X

‘ಪಾಪಿ ಚಿರಾಯು’

ನಮ್ಮ ಮಧ್ಯೆ ಯಾರಾದರೂ ಕೆಟ್ಟ ಗುಣವಿದ್ದವರು ತಮ್ಮೆಲ್ಲಾ ಕೆಟ್ಟ ಗುಣಗಳ ನಡುವೆಯೂ ಆರಾಮಾಗಿ ಜೀವನ ನಡೆಸುವುದು ನಾವೆಲ್ಲಾ ನೋಡಿರುತ್ತೇವೆ . ಹಾಗೆಯೇ ಅತ್ಯುತ್ತಮ ಗುಣವುಳ್ಳ ಸನ್ನಡೆತೆಯ ಜನ ಬಹಳ ಬೇಗ ಸಾವಿಗೆ ತುತ್ತಾಗುವುದು ಅಥವಾ ಒಂದಲ್ಲ ಒಂದು ರೀತಿಯ ಪರೀಕ್ಷೆಗೆ ಒಳಗಾಗುವುದು ಕೂಡ ನೋಡಿಯೇ ಇರುತ್ತೇವೆ . ಆಗೆಲ್ಲಾ ಒಳ್ಳೆಯ ವ್ಯಕ್ತಿಯನ್ನ ಭಗವಂತ ಬೇಗೆ ಕರೆಸಿಕೊಳ್ಳುತ್ತಾನೆ ಎನ್ನವುದು ಮತ್ತು ‘ಪಾಪಿ ಚಿರಾಯು ‘ ಎಂದು ಕೆಟ್ಟ ವ್ಯಕ್ತಿಯ ಕುರಿತು ಹೇಳುವುದು ಕೂಡ ಕೇಳಿಕೊಂಡು ಬೆಳೆದವರು ಬಹುಪಾಲು .

ಸ್ಪೇನ್ ನಲ್ಲಿ ಕೂಡ ಇಂತಹ ಒಂದು ಭಾವನೆ ಜನರ ಮನದಲ್ಲಿ ಬೇರೂರಿದೆ ಮತ್ತು ಜನ ಅದನ್ನ ನಿತ್ಯ ಬಳಕೆಯ ಮಾತುಗಳಲ್ಲಿ ಇಂದಿನ ದಿನಗಳಲ್ಲಿ ಕೂಡ ಬಳಸುತ್ತಾರೆ ಎನ್ನುವುದು ಆಶ್ಚರ್ಯ ತರಿಸಿತು . ನಾನು ಕೆಲಸ ಮಾಡುತಿದ್ದ ಕಚೇರಿಯಲ್ಲಿ ‘ ಹೋಸೆ ‘ ಎನ್ನುವ ವ್ಯಕ್ತಿಯೊಬ್ಬನಿದ್ದ. ಆತನ ಮಾತಿನಲ್ಲಿ ದರ್ಪ ಮತ್ತು ಪ್ರತಿಯೊಂದಕ್ಕೂ ಏನಾದರೊಂದು ಹುಳುಕು ಹುಡುಕಿ ಬೇರೆಯವರ ಹಳಿಯುವುದರಲ್ಲಿ ಆತನಿಗೆ ಆಸಕ್ತಿ . ನನ್ನ ಸಹದ್ಯೋಗಿಯೊಬ್ಬರು  ಯಾರಾರಿಗೋ ಏನೇನೂ ಆಗುತ್ತೆ ಈ ಹೋಸೆಗೆ ಏನು ಆಗುವುದೇ ಇಲ್ಲ.  ಯೆರ್ಬಾ ಮಾಲಾ ನುಂಕ ಮೂರೆ  ಎಂದರು . ಅದೇನೆಂದು ಎಂದಾಗ ತಿಳಿದದ್ದು  ಔಷದಿಯ ಗುಣಗಳುಳ್ಳ ಗಿಡವನ್ನ ಬೆಳೆಸಲು ಸಾಕಷ್ಟು ಕಷ್ಟ ಪಡಬೇಕು. ಅದೇ ಕಳೆ ಅಥವಾ ಪಾರ್ಥೇನಿಯಂ ಗಿಡಗಳನ್ನ ಬೆಳೆಸಲು ಅಷ್ಟು ಕಷ್ಟ ಪಡುವ ಅವಶ್ಯಕತೆಯಿಲ್ಲ ಹಾಗೆಯೇ ಒಳ್ಳೆಯ ಗಿಡಗಳು ಸರಿಯಾಗಿ ನೋಡಿಕೊಳ್ಳದಿದ್ದರೆ ಬೇಗ ಹಾಳಾಗುತ್ತವೆ. ಕೆಲಸಕ್ಕೆ ಬಾರದ ಗಿಡಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ .

ಒಳ್ಳೆಯವರಿಗೆ ಎಂದಿಗೂ ಕಷ್ಟ ಜಾಸ್ತಿ ಕೆಟ್ಟವರು ಆರಾಮಾಗಿ ಬದುಕುತ್ತಾರೆ ಎನ್ನುವ ಅರ್ಥದ ಗಾದೆಯಿದು . ಇದರ ಸನಿಹಕ್ಕೆ ಬರುವ ಕನ್ನಡ ಗಾದೆ ಪಾಪಿ ಚಿರಾಯು .

ಸ್ಪ್ಯಾನಿಷ್ ಮಾತನಾಡುವ ದೇಶದಲ್ಲಿ ಈ ಗಾದೆ ಜನಜನಿತ . ಇಂಗ್ಲಿಷ್ ಭಾಷಿಕರ ದೇಶದಲ್ಲಿ “bad weeds never die.”  ಎನ್ನುತ್ತಾರೆ . ಆದರೇನು ಅರ್ಥ ಮಾತ್ರ ಸೇಮ್ .

ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

೧)yerba :  ಔಷದಿಯ ಗಿಡಗಳು , ಹರ್ಬ್ಸ್ .  ಉಚ್ಚಾರಣೆ : ಯೆರ್ಬಾ .

೨) mala : ಕೆಟ್ಟದ್ದು ., ಬ್ಯಾಡ್ ಎನ್ನುವ ಅರ್ಥ ಕೊಡುತ್ತೆ . ಉಚ್ಚಾರಣೆ : ಮಾಲಾ

೩)nunca : ಎಂದಿಗೂ   ., ಉಚ್ಚಾರಣೆ : ನುಂಕಾ

– ರಂಗಸ್ವಾಮಿ ಮೂಕನಹಳ್ಳಿ

<mookanahalli@gmail.com>

 

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post