X

ಗತವೈಭವದ  ದಿನಗಳ ಇತಿಹಾಸದ ಪುಟಗಳು..

 

ಭಾಗಶಃ ದಕ್ಷಿಣ ಭಾರತವಲ್ಲದೆ ಇಂದಿನ ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮಾಲ್ಡೀವ್ಸ್ ಅಲ್ಲದೆ ದೂರದ ಸಿಂಗಾಪುರದವರೆಗೂ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದ ಸಾಮ್ರಾಜ್ಯವೊಂದಿತ್ತು. ಸುಮಾರು ಹದಿನೈದು ಶತಮಾನಗಳಿಗೂ ಹೆಚ್ಚಿನ ಕಾಲಘಟ್ಟದಲ್ಲಿ ವಿಸ್ತರಿಸಿದ್ದ ಬಲಿಷ್ಟ ಸಾಮ್ರಾಜ್ಯ ಇಂದಿಗೆ  ಸಾವಿರ ವರ್ಷಗಳ ಹಿಂದೆಯೇ ದಂಡೆತ್ತಿ ಹೋಗಲು ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚಿನ ಯುದ್ಧನೌಕೆಗಳುಳ್ಳ  ‘ನೌಕಾದಳ’ವನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿತ್ತು. ಇನ್ನು ಈ ಸಾಮ್ರಾಜ್ಯದ ಆಡಳಿತದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳ ಆಕಾರ, ಕೆತ್ತನೆಗಳಿಗೆ ಪ್ರಸ್ತುತ ಇಂಜಿನಿಯರಿಂಗ್ ಟೆಕ್ನಾಲಜಿಗಳೇ ನಾಚಿ ನೀರಾಗುವಂತಿವೆ, ಅಲ್ಲದೆ ಇಂದಿಗೂ ಗಟ್ಟಿಮುಟ್ಟಾಗಿವೆ..! ಯೂರೋಪಿನ ಕಾಡು ಮೇಡುಗಳಲ್ಲಿ ಮಾನವ ಗೆಡ್ಡೆ ಗೆಣೆಸುಗಳನ್ನು ಅಗೆದು ತಿನ್ನುತ್ತಿದ್ದ  ಕಾಲದಲ್ಲೇ ಇವರು ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಸಾವಿರಾರು ಹೆಕ್ಟರ್ ಪ್ರದೇಶಗಳಿಗೆ ನೀರನ್ನು ಹರಿಬಿಡುತ್ತಿದ್ದರು. ವಿಸ್ಮಯದ ಸಂಗತಿಯೆಂದರೆ ಇಂದಿಗೂ ಆ ಅಣೆಕಟ್ಟುಗಳು ಬಹುಜನರ ಆಧಾರವಾಗಿರುವುದು! ದಂಡೆತ್ತಿ ಬಂದ ಮೊಂಡ ರಾಜರನ್ನೇ ಇತಿಹಾಸವೆಂದು ಕಲಿಯುತ್ತಿರುವ ನಾವುಗಳು ಇಂತಹ ಒಂದು ಸಾಮ್ರಾಜ್ಯದ ಬಗ್ಗೆ ತಿಳಿದೂ ತಿಳಿಯದಂತಾಗಿದ್ದೇವೆ. ಕ್ರಿಸ್ತ ಪೂರ್ವ ಸುಮಾರು ಮೂರನೇ ಶತಮಾನದಿಂದ ಕ್ರಿಸ್ತ ಶಕ ಹದಿಮೂರನೇ ಶತಮಾನದವರೆಗೂ ವಿಸ್ತರಿಸಲ್ಪಟ್ಟಿದ್ದ  ಈ ಸಾಮ್ರಾಜ್ಯದ ಹೆಸರನ್ನು ಕೇಳಿದರೆ ಅಂದು ಇಡೀ ಭರತ ಖಂಡವೇ ಗಡ ಗಡ ನಡುಗುತ್ತಿತ್ತು. ದೂರದ ಚೀನಾ ಹಾಗು ಬಾಗ್ದಾದಿನವರೆಗೂ ತನ್ನ ಪ್ರಭಾವವನ್ನು ಬೀರಿದ್ದ ಚೋಳ ಸಾಮ್ರಾಜ್ಯವನ್ನು ಇಂದಿನ ಅದೆಷ್ಟು ಜನ ಬಹುವಾಗಿಬಲ್ಲರು?

ಕ್ರಿ.ಪೂ ಮೂರನೇ ಶತಮಾನಕ್ಕೂ ಮೊದಲೇ  ದಕ್ಷಿಣದಲ್ಲಿ ಚೋಳರ ಇರುವಿಕೆಗೆ ಪುರಾವೆಗಳು  (ಅಶೋಕನ ಕಾಲದ  ಶಾಸನಗಳ ಮೇಲೆ ಚೋಳರ ಹೆಸರುಗಳನ್ನು ಕಾಣಬಹುದು) ದೊರೆತರೂ ಚೋಳ ಸಾಮ್ರಾಜ್ಯದ ಉತ್ತುಂಗದ ದಿನಗಳು ಕಂಡದ್ದು ವಿಜಯಾಲಯ ಚೋಳ (ಕ್ರಿ. 848) ಅಧಿಕಾರ ವಹಿಸಿಕೊಂಡ ನಂತರವೇ. ಸುಮಾರು ಒಂಬತ್ತನೇ ಶತಮಾನದ ಆದಿಯಲ್ಲಿ ಅಧಿಕಾರದ ಮದದಲ್ಲಿ ಪಲ್ಲವರು ಹಾಗು ಪಾಂಡ್ಯರ ನಡುವಿನ ಕಿತ್ತಾಟದ ಸೂಕ್ತ ಸಮಯದಲ್ಲಿ ತಮಿಳುನಾಡಿನ ತಂಜಾವೂರನ್ನು ಆಕ್ರಮಿಸಕೊಂಡ ಈತ ಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ.ಅಲ್ಲಿಂದ ಮುಂದೆ ದಕ್ಷಿಣ ಭಾರತದ ಅತಿ ಬಲಿಷ್ಠ ಸಾಮ್ರಾಜ್ಯವಾಗಿ ಬೆಳೆದ ಚೋಳ ಸಾಮ್ರಾಜ್ಯ ರಾಜ ರಾಜ ಚೋಳ ಹಾಗು ಆತನ ಮಗ ರಾಜೇಂದ್ರ ಚೋಳನ ಕಾಲಕ್ಕಾಗಲೇ ಇಂದಿನ ಮಾಲ್ಡೀವ್ಸ್, ಇಂಡೋನೇಶಿಯಾದವರೆಗೂ ವಿಸ್ತರಿಸಿತ್ತು.

ಸಾವಿರಾರು ಮೈಲುಗಳ ದೂರವನ್ನು ನಿರಾಯಾಸವಾಗಿ ಕ್ರಮಿಸುವ ಯುದ್ಧನೌಕೆಗಳೇ ಅಂದಿನ ಚೋಳ ಸಾಮ್ರಾಜ್ಯದ ಅದ್ಭುತ  ಹೈಲೈಟ್. ಪ್ರತಿ ಯುದ್ಧ ನೌಕೆಗಳು ಆಕ್ರಮಿಸುವ ದೇಶದ ಶಕ್ತಿಗನುಸಾರವಾಗಿ ಬೇಕಾಗುವ ಆನೆ, ಕುದುರೆ ಹಾಗು ಕಾಲ್ದಳಗಳ ಟನ್ ಗಟ್ಟಲೆ ತೂಕವನ್ನು ಹೊತ್ತು ಸಾಗುತ್ತಿದ್ದವು. ಇನ್ನೂ ಕುತೂಹಲದ ವಿಷಯವೆಂದರೆ ಪ್ರತಿ ಯುದ್ಧನೌಕೆಗಳು ಬೆಂಕಿಯನ್ನು ಉಗುಳಿ ವೈರಿಪಡೆಯನ್ನು ಅಲ್ಲೊಲ್ಲ ಕಲ್ಲೊಲ್ಲ ಮಾಡುವ ತಂತ್ರಗಾರಿಕೆಯನ್ನು ಒಳಗೊಂಡಿದ್ದವು. ಈಗೆ ಬೆಂಕಿಯನ್ನು ಕಾರುವ ಯಂತ್ರೋಪಕರಣಗಳನ್ನು ದೂರದ ಚೀನಾದಿಂದ ಆಮದು ಮಾಡಿಕೊಂಡು ಅಳವಡಿಸಿಕೊಳ್ಳುವ ತಂತ್ರಗಾರಿಕೆ ಇವರಿಗೆ ಪಾರಂಗತವಾಗಿದ್ದಿತು. ಕ್ರಿ. 1025 ರಲ್ಲಿ ರಾಜೇಂದ್ರ ಚೋಳನ ಶ್ರೀವಿಜಯ (ಇಂದಿನ ಇಂಡೋನೇಷ್ಯಾ) ದಂಡಯಾತ್ರೆ ಇದಕೊಂಡು ತಕ್ಕ ಪುರಾವೆ. ಮುಂದೆ ಅಕ್ಕ ಪಕ್ಕದ ಮಲೇಷ್ಯಾ, ಥೈಲ್ಯಾಂಡ್, ಮಯನ್ಮಾರ್ ಹಾಗು ಸಿಂಗಾಪುರವನ್ನು ಆಕ್ರಮಿಸಿಕೊಂಡ ಚೋಳ ಪಡೆ ದಕ್ಷಿಣ ಏಷ್ಯಾದಾದ್ಯಂತ ತನ್ನ ಪ್ರಭಾವವನ್ನು ಬೀರಿದ್ದಿತು. ಇಂತಹ ಒಂದು ನೌಕಾಪಡೆಯನ್ನು ಬೆಳೆಸಿಕೊಂಡ ಪರಿಯಂತೂ ನಮ್ಮ ಇತಿಹಾಸದ ಗತವೈಭವದ ಅದ್ಭುತ  ಕಾಲ. ಇತ್ತೀಚೆಗೆ 2014 ರಲ್ಲಿ ಭಾರತೀಯ ನೌಕಾಸೇನೆ ದೇಶೀ ನೌಕಾವ್ಯವಸ್ಥೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದ ರಾಜೇಂದ್ರ ಚೋಳನ 1000ನೇ ವರ್ಷದ ಪಟ್ಟಾಭಿಷೇಕದ ದಿನವನ್ನು ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ಇವರ ದೇವಾಲಯಗಳ ನಿರ್ಮಾಣ ಕಲೆಯ ಬಗ್ಗೆ ಹೇಳುವುದಾದರೆ ಒಂದೋ  ಅಗಾಧತೆಯ ಮುಂದೆ  ಅಕ್ಷರ ಸಹ ಮಾರುಹೋಗಿರುವರನ್ನೂ ಅಥವಾ ಇಂಥಹದದೊಂದು ಕೆತ್ತನೆ ನಮ್ಮವರಲ್ಲಿ ಏಕೆ ಮೂಡಲಿಲ್ಲ ಎಂದು ಅಸೂಯೆ ಪಡುವವರನ್ನು ಮಾತ್ರ ಕಾಣಬಹುದೇ ವಿನಃ ಕಲೆಯಲ್ಲಿಕಲೆಯನ್ನು ಹುಡುಕಿ ಕೊಡುವವರು ಇತಿಹಾಸದ ಉದ್ದಗಲಕ್ಕೂ ನಮಗೆ ಸಿಗರು. ಹೆಚ್ಚಾಗಿ ದ್ರಾವಿಡ ಶೈಲಿಯ ಕೆತ್ತನೆಗಳಾಗಿದ್ದ ಚೋಳರ ದೇವಾಲಯಗಳು ನೋಡುಗರನ್ನು ಇಂದಿಗೂ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಇದಕ್ಕೆ ತಕ್ಕ ಉದಾಹರಣೆ ತಂಜಾವೂರಿನ ಬೃಹದೇಶ್ವರ ದೇವಾಲಯ.

ದೇಶದ ಅತಿ ದೊಡ್ಡ ದೇವಾಲಯವೆಂದೇ ಪ್ರಸಿದ್ಧಿ ಹೊಂದಿರುವ ದೇವಾಲಯದ ನಿರ್ಮಾಣ  ಕ್ರಿ  ಸುಮಾರು 1002 ರಲ್ಲಿ ಶುರುವಾಗಿ 1010 ಆಸುಪಾಸಿನಲ್ಲಿ  ಮುಗಿಯಲ್ಪಟಿತ್ತು. 66 ಅಡಿ ಎತ್ತರವಿರುವ (ವಿಮಾನ) ದೇವಾಲಯ ಅತಿ ಎತ್ತರವಾಗ ಶಿವಲಿಂಗ ಹಾಗು ಅತಿ ದೊಡ್ಡ ನಂದಿಯ ಕೆತ್ತನೆಯನ್ನೂ ಒಳಗೊಂಡಿದೆ. ಆದರೆ ದೇವಾಲಯದ ವಿಶಿಷ್ಟತೆ ಇರುವುದು ಅದರ ವಿನ್ಯಾಸ ಹಾಗು ರಚನೆಯಲ್ಲಿ. ಮೊದಲನೆಯದಾಗಿ ಮ್ಯಾಟ್ರಿಕ್ಸ್ ಮಾದರಿಯ ದೇವಾಲಯದ ರಚನೆ. ಅಂದರೆ ಸುಣ್ಣ ಅಥವಾ ಸಿಮೆಂಟಿನಂತಹ ಯಾವುದೇ ಮಾದ್ಯಮವಿರದೆ  ಲಗೋರಿ ಆಟದ ಕಲ್ಲುಗಳಂತೆಯೇ ಒಂದರ ಮೇಲೊಂದು ಕಲ್ಲುಗಳನ್ನು ಜೋಡಿಸಿ ಕಟ್ಟಿರುವ ದೇವಾಲಯವಿದು!  ಬಹುಶಃ ಮಟ್ಟದ ತಾಂತ್ರಿಕ ಚಿಂತನೆ ಅಂದಿನ ಕಾಲದಲ್ಲಿ ಕೇವಲ ದೇಶೀ ಶಿಲ್ಪಿಗಳಿಗೆ  ಮಾತ್ರ ಸೀಮಿತವಾಗಿದ್ದಿತೇನೋ.

ದೇವಾಲಯದ ಕೆತ್ತನೆಗೆ ಬಳಸಲಾಗಿರುವ ಅತಿ ಗಟ್ಟಿಯಾದ ಗ್ರಾನೈಟ್ ಶಿಲೆ. ಶಕ್ತಿಯೆಲ್ಲ ಬಸಿದು ಬಡಿಯುವ ಏಟಿಗೆ ಇಂಚಷ್ಟೂ ಕದಲದ ಗ್ರಾನೈಟ್ ಎಂಬ ಗಟ್ಟಿಗನನ್ನು  ಚೀವಿಂಗ್ಗಮ್ ದೇಹದಂತೆ ತಿದ್ದಿ, ತೀಡಿ ಮಾಡಿರುವ ಕಲಾಕೃತಿಗಳ  ಅಂದವಂತೂ ವರ್ಣನೆಗೆ ನಿಲುಕದು. 1,30,000 ಟನ್ ಗಿಂತಲೂ ಹೆಚ್ಚಿನ ಗ್ರಾನೈಟ್ ದೇವಾಲಯದ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದರೆ ನಮ್ಮ ಪ್ರಾಚೀನರ ಶ್ರಮದ ಮೇಲೆ ನಮಗೆ ಹೆಮ್ಮೆ ಮೂಡದೇ ಇರುತ್ತದೆಯೇ?  ವಿಸ್ಮಯದ ವಿಚಾರವೆಂದರೆ ಈ ದೇವಾಲಯ ನಿರ್ಮಾಣವಾಗಿರುವ ಜಾಗದಿಂದ ಸುತ್ತ ಮುತ್ತಲೂ ಯಾವುದೇ ಕಲ್ಲಿನ ಗುಡ್ಡಗಳಾಗಲಿ, ಬಂಡೆಗಳಾಗಲಿ ಇದ್ದ ಪುರಾವೆಗಳಿಲ್ಲ. ಹಾಗಾದರೆ ಅಷ್ಟೆಲ್ಲ ಪ್ರಮಾಣದ ಕಲ್ಲಿನ ರಾಶಿಯನ್ನು ತಂದಿದ್ದಾದರೂ ಎಲ್ಲಿಂದ? ಸಂಶೋಧಿಸುತ್ತ ಹೊರಟ ಇತಿಹಾಸಕಾರರಿಗೆ ದೊರೆತದ್ದು ಸುಮಾರು ಐವತ್ತು  ಮೈಲಿನಷ್ಟು ದೂರದ ಒಂದು ಹಳ್ಳಿ. ಆದರೆ ತಿಣುಕಾಡಿದರೂ ಅಲುಗಾಡಿಸಲಾಗ, ಪ್ರಪಂಚದಲ್ಲೇ ಅತಿ ಗಟ್ಟಿ ಕಲ್ಲಾದ ಗ್ರಾನೈಟ್ ಅನ್ನು ಟನ್ ಗಟ್ಟಲೆ ಪ್ರಮಾಣದಲ್ಲಿ ಐವತ್ತು ಮೈಲಿನಷ್ಟು ದೂರ ಸಾಗಿಸಿದಾದರೂ ಹೇಗೆ? ಅದಿರಲಿ, ದೇವಾಲಯದ ಗೋಪುರದ ಮೇಲಿರುವ  ಕಲ್ಲಿನ ತೂಕವೇ ಸುಮಾರು 80 ಟನ್ ಗಳು.! ಅಷ್ಟು ಭಾರವಾದ ಕಲ್ಲೊಂದನ್ನು ಮೋಟಾರು ಅಥವಾ ಕ್ರೇನ್ ಗಳಿಲ್ಲದ ಕಾಲದಲ್ಲಿ ಅರವತ್ತರಿಂದ ಎಪ್ಪತ್ತು ಅಡಿ ಎತ್ತಿ ಕೂರಿಸಿದಾದರೂ ಹೇಗೆ?  ಕುತೂಹಲ ಮೂಡುವುದಿಲ್ಲವೇ? ಸಾವಿರ ವರ್ಷಗಳು ಕಳೆದರೂ ಇಂದಿಗೂ ಕಂಗೊಳಿಸುವ ವರ್ಣಚಿತ್ರಗಳು, ದೇವಾಲಯದ ನೆರಳು ನೆಲದ ಮೇಲೆಯೇ ಬೀಳದಂತೆ ಕಟ್ಟಿರುವ ಕುಶಲತೆ, ಕೆಲಮಾಳಿನಲ್ಲಿ ಇರುವ ಸುರಂಗ ವ್ಯವಸ್ಥೆ ಹೀಗೆ  ಇನ್ನು ಹಲವು ಪ್ರತ್ಯಕ್ಷ ಪುರಾವೆಗಳು ಚೋಳರ ಜಾಣ್ಮೆಯನ್ನು ವಿಶ್ವಕ್ಕೆ ತೋರಿಸುತ್ತವೆ. ವಿದೇಶಿಗರಿಗೆ ಅಲ್ಲದೆ ನಮ್ಮಲ್ಲೇ ಹೆಚ್ಚಿನವರಿಗೆ ಇಂತಹ ತಾಂತ್ರಿಕತೆಯ ಮೇಲೆ ಸಂಶಯ ಮೂಡಿ ಇವೆಲ್ಲ ಏಲಿಯನ್ ಎಂಬ ಜೀವಿಗಳು ಮಾಡಿವೆ ಎಂಬ ಬಂಡ ವಾದವನ್ನು ಮುಂದಿಡುತ್ತಾರೆ. ನಾವುಗಳು ಒಂದರ ಹಿಂದೊಂದು ವಿಸ್ಮಯಗಳನ್ನು ಸೃಷ್ಟಿಸುತ್ತಿದ್ದ  ಕಾಲದಲ್ಲಿ ಕಾಡುಮೇಡುಗಳಲ್ಲಿ ಅರೆ ಬೆತ್ತಲಾಗಿ ಅಲೆಯುತ್ತಿದ್ದ ಅವರುಗಳೇನೋ ತಾವು ಸಣ್ಣವರೆಂದು ತೋರಿಸಿಕೊಳ್ಳದಿರಲು ಹಾಗೊಂದು ವಾದವನ್ನು ಮುಂದಿಡಬಹುದು. ಆದರೆ ಇಲ್ಲಿ ಹುಟ್ಟಿ ಇಲ್ಲೇ ಬೆಳೆದ ನಮ್ಮವರಿಗೇಕೆ ನಮ್ಮ ಪೂರ್ವಜರ ಕುಶಲತೆ ಹಾಗು ಶ್ರಮದ ಮೇಲೆ ಇಲ್ಲದ ಸಂಶಯ?

ಅಣೆಕಟ್ಟು ನಿರ್ಮಾಣದಲ್ಲೂ ಚೋಳರು ಭಾರಿ ನಿಸ್ಸೀಮರಾಗಿದ್ದರು. ಅದೂ ಸರಿಸುಮಾರು 2000 ವರ್ಷಗಳ ಹಿಂದೆ.  ಕ್ರಿ  2 ನೇ ಶತಮಾನದಲ್ಲಿ ಕರಿಕಲ ಚೋಳನ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟ ಕಲ್ಲಣೈ ಆಣೆಕಟ್ಟು ಇಂದಿಗೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕೇಳಿದರೆ ನಮ್ಮ ಪ್ರಸ್ತುತ ಎಂಜಿನಿಯರುಗಳು ಹುಬ್ಬೇರಿಸದಿರರು. ಪ್ರಪಂಚದಲ್ಲೇ ಅತಿ ಪುರಾತನ ಆಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಗಳಿಸಿರುವ ಅಣೆಕಟ್ಟನ್ನು ತಿರುಚನಾಪಳ್ಳಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಂದು ಸಾವಿರಾರು ವರ್ಷಗಳು  ಕೋಟ್ಯಂತರ ಜನರರಿಗೆ  ಆಧಾರವಾಗಬಲ್ಲ ಅಣೆಕಟ್ಟನ್ನು ನಿರ್ಮಿಸಬಲ್ಲ ಚಾತುರ್ಯತೆ ಚೋಳರಿಗೆ ಅದೆಲ್ಲಿಂದ ಬಂದಿರಬಹು ಎಂಬುದು ಕುತೂಹಲಕಾರಿ ವಿಷಯ.

ಜಗತ್ಪ್ರಸಿದ್ದ ದೇವಾಲಯಗಳು, ಅವುಗಳಲ್ಲಿನ ಅಮೋಘ ಕೆತ್ತನೆ, ದಂಡೆತ್ತಿ ಬರುವ ಭಾರಿ ಅಲೆಗಳ ನಡುವೆ ಸಾವಿರಾರು ಮೈಲುಗಳು ಚಲಿಸುವ ನೌಕೆಗಳು, ವೈರಿ ನೌಕೆಗಳನ್ನು ದಿಕ್ಕುತಪ್ಪಿಸಿ ಕಟ್ಟಿಹಾಕುವ ಕಲೆ, ಇಂದು  ಇಷ್ಟೆಲ್ಲ ಆಧುನಿಕ ಯಂತ್ರ ತಂತ್ರಗಳಿದ್ದೇ ರಭಸವಾಗಿ ಬರುವ ಮಳೆಗೂ ಗಾಳಿಗೋ ನುಚ್ಚು ನೂರಾಗುವ ಕಟ್ಟಡಗಳ ಕಾಲದಲ್ಲಿ ಯಾವುದೇ ಕಂಪ್ಯೂಟರ್ ಟೆಕ್ನಾಲಜಿಗಳ ಆಧಾರವಿಲ್ಲದೆ ಇಂದಿನವರೆಗೂ ಕಾರ್ಯನಿರ್ವಹಿಸಬಲ್ಲ ನಿರ್ಮಾಣಗಳ ಕ್ಷಮತೆಯ ಹಿಂದಿರುವ ಕುಶಲತೆ, ಸಹಸ್ರ ವರ್ಷಗಳ ಕಾಲ ಆಳ್ವಿಕೆ ಮಾಡಿದ ಹೆಗ್ಗಳಿಕೆ, ಕಲೆ ವಾಸ್ತುಶಿಲ್ಪಗಳಿಗೆ ನೀಡಿದ ಅಮೂಲ್ಯ ಕೊಡುಗೆ ಹಾಗು ಇನ್ನು ಹಲವು ಅಂಶಗಳನ್ನು ಒಳಗೊಂಡಿದ್ದ ಜೋಳ ಸಾಮ್ರಾಜ್ಯ ಇಂದು ಇತಿಹಾಸದ ಪುಸ್ತಕಗಳಲ್ಲದೆ ಜನರ ಮಸ್ತಿಷ್ಕದಿಂದಲೂ ಮರೆಯಾಗುತ್ತಿದೆ.

ವಿದೇಶಿಯರಿಗೆ ಇಂತಹ ವಿಚಾರಗಳ ಬಗ್ಗೆ ಯೋಚಿಸಲೂ ಸಾಧ್ಯವಾಗದಂತಹ ಕಾಲದಲ್ಲಿ ಇಷ್ಟೆಲ್ಲಾ ವಿಷಯಗಳನ್ನು ಅರೆದು ಕುಡಿದ ಜ್ಞಾನಿಗಳು ಬರ ಬರುತ್ತಾ ಏಕೆ ಕಣ್ಮರೆಯಾಗಿ ಹೋದರು? ಚಕ್ರವನ್ನು ಕಂಡು ಹಿಡಿದ ಮಾನವ ಇಂದು ವಿಮಾನವನ್ನು ಸೃಷ್ಟಿಸಿದಂತೆ ಅಂದು  ಒಂದು ವಿಶ್ವವಿದ್ಯಾಲಯದ ಜ್ಞಾನವನ್ನೇ ತಮ್ಮಲ್ಲಿ ಮಿಳಿತಗೊಳಿಸಿಕೊಂಡಿದ್ದ ಕಲಿಗಳು ಕಾಲದೊಟ್ಟಿಗೆ ಇನ್ನೂ ಬೆಳೆಯಬೇಕಿತ್ತಲ್ಲವೇ? ಸಾವಿರ ಸಾವಿರ ವರ್ಷಗಳ ಹಿಂದೆ ಅಣೆಕಟ್ಟೊಂದನ್ನು ನಿರ್ಮಿಸಬಲ್ಲ  ಜ್ಞಾನ ಹಾಗೆಯೆ ಬೆಳೆಯುತ್ತ ಮುಂದುವರೆದಿದ್ದಾದರೆ ಭಾರತೀಯರಿಗೆ ಇಂದು ಯಾರೊಬ್ಬರೂ ಸರಿಸಾಟಿಯಾಗುತ್ತಿರಲಿಲ್ಲ. ಹಾಗಾದರೆ ಇಂತಹ ಒಂದು ಬೆಳವಣಿಗೆ ಕಣ್ಮರೆಯಾದದ್ದು ಎಲ್ಲಿ ಮತ್ತು ಏತಕ್ಕೆ?  ಚೋಳ ಸಾಮ್ರಾಜ್ಯ ಇಂತಹ  ಭವ್ಯ ದೇಶದ ವೈಭವದ ದಿನಗಳಿಗೆ ಒಂದು ಸಣ್ಣ ಸಾಕ್ಷಿ. ಇಂತಹ ಅದೆಷ್ಟು ಸಾಮ್ರಾಜ್ಯಗಳು ಬಂದು, ಬೆಳಗಿ ಮರೆಯಾದವೋ ಯಾರು ಬಲ್ಲರು?

ಕಲೆ, ಸಾಹಿತ್ಯ, ಸಂಗೀತ, ನಿರ್ಮಾಣ, ತಾಂತ್ರಿಕತೆ, ಯುದ್ಧ ಕುಶಲತೆ ಹೀಗೆ ಇನ್ನು ಹಲವು ವರ್ಗಗಳಲ್ಲಿ ಪ್ರಚಂಡ ಜ್ಞಾನವನ್ನುಗಳಿಸಿದ್ದ, ಮೂವತ್ತರಿಂದ ಮೂತ್ತೈದು ರಾಜರುಗಳ ಆಳ್ವಿಕೆಗೆ ಒಳಗಾದ ಚೋಳ ಸಾಮ್ರಾಜ್ಯ ಹದಿಮೂರನೇ ಶತಮಾನದ ಕೊನೆಯಲ್ಲಿ ಅವನತಿಯನ್ನು ಕಂಡಿತು. ಜೊತೆಗೆ ಹಾವಾಡಿಗರ ದೇಶ ಎಂದು ಕಾಲೆಳೆಯುವ ಪರಕೀಯರ ಮುಖ ಕೆಂಪಾಗುವಂತೆ ಹಲವಾರು ವಿಸ್ಮಯಗಳನ್ನು ದೇಶೀ ಇತಿಹಾಸದ ಪುಟಗಳಲ್ಲಿ ಪುರಾವೆಗಳ ಸಹಿತ ಅಚ್ಚೊತ್ತಿ ಹೋಯಿತು. ದೀಪದ ಸುತ್ತ ಇರುವ ಕತ್ತಲಿನಂತೆ ಕಪ್ಪಾಗಿರುವ ನಮ್ಮ ದೇಶೀ ವಿಚಾರಗಳು ಇತಿಹಾಸದ ಪುಟಗಳಿಂದ ಕಣ್ಮರೆಯಾಗುವ ಮೊದಲು ಮುಂದಿನ ಪೀಳಿಗೆಗೆ ರವಾನಿಸುವ ಕಾರ್ಯ ನಡೆಯಬೇಕಿದೆ. ಆಗೆಲ್ಲ ಚೋಳ ಸಾಮ್ರಾಜ್ಯವನ್ನು ಗರ್ವದಿಂದ ವರ್ಣಿಸಬೇಕಿದೆ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post