಕ್ರಮವನ್ನು ಪಾಲಿಸಿದ. ಆತನ ತಲೆನೋವು ಸಂಪೂರ್ಣವಾಗಿ ವಾಸಿಯಾಗಿತ್ತು. ಪುರಾತನಕಾಲದಲ್ಲಿ ಉಪ್ಪಿನಕಾಯಿಯನ್ನು ಮೆಣಸಿಲ್ಲದೇ ಮಾಡುತ್ತಿದ್ದರು. ಅಂದರೆ ಉಪ್ಪು+ಲಿಂಬೆ ಅಥವ ಮಾವಿನ ಕಾಯಿ = ಉಪ್ಪಿನಕಾಯಿ. ಈಗ ಇದಕ್ಕೂ ಮೆಣಸಿನ ಸ್ಪರ್ಶವಾಗಿದೆ.

ಈಗಿನ ಕಾಲದಲ್ಲಿ ಮೆಣಸಿನಕಾಯಿ ನಮ್ಮ ಪಾಕಶಾಲೆಯ ಅವಿಭಾಜ್ಯಅಂಗವಾಗಿದೆ. ಹಲವರು ಮೆಣಸಿಲ್ಲದೇ ಅಡುಗೆ ಹೇಗೆ ಮಾಡುವುದು ಎಂದು ಪ್ರಶ್ನೆ ಕೇಳುತ್ತಾರೆ. ಇನ್ನು ಕೆಲವರು ಮೆಣಸಿಲ್ಲದ ಅಡುಗೆ ಅಡುಗೆಯಾ?ಎಂದು ಪ್ರಶ್ನಿಸುತ್ತಾರೆ. ಆಹಾರಕ್ಕೆ ಹುಳಿ, ಉಪ್ಪು, ಖಾರ ಚೆನ್ನಾಗಿ ಬಿದ್ದರೇ ತಿನ್ನಲು ರುಚಿ ಎನ್ನುವುದು ಹಲವರ ಅಭಿಪ್ರಾಯ. ಆದರೆ ಮೆಣಸಿಲ್ಲದೆಯೂ ರುಚಿಕರ ಅಡುಗೆ ಮಾಡಬಹುದು. ಮೆಣಸಿನ ಬದಲಿಗೆ ಔಷಧೀಯ ಗುಣಗಳಿರುವ ಕಾಳುಮೆಣಸು (ಕರಿಮೆಣಸು) ಉಪಯೋಗಿಸುವುದು ಉತ್ತಮ. ಇದು ಶರೀರಕ್ಕೆ, ಜೀರ್ಣನಾಳಕ್ಕೆ ಹಿತವನ್ನು ಉಂಟುಮಾಡುವ ಕಾರಣ ಒಳ್ಳೆಮೆಣಸು ಎಂದು ಕರೆಯುತ್ತೇವೆ. ಕಾಳುಮೆಣಸು ನಮ್ಮ ಜೀರ್ಣನಾಳದ ಒಳಗಿನ ಲೋಳೆಪದರವನ್ನು ಕರಗಿಸುವುದಿಲ್ಲ. ನಮ್ಮ ಜೀರ್ಣನಾಳದಿಂದ ಹೊರಬರುವ ದ್ರವಗಳನ್ನು ಸಮಾನವಾಗಿ ಬಿಡುಗಡೆ ಮಾಡುವಂತೆ ನೋಡಿಕೊಳ್ಳುತ್ತದೆ.ಇದಲ್ಲದೇ ಶುಂಠಿ, ದೊಣ್ಣೆಮೆಣಸು, ಬೆಳ್ಳುಳ್ಳಿ, ನೀರುಳ್ಳಿ ಬಳಕೆಯೂ ಆರೋಗ್ಯಕ್ಕೆ ಉತ್ತಮ. ಹೀಗಾಗಿ ಆದಷ್ಟು ಮೆಣಸಿನಕಾಯಿಯ ಉಪಯೋಗ ಬಿಟ್ಟು ಒಳ್ಳೆಮೆಣಸು ಅಥವಾ ಶುಂಠಿ, ದೊಣ್ಣೆಮೆಣಸನ್ನು ಬಳಸಿ. ಇವು ಪಚನೆಯನ್ನು ಚುರುಕುಗೊಳಿಸುವುದಲ್ಲದೆ ಸಹಜವಾಗಿ ಕೊಬ್ಬನ್ನು ಕರಗಿಸುವ ಶಕ್ತಿಯನ್ನು ಹೊಂದಿವೆ.

ಡಾ. ಶ್ರೀವತ್ಸ ಭಾರದ್ವಾಜ್

 

ಕೃಪೆ : ವಿಕ್ರಮ ವಾರಪತ್ರಿಕೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!