2017ರ ಮಹಿಳಾ ವಿಶ್ವಕಪ್ ಉದ್ಘಾಟನೆಯ ಹಿಂದಿನ ರಾತ್ರಿ ಭೋಜನಕೂಟದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಬಳಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವುದಾಗಿತ್ತು ಆ ಪ್ರಶ್ನೆ. ಮಿಥಾಲಿ ರಾಜ್ ತೀಕ್ಷ್ಣ ಉತ್ತರಕ್ಕೆ ಆ ಪತ್ರಕರ್ತ ಒಂದು ಕ್ಷಣಕ್ಕೆ ಅವಾಕ್ಕಾಗಿದ್ದರು. ಒಬ್ಬ ಪುರುಷ ಕ್ರಿಕೆಟಿಗನಲ್ಲಿ ಇದೇ ರೀತಿ ಪ್ರಶ್ನೆ ಕೇಳಬಲ್ಲಿರಾ? ಅವರ ಇಷ್ಟದ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು ಎಂದು ಕೇಳುವಿರಾ? ಎಂದು ಮಿಥಾಲಿ ರಾಜ್ ಆ ಪತ್ರಕರ್ತ ಮುಟ್ಟಿ ನೋಡುವಂತೆ ಉತ್ತರಿಸಿದ್ದರು. ಆದರೆ ಈಗ ಕೇವಲ ಪುರುಷ ಕ್ರಿಕೆಟಿಗರೇನು, ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾಕತ್ತೇನು ಎಂಬುದು ಜಗಜ್ಜಾಹೀರಾಗಿದೆ.
ಈ ಸಲದ ಮಹಿಳಾ ವಿಶ್ವಕಪ್ನಲ್ಲಿ ಭಾರತ ತಂಡ ಬಲಿಷ್ಟವಾಗಿದ್ದರೂ ತಂಡದ ಎಲ್ಲಾ ಸದಸ್ಯರ ಹೆಸರು ಹೆಚ್ಚಿನವರಿಗೆ ತಿಳಿದಿದ್ದಿರಲಿಲ್ಲ. ಇಂಗ್ಲಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಬಗ್ಗು ಬಡಿದಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧ ಮಂಡಿಯೂರಿತ್ತು. ಮಾಡು ಇಲ್ಲವೇ ಮಡಿ ಎಂಬಂತಾಗಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಿರಾಯಾಸವಾಗಿ ಸೋಲಿಸಿ ಭಾರತ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿತ್ತು. ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲಿನಲ್ಲಿ ಸೋಲಿಸಿ ಆತಿಥೇಯ ಇಂಗ್ಲಂಡ್ ವಿರುದ್ಧ ಫೈನಲಿನಲ್ಲಿ ಭಾರತ ಸೋತಿದ್ದು ಈಗ ಇತಿಹಾಸ. ಪೂನಮ್ ರಾವತ್, ಸ್ಮೃತಿ ಮಂದಣ್ಣ, ಮಿಥಾಲಿ ರಾಜ್, ವೇದ ಕೃಷ್ಣಮೂರ್ತಿ, ದೀಪ್ತಿ ಶರ್ಮ, ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಕಮಾಲ್ ಮತ್ತು ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್ ಭರ್ಜರಿ ಬೌಲಿಂಗ್ ಭಾರತ ತಂಡದ ಈ ಸಾಧನೆಗೆ ಕಾರಣ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಫೈನಲ್‌ನಲ್ಲಿ ಗೆಲ್ಲುವಂತಿದ್ದ ಪಂದ್ಯವನ್ನು ಭಾರತದ ವನಿತೆಯರು ಕೈಚೆಲ್ಲಿದರೂ ವಿಶ್ವದಾದ್ಯಂತ ಇರೋ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಸಫಲರಾಗಿದ್ದರು.
ವಿಷಯ ಅದಲ್ಲ. ಭಾರತದಲ್ಲಿ ಪುರುಷರ ಕ್ರಿಕೆಟಿಗಿರೋ ಮಹತ್ವ ಮತ್ಯಾವ ಕ್ರೀಡೆಗೂ ಇಲ್ಲ ಅನ್ನುವುದು ವಿಷಾದನೀಯ. ಬೇರೆ ಕ್ರೀಡೆ ಬಿಡಿ, ಕ್ರಿಕೆಟಿನಲ್ಲಿಯೂ ಪುರುಷರ ಕ್ರಿಕೆಟ್ಗೆ ಇರೋ ಮಹತ್ವ ಬೇರೆ ಕ್ರಿಕೆಟ್ ಪ್ರಕಾರಗಳಿಗಿಲ್ಲ ಅನ್ನುವುದು ಇನ್ನೂ ಖೇದಕರ. ಅಂಧರ ತಂಡ ವಿಶ್ವಕಪ್ ಗೆದ್ದದ್ದು ಒಂದೆರಡು ದಿನ ಸುದ್ದಿಯಲ್ಲಿದ್ದದ್ದು ಬಿಟ್ಟರೆ ಮೂರನೇ ದಿವಸ ಎಲ್ಲರೂ ಮರೆತಾಗಿತ್ತು. ಭಾರತ ಮಹಿಳೆಯರ ಕ್ರಿಕೆಟ್ ತಂಡವೂ ಇದಕ್ಕಿಂತ ಹೊರತಾಗಿಲ್ಲ ಅನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಪುರುಷರ ಕ್ರಿಕೆಟ್ ತಂಡ ಗೆದ್ದಾಗಲೂ ಸೋತಾಗಲೂ ಹಲವಾರು ಆಯಾಮಗಳಿಂದ ವಿಶ್ಲೇಷಣೆ ಮಾಡುವ ದೃಶ್ಯಮಾಧ್ಯಮಗಳು ಮಹಿಳಾ ಕ್ರಿಕೆಟ್ ವಿಷಯಕ್ಕೆ ಬಂದಾಗ ಜಾಣಮೌನ ವಹಿಸುತ್ತವೆ. ಪುರುಷ ಕ್ರಿಕೆಟಿಗನೊಬ್ಬ ತನ್ನ ಪ್ರೇಯಸಿಯ ಜೊತೆ ಸುತ್ತಾಡುವುದನ್ನು ಗಂಟೆಗಟ್ಟಲೇ ರಂಗು ರಂಗಾಗಿ ವಿವರಿಸುವ ದೃಶ್ಯಮಾಧ್ಯಮಗಳು ನಮ್ಮ ಮಹಿಳಾ ಕ್ರಿಕೆಟಿಗರ ಸಾಧನೆಯ ಸುದ್ದಿಯನ್ನು ಬಿತ್ತರಿಸಲು ಒಂದು ನಿಮಿಷವನ್ನೂ ಮೀಸಲಿಡುವುದಿಲ್ಲ. ಪುರುಷ ಕ್ರಿಕೆಟಿಗರ ಸಾಧನೆಯ ಬಗ್ಗೆ ಸಿನಿಮಾ ಮಾಡಲು ಮುಂದೆ ಬರುವ ನಿರ್ದೇಶಕರು ಮಹಿಳಾ ಕ್ರಿಕೆಟಿಗರ ಹೆಸರು ತಿಳಿದು ಕೊಂಡಿದ್ದರೆ ಅದೇ ದೊಡ್ಡ ಸಂಗತಿ ಎಂದರೆ ಅತಿಶಯೋಕ್ತಿಯಾಗಲಾರದು.
ನಿಜ. ಪುರುಷ ಕ್ರಿಕೆಟಿಗರ ಸಾಧನೆ ಬಹಳ ದೊಡ್ಡದೇ. ಹಾಗಂತ ಮಹಿಳಾ ಕ್ರಿಕೆಟಿಗರನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಮಹಿಳಾ ಕ್ರಿಕೆಟಿನ ತೆಂಡುಲ್ಕರ್ ಎಂದು ಈಗಿನ ನಾಯಕಿ ಮಿಥಾಲಿ ರಾಜ್ ರನ್ನು ಕರೆಯುತ್ತಾರೆ. ಮಿಥಾಲಿ ಸಾಧನೆ ಯಾವುದೇ ಪುರುಷ ಕ್ರಿಕೆಟಿಗನಿಗೂ ಕಮ್ಮಿಯೇನಿಲ್ಲ. ಮಹಿಳಾ ಕ್ರಿಕೆಟ್ ಏಕದಿನ ಪಂದ್ಯಗಳ ಇತಿಹಾಸದಲ್ಲಿ ಅತೀ ಹೆಚ್ಚಿನ ರನ್ ಮತ್ತು ಅರ್ಧಶತಕ ಗಳಿಸಿದ ದಾಖಲೆ ಇರುವುದು ಮಿಥಾಲಿ ಹೆಸರಿನಲ್ಲಿ. ಅತೀ ಹೆಚ್ಚು ವಿಕೆಟ್ ಪಡೆದ ಕೀರ್ತಿ ಭಾರತ ತಂಡದ ಪ್ರಮುಖ ವೇಗಿ ಜೂಲನ್ ಗೋಸ್ವಾಮಿಯವರದ್ದು. ಪುರುಷರಂತೆ ಹೊಡಿ ಬಡಿಯ ಆಟ ಆಡಲ್ಲ ಮಹಿಳೆಯರು ಅನ್ನುವವರಿಗೆ ಈ ಸಲದ ವಿಶ್ವಕಪ್ ನಲ್ಲಿ ಹರ್ಮನ್ ಪ್ರೀತ್ ಕೌರ್ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ 115 ಎಸೆತಗಳಲ್ಲಿ 171 ರನ್ ಭಾರಿಸಿ ಬ್ಯಾಟ್ ಮೂಲಕವೇ ಉತ್ತರಿಸಿದ್ದರು. ಕರ್ನಾಟಕದ ಆಟಗಾರ್ತಿ ವೇದ ಕೃಷ್ಣಮೂರ್ತಿ ಕೂಡಾ ಹೊಡಿಬಡಿಯ ಆಟವನ್ನು ಪ್ರದರ್ಶಿಸಿದ್ದರು. ಇತ್ತೀಚಿಗೆ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದೀಪ್ತಿ ಶರ್ಮ ಮತ್ತು ಪೂನಮ್ ರಾವತ್ ದಾಖಲೆಯ 320 ರನ್ ಬಾರಿಸಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ.
ಮಹಿಳಾ ಕ್ರಿಕೆಟಿನಲ್ಲಿ ಬೌಲರ್‌ಗಳ ವೇಗ ಬಹಳ ಕಮ್ಮಿ ಇರುತ್ತದೆ. ಬ್ಯಾಟ್ಸ್‌ಮನ್ಗಳ ಬ್ಯಾಟಿಂಗ್ ತಂತ್ರಜ್ಞಾನ ಕಳಪೆಯಾಗಿರುತ್ತದೆ. ಮಹಿಳಾ ಕ್ರಿಕೆಟಿಗರು ಬ್ಯಾಟನ್ನು ಬಹಳ ಬಲವಾಗಿ ಬೀಸಲ್ಲ. ರಿವರ್ಸ್ ಸ್ವೀಪ್ ಮಾಡಿ ಸಿಕ್ಸ್ ಹೊಡೊಯೋಲ್ಲ ಹಾಗೂ ಮಹಿಳಾ ಕ್ರಿಕೆಟ್ ಪಂದ್ಯಗಳು ಹೆಚ್ಚಾಗಿ ಲೋ ಸ್ಕೋರಿಂಗ್ ಪಂದ್ಯಗಳು, ಈ ಎಲ್ಲಾ ಕಾರಣಗಳಿಂದ ಮಹಿಳಾ ಕ್ರಿಕೆಟ್ ನೋಡಲು ತುಂಬಾ ಬೋರಾಗಿರುತ್ತದೆ ಅನ್ನುವುದು ಕೆಲವರ ವಾದ. ಮಹಿಳಾ ಕ್ರಿಕೆಟ್ ನೋಡುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಆದರೆ ಪುರುಷ ಕ್ರಿಕೆಟಿಗರು ದೇಶಕ್ಕಾಗಿ ಆಡುವುದಾದರೆ ಮಹಿಳಾ ಕ್ರಿಕೆಟಿಗರೂ ದೇಶಕ್ಕಾಗಿಯೇ ಆಡುವವರಲ್ಲವೇ? ಪುರುಷ ಕ್ರಿಕೆಟಿಗರಿಗೆ ಜಾಸ್ತಿ ಸವಲತ್ತು, ಸಂಬಳ ಕೊಡುವ ರೀತಿಯಲ್ಲೇ ಮಹಿಳಾ ಕ್ರಿಕೆಟಿಗರು ಕೂಡಾ ಇದಕ್ಕೆ ಅರ್ಹರಲ್ಲವೇ? ಮಹಿಳಾ ಕ್ರಿಕೆಟಿಗರು ಏನಾದರೂ ಸಾಧನೆ ಮಾಡಿದಾಗ ಪ್ರಕಟಿಸುವ ಬಹುಮಾನದ ಮೊತ್ತ ಕೆಲವೊಮ್ಮೆ ಪುರುಷ ಕ್ರಿಕೆಟಿಗನೊಬ್ಬ ಐಪಿಎಲ್ ನಲ್ಲಿ ಒಂದೂ ಪಂದ್ಯವನ್ನಾಡದೇ ಬೆಂಚ್ ನಲ್ಲಿ ಕುಳಿತೇ ಗಳಿಸುತ್ತಾನೆ ಅಂದರೆ ಯೋಚಿಸಿ ಮಹಿಳಾ ಕ್ರಿಕೆಟಿನ ಪರಿಸ್ಥಿತಿ ಭಾರತದಲ್ಲಿ.
ಸಚಿನ್ ತೆಂಡುಲ್ಕರ್ರನ್ನು ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಲಾಯಿತಂತೆ, ಧೋನಿ ಭಾರತೀಯ ಭೂ ಸೇನೆ ಸೇರಿದರಂತೆ ಎಂದು ಬಹಳ ದೊಡ್ಡ ವಿಷಯ ಮಾಡುವ ನಮಗೆ ಭಾರತೀಯ ಮಹಿಳಾ ತಂಡದ ವೇಗಿ ಶಿಖಾ ಪಾಂಡೆ ಭಾರತೀಯ ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಎನ್ನುವ ವಿಷಯವೇ ಗೊತ್ತಿರುವುದಿಲ್ಲ!! ವಿಪರ್ಯಾಸವೆಂದರೆ ಕೆಲವು ಮಹಿಳೆಯರು ಕೂಡಾ ಪುರುಷರ ಕ್ರಿಕೆಟನ್ನು ಬೆಂಬಲಿಸುವಷ್ಟು ಮಹಿಳಾ ಕ್ರಿಕೆಟನ್ನು ಬೆಂಬಲಿಸುವುದಿಲ್ಲ. ಸಚಿನ್, ವಿರಾಟ್ ಕೊಹ್ಲಿ, ಧೋನಿ ಮುಂತಾದವರ ಜೊತೆ ಸೆಲ್ಫೀ ತೆಗೆಯಲು ಹಾತೊರೆಯುವ ಹುಡುಗಿಯರು ಮಹಿಳಾ ಕ್ರಿಕೆಟಿಗರ ಜೊತೆ ಸೆಲ್ಫೀ ಪಡೆಯಲು ಯತ್ನಿಸಿದ್ದ ಸನ್ನಿವೇಶ ಬಹಳ ಅಪರೂಪ ಎನ್ನಬಹುದು. ಹ್ಯಾಪಿ ಟು ಬ್ಲೀಡ್ ಮತ್ತಿತರ ಕೆಲಸಕ್ಕೆ ಬಾರದ ಹ್ಯಾಶ್ ಟ್ಯಾಗ್ ಮೂಲಕ ಅರ್ಥವಿಲ್ಲದ ಸೋ ಕಾಲ್ಡ್ ಹೋರಾಟ ಮಾಡುವ ಕೆಲವು ಮಹಿಳಾ ಮಣಿಗಳು ತಮ್ಮದೇ ಮಹಿಳಾ ಕ್ರಿಕೆಟಿಗರಿಗೆ ಸವಲತ್ತುಗಳನ್ನು ಕೊಡಿಸಿ, ವೇತನ ಹೆಚ್ಚಿಸಿ ಎಂಬುದನ್ನು ಯಾವುದೇ ಹ್ಯಾಶ್ ಟ್ಯಾಗ್ ಮೂಲಕ ಹೇಳುವುದಿಲ್ಲ.
ಭಾರತ ಮಹಿಳಾ ಕ್ರಿಕೆಟಿನ ಲೆಜೆಂಡ್ಸ್ಗಳಾದ ಡಯಾನಾ ಎಡುಲ್ಜಿ, ಶಾಂತಾ ರಂಗಸ್ವಾಮಿ ಆಡುತ್ತಿದ್ದಾಗಿನ ಪರಿಸ್ಥಿತಿಗಿಂತ ಈಗಿನ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಗೆಲ್ಲ ಮಹಿಳಾ ಕ್ರಿಕೆಟರುಗಳು ತಮ್ಮ ಪ್ರಯಾಣದ ವೆಚ್ಚವನ್ನು ಮೊದಲು ತಾವೇ ಭರಿಸಿ ಆಮೇಲೆ ಮರುಪಾವತಿ ಮಾಡಿಸಿದ್ದೂ ಇದೆಯಂತೆ. ರಿಸರ್ವೇಶನ್ ಮಾಡಿಸದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳಾ ಆಟಗಾರ್ತಿಯರು ಈಗ ವಿಮಾನಗಳಲ್ಲಿ ಓಡಾಡುತ್ತಿದ್ದಾರೆ. ಅಂಜುಮ್ ಚೋಪ್ರಾ, ನೀತು ಡೇವಿಡ್, ನೂಶೀನ್ ಅಲ್ ಖಾದರ್, ಅಂಜು ಜೈನ್ ಮುಂತಾದ ಭಾರತೀಯ ಮಹಿಳಾ ಕ್ರಿಕೆಟಿಗರು ಸಾಧನೆ ಮಾಡಿಯೂ ಸದ್ದಿಲ್ಲದೇ ತೆರೆಮರೆಗೆ ಸರಿದು ವರ್ಷಗಳಾಗಿವೆ.
ಈ ಸರ್ತಿಯ ಮಹಿಳಾ ವಿಶ್ವಕಪ್ ಬಹಳ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಹಿಂದಿಗಿಂತ ಅಧಿಕ ಮಟ್ಟದಲ್ಲಿ ಜನಮಾನಸದಲ್ಲಿ ಸುದ್ದಿಯಾದದ್ದು ಸಂತಸದ ವಿಷಯವೇ. ಮಾಧ್ಯಮಗಳೂ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದ ಮೇಲಾದರೂ ಭರ್ಜರಿ ಪ್ರಚಾರ ಕೊಟ್ಟವು. ಪ್ರಧಾನಮಂತ್ರಿ ಆದಿಯಾಗಿ ಗಣ್ಯಾತಿಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ವನಿತೆಯರ ತಂಡಕ್ಕೆ ಶುಭಕೋರಿದ್ದು ಭಾರತದಲ್ಲಿ ಮಹಿಳಾ ಕ್ರಿಕೆಟ್ ಭವಿಷ್ಯ ಉಜ್ವಲವಾಗಿದೆ ಎನ್ನುವುದರ ಸ್ಪಷ್ಟ ಸೂಚಕ. ಭಾರತದ ಮಹಿಳಾ ಕ್ರಿಕೆಟಿಗರ ದಶಕಗಳ ಕೂಗಾಗಿದ್ದ ಗುತ್ತಿಗೆ ವೇತನ ಪದ್ದತಿ ಬಹಳ ತಡವಾದರೂ ಜಾರಿಗೆ ಬಂದದ್ದು ಸ್ವಾಗತಾರ್ಹವೇ. ಹೆಚ್ಚು ಹೆಚ್ಚು ದೇಶೀಯ ಪಂದ್ಯಾವಳಿಗಳು, ಉತ್ತಮ ದರ್ಜೆಯ ಕ್ರಿಕೆಟ್ ಕೋಚಿಂಗ್ ಅಕಾಡೆಮಿಗಳು ಮಹಿಳಾ ಕ್ರಿಕೆಟನ್ನು ಭಾರತದಲ್ಲಿ ಇನ್ನೂ ಹೆಚ್ಚು ಪಸರಿಸುವುದರಲ್ಲಿ ಸಂಶಯವೇ ಇಲ್ಲ. ಇದೆಲ್ಲದರ ಜೊತೆಗೆ ಕ್ರಿಕೆಟ್ ಅಭಿಮಾನಿಗಳು, ಮಾಧ್ಯಮಗಳು ಮತ್ತು ಬಿಸಿಸಿಐ ಮಹಿಳಾ ಕ್ರಿಕೆಟ್ ಕಡೆಗಿನ ತನ್ನ ದೃಷ್ಟಿಕೋನವನ್ನು ಬದಲಾಯಿಸಬೇಕಾದ ಕಾಲ ಪಕ್ವವಾಗಿರುವುದಂತೂ ಸತ್ಯ.
Facebook ಕಾಮೆಂಟ್ಸ್