“ರಾಮಕೃಷ್ಣ ಹೆಗಡೆ ದೊಡ್ಮನೆ” ಸುಮಾರು ದಿನದಿಂದ ನನ್ನ ಆವರಿಸಿರುವ ವ್ಯಕ್ತಿತ್ವ. ವ್ಯಕ್ತಿತ್ವ ಅನ್ನುವುದಕ್ಕಿಂತ ಸಿದ್ಧಾಂತ ಅಥವಾ ಒಂದು ಮೌಲ್ಯ ಎನ್ನಬಹುದೇನೋ. ಅವರು ನನ್ನೂರಿನವರು ಹೌದು ನಮ್ಮ ಹವ್ಯಕರು. ಕೆಲವರು ನಮ್ಮನ್ನು ವಿಪರೀತವಾಗಿ ಆವರಿಸಿಕೊಂಡಾಗ ಅವರ ವಿಚಾರಗಳೇ ನಮ್ಮನ್ನು ಸುತ್ತುವರಿದು, ಪ್ರತಿಕ್ಷಣವೂ ಅವರ ಬಗ್ಗೆಯೇ ಯೋಚಿಸುವಂತೆ ಮನಸ್ಸು ತಯಾರಾಗಿಬಿಟ್ಟಿರುತ್ತದೆ. ಕಳೆದ ಕೆಲವು ದಿನದಿಂದ ನಾನು ಕೂಡ ಈ ವ್ಯಕ್ತಿಯ ಮೌಲ್ಯ, ಹೆಜ್ಜೆಗುರುತನ್ನು ಅರಸುತ್ತಿದ್ದೆ. ನರೇಂದ್ರ ಮೋದಿಯೆಂಬ ಶಕ್ತಿಯನ್ನು ನೋಡಿದರೆ ನನಗೆ ಸದಾ ನೆನಪಾಗುವುದು ರಾಮಕೃಷ್ಣ ಹೆಗಡೆ. ಜಾತಿಯ ಹೆಸರಲ್ಲಿ ರಾಜಕಾರಣ ಮಾಡಲೇ ಇಲ್ಲ. ರಾಜಕಾರಣವೆಂದರೆ ಸರ್ವರನ್ನೂ ಗೌರವಿಸುವ, ಸರ್ವರನ್ನೂ ಸಮಾನವಾಗಿ ಕಾಣುವ ಅತೀ ವೈಭವದ ಕೆಲಸ ಎಂದು ಪ್ರತಿಪಾದಿಸುತ್ತ ಅದೇ ತೆರನಾಗಿ ಬದುಕಿದ ಮಹಾನ್ ಚೇತನ ಎಂದರೆ ಅವರು ರಾಮಕೃಷ್ಣ ಹೆಗಡೆ ಮಾತ್ರ. ನನಗೆ ರಾಜಕಾರಣದ ಸಾರ್ವಕಾಲಿಕ ಮಾದರೀ ವ್ಯಕ್ತಿಗಳು ಎನ್ನಿಸುವುದು ಅಟಲ್ ಬಿಹಾರೀ ವಾಜಪೇಯಿ, ರಾಮಕೃಷ್ಣ ಹೆಗಡೆ ಮತ್ತು ನರೇಂದ್ರ ಮೋದಿ.
ಹೆಗಡೆ, ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಪದೇ ಪದೇ ನೆನಪಾಗುವ ವ್ಯಕ್ತಿ. ಹೆಂಗಿರಬೇಕು ರಾಜಕಾರಣಿ ಎಂಬ ಪ್ರಶ್ನೆಗೆ ಉತ್ತರವಾಗಿ ನಿಲ್ಲುವ ವ್ಯಕ್ತಿತ್ವ ಎಂದರೆ ಹೆಗಡೆ ಮಾತ್ರ. ಅವರದ್ದು ಆಕರ್ಷಕ ವ್ಯಕ್ತಿತ್ವ, ಪ್ರಖರ ವಾಕ್ಚಾತುರ್ಯದ ಗ೦ಭೀರ ನಿಲುವು. ಸರ್ವಾ೦ಗೀಣ ಬೆಳವಣಿಗೆಯೆ೦ದರೆ ಏನು? ಈ ಪ್ರಶ್ನೆಗೆ ಉತ್ತರವಾಗಿ ನಿಂತವರು ಹೆಗಡೆ ಮಾತ್ರ. ಹೆಗಡೆ ಎಲ್ಲಾ ವರ್ಗದ ಜನರನ್ನೂ ಅನೇಕ ಜನಪರ ಕಲ್ಯಾಣ ಯೋಜನೆಗಳ ಮೂಲಕ ತಲುಪಿದ್ದರು. ಆಶ್ಚರ್ಯವಾಗುತ್ತದೆಯಲ್ಲವೇ? ಸಿ.ಇ.ಟಿ ಹಾಗೂ ಆ ಮೂಲಕ ಈಗ ಪ್ರತಿಭಾವ೦ತ ವಿಧ್ಯಾರ್ಥಿಗಳಿಗೆ ಸರಕಾರದ ವತಿಯಿ೦ದ ದೊರೆಯುತ್ತಿರುವ ಉಚಿತ ಸೀಟುಗಳ ಹಿ೦ದಿನ ಕಾರಣಕರ್ತರು ನಮ್ಮ ಹೆಗಡೆಯವರು. “ಸರ್ವರಿಗೂ ಸಮಬಾಳು – ಸಮಪಾಲು“ ಎ೦ಬ ನೀತಿಯನ್ನು ಅಕ್ಷರಶ: ಪಾಲಿಸಿದವರು ರಾಮಕೃಷ್ಣ ಹೆಗಡೆ. ಬಿ.ಎ. ಎಮ್.ಎ. ಎಮ್.ಎಸ್ಸಿ ಮು೦ತಾದ ಪದವಿಗಳಲ್ಲಿ ರ್ಯಾ೦ಕ್ ಪಡೆದ ದಲಿತ ವಿದ್ಯಾರ್ಥಿಗಳಿಗೆ ಯಾವ ಪರೀಕ್ಷೆ ಹಾಗೂ ಸ೦ದರ್ಶನಗಳಿಲ್ಲದೆಯೇ ಸರಕಾರೀ ನೌಕರಿಗಳಿಗೆ ನೇರ ನೇಮಕಾತಿಯನ್ನು ಮಾಡಿಕೊ೦ಡು, ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳ ಶ್ರಮಿಸಿದವರು ಹೆಗಡೆ. ಹುಟ್ಟು ಹವ್ಯಕ ಬ್ರಾಹ್ಮಣರಾಗಿದ್ದ ಹೆಗಡೆ ದಲಿತರ ಏಳಿಗೆಗೆ ಹಗಲಿರುಳು ಶ್ರಮಿಸಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವವರು. ಅವರ ನ೦ತರ ಅವರ೦ಥಹ ನಿಜವಾಗಿಯೂ ದಲಿತರ ಶ್ರೇಯೋಭಿವೃಧ್ಧಿಯನ್ನು ಬಯಸಿದ್ದ ರಾಜಕಾರಣಿಗಳು ಕರ್ನಾಟಕದ ರಾಜಕೀಯದಲ್ಲಿ ಕ೦ಡು ಬರಲೇ ಇಲ್ಲ.
ಹೆಗಡೆ ರಾಜಕೀಯ ಪಕ್ಷಗಳಲ್ಲಿ ಹಲವು ಸ್ತರದ ಜವಾಬ್ದಾರಿ ಹೊತ್ತು ವಿಧಾನಪರಿಷತ್ತು ಮತ್ತು ಶಾಸನ ಸಭೆಯ ಶಾಸಕರಾಗಿ, ರಾಜ್ಯ ಸಭಾ ಸದಸ್ಯರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಬಂದ ಪದವಿಗಳನ್ನು ಸಮರ್ಥವಾಗಿ ನಿಭಾಯಿಸಿ ಜನಗಳ ಸೇವೆ ಮಾಡಿದರು. ಮೌಲ್ಯಾಧಾರಿತ ರಾಜಕಾರಣ ವಿಷಯದಲ್ಲಿ ಹೆಗಡೆ ಅವರು ಎಂದಿಗೂ ಪ್ರಸ್ತುತ, ಎಂದಿಗೂ ಮಾದರಿಯೇ ಸರಿ. ಆದರೆ ಇದೇ ಮೌಲ್ಯಾಧಾರಿತ ರಾಜಕಾರಣ ಮಾಡಲು ಹೊರಟು ಸಮೀಪವರ್ತಿಗಳಿಂದ, ತಾವು ಬೆಳೆಸಿದವರಿಂದಲೇ ಕಷ್ಟಗಳನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾದದ್ದು ವಿಪರ್ಯಾಸ! ದೇವೇಗೌಡರಂತಹ ತಾನೇ ಬೆಳೆಸಿದ ಅಥವಾ ಅತ್ಯಂತ ಆಪ್ತಗೆಳೆಯನಿಂದ ಅದೆಷ್ಟು ನೋವು ತಿಂದರು ಹೆಗಡೆಯವರು. ಆದರೀಗ ಹೆಗಡೆಯವರಿಲ್ಲದ ಸಮಯದಲ್ಲಿ ಹೆಗಡೆಯವರ ಬಗ್ಗೆ ಪುಟಗಟ್ಟಲೆ ಲೇಖನ ಬರೆದು ಮತ್ತೆ ಹೆಗಡೆಯವರ ವರ್ಚಸ್ಸನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಹೊರಟಿರುವ ಈ ವ್ಯಕ್ತಿಯದ್ದು ಅತ್ಯಂತ ಹೇಸಿಗೆ ಹುಟ್ಟಿಸುವ ರಾಜಕಾರಣ ಅನ್ನಿಸುತ್ತದೆ. ಹಿಂದೊಮ್ಮೆ ರಾಮಕೃಷ್ಣ ಹೆಗಡೆಯವರೇ ಹೇಳಿದ್ದರು “ಯಾವ ಮಿತ್ರರಿಗೂ ತಮ್ಮ ತಮ್ಮ ಮಿತೃತ್ವದ ಬಗ್ಗೆ ಸ್ಪಷ್ಟೀಕರಣ ಕೊಡುವ ದಿನಗಳು ಬರಬಾರದು” ಎಂದು. ಹೆಗಡೆ ರಾಜಕೀಯ ಪಡಸಾಲೆಯಿಂದ ಹಿಂದೆ ಸರಿಯಲು ಕಾರಣ ಯಾರು ಎಂಬ ಸತ್ಯ ಕೂಡ ಇಡೀ ದೇಶಕ್ಕೆ ಗೊತ್ತು. ಆದರೆ ಇದೆ ದೇವೇಗೌಡರು ಪತ್ರಿಕೆಗಳಲ್ಲಿ ಮಿತ್ರತ್ವದ ಸ್ಪಷ್ಟೀಕರಣದ ಜಾಹೀರಾತು ನೀಡಿದ್ದರ ಹಿಂದೆ ಕೆಲಸ ಮಾಡಿದ್ದು ಮತ್ತದೇ ಹೊಲಸು ರಾಜಕೀಯ ಬುದ್ಧಿ ಎನ್ನುವುದು ಕೂಡ ಕರಾಳ ಸತ್ಯ.
ಕಾಶೀ ವಿದ್ಯಾಪೀಠದ ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಹಾಗೂ ಕಾನೂನು ಪದವಿ ಪಡೆದ ಹೆಗಡೆಯವರು ಓದಿಗಿಂತ ಸ್ವಾತಂತ್ರ್ಯ ಹೋರಾಟ ಮುಖ್ಯವಾಗಿ ತಮ್ಮ ಓದಿಗೆ ಕಂಟಕ ತಂದುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಭಾಗಿಯಾದರು. ವಕೀಲರಾಗಿ ರೈತ ಸಂಘದ ಹೋರಾಟದಲ್ಲಿ ಭಾಗವಹಿಸಿ ಉತ್ತಮ ಹೋರಾಟಗಾರರೆಂಬ ಖ್ಯಾತಿ ಪಡೆದ ಹೆಗಡೆ ಅತ್ಯಂತ ಕಿರಿಯ ವಯಸ್ಸಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದವಿ ಕೂಡ ಪಡೆದರು. ಕಾಂಗ್ರೆಸ್’ನ ಅತ್ಯಂತ ಪ್ರಭಾವೀ ನಾಯಕರಾಗಿ ಹೆಗಡೆ ಬೆಳೆದರು. 30ನೇ ವಯಸ್ಸಿಗೆ ಶಾಸನ ಸಭೆಗೆ ಆಯ್ಕೆಯಾದ ಹೆಗಡೆ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಸಚಿವರಾಗಿ ಕೂಡ ಕೆಲಸ ಮಾಡಿದರು. ಹೆಗಡೆಯವರು ತತ್ತ್ವಸಿದ್ಧಾಂತಕ್ಕೆ ಅತ್ಯಂತ ಕಟಿಬದ್ಧರಾಗಿದ್ದರು. ಸಿದ್ಧಾಂತಕ್ಕೆ ಧಕ್ಕೆಯಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೆಗಡೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೆಗಡೆಯವರು ಕೂಡ ಜೈಲುವಾಸ ಅನುಭವಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಜನತಾಪಕ್ಷವನ್ನು ಕಟ್ಟಿದ ಹೆಗಡೆ ಅತ್ಯಂತ ಚತುರ ರಾಜಕಾರಣಿಯಾಗಿದ್ದರು. ಅದೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಉತ್ತಮ ಸಂಸದೀಯ ಪಟುವೆಂಬ ಹೆಗ್ಗಳಿಕೆ ಪಡೆದರು.
ತುರ್ತು ಪರಿಸ್ಥಿತಿಯ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ನಾಯಕರಾಗಿ ಹೆಗಡೆಯವರನ್ನು ಆಯ್ಕೆ ಮಾಡಲಾಯಿತು. ಅಂದಿನ ರಾಜ್ಯ ಜನತಾ ಪಕ್ಷದ ನಾಯಕರುಗಳಾದ ದೇವೇಗೌಡ-ಬೊಮ್ಮಾಯಿ-ಬಂಗಾರಪ್ಪ ಅಂತವರ ಹೊರತಾಗಿಯೂ ಹೆಗಡೆಯವರ ಚಾಣಾಕ್ಷತನ ರಾಷ್ಟ್ರನಾಯಕರಿಗೆ ಇಷ್ಟವಾಗಿತ್ತು ಪರಿಣಾಮ ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಗಾದಿಗೆ ಸೂಚಿಸಿದರು. ಒಂದರ್ಥದಲ್ಲಿ ಇದು ನಮ್ಮ ರಾಜ್ಯಕ್ಕೆ ಅತ್ಯುತ್ಕೃಷ್ಟ ನಾಯಕತ್ವದ ಕೊಡುಗೆ ಎಂದೇ ಹೇಳಬಹುದು. ಅದೆಷ್ಟೋ ಪ್ರಧಾನಿಗಳು ಹೆಗಡೆಯವರ ಯೋಜನೆಗಳನ್ನು ಅನುಕರಿಸಿದರು ಅಂದರೆ ಯಾವುದೇ ಅತಿಶಯೋಕ್ತಿ ಇಲ್ಲ. ಇವತ್ತು ನಾವೇನಾದರೂ ಜನತಾ ದರ್ಶನ ಎನ್ನೋ ಕಾರ್ಯಕ್ರಮವನ್ನು ನೋಡುತ್ತಿದ್ದರೆ ಅದರ ಹಿಂದಿನ ತಲೆ ಹೆಗಡೆಯವರದ್ದು. ಯುವಕ ಯುವತಿಯರಿಗೆ ಹದಿನೆಂಟು ವರ್ಷಕ್ಕೆ ಮತದಾನದ ಮಾಡುವ ಹಕ್ಕನ್ನು ದೊರಕಿಸಿಕೊಟ್ಟಿದ್ದು ರಾಮಕೃಷ್ಣ ಹೆಗಡೆ, ಇದನ್ನೇ ಮುಂದೆ ರಾಜೀವ್ ಗಾಂಧಿ ಕೇಂದ್ರದಲ್ಲಿ ಅನುಕರಿಸಿದ್ದು.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಹೆಗಡೆಯವರನ್ನು ಹಳಿಯಲು ದೇವೇಗೌಡರಂತವರು ಸದಾ ಪ್ರಯತ್ನಿಸುತ್ತಲೇ ಇದ್ದರು. ಹೆಗಡೆಯವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳು ಇದ್ದವು. ಅಂತಹ ವರ್ಚಸ್ವೀ ನಾಯಕನ ವಿರುದ್ಧ ಬಂಡೆದ್ದು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ ನಿರಂತರವಾಗಿ ಕಿರುಕುಳ ನೀಡಿದ್ದು ಇದೇ ದೇವೇಗೌಡರು. ಆದರೆ ಹೆಗಡೆ ಇದಕ್ಕೆಲ್ಲ ಬಗ್ಗಲಿಲ್ಲ. ಟೆಲಿಫೋನ್ ಕದ್ದಾಲಿಕೆಯಂತಹ ಆರೋಪಗಳು ಬಂದಾಗ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ ಮಾದರಿಯಾಗಿ ನಿಂತವರು ಹೆಗಡೆ. ಮಣ್ಣಿನ ಮಗನ ಸೋಗಿನಲ್ಲಿದ್ದ ದೇವೇಗೌಡರು ಹೆಗಡೆಯರ ಪಕ್ಷಕ್ಕೆ ಪರ್ಯಾಯವಾಗಿ ಇನ್ನೊಂದು ಪಕ್ಷ ಕಟ್ಟಿ ಕೊನೆಗೆ ಮತ್ತೆ ಹೆಗಡೆಯರ ಕಾಲು ಹಿಡಿದು ಪಕ್ಷ ಸೇರಿಕೊಂಡು ಕುಟಿಲ ಬುದ್ಧಿಯ ಮುಂದುವರೆಸಿದರು. ಇಷ್ಟೆಲ್ಲದರ ಪರಿವೆಯಿದ್ದರೂ, ಹೆಗಡೆ ಪ್ರಧಾನಿಯಾಗುವ ಎಲ್ಲ ಅವಕಾಶವಿದ್ದರೂ ದೇವೇಗೌಡರನ್ನು ಪ್ರಧಾನಿಯಾಗಿಸಿದರು. ಆದರೆ ಕೊನೆಗೆ ದೇವೇಗೌಡರಿಂದ ಹೆಗಡೆಯವರಿಗೆ ಸಿಕ್ಕಿದ್ದು ಉಚ್ಚಾಟನೆಯೆಂಬ ಉಡುಗೊರೆ. ಇದೆಲ್ಲದರ ಹಿಂದಿನ ಕುಟಿಲತೆಯಲ್ಲಿ ನಮ್ಮ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯಂವರ ಪಾಲೂ ಇದೆ. ಮಾನಸಿಕವಾಗಿ ಹೆಗಡೆಯವರನ್ನು ಹತ್ತಿಕ್ಕಲು ಪ್ರಯತ್ನಿಸಿ ಕೊಂಚ ಯಶ ಕಂಡ ಗೌಡರು ನಮ್ಮ ರಾಜ್ಯಕ್ಕೆ ಮಾಡಿದ್ದು ಮೋಸ ಮಾತ್ರ.
“ಪ೦ಚಾಯತ್ ರಾಜ್” ಯೋಜನೆಯನ್ನು ದೇಶದಲ್ಲಿ ಮೊದಲು ಜಾರಿಗೆ ತಂದಿದ್ದು ಹೆಗಡೆಯವರು. ಅಧಿಕಾರವನ್ನು ಮತ್ತು ಅಧಿಕಾರಿಗಳನ್ನು ಜನರ ಬಳಿ ಕೊಂಡೊಯ್ಯಬೇಕೆಂಬ ತಮ್ಮ ಆಸೆಯನ್ನು ನನಸಾಗಿಸಿದ್ದು ನಜೀರ ಸಾಬರು. ನಜೀರ್ ಸಾಬರು ಮತ್ತು ಹೆಗಡೆ ಇಬ್ಬರ ಕೊಡುಗೆ ಪಂಚಾಯತ್ ರಾಜ್ ವಿಭಾಗದಲ್ಲಿ ಇಡೀ ರಾಷ್ಟ್ರಕ್ಕೆ ಮಾದರಿ. ಮುಂದೆ ರಾಜೀವ್ ಗಾಂಧಿ ರಾಷ್ಟ್ರದಲ್ಲಿ ಅಳವಡಿಸಿದ್ದು ಇದೇ ಪಂಚಾಯತ್ ರಾಜ್ ವ್ಯವಸ್ಥೆ. ತೋಟಗಾರಿಕೆ ಬೆಳೆಗಳಿಗೆ ಹೆಗಡೆಯವರು ನೀಡಿದಷ್ಟು ಪ್ರೋತ್ಸಾಹವನ್ನು ಬೇರೆ ಯಾವ ಮುಖ್ಯಮಂತ್ರಿಯೂ ನೀಡಲಿಲ್ಲ. ಹೆಗಡೆಯವರ ಈ ಯೋಜನೆಯಿಂದ ಪ್ರೇರಿತವಾದ ಕೇಂದ್ರ ಸರಕಾರ ಮುಂದೆ “ರಾಷ್ಟ್ರೀಯ ತೋಟಗಾರಿಕಾ ನಿಗಮ”ವನ್ನು ಸ್ಥಾಪನೆ ಮಾಡಿತು. ವಿಧವಾ ಪಿ೦ಚಣಿ, ರಾಜ್ಯ ಅಲ್ಪಸ೦ಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪ೦ಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸ೦ಭವಿಸಿವೆ. ಲೋಕಾಯುಕ್ತರಿಗೆ ಸ್ವ-ಇಚ್ಛೆಯಿ೦ದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು. ಮುಖ್ಯಮ೦ತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು. ಮ೦ತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊ೦ದಿದ್ದರು! ಹೀಗೆ ಹೆಗಡೆಯವರ ಅದೆಷ್ಟೋ ಕಾರ್ಯಕ್ರಮಗಳು ಬದಲಾವಣೆಯ ಮಹಾಪರ್ವಕ್ಕೆ ಮುನ್ನುಡಿಯನ್ನು ಬರೆದವು.
ಹೆಗಡೆ ಎಲ್ಲ ವರ್ಗದ ಜನರಿಗೂ ತಲುಪಿದ ಅಥವಾ ಎಲ್ಲಾ ವರ್ಗದ ಜನರ ಮನಸ್ಸಿಗೂ ಹತ್ತಿರವಾದ ಒಬ್ಬರೇ ಒಬ್ಬ ರಾಜಕಾರಣಿ ಎನ್ನಬಹುದು. ಹೆಗಡೆಯವರ ಯೋಜನೆಗಳ ಇಂದಿನ ಪರಿಸ್ಥಿಯೇನು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಂತರ ಬಂದ ಯಾವ ಮುಖ್ಯಮಂತ್ರಿಗಳು ಕೂಡ ಹೆಗಡೆಯರಷ್ಟು ಪ್ರಬುದ್ಧರಂತೂ ಆಗಿರಲಿಲ್ಲ. ಆದರೆ ಕನಿಷ್ಟ ಅವರ ಯೋಜನೆಗಳ ಪರಿಣಾಮವ ಅರಿಯುವ ಪ್ರಯತ್ನ ಮಾಡಿದ್ದಿದ್ದರೆ ಕರ್ನಾಟಕದ ಅಭಿವೃದ್ಧಿಯಂತೂ ಆಗುತ್ತಿತ್ತು. ಕಲಾ ಪ್ರೇಮಿಗಳೂ ಆಗಿದ್ದ ಹೆಗಡೆಯವರು ಕರ್ನಾಟಕದಲ್ಲಿ ರಂಗಾಯಣ ನಿರ್ಮಾಣ ಮಾಡಿದ್ದು ಈಗ ಇತಿಹಾಸ.
ಕೇವಲ ರಾಜಕಾರಣಿಗಳಲ್ಲಿ ಮಾತ್ರವಲ್ಲ ಜನರಲ್ಲೂ ಕೂಡ ಪ್ರಬುದ್ಧತೆ ಕಡಮೆ ಆಗಿದೆ. ಸಿದ್ಧಾಂತ, ಪಕ್ಷ ಮತ್ತು ವಿಚಾರಧಾರೆಗಳಿಗೆ ಬೆಲೆ ಕೊಡುವಷ್ಟು ನಾವು ಪ್ರಬುದ್ಧರಿದ್ದೇವೆಯೇ ಎನ್ನುವುದು ನಿಜಕ್ಕೂ ದೊಡ್ಡ ಪ್ರಶ್ನೆ. ಮೋದಿ ಜಿಎಸ್‌ಟಿ ತಂದಿದ್ದಾರೆ ಅದರ ಕಾನೂನನ್ನು ಪಾಲಿಸೋಣ ಎಂದರೆ ಅಡ್ಡ ದಾರಿಯನ್ನಾಗಲೇ ಹುಡುಕುವ ಮತ್ತು “ನಾವು ಉದ್ಧಾರ ಆದರೆ ಸಾಕು” ಎನ್ನುವ ಅತ್ಯಂತ ಕೆಳ ಮಟ್ಟದ ಮನಸ್ಥಿತಿಯಿದ್ದರೆ ಬದಲಾವಣೆ ಖಂಡಿತ ಸಾಧ್ಯವಿಲ್ಲ. ಕೆಲವೊಂದನ್ನು ಜನರೇ ಸರಿ ಮಾಡಬೇಕು, ಅದು ಬಿಟ್ಟು ಎಲ್ಲವನ್ನೂ ಸರಕಾರವೇ ಮಾಡಬೇಕು ಎನ್ನುವುದು ಒಳ್ಳೆಯ ವಿಚಾರವಂತೂ ಅಲ್ಲ. ದೇವರೆಡೆಗಿನ ಪ್ರಯಾಣದಲ್ಲಿ ಸಾಮಾನ್ಯರನ್ನೂ ಕರೆದೊಯ್ಯುವವನು ನಿಜವಾದ ಗುರುವಾಗಿರುತ್ತಾನೆ. ಅದನ್ನು ಬಿಟ್ಟು ಪರಮಾತ್ಮನನ್ನು ನಾನು ನೋಡಿದ್ದೇನೆ ಮತ್ತು ನಿಮಗೂ ತೋರಿಸುತ್ತೇನೆ ಎನ್ನುವ ಸ್ವಯಂ ಘೋಷಿತ ದೇವಮಾನವರನ್ನು ನಂಬುವ ಮೊದಲು ಕೆಲವು ಯೋಚನೆಗೆ ನಮ್ಮನ್ನು ತಳ್ಳಿಕೊಳ್ಳುವ ಪ್ರಬುದ್ಧತೆ ತೋರಬೇಕಾಗುತ್ತದೆ.ಇದೆ ಸೂತ್ರವನ್ನು ರಾಜಕಾರಣದಲ್ಲೂ ಬಳಸುವ ಪ್ರಯತ್ನ ಮಾಡುವುದು ಒಳಿತು.
ಪ್ರಬುದ್ಧ ರಾಜಕಾರಣಿಯಾಗಿ ಜನಸೇವೆ ಮಾಡಿದ ರಾಮಕೃಷ್ಣ ಹೆಗಡೆಯಂತವರು ರಾಜಕೀಯಕ್ಕೇ ಮಾದರಿ ಎನ್ನುವುದಂತೂ ಸಾರ್ವಕಾಲಿಕ ಸತ್ಯ.!
Facebook ಕಾಮೆಂಟ್ಸ್