X

‘ದೇಶದ ಪ್ರಧಾನಿಯ ವಿದೇಶ ಪ್ರವಾಸ’

ಸಚಿವರು ಶಾಸಕರರಿಂದ ಹಿಡಿದು ಪಂಚಾಯತ್ ಸದಸ್ಯರ ತನಕ ವಿವಿಧ ಸ್ತರದ ರಾಜಕಾರಣಿಗಳು ಯಾವುದಾದರೂ ಪ್ರವಾಸಕ್ಕೆ ಹೋಗಲು ಅವಕಾಶ ಸಿಕ್ಕೀತೆ ಎಂದು ಕಾಯುತ್ತಲಿರುತ್ತಾರೆ. ಅದರಲ್ಲಿ ವಿದೇಶ ಪ್ರವಾಸಗಳ ತೂಕ ಒಂದು ಕೈ ಹೆಚ್ಚೇ!! ಅಧ್ಯಯನ, ಕಾರ್ಯಕ್ರಮಗಳ ನೆಪದಲ್ಲಿ ಸೂಟ್’ಕೇಸ್ ಏರಿಸಿಕೊಂಡು ವಿಮಾನವೇರುವ ಕೇಸ್ ರಾಜಕಾರಣಕ್ಕೆ ಹೊಸತಲ್ಲ ಮತ್ತು ಕರಗುವ ಕಾಸ್ ಕೂಡಾ ಕಡಿಮೆಯೇನಲ್ಲ.  ಅಧ್ಯಯನಕ್ಕೆಂದು ಅದೆಷ್ಟು ಪ್ರವಾಸಗಳನ್ನು ಆಯೋಜಿಸಲಾಗಿದೆ, ಯಾರ್ಯಾರು ತೆರಳಿದ್ದಾರೆ, ಆ ಪ್ರವಾಸದ ಫಲಶ್ರುತಿಗಳೇನು ಎಂಬಿತ್ಯಾದಿ ಅಂಶಗಳನ್ನು ತಿಳಿಯಲು ಇನ್ನೊಂದು ಸಮಿತಿಯನ್ನೇ ರಚಿಸಿ ಅಧ್ಯಯನ ಮಾಡಬೇಕಾದೀತೇನೋ!! ಆದರೂ ಯಾವ ಕುರುಹೂ ಸಿಕ್ಕದು ಬಿಡಿ. ಮನೆ ವಾಸ ಬೋರ್ ಎನಿಸಿದರೆ ವಿದೇಶ ಪ್ರವಾಸ ಎಂಬ ತತ್ವದಂತೆ ಕೆಲವು ರಾಜಕಾರಣಿಗಳು ಇಲ್ಲದ ಕಾರಣಗಳನ್ನು ಮುಂದೆ ಮಾಡಿಕೊಂಡು, ಬೊಕ್ಕಸಕ್ಕೇ ರಕ್ಕಸ ಅಲೆಯಂತೆ ಬಡಿಯುತ್ತಾರೆ. ಜನರ ಮೇಲೆ ಕಿಂಚಿತ್ ಕಳಕಳಿ ಇಲ್ಲದಿದ್ದರೂ ಆರ್ಥಿಕ ಸವಕಳಿ ಉಂಟುಮಾಡುವಲ್ಲಿ ಇವರದು ಎತ್ತಿದ ಕೈ. ಆದರೆ ಅದಕ್ಕೆಲ್ಲಾ ತಪ್ಪಿಯೂ ತುಟಿ ಬಿಚ್ಚದವರೂ ಈಗ ಪ್ರಧಾನಿಯವರ ವಿದೇಶ ಪ್ರವಾಸದ ವಿರುದ್ಧ ಒಂದೇ ಸಮನೆ  ಹೇಳಿಕೆಗಳನ್ನು  ಚಚ್ಚಲಾರಂಭಿಸಿದ್ಧಾರೆ.

ನಮ್ಮ ನಿಕಟಪೂರ್ವ ಪ್ರಧಾನಿಯವರು ಅಧಿಕಾರದಲ್ಲಿ ಇದ್ದಾರೆ ಎಂದೇ ಗೊತ್ತಾಗುತ್ತಿರಲಿಲ್ಲ ಆದರೆ ಹಾಲಿ ಪ್ರಧಾನಿಯವರು  ಯಾವ ದೇಶದಲ್ಲಿದ್ದಾರೆ ಎನ್ನುವುದೇ ಗೊತ್ತಾಗದು. ಮಾಧ್ಯಮಗಳು ಅದನ್ನು ತಿಳಿದುಕೊಂಡು ವರದಿ ಮಾಡಿದರೂ ಅದು ಜನರನ್ನು ತಲುಪುವಷ್ಟರಲ್ಲಿ ಅವರು ಇನ್ನೊಂದು ದೇಶವನ್ನು ತಲುಪಿರುತ್ತಾರೆ. ಈ ವಯಸ್ಸಿನಲ್ಲೂ ಇಷ್ಟೊಂದು ದೇಶಗಳನ್ನು ಸುತ್ತುವ, ಸಾರ್ವಜನಿಕ ಸಭೆಗಳನ್ನುದ್ಧೇಶಿಸಿ ಮಾತನಾಡುವ ಅವರ ಕ್ರಿಯಾಶೀಲತೆಯ ಹಿಂದಿನ ಗುಟ್ಟೇನೆಂದೇ ತಿಳಿಯದು. ಇದನ್ನು ಅರ್ಥೈಸಿಕೊಳ್ಳಲೆಂದೇ ಇರಬೇಕು ಚಿರಯುವಕ ನಾಯಕರೋರ್ವರು ವರ್ಷಕ್ಕೆ ನಾಲ್ಕೈದು ಸಲ ಒಂದಷ್ಟು ದಿನ ಅಜ್ಞಾತರಾಗುಳಿಯುವುದು. ಇನ್ನು ಕೆಲವು ಭಾರತೀಯ ಸೆಲೆಬ್ರಿಟಿಗಳಂತೂ ಮೋದಿಯವರನ್ನು ಭಾರತಕ್ಕಿಂತಲೂ ವಿದೇಶಗಳಲ್ಲಿ ಭೇಟಿಯಾಗುವುದೇ ಹೆಚ್ಚು ಸೂಕ್ತವೆಂದು ಭಾವಿಸಿದಂತಿದೆ. ಯಾವೊಂದು ಪ್ರವಾಸವನ್ನೂ ವ್ಯರ್ಥ ಪ್ರಯಾಸವನ್ನಾಗಿಸದೆ, ಪ್ರಯೋಜನಕಾರಿಯನ್ನಾಗಿಸುವ ಮೂಲಕ ಅದರ ಉತ್ತರದಾಯಿತ್ವವನ್ನು ಕಾಯ್ದುಕೊಂಡಿದ್ದಂತೂ ಸುಳ್ಳಲ್ಲ.

ಈಗಿನ ಇಸ್ರೇಲ್ ಭೇಟಿ ಸ್ಮರಣೀಯ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿರಬೇಕಾದರೆ, ಕೆಲವರು ತಮ್ಮ ಮೇಲೆ ಮಿಸೈಲ್ ದಾಳಿಯೇ ಆಯಿತೇನೋ ಎಂಬಂತೆ ರೋಧಿಸುತ್ತಿದ್ದಾರೆ. ನಕ್ಸಲರ ರಕ್ತಚರಿತ್ರೆಗೆ ಮುದ್ರೆಯೊತ್ತುವ ಮೂಲಕ ಆಧುನಿಕ ‘ಮುದ್ರಾ’ರಾಕ್ಷಸರೆನಿಸಿಕೊಂಡಿರುವ ನಕಲಿ ಜೀವಪರರು ಈ ಭೇಟಿಯಿಂದ ಕನಲಿ ಹೋಗಿದ್ದು,

ಇಸ್ರೇಲ್ ಹಿಂಸೆಯ ಮೇಲೆ ನಿರ್ಮಿತವಾಗಿದ್ದು ಎನ್ನುತ್ತಾ ತಮ್ಮ ವಿತಂಡವಾದದ ಪುಂಗಿಯೂದುತ್ತಿದ್ದಾರೆ.

ಇತ್ತ ಇನ್ನೊಂದು ರಾಷ್ಟ್ರೀಯ ಪಕ್ಷ ಪ್ರಧಾನಿಯ ವಿದೇಶ ಪ್ರವಾಸವನ್ನು ಟೀಕಿಸುತ್ತಿದ್ದರೆ ಅತ್ತ ಅದೇ ಪಕ್ಷದ ಬೂತ್ ಲೀಡರ್ ಅಲ್ಲಲ್ಲ ಯೂತ್(?) ಲೀಡರೊಬ್ಬರು ಕಳೆದ ಕೆಲವು ದಿನಗಳಿಂದ ಪರದೇಶ ವಾಸದಲ್ಲಿ ಕಳೆದುಹೋಗಿದ್ದಾರೆ. ಆದರಿದು ದೇಶಹಿತಕ್ಕಾಗಿ ನಡೆದ ಪ್ರವಾಸವೆಂದು ಈ ಕೆಳಗಿನ ಸಮರ್ಥನೆ ನ್ಯಾಷನಲ್ ಹೆರಲ್ಡ್’ನಲ್ಲಿ ಪ್ರಕಟಗೊಂಡರೂ ಅಚ್ಚರಿಪಡಬೇಕಾಗಿಲ್ಲ. ಅದೇನೆಂದರೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡ ನಂತರ ಪ್ರಧಾನಿ ವಿದೇಶಕ್ಕೆ ಹಾರುತ್ತಾರೆ. ಕಳೆದ ಬಾರಿ ನೋಟ್ ಬ್ಯಾನ್ ಮಾಡಿದ ತರುವಾಯ ವಿದೇಶಕ್ಕೆ ಭೇಟಿಯಿತ್ತಿದ್ದರು. ಈ ಸೂಕ್ಷ್ಮವನ್ನು ಗ್ರಹಿಸಿದ ಸದ್ರಿ ಯುವ ನಾಯಕರು ಜಿ.ಎಸ್.ಟಿಯನ್ನು ಜಾರಿಗೆ ತಂದು ವಿದೇಶಕ್ಕೆ ಜಾರಿಕೊಳ್ಳುತ್ತಾರೆಂದು ಗೊತ್ತಿದ್ದರಿಂದ, ಪ್ರಧಾನಿಯನ್ನು ಪ್ರಶ್ನಿಸಲು ಅನುಕೂಲವಾಗಲೆಂದೇ ಮುಂಚಿತವಾಗಿ ವಿದೇಶದಲ್ಲಿ ನೆಲೆಯಾಗುವ ಮೂಲಕ ದೇಶದ ಬಗೆಗಿನ ತಮ್ಮ ಕಾಳಜಿ ಮೆರೆದಿದ್ದಾರೆ. ಇದನ್ನೇ ಎಲ್ಲಾ ನಾಯಕರಿಗೂ ಉರು ಹೊಡೆಸಬಹುದು. ಆದರೆ ಅದರಲ್ಲಿ ಸಣ್ಣದೊಂದು ತಪ್ಪಾಗಿದೆ. ಇವರು ಹೋಗಿ ಕುಳಿತ ದೇಶವೇ ಬೇರೆ, ಪ್ರಧಾನಿ ಭೇಟಿಯಿತ್ತ ರಾಷ್ಟ್ರವೇ ಬೇರೆ. ಹಾಗಾಗಿ ಪ್ರಶ್ನಿಸಲಾಗಿಲ್ಲವಷ್ಟೇ ಎಂದು ಕೈ ಕೈ ಹಿಸುಕಿಕೊಳ್ಳುವ ಮೂಲಕ ತಮ್ಮ ರಾಷ್ಟ್ರಪ್ರಜ್ಞೆ ಮೆರೆಯುತ್ತಿದ್ದಾರಂತೆ.

ಓವರ್ ಡೋಸ್: ಪ್ರಧಾನಿಯ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಪತ್ರಕರ್ತರಿಗಿಂತಲೂ ಹೆಚ್ಚಿನ ಪ್ರಚಾರವನ್ನು ಅವರ ವಿರೋಧಿಗಳೇ ನೀಡುತ್ತಿದ್ದಾರೆ. ಹಾಗಾಗಿ ಅವರು ಪತ್ರಕರ್ತರನ್ನು ಜೊತೆಗೆ ಕರೆದುಕೊಂಡು ಹೋಗುವುದಿಲ್ಲವೆನಿಸುತ್ತದೆ.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post