X

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧

ಅದು 2014ರ ಮೇ ತಿಂಗಳ ಕೊನೆಯ ವಾರ. ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿ ಸುಧಾರಣಾ ಪರ್ವವನ್ನು ಆರಂಭಮಾಡಿದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲಿ ಎಂದು ಆಶಿಸುತ್ತಿರುವ ದೇಶದ ಜನರ ಕನಸು ಕೈಗೂಡಿದ ದಿನಗಳಲ್ಲಿ ಎಲ್ಲ ರಂಗವೂ ಅವರ ಆಗಮನವನ್ನು ಸ್ವಾಗತಿಸುತ್ತಿದ್ದರೆ, ಕೃಷಿಕ್ಷೇತ್ರ ಮಾತ್ರ ನರೇಂದ್ರ ಮೋದಿಯವರ ಸರ್ಕಾರವನ್ನು ಎದುರುಗೊಂಡದ್ದು ಸತತ ಎರಡು ವರ್ಷಗಳ ಬರದ ಮೂಲಕ (2014-15). ಸಹಜವಾಗಿ ಕೃಷಿಕ್ಷೇತ್ರದ ಬೆಳವಣಿಗೆ, ಉತ್ಪಾದನೆ ಎರಡೂ ಕುಂಠಿತಗೊಂಡಿದ್ದವು. ಅಷ್ಟಕ್ಕೇ ನಿಲ್ಲಲಿಲ್ಲ ರೈತರ ಸಂಕಷ್ಟ. ಅಕಾಲಿಕ ಮಳೆಯಿಂದ ಕೃಷಿಕ್ಷೇತ್ರ ತತ್ತರಿಸುವಂತಾಯಿತು. ರಾಜ್ಯ ಮತ್ತು ಕೇಂದ್ರಸರ್ಕಾರಗಳು ರೈತರಿಗೆ ಅಕಾಲಿಕ ಮಳೆ ಹಾಗೂ ಬರ ಇವೆರಡರಿಂದ ಉಂಟಾದ ಹಾನಿಗೆ ಪರಿಹಾರ ನೀಡಲೇಬೇಕಾದ ಪರಿಸ್ಥಿತಿ ಎದುರಾಯಿತು. ಸರ್ಕಾರಗಳು ಯಥಾಪ್ರಕಾರ ಎಂದಿನಂತೆ ಭೂಮಿಯನ್ನು ಸರ್ವೆ ಮಾಡಿ ಪರಿಹಾರ ಘೋಷಣೆ ಮಾಡಿ ಚೆಕ್ಕಿನ ಮೂಲಕ ಪರಿಹಾರದ ಹಣವನ್ನು ಕಳುಹಿಸುವ ಪದ್ಧತಿಯನ್ನು ಅನುಸರಿಸಿತು.

ದಿನದಿಂದ ದಿನಕ್ಕೆ ಏರುತ್ತಿರುವ ರೈತರ ಆತ್ಮಹತ್ಯೆಯ ಸಂಖ್ಯೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿದ್ದೆಗೆಡಿಸುತ್ತಿದೆ.  ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎನ್ನುವಂತೆ ಆಡಳಿತಕ್ಕೆ ಬರುವ ಯಾವ ಸರ್ಕಾರವೂ ರೈತರಂತಹ ಮತಬ್ಯಾಂಕನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇನ್ನೊಂದೆಡೆ ಸರ್ಕಾರಕ್ಕಿರುವ ಹತ್ತುಹಲವು ಒತ್ತಡಗಳೂ ಸಹ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವನ್ನಾಗಿಸುತ್ತದೆ. ತಾನು ಬೆಳೆದ ಬೆಳೆಗೆ ತಾನೇ ಬೆಲೆಯನ್ನೂ ಸಹ ನಿರ್ಧರಿಸಲಾಗದ ರೈತನನ್ನು ಒಂದೆಡೆ ಪ್ರಕೃತಿ ಆಟವಾಡಿಸಿದರೆ, ಇನ್ನೊಂದೆಡೆ ಸರ್ಕಾರದ ತಲೆಬುಡವಿಲ್ಲದ ನೀತಿ ಕಂಗೆಡಿಸುತ್ತದೆ. ಇವೆಲ್ಲಕ್ಕೂ ಬೆಳೆವಿಮೆ ಎನ್ನುವ ಮದ್ದನ್ನು ಕೇಂದ್ರಸರ್ಕಾರ ಕಂಡುಹಿಡಿದದ್ದೇನೋ ಸರಿ; ಯಾಕೆಂದರೆ ವಿಮೆ ಎನ್ನುವ ಪದಕ್ಕೇ ಒಂದಷ್ಟು ನಿರಾಳವಾಗಿಸುವ ಶಕ್ತಿ ಇದೆ.

ಆದರೆ ಯೋಜನೆಗಳೆಂದರೆ ಹಾಗೆ; ಆರಂಭದಲ್ಲಿ ಅದರ ಸಾಧಕ ಬಾಧಕಗಳು ಥಟ್ಟೆಂದು ಗೋಚರವಾಗುವುದಿಲ್ಲ. ಕ್ರಮೇಣ ಅದರೊಳಗಿನ ಲೋಪದೋಷಗಳು ತೆರೆದುಕೊಳ್ಳತೊಡಗುತ್ತವೆ. ಕೃಷಿ ವಿಮೆಯೂ ಆರಂಭದಲ್ಲಿ ಕೃಷಿಕರಿಗೆ ಒಂದಷ್ಟು ನಿರಾಳತೆ ಮೂಡಿಸಿದ್ದರೂ ಅದನ್ನು ಜಾರಿಗೊಳಿಸುವ ಹಂತದಲ್ಲಿ ಗೋಚರವಾಗುತ್ತಿರುವ ಬಗೆಬಗೆಯ ತೊಡಕುಗಳು ಆ ಬಗ್ಗೆ ಗಂಭೀರ ಅವಲೋಕನದ ಅಗತ್ಯವಿರುವುದನ್ನು ಸೂಚಿಸುತ್ತಿವೆ; ಸ್ವರಾಜ್ಯ ಪತ್ರಿಕೆಯ ತಂಡ ಮಾಡಿದ ಈ ಅವಲೋಕನ ಯೋಜನೆಯ ಲೋಪದೋಷಗಳನ್ನು ತೆರೆದಿಡುತ್ತಲೇ ಕಣ್ತೆರೆಸುವ ಕಾರ್ಯವನ್ನೂ ಮಾಡುವಂತಿದೆ.

ಬೆಳೆವಿಮೆಯ ಬಗ್ಗೆ ಚಿಂತನೆ:

ಗಮನಿಸಬೇಕಾದ ಮುಖ್ಯಸಂಗತಿಯೆಂದರೆ 2014-15 ಎರಡೂ ವರ್ಷವೂ ಆಗ ಜಾರಿಯಲ್ಲಿದ್ದ ಬೆಳೆವಿಮೆ ಯೋಜನೆಯಾದ ‘ರಾಷ್ಟ್ರೀಯ ಕೃಷಿವಿಮಾ ಯೋಜನೆ’ (NAIS) ಹಾಗು ‘ನವೀಕೃತಗೊಂಡ ರಾಷ್ಟ್ರೀಯ ಕೃಷಿವಿಮಾ ಯೋಜನೆ’ ಇವೆರಡರ ವಿಫಲತೆ; ಆಗಲೇ ಸರ್ಕಾರವು ಮುಖ್ಯವಾಗಿ ಕೃಷಿಕ್ಷೇತ್ರದ ಹಾನಿಗೆ ಪರಿಹಾರದ ಪ್ಯಾಕೇಜ್ ಘೋಷಿಸುವ ಬದಲಾಗಿ ಬೆಳೆವಿಮಾ ಯೋಜನೆ ಬಗ್ಗೆ ಚಿಂತನೆ ಮಾಡತೊಡಗಿದ್ದು.

ಬೆಳೆವಿಮೆ ಎಂದಾಕ್ಷಣ ಜಾರಿ ಅಷ್ಟು ಸುಲಭವೇನೂ ಅಲ್ಲ; ಏಕೆಂದರೆ ನಮ್ಮ ದೇಶದಲ್ಲಿ ಸುಶಿಕ್ಷಿತರೆನಿಸಿಕೊಂಡವರೇ ವಿಮಾ ಯೋಜನೆಯ ಲಾಭ ಪಡೆದುಕೊಳ್ಳುವುದಕ್ಕೆ ಗಂಭೀರ ಪ್ರಯತ್ನ ಮಾಡುವುದಿಲ್ಲ; ಹಾಗಿದ್ದಾಗ ರೈತರು ಈ ವಿಮೆಯ ಬಗ್ಗೆ ಗಂಭೀರವಾಗಿ ಸ್ಪಂದಿಸುತ್ತಾರೆ ಎಂದು ನಿರೀಕ್ಷಿಸುವುದಾದರೂ ಹೇಗೆ? ಸರ್ಕಾರ ಮೊದಲಿದ್ದ ವಿಮಾಯೋಜನೆಯನ್ನು ವಿಲೀನಗೊಳಿಸಿ, ಅದರ ಪ್ರೀಮಿಯಂನ್ನು ಸಾಕಷ್ಟು ಕಡಮೆ ಮಾಡಿ ಹೆಚ್ಚು ಲಾಭದಾಯಕವನ್ನಾಗಿಸಲು, ಯೋಜನೆಯನ್ನು ತಿರುಚಿತು.

2015ರ ಮುಂಗಾರುಬೆಳೆಗೆ ‘ಪ್ರಧಾನ್‍ಮಂತ್ರಿ ಫಸಲ್ ಬಿಮಾ ಯೋಜನೆ’ಯನ್ನು ಮೊದಲಬಾರಿ ಪರೀಕ್ಷಾರ್ಥವಾಗಿ ಜಾರಿಗೊಳಿಸಲಾಯಿತು. 2016 ಡಿಸೆಂಬರ್ 7ರಂದು ಸರ್ಕಾರ ಬಿಡುಗಡೆ ಮಾಡಿದ ವರದಿ ಹೇಳುವ ಹಾಗೆ ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯ ರೈತರು ಈ ಯೋಜನೆಯಲ್ಲಿ ಆಸಕ್ತಿ ತೋರಿಸಿದರು. 2015ರ ಮುಂಗಾರಿಗೆ ಹೋಲಿಸಿದರೆ 2016ರ ಮುಂಗಾರಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 40ಕ್ಕಿಂತಲೂ ಹೆಚ್ಚಿನ ರೈತರು ವಿಮೆ ಮಾಡಿಸಿದರು; 100 ಮಿಲಿಯನ್ ಹೆಕ್ಟೇರ್‍ಗಿಂತಲೂ ಹೆಚ್ಚಿನ ಭೂಮಿಯು ಈ ಯೋಜನೆಯಡಿ ಬಂದಿತು; ಹಾಗೂ ವಿಮೆಯಾದ ಒಟ್ಟು ಮೊತ್ತ ಶೇ. 104ರಷ್ಟು ಹೆಚ್ಚಾಯಿತು. ಶೇ. 25ಕ್ಕಿಂತಲೂ ಹೆಚ್ಚಿನ ರೈತರು ಬೆಳೆವಿಮಾ ಯೋಜನೆಗೆ ಸ್ಪಂದಿಸಿದ್ದನ್ನು ಕಂಡು ಸರ್ಕಾರದ ಉತ್ಸಾಹ ಇಮ್ಮಡಿಯಾಯ್ತು; ಆ ಉತ್ಸಾಹದಲ್ಲೇ ಅದು 2019ರ ಮುಂಗಾರಿಗೆ ದುಪ್ಪಟ್ಟು ರೈತರು ಈ ಯೋಜನೆಯ ಲಾಭ ಪಡೆಯುವದನ್ನು ನಿರೀಕ್ಷಿಸಿತು. 2017ರ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಣಾಮಕಾರಿ ನಿರ್ವಹಣೆಯಿಂದಾಗಿ ಖಾಸಗಿ ವಿಮಾ ಕಂಪೆನಿಗಳು ಸುಮಾರು ರೂ. 22,500 ಕೋಟಿಯಷ್ಟು ಪ್ರೀಮಿಯಂನ್ನು ಸಂಗ್ರಹಿಸಿತು (ಪ್ರತಿ ರಾಜ್ಯವೂ ವಿವಿಧಬಗೆಯ ವಿಮಾ ಎಜೆನ್ಸಿಗಳನ್ನು ಒಳಗೊಂಡಿದೆ. ಪ್ರತಿ ಕಂಪೆನಿಯೂ ಹೆಚ್ಚು ಅಪಾಯ, ಕಡಮೆ ಅಪಾಯ ಹಾಗೂ ಅಪಾಯದಿಂದ ಹೊರಗಿರುವ ಪ್ರದೇಶವೆಂದು ವಿಭಾಗಿಸಿಕೊಂಡು ಜಿಲ್ಲೆಯ ಬೇರೆಬೇರೆ ಕ್ಲಸ್ಟರ್‍ಗಳನ್ನು ಆಯ್ದುಕೊಳ್ಳುತ್ತವೆ).

ಇವೆಲ್ಲವನ್ನೂ ಓದಿದಾಗ ಆಕರ್ಷಕವಾಗಿಯೇ ತೋರುತ್ತದೆ. ಹಾಗೆಂದು ಎಲ್ಲವೂ ಆಕರ್ಷಕವಾಗಿಯೇನೂ ಇಲ್ಲ. ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳೂ ಇವೆ.

ಎಲ್ಲಿವೆ ಲೋಪದೋಷಗಳು:

ಮೊದಲನೆಯದಾಗಿ ಎಲ್ಲ ಸಾಲಗಾರ ರೈತರಿಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕಡ್ಡಾಯ ಮಾಡಲಾಗಿದೆ. ಕಾಲಿಕ ಸಾಲಗಾರ ರೈತರಿಗೂ ಸಹ ಅವರಿಗೆ ಇಷ್ಟವಿಲ್ಲದಿದ್ದಾಗ್ಯೂ ಬೆಳೆವಿಮೆ ನೀಡಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಆಪರೇಟಿಂಗ್ ಗೈಡ್‍ಲೈನ್ಸ್ ಹೇಳುವ ಪ್ರಕಾರ ‘ಹಣಕಾಸು ಸಂಸ್ಥೆಗಳಿಂದ ಕಾಲಿಕ ಕೃಷಿ ಕಾರ್ಯಗಳ ಸಾಲದ ಪ್ರಯೋಜನ ಪಡೆದುಕೊಳ್ಳುತ್ತಿರುವ ರೈತರು (ಸಾಲ ಮಾಡಿದ ರೈತರು) ಸೂಚಿತ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು.’

ಇದು ಈ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತದೆ – ಸರ್ಕಾರವು ಬೆಳೆ ಕೈಗೆ ಬರುವ ಒಂದು ತಿಂಗಳ ಮೊದಲು ಸೂಚನೆ ನೀಡುತ್ತದೆ. ಹಾಗೂ ಎಲ್ಲ ರೈತರೂ ತಮ್ಮ ಬೆಳೆಯನ್ನು ವಿಮೆ ಮಾಡಿಸುವುದಕ್ಕೆ ಮೊದಲು ಅಂತಿಮ ಗಡುವಿನ ದಿನಾಂಕ ಪ್ರಕಟಿಸಲಾಗುತ್ತದೆ. ಇದು ಸಾಲ ಮಾಡಿರದ ರೈತರಿಗೆ ಇರುವ ಕ್ರಮ. ಸಾಲ ಮಾಡಿದ ರೈತರಿಗೆ ಬ್ಯಾಂಕ್‍ಗಳೇ ವಿಮಾ ಪ್ರಿಮಿಯಂನ್ನು ಅವರ ಅಕೌಂಟ್‍ನಿಂದ ಅವರ ಒಪ್ಪಿಗೆಗೂ ಕಾಯದೆ ಕಡಿತಮಾಡಿಕೊಂಡು ಬಿಡುತ್ತದೆ. ಸ್ವರಾಜ್ಯ ತಂಡವು ಭೇಟಿಯಾದ ಹಲವಾರು ರೈತರಿಗೆ ಬ್ಯಾಂಕ್ ಈ ಬಗೆಯಲ್ಲಿ ತಮ್ಮ ಅಕೌಂಟ್‍ನಿಂದ ಪ್ರೀಮಿಯಂ ಕಡಿತಮಾಡಿಕೊಂಡ ಅರಿವೂ ಇರಲಿಲ್ಲ. ತಂಡವು ಅವರಿಗೆ ನಿಮ್ಮ ಬ್ಯಾಂಕ್ ಪಾಸ್‍ಬುಕ್ ಅಪ್‍ಡೇಟ್ ಮಾಡಿ ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಹೇಳಿದಾಗಲೇ ಅವರಿಗೆ ಈ ಬಗ್ಗೆ ಗೊತ್ತಾಯಿತು. ಬ್ಯಾಂಕ್ ತಮ್ಮನ್ನು ಸಂಪರ್ಕಿಸುವ ಗೋಜಿಗೂ ಹೋಗದೆ ತಮ್ಮ ಅಕೌಂಟ್‍ನಿಂದ ಮುರಿದುಕೊಂಡಿದ್ದು ಆ ರೈತರನ್ನು ಕೆರಳಿಸಿತ್ತು. ಆದರೆ ಬ್ಯಾಂಕ್ ಮ್ಯಾನೇಜರ್‍ಗಳು ರೈತರ ಸಿಟ್ಟನ್ನು ಕಂಡೂ ಕಾಣದ ಹಾಗೇ ನುಂಗಿಕೊಂಡು ತಮಗೆ ಬಂದ ಸೂಚನೆಯನ್ನು ಮಾತ್ರ ಪಾಲಿಸುತ್ತಿದ್ದರು.

ಎರಡನೆಯದಾಗಿ ಒಬ್ಬ ರೈತನಿಗೆ ಅರಿವಿಲ್ಲದೆ ಆತನ ಬೆಳೆಯನ್ನು ಆತನ ಒಪ್ಪಿಗೆ ಇಲ್ಲದೆ ವಿಮೆ ಮಾಡುವಾಗ ಎದುರಾಗುವ ಎಲ್ಲ ಬಗೆಯ ತೊಂದರೆಗಳನ್ನು ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ. ವಿಮೆ ಮಾಡುವವರಿಗೆ ಯಾವ ಬೆಳೆಗೆ ವಿಮೆ ಮಾಡಲಾಗುತ್ತಿದೆ ಎಂದು ತಿಳಿದಿರುವುದಿಲ್ಲ. ಉದಾಹರಣೆಗೆ ಸ್ವರಾಜ್ಯ ತಂಡವು ಕಬ್ಬನ್ನು ಬೆಳೆಯುವ ರೈತರನ್ನು ಭೇಟಿಯಾಗಿತ್ತು. ಬ್ಯಾಂಕ್ ಆ ರೈತರ ಬೆಳೆಗೆ ವಿಮೆ ಮಾಡಿತ್ತು; ವಿಪರ್ಯಾಸವೆಂದರೆ ಕಬ್ಬನ್ನು ಬೆಳೆಯುವ ರೈತನಿಗೆ ಗೋದಿಬೆಳೆಗೆ ವಿಮೆ ಮಾಡಿತ್ತು. ಇನ್ನೊಬ್ಬ ರೈತ ಏನನ್ನೂ ಬೆಳೆಯುತ್ತಿರಲಿಲ್ಲ; ಆದರೆ ಅಸ್ತಿತ್ವದಲ್ಲೇ ಇರದ ಅವನ ಬೆಳೆಗೆ ವಿಮೆ ಮಾಡಲಾಗಿತ್ತು. ಪ್ರಶ್ನೆ ಏನೆಂದರೆ ಬ್ಯಾಂಕ್‍ಗಳು ರೈತ ಯಾವ ಬೆಳೆ ಬೆಳೆಯುತ್ತಾನೆ ಎಂದು ಹೇಗೆ ತಿಳಿದುಕೊಳ್ಳುತ್ತದೆ ಎಂಬುದು. ಅವರೇನೂ  ಆ ಬಗ್ಗೆ ಪರಿಶೀಲಿಸುವುದಿಲ್ಲ. ಕೊನೆಪಕ್ಷ ತಾವು ವಿಮೆ ಮಾಡುತ್ತಿರುವ ಬೆಳೆಯನ್ನಾದರೂ ಆತ ಬೆಳೆಯುತ್ತಿದ್ದಾನೆಯೇ ಇಲ್ಲವೇ ಎಂದು ಕೂಡ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ರೈತರು ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸುವಾಗ ಹೇಳಿದ ಬೆಳೆಯ ಮೇಲೆ ಬ್ಯಾಂಕ್ ವಿಮೆ ಮಾಡುತ್ತದೆ. ಆ ಮಾಹಿತಿ ತುಂಬ ಹಳೆಯದಾಗಿರಬಹುದು; ಆ ನಡುವಿನ ವರ್ಷದಲ್ಲಿ ಆತ ಬೆಳೆಯುವ ಬೆಳೆ ಬದಲಾಗಿರಬಹುದು. ತಂಡವು ಬ್ಯಾಂಕ್ ಮ್ಯಾನೇಜರ್‍ಗೆ ‘ರೈತರಿಗೆ ಈ ಯೋಜನೆಯಲ್ಲಿ ಹೊರಗುಳಿಯುವ ಆಯ್ಕೆ ಇಡಬಹುದೇ’ ಎಂದು ಕೇಳಿದಾಗ ಬಂದ ಉತ್ತರ ‘ಸಾಲ ತೆಗೆದುಕೊಳ್ಳದಿರುವುದೊಂದೇ ಉಪಾಯ’ ಎಂದು ಉತ್ತರಿಸಿದ್ದರು.

ಸಾಮಾನ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಇರುವ ರೈತರು ಬ್ಯಾಂಕಿನಲ್ಲಿ ಸಾಲ ಮಾಡುತ್ತಾರೆ. ಭಿನ್ನಭಿನ್ನ ಬೆಳೆಗೆ ಭಿನ್ನಭಿನ್ನ ಬೆಲೆಯನ್ನು ನಿರ್ಧರಿಸಲಾಗುತ್ತದೆ. ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಸಾಲಕ್ಕೆ ಅರ್ಜಿ ಹಾಕುವಾಗ ಸಾಮಾನ್ಯವಾಗಿ ಅವರು ಬೆಳೆಯುತ್ತಿರುವ ಬೆಳೆಯನ್ನು ವರದಿ ಮಾಡುವುದಿಲ್ಲ. ಬದಲಾಗಿ ಅವರು ಯಾವ ಬೆಳೆ ತಮಗೆ ಕಿಸಾನ್ ಕ್ರೆಡಿಟ್ ಕಾರ್ಡಿನ ಅಡಿಯಲ್ಲಿ ಗರಿಷ್ಠ ಪ್ರಮಾಣದ ಸಾಲವನ್ನು ತಂದುಕೊಡುವುದೋ ಅಂತಹ ಬೆಳೆಯನ್ನು ನಮೂದಿಸುತ್ತಾರೆ. ಈ ಸಂಪೂರ್ಣ ಕಥಾನಕದಲ್ಲಿ ರೈತರನ್ನು ದೂಷಣೆಯಿಂದ ಹೊರಗಿಡಲು ಸಾಧ್ಯವಿಲ್ಲ. ಯಾಕೆಂದರೆ ತಂಡವು ಭೇಟಿಯಾದ ರೈತರು ಕೃಷಿಯಲ್ಲದ ಭೂಮಿಯನ್ನು ಹೊಂದಿದ್ದು, ಆ ಭೂಮಿಯಿಂದ ಏನೂ ಉತ್ಪಾದನೆ ಇರಲಿಲ್ಲ; ಆದ್ದಾಗ್ಯೂ ಅವರು ಲಕ್ಷಗಟ್ಟಲೆ ಸಾಲ ತೆಗೆದುಕೊಂಡಿದ್ದರು; ಆ ಸಾಲವನ್ನು ಬೇರೆಯವರಿಗೆ ಹೆಚ್ಚಿನ ಬಡ್ಡಿದರಕ್ಕೆ ಸಾಲ ನೀಡಲು ಬಳಸುತ್ತಿದ್ದರು.

ಪಬ್ಲಿಕ್ ಸೆಕ್ಟರ್‍ನ ಬ್ಯಾಂಕ್ ಮ್ಯಾನೇಜರ್ ಒಬ್ಬರು ಹೇಳುವ ಪ್ರಕಾರ, ಇಂತಹ ಬೇಕಾದಷ್ಟು ಪ್ರಕರಣಗಳಿವೆ. ಕಿಸಾನ್ ಕ್ರೆಡಿಟ್ ಕಾರ್ಡ್‍ನ ಸಾಲವನ್ನು ಕೇವಲ ಕೃಷಿ ಚಟುವಟಿಕೆಗೆಂದು ನೀಡಲಾಗುತ್ತದೆ. ಆದರೆ ರೈತರು ಅದನ್ನು ಮನೆ ಕಟ್ಟುವುದರಿಂದ ಹಿಡಿದು ಮಗಳ ಮದುವೆ, ಮಗನ ಶಿಕ್ಷಣದ ಸಾಲದ ಬಡ್ಡಿದರ ನೀಡುವವರೆಗೂ ಬಳಸಿಕೊಳ್ಳುತ್ತಾರೆ.  

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ನಾಲ್ಕು ಬಗೆಯ ಸಂಕಷ್ಟಕ್ಕೆ ನೆರವಾಗುತ್ತದೆ. (ಇಲ್ಲಿ ಹರಿಯಾಣಾದ ಉದಾಹರಣೆಗಳು ಹೆಚ್ಚಾಗಿರುವುದಕ್ಕೆ ಕಾರಣ ತಂಡವು ಆ ರಾಜ್ಯದಲ್ಲಿ ಒಂದು ಜಿಲ್ಲೆಯ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದಾಗಿದೆ. ಅವರ ಪ್ರಕಾರ ಹರಿಯಾಣಾದಂತಹುದೇ ಸನ್ನಿವೇಶಗಳು ದೇಶದ ಇತರ ಭಾಗದಲ್ಲೂ ಇವೆ. ರಾಜ್ಯಸರ್ಕಾರದ ಅಧಿಕಸಂಖ್ಯೆಯ ಅಧಿಸೂಚನೆಗಳು ಕೇಂದ್ರದ ಕಾರ್ಯಚರಣೆಗಳ ನಿರ್ದೆಶನಗಳನ್ನೇ ಅನುಸರಿಸುತ್ತವೆ.)

2016-17 ಸಾಲಿನಲ್ಲಿನ ಹರಿಯಾಣಾ ಸರ್ಕಾರದ ಅಧಿಸೂಚನೆಯ ಪ್ರಕಾರ ಅ) ಬೀಜ ಬಿತ್ತುವ/ಗಿಡ ನೆಡುವ ಸಂಕಷ್ಟ. ಇದರಲ್ಲಿ ರೈತರು ಮಳೆಯ ಕೊರತೆ ಹಾಗೂ ಪ್ರತಿಕೂಲ ಋತುಮಾನದ ಸನ್ನಿವೇಶದಲ್ಲಿ ನೆರವಾಗುವ ವಿಮೆ. ಆ) ಬೀಜ ಬಿತ್ತುವುದರಿಂದ ಕಟಾವಿನವರೆಗೆ. ಇದರಲ್ಲಿ ಬರ, ಒಣ ಹವೆ, ಪ್ರವಾಹ, ಜಲಾವರಣ, ಕೀಟದ ಹಾವಳಿ ಮತ್ತು ರೋಗ, ಭೂಕುಸಿತ, ನೈಸರ್ಗಿಕ ಬೆಂಕಿ, ಸಿಡಿಲು, ಗುಡುಗು ಮಿಂಚುಗಳಿಂದ ಕೂಡಿದ ಮಳೆ, ಆಲಿಕಲ್ಲು, ಚಂಡಮಾರುತದಿಂದ ಕೂಡಿದ ಮಳೆ, ಸುಂಟರಗಾಳಿಯಿಂದ ಕೂಡಿದ ಮಳೆ, ಚಂಡಮಾರುತ, ಸುಂಟರಗಾಳಿ ಇಂತಹ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿ. ಇ) ಸುಗ್ಗಿಯ ನಂತರದ ನಷ್ಟ. ಕಟಾವು ಮಾಡಿ ಒಣಗಲು ಬಿಟ್ಟ ಹರಡಿದ ಬೆಳೆಯು ಅಕಾಲಿಕ ಮಳೆ, ಬಿರುಗಾಳಿ ಮಳೆ, ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪಕ್ಕೆ ಸಿಕ್ಕಿದರೆ ಆಗುವ ನಷ್ಟ. ಈ) ಆಯಾ ಪ್ರದೇಶಕ್ಕೆ ಸೀಮಿತವಾಗಿ ಬರುವ ಸಂಕಷ್ಟಗಳು.

ಈಗ ಒಂದೊಂದನ್ನೇ ಪ್ರತ್ಯೇಕವಾಗಿ ಗಮನಿಸೋಣ. ಸಾಮಾನ್ಯವಾಗಿ ನಾವು ವಿಮೆ ಮಾಡಿದ ನಂತರವೇ ವಿಮೆಯು ರಿಸ್ಕ್ ಕವರ್ ಮಾಡುತ್ತದೆ. ಅದಕ್ಕಿಂತ ಹಿಂದಿನ ರಿಸ್ಕ್‍ನ್ನು ಅದು ಕವರ್ ಮಾಡುವುದಿಲ್ಲ. ಜಜ್ಜರ್ ಜಿಲ್ಲೆಯ ಬ್ಯಾಂಕ್ ಮ್ಯಾನೇಜರ್ ಹೇಳಿದ ಪ್ರಕಾರ ಮುಂಗಾರಿಗೆ ಆಗಸ್ಟ್ 1 2016ರಂದು ಹಾಗೂ ಹಿಂಗಾರಿಗೆ ಜನವರಿ 10. 2017ರಂದು ಇನ್ಸೂರೆನ್ಸ್ ಮೊತ್ತವನ್ನು ಕಡಿತಗೊಳಿಸಲಾಯಿತು. (ಪ್ರೀಮಿಯಂನ ಕಡಿತಗೊಳಿಸುವಿಕೆಯ ಅಧಿಕೃತ ದಿನಾಂಕ ಜುಲೈ 31ರಿಂದ ಡಿಸೆಂಬರ್ 31ರವರೆಗೆ ಇದ್ದಿತ್ತು). ಸ್ವರಾಜ್ಯ ತಂಡವು ರೈತರ ಪಾಸ್‍ಬುಕ್ ಚೆಕ್ ಮಾಡಿದ ನಂತರವೇ ಈ ವಿಚಾರವು ದೃಢೀಕರಿಸಲ್ಪಟ್ಟಿದೆ.

ಮುಂದುವರಿಯುವುದು……

ಮೂಲ ಲೇಖನ: ಶ್ರೀ ಅರಿಹಂತ್ ಪವಾರಿಯಾ

ಅನುವಾದ: ಸರೋಜಾ ಪ್ರಭಾಕರ್

[ಕೃಷಿವಿಮೆಯ ಮೇಲೆ ಸ್ವರಾಜ್ಯ ಪತ್ರಿಕೆ ತಂಡವು ಹರ್ಯಾಣಾ ರಾಜ್ಯದ ಕೆಲವು ಗ್ರಾಮಗಳಲ್ಲಿ ಸಮೀಕ್ಷೆ ಮಾಡಿ ಅರಿಹಂತ್ ಪವಾರಿಯಾ ಅವರು ಬರೆದ ಲೇಖನದ ಕನ್ನಡ ಅನುವಾದ]

Facebook ಕಾಮೆಂಟ್ಸ್

Saroja Prabhakar: ‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.
Related Post