X

ಮುಗುಳುನಗೆ

ಯೋಗರಾಜ್ ಭಟ್, ಗಣೇಶ್, ಜಯಂತ್ ಕಾಯ್ಕಿಣಿ, ಸೋನು ನಿಗಮ್ ಅಂದ ತಕ್ಷಣ ಕನ್ನಡ ಚಿತ್ರಪ್ರೇಮಿಗಳ ಮನಸುಗಳೆಲ್ಲ ಒಮ್ಮೆಲೇ ಹಾರುವುದು ಅಂದಿನ “ಅನಿಸುತಿದೆ ಏಕೋ ಇಂದು…” ಹಾಡಿನ ನೆನಪಿಗೆ. ಅಂದು ಎಲ್ಲೆಡೆ ಭಾವಗಳ ಮಳೆ ಸುರಿಸಿದ್ದ ಈ ಕಾಂಬಿನೇಶನ್ ಮತ್ತೆ ಜೊತೆಯಾಗಿ ನೀಡಿರುವ ಚಿತ್ರ ‘ಮುಗುಳುನಗೆ’. ಅಳುವೇ ಬಾರದ ವ್ಯಕ್ತಿಯೊಬ್ಬನ ಕಥೆ ಇದು.

ಯೋಗರಾಜ್ ಭಟ್ ಎಂದ ತಕ್ಷಣ, ಅಲ್ಲೇನೋ ಹೊಸತನ ಇರುತ್ತದೆ ಎನ್ನುವುದಕ್ಕಿಂತ ‘ವಿಚಿತ್ರವಾದ ಒಂದು ಹೊಸತನ’ ಇರುತ್ತದೆ ಅನಿಸುತ್ತದೆ ನನಗೆ. ಇಲ್ಲಿಯೂ ಹಾಗೆಯೇ; ಅಳುವೇ ಬಾರದ ವ್ಯಕ್ತಿ ಅನ್ನುವುದೇ ಒಂದು ವಿಚಿತ್ರ ಪರಿಕಲ್ಪನೆ. ಆ ವ್ಯಕ್ತಿಯ ಸುತ್ತ ಹೆಣೆದಿರುವ ಪ್ರೇಮಕಥೆಗಳ ಸಂಕಲನವೇ ‘ಮುಗುಳುನಗೆ’. ಮುಂಗಾರುಮಳೆ ಹಾಗೂ ಗಾಳಿಪಟದ ಚುರುಕು ಕಾಣದಿದ್ದರೂ ಚಿತ್ರ ವಿಭಿನ್ನವಾಗಿದೆ. ಅಳುವೇ ಬಾರದ ನಾಯಕನಾಗಿ ಗಣೇಶ್ ಅವರ ನಟನೆ ಇಷ್ಟವಾಯಿತು. ಬಹುಷಃ ಗಾಳಿಪಟ ಸಿನಿಮಾದ ನಂತರ ನನಗೆ ಅತ್ಯಂತ ಇಷ್ಟವಾದ ಅವರ ಪಾತ್ರವಾಗಿ ಮುಗುಳುನಗೆಯ ಈ ಪಾತ್ರ ನಿಲ್ಲುತ್ತದೆ. ನೋವಿನಲ್ಲೂ ನಗುವ ಆ ವಿಚಿತ್ರ ಭಾವನೆಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಗಣೇಶ್ ಯಶಸ್ವಿಯಾಗಿದ್ದಾರೆ ಎಂದು ನನಗನಿಸಿತು.

ನಾಯಕಿಯರಾಗಿ ನಟಿಸಿದ ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅವರ ಪಾತ್ರ ಹಾಗೂ ನಟನೆ ಕೂಡ ಇಷ್ಟವಾಯಿತು. ತುಂಟ, ಕನಸು ಕಂಗಳ ಹುಡುಗಿಯಾಗಿ ಆಶಿಕಾ ಕಾಣಿಸಿಕೊಂಡರೆ, ಪ್ರಬುದ್ಧ ಹಾಗೂ ವಿಭಿನ್ನ ವ್ಯಕ್ತಿತ್ವದ ಹುಡುಗಿಯಾಗಿ ನಿಖಿತಾ ನಟಿಸಿದ್ದಾರೆ. ಇನ್ನು ನಮ್ಮ ಕುಂದಾಪುರ ಕನ್ನಡದಲ್ಲಿ ಮಾತನಾಡುವ ಅಪೂರ್ವ ಅರೋರ ಅವರ ಪಾತ್ರ ಹೆಚ್ಚು ಆತ್ಮೀಯ ಅನಿಸಿತು. ಆಸೆಗಳನ್ನೆಲ್ಲ ಬಚ್ಚಿಟ್ಟು ಮನೆಯ ಜವಾಬ್ದಾರಿಗಳನ್ನು ಹೊತ್ತು ಬದುಕುವ, ಬಜಾರಿ ಹುಡುಗಿಯಂತೆ ಕಾಣುವ ಆದರೆ ಮಗುವಿನಂತ ಮನಸುಳ್ಳ ಈ ಪಾತ್ರ ಹೆಚ್ಚಾಗಿ ನನ್ನನ್ನು ಸೆಳೆಯಿತು. ನಾಯಕನ ತಂದೆಯ ಪಾತ್ರ ಮಾಡಿರುವ ಅಚ್ಯುತ್ ಅವರದ್ದು ಇನ್ನೊಂದು ಅಚ್ಚುಕಟ್ಟಾದ ಪಾತ್ರ. ಸಿಡುಕ ಆದರೆ ಮಗನನ್ನು ಅಷ್ಟೇ ಪ್ರೀತಿಸುವ ತಂದೆಯಾಗಿ ಅವರ ನಟನೆ ಮನೋಜ್ಞ. ಇನ್ನು ‘ವರಂಗ ಜೈನ ಬಸದಿ’ ನಮ್ಮ ಉಡುಪಿ ಜಿಲ್ಲೆಯ ಅತ್ಯಂತ ಸುಂದರ ಸ್ಥಳಗಳಲ್ಲೊಂದು. ಚಿತ್ರದ ಎರಡನೇ ಅವಧಿಯ ಹೆಚ್ಚಿನ ದೃಶ್ಯಗಳು ಹಾಗೂ “ಕೆರೆ ಏರಿ ಮ್ಯಾಲ್ ಬಂದು ಕುಂತುಕೊಂಡ..” ಹಾಡಿನ ಚಿತ್ರೀಕರಣ ಈ ಸ್ಥಳ, ಬಾರಕೂರು ಹಾಗೂ ಉಡುಪಿಯ ಆಸುಪಾಸನ್ನು ಒಳಗೊಂಡಿದ್ದು ಮನಸಿಗೆ ಹೆಚ್ಚಿನ ಮುದ ನೀಡಿತು.

ಇನ್ನು ಚಿತ್ರ ಸಂಗೀತ ಈ ಪ್ರೇಮ್ ಕಹಾನಿಯ ಹೈಲೈಟ್ ಅಂತಲೇ ಹೇಳಬೇಕು. ಜಯಂತ್ ಕಾಯ್ಕಿಣಿಯವರ “ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೆ ನೋಡುತ ಕೂತು…”  ಹೊಸತೊಂದು ಗುಂಗನ್ನು ಸೃಷ್ಟಿಸುತ್ತದೆ. “ಬಡಪಾಯಿಯ ಮನರಂಜನೆ ಬರೀ ಇಂಥವೇ…”, “ನನ್ನನು ಆಪ್ತನು ಎಂದು ಮಾಡಿಕೋ ನೇಮಕ…”, “ಎಲ್ಲೇ ಎಸೆದರೂ ನಿನ್ನ ಕಣ್ಣಲೇ ಬಂದು ಬೀಳುವಾಸೆ…” ಎನ್ನುವ ಕೆಲವು ಹೊಸ ಹಸಿ ಸಾಲುಗಳು ಚಂದದ ಮುಗಳುನಗೆಯೊಂದ ಮೂಡಿಸದೇ ಇರದು. ವಿಕಟಕವಿ ಯೋಗರಾಜ್ ಭಟ್ಟರ ಬರೆದಿರುವ “ಹೊಡಿ ಒಂಭತ್…”, ” ಅಮರ ಹಳೆ ನೆನಪು…”, “ಕೆರೆ ಏರಿ ಮ್ಯಾಲ್ ಬಂದು…”, “ನಿನ್ನ ಸ್ನೇಹದಿಂದ…”, ” ಮುಗುಳುನಗೆಯೆ ನೀ ಹೇಳು…” ಹಾಡುಗಳಲ್ಲಿ ಕೊನೆಯ ಮೂರು ಹಾಡುಗಳು ನನಗೆ ತುಂಬ ಇಷ್ಟವಾಯಿತು. “ನಿನ್ಮ ಸ್ನೇಹದಿಂದ” ಹಾಗೂ “ಮುಗುಳುನಗೆಯೇ ನೀ ಹೇಳು” ಹಾಡುಗಳು ಭಟ್ಟರ ಸಾಹಿತ್ಯದಲ್ಲಿನ ಲಾಲಿತ್ಯವನ್ನ ಮತ್ತೆ ನಮಗೆ ಪರಿಚಯಿಸುತ್ತವೆ. “ಆ ಭಟ್ಟರ ಹಾಡಾ; ಬಿಡಿ ಮಾರ್ರೆ; ಎಲ್ಲ ಒಂದೇ ಥರ ಇರ್ತವೆ” ಎಂದು ಉದಾಸಿನ ತೋರಿಸುವವರಿಗೆಲ್ಲ ಈ ಎರಡು ಹಾಡುಗಳ ಸಾಹಿತ್ಯ ಮತ್ತೆ ಉತ್ತರ ನೀಡಿದೆ. ಚಿತ್ರದ ಶೀರ್ಷಿಕೆ ಗೀತೆಯ ಸ್ವಲ್ಪ ಭಾಗ ಮಾತ್ರ ಸಾಂದರ್ಭಿಕ ಗೀತೆಯಂತೆ ಚಿತ್ರದಲ್ಲಿ ಒಳಗೊಂಡಿದ್ದು ಮಾತ್ರ ನನಗೆ ಬೇಸರವಾಯಿತು. ಹಾಗೆಯೇ ಚಿತ್ರದ ಧ್ವನಿಸುರುಳಿಯಲ್ಲಿದ್ದ ಜಯಂತ್ ಕಾಯ್ಕಿಣಿಯವರು ಬರೆದ “ಕನ್ನಡಿ ಇಲ್ಲದ ಊರಿನಲಿ, ಕಣ್ಣಿಗೆ ಬಿದ್ದವ ನೀನು…” ಹಾಡು ಕೂಡ ಒಂದು ದೃಶ್ಯದ ತುಣುಕಿನಲ್ಲಿ ಮಾತ್ರ ಅಳವಡಿಸಿದ್ದು, ಸಂಪೂರ್ಣ ಹಾಡು ಇರಬೇಕಿತ್ತು ಅನ್ನಿಸಿತು. ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಚಂದದ ಸಂಗೀತ ನೀಡಿದ್ದಕ್ಕೊಂದು ಧನ್ಯವಾದ ಹೇಳಲೇಬೇಕು. ಈ ಹಾಡುಗಳು ಅವರ ‘ಗಾಳಿಪಟ’ ಸಿನಿಮಾದ ಸಂಗೀತವನ್ನ ಮತ್ತೆ ನೆನಪಿಸಿತು‌.

ಅಳುವೇ ಬರದ ನಾಯಕನ ಕಣ್ಣಲ್ಲಿ ಮೊದಲ ಬಾರಿ ಕಣ್ಣ ಹನಿಯೊಂದು ಮೂಡುತ್ತಿರುವಾಗ ಹಿನ್ನೆಲೆ ಉಲಿಯುವ ಈ ಕೆಳಗಿನ ಸಾಲುಗಳು ಪದೇ ಪದೇ ಕಾಡುತ್ತದೆ.

“ಕಣ್ಣಾಲಿಯ ಜಲಪಾತವ ಬಂಧಿಸಲು ನೀ ಯಾರು?

ನೀ ಮಾಡುವ ನಗೆಪಾಟಲು ಖಂಡಿಸಲು ನಾ ಯಾರು?

ಸಂತೋಷಕೂ, ಸಂತಾಪಕೂ ಇರಲಿ ಬಿಡು ಒಂದೇ ಬೇರು.

ಕಂಗಳಲಿ ಬಂದ ಮಳೆಗೆ, ಕೊಡೆ ಹಿಡಿವ ಆಸೆಯೇ ನಿನಗೆ?

ಅತ್ತುಬಿಡು ನನ್ನ ಜೊತೆಗೆ, ನಗಬೇಡ ಹೀಗೆ!!!”

ಯೋಗರಾಜ್ ಭಟ್ಟರು ಸಣ್ಣ ಸಣ್ಣ ಚಂದದ ಅಂಶಗಳ ಮೂಲಕ ದೃಶ್ಯಗಳನ್ನು ಕಟ್ಟಿಕೊಡುವ ಪರಿ ನನಗೆ ಯಾವಾಗಲೂ ಇಷ್ಟ. ಈ ಸಿನಿಮಾದಲ್ಲೂ ಅದನ್ನು ಕಾಣಬಹುದು. ಹಾಗೆಯೇ ಆಗಲೇ ಹೇಳಿದಂತೆ ಎಲ್ಲ ಮಾಮೂಲಿ ಪ್ರೇಮಕಥೆಯಂತಿರದೆ, ಭಟ್ಟರ ನಿರ್ದೇಶನದ ‘ವಿಚಿತ್ರ ಹೊಸತನದ’ ಛಾಪು ಇಲ್ಲಿಯೂ ಕಾಣಬಹುದು. ಒಟ್ಟಾರೆ ಯೋಗರಾಜ್ ಭಟ್ ಮತ್ತು ಗಣೇಶ್ ಅವರ ಸಂಯೋಜನೆಯಲ್ಲಿ ಬಹುವರ್ಷಗಳ ನಂತರ ಮೂಡಿರುವ ಈ ‘ಮುಗುಳುನಗು’ ಕನ್ನಡ ಚಿತ್ರಪ್ರೇಮಿಗಳಿಗೆ ಇಷ್ಟವಾಗಬಲ್ಲ ಸದಭಿರುಚಿಯ ಚಿತ್ರ ಎಂಬುದು ನನ್ನ ಅಭಿಪ್ರಾಯ.

“ಸಾಕಾಗದಾ ಏಕಾಂತವ ನಿನ್ನಿಂದ ನಾ ಕಲಿತೆ

ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ”

“ಅಳುವೊಂದು ಬೇಕು ನನಗೆ

ಅರೆಘಳಿಗೆ ಹೋಗು ಹೊರಗೆ

ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ?”

ಏಕಾಂತದ ಶಾಶ್ವತ ಸಂಗಾತಿಗಳಾಗಬಲ್ಲ ಈ ಸಾಲುಗಳನ್ನು ಕೊಟ್ಟದ್ದಕ್ಕೆ ಯೋಗರಾಜ್ ಭಟ್ಟರಿಗೊಂದು ಮನಃಪೂರ್ವಕ ಧನ್ಯವಾದ.

 

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post