ಸ್ಪ್ಯಾನಿಷ್ ಗಾದೆಗಳು

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ !

ಸಮಾನಾರ್ಥಕ ಸ್ಪಾನಿಷ್ ಗಾದೆ Donde hay humo, hay calor.

ಜಗತ್ತಿನಾದ್ಯಂತ ಮನುಷ್ಯನ ಮೂಲ ನಡವಳಿಕೆ ಇಂದಿಗೂ ಸೇಮ್ ! ವೇಷ , ಭಾಷೆ , ಆಹಾರ, ವಿಚಾರ  ಬದಲಾದಂತೆ ಕಂಡರೂ ಮನುಷ್ಯನ ಮೂಲಭೂತಗುಣಗಳು ಮಾತ್ರ ಅಚ್ಚರಿ  ಹುಟ್ಟಿಸುವಂತೆ ದೇಶ ಕಾಲ ಮೀರಿ ಒಂದೇ ಎನ್ನುವುದು ಮಾತ್ರ ಸತ್ಯ .

ಸ್ಪೇನ್ ದೇಶದಲ್ಲಿ ನನ್ನ ಮೊದಲ ವರ್ಷಗಳು ಅಲ್ಲಿನ ಭಾಷೆ ಕಲಿತು ಆಗಷ್ಟೇ ಅಲ್ಲಿನ ಸಂಸೃತಿಗೆ ಮನಸ್ಸನ್ನು ಒಗ್ಗಿಸಿಕೊಳುತ್ತಿದ್ದ ಕಾಲ. ಅಲ್ಲಿಯವರೆಗೆ ಅವರು ಸಕಲ ಗುಣ ಸಂಪನ್ನರು ! ನಿಧಾನವಾಗಿ ಅಲ್ಲಿನ ಜೀವನದಲ್ಲಿ ಬೆರೆತು ಹೋದಂತೆ ತಿಳಿದ ಸತ್ಯ ಅಲ್ಲಿಯೂ ಜನ ಗಾಸಿಪ್ ಮಾಡುವುದು ಇಷ್ಟ ಪಡುತ್ತಾರೆ ಎನ್ನುವುದು . ಯಾವುದಾದರೊಬ್ಬ ವ್ಯಕ್ತಿ ಎದುರಿಗಿದ್ದಾಗ ಸಭ್ಯತೆ ಮೆರೆಯುವ ಜನ ಆತನ ಹಿಂದೆ ಆತನ ಕುರಿತು ಮಾತನಾಡುವುದು ಕೂಡ ಸಹಜ . ನಾವು ಅಂದುಕೊಂಡಂತೆ ಪಾಶ್ಚಾತ್ಯರು ತಮ್ಮ ಜೊತೆಗಾರ/ಗಾತಿಯನ್ನು ಬಟ್ಟೆ ಬದಲಿಸಿದಂತೆ ಬದಲಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು. ಅಲ್ಲಿಯೂ ಬ್ರೇಕ್ ಅಪ್ ನಂತರದ ತಳಮಳಗಳು ನೋವು ಇದ್ದದ್ದೆ. ಒಬ್ಬ ವ್ಯಕ್ತಿಯ ಬಗ್ಗೆ ಯಾರಾದರೂ ನೆಗಟಿವ್ ಅಥವಾ ಗಾಸಿಪ್ ಹೇಳಿದರೆ ಅದರ ಕುರಿತು ಗೊತ್ತಿಲ್ಲದಿದ್ದರೂ ‘ ಏನೋ ಇರಬೇಕು ಏನೂ ಇಲ್ಲದೆ ಸುಮ್ಮನೆ ಅವರ ಬಗ್ಗೆ ಕೆಟ್ಟ ಮಾತನಾಡುವರೇಕೆ? ‘ ಎನ್ನುವ ಅರ್ಥ ಕೊಡಲು ಸ್ಪಾನಿಷ್ ಭಾಷೆಯಲ್ಲಿ ‘ Donde hay humo, hay calor.’ ಎನ್ನುವ ಗಾದೆಯನ್ನ ಬಳಸುತ್ತಾರೆ .

ನಮ್ಮಲ್ಲಿ ಕೂಡ ಒಮ್ಮೆ ಗಾಳಿ ಸುದ್ದಿ ಹಬ್ಬಿದರೂ ಅದನ್ನು ಪರಾಮರ್ಶಿಸುವ ಬದಲಾಗಿ ‘ ಬಿಡ್ರಿ ಬೆಂಕಿಯಿಲ್ಲದೆ ಹೊಗೆಯಾಡುತ್ತಾ ‘ ಎನ್ನುವುದು ಸಾಮಾನ್ಯವಾಗಿ ಕೇಳಿ ಬರುವ  ಮಾತು .
ಇಂಗ್ಲಿಷ್ ಭಾಷಿಕರಲ್ಲಿ There’s no smoke without fire ಎನ್ನುವದು ಸಾಮಾನ್ಯವಾಗಿ ಬಳಸುವ ಆಡುಮಾತು . ಅಲ್ಲದೆ  ಇಂಗ್ಲಿಷರಲ್ಲಿ ಬೆಂಕಿಯಿದೆ ಅದಕ್ಕೆ ಹೊಗೆ  ಬಂದಿದೆ ಎಂದು ಹರಡಿದ ಸುದ್ದಿಯ ಒಪ್ಪುವ ತರದ ಮಾತು ಕೂಡ ಹಲವು ಬಾರಿ  Where there’s smoke, there’s fire ಎಂದೂ ಬಳಸುವುದು ಉಂಟು .
ಇವೇನೇ ಇರಲಿ ಇದರ ಸಾಮಾನ್ಯ ಅರ್ಥ ಮಾತ್ರ ಒಂದೇ ., ಘಟನೆ ಜರುಗದೆ ಜನ ಅದರ ಬಗ್ಗೆ ಸುಮ್ಮನೆ ಮಾತನಾಡುವುದಿಲ್ಲ ಎನ್ನವುದೇ ಅದಾಗಿದೆ .

ಇಂದಿನ ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Donde  : ಎಲ್ಲಿ ಎನ್ನುವ ಅರ್ಥ ಕೊಡುತ್ತದೆ . ದೊಂದೆ ಎನ್ನುವುದು ಉಚ್ಚಾರಣೆ .

Hay      : ಇದೆ ಎನ್ನುವ ಅರ್ಥ ಕೊಡುತ್ತದೆ . ಹಾಯ್ ಎನ್ನುವುದು ಉಚ್ಚಾರಣೆ

humo   : ಹೊಗೆ ಎನ್ನುವ ಅರ್ಥ ಕೊಡುತ್ತದೆ . ಹುಮೂ ಎನ್ನುವುದು ಉಚ್ಚಾರಣೆ .

calor.   : ಬಿಸಿ ಎನ್ನವುದು ಶಬ್ದಕೋಶದ ಅರ್ಥ ಭಾವಾರ್ಥ ಬೆಂಕಿ . ಕಾಲೊರ್ ಎನ್ನುವುದು ಉಚ್ಚಾರಣೆ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!