X

 ರಾತ್ರಿ ಕಂಡ ಬಾವಿಗೆ ಹಗಲು ಬಿದ್ದವರ್ಯಾರು?!

ಡೊನೊಲ್ಡ್ ಟ್ರಂಪ್. ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಯಾರು ತಾನೇ ಕೇಳಿರಲಿಕ್ಕಿಲ್ಲ. ಒಂದು ಪಕ್ಷ ನಮ್ಮ ದೇಶದ ರಾಷ್ಟ್ರಪತಿಯ ಹೆಸರೇ ತಿಳಿಯದಿದ್ದರೂ ಸಾಗರಗಳಾಚೆಗಿರುವ ಈ ಟ್ರಂಪ್ ಯಾರು, ಆತನ ಸುಂದರ ಮಗಳ ಹೆಸರೇನು, ಅವನ ಆಸ್ತಿಯ ಒಟ್ಟು ಮೊತ್ತವೆಷ್ಟು ಎಂಬೆಲ್ಲ ವಿಚಾರಗಳು ಸಾರಸಗಟಾಗಿ ಹೇಳಬಲ್ಲ ಬುದ್ದಿವಂತರಿದ್ದಾರೆ ನಮ್ಮಲ್ಲಿ. ಎಲ್ಲೋ ಒಂದೆಡೆ ಇದು ಪಾಶ್ಚಿಮಾತ್ಯೀಕರಣದ ಮತ್ತೊಂದು ಮುಖವೆಂದರೂ ಸುಳ್ಳಾಗದು.

ಅದೇನೇ ಇರಲಿ. ಸದ್ಯಕ್ಕೆ ಅಮೇರಿಕಾದ ನಲ್ವತ್ತೈದನೆಯ ಅಧ್ಯಕ್ಷ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿ ಬಂದದ್ದು ಅಮೇರಿಕ ಹಾಗು ಸೌದಿ ಅರೇಬಿಯಾದ ನಡುವಿನ 110 ಬಿಲಿಯನ್ ಡಾಲರ್’ಗಳ ಶಸ್ತ್ರಾಸ್ತ್ರ ಒಪ್ಪಂದವಾದಾಗ. ಇದು ಅಮೇರಿಕ ಇಲ್ಲಿಯವರೆಗೂ ಇತರ ಯಾವುದೇ ದೇಶದೊಟ್ಟಿಗೂ ಮಾಡಿಕೊಂಡಿರದ ಅತಿ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದ! ತನ್ನ ಅಧ್ಯಕ್ಷೀಯ ಚುನಾವಣಾ ಪ್ರಚಾರದುದ್ದಕ್ಕೂ ಸೌದಿಯನ್ನು ಕಾಯ ವಾಚಾ ಮಾನಸ ತೆಗಳುತ್ತಲೇ ಸಾಗಿ ಬಂದ ಟ್ರಂಪ್ ತಾನು ಅಧ್ಯಕ್ಷನಾದ ಮೇಲೆ ವಿಶ್ವದ ಬೇರ್ಯಾವ ‘ಇಂಪಾರ್ಟೆಂಟ್’ ಎನ್ನುವ ದೇಶಗಳ ಪ್ರವಾಸಕ್ಕೂ ಮುನ್ನವೇ ಸೌದಿ ರಾಜರ ಜೊತೆಗೂಡಿ ಕುಣಿಯುತ್ತಿದ್ದದ್ದನ್ನು ಕಂಡು ಜಗತ್ತು ಕೆಲಕಾಲ ತಲೆ ಕೆರೆದುಕೊಂಡಿತ್ತು. ಒಬಾಮ ಅದೇನೇ ಮಾಡಿದ್ದರೂ ನಾನು ಅದರ ತದ್ವಿರುದ್ದವಾಗಿಯೇ ಮಾಡಬೇಕೆಂದು ಹಠ ಹಿಡಿದ ಮಕ್ಕಳಂತೆ ಈತ ವರ್ತಿಸುತ್ತಿರುವುದು ಜಗಜ್ಜಾಹಿರಾದ ವಿಷಯ. ಒಬಾಮ ಆಡಳಿತ ಯಾವುದನ್ನು ವಿಶ್ವದ ಕಂಟಕ ಎಂದು ಕರೆಯುತ್ತಿತ್ತೋ ಅಂತಹ ಒಂದು ನಿರ್ಧಾರವನ್ನು ನೀರು ಕುಡಿದಂತೆ ಟ್ರಂಪ್ ಆಡಳಿತ ಅಂದು ತೆಗೆದುಕೊಂಡಿತ್ತು. ತನ್ನ ಎಲ್ಲ ನಿರ್ಧಾರವನ್ನು ಎಕ್ಸಲೆಂಟ್ ಎಂದು ತೋರಿಸುವ ಭರದಲ್ಲಿ ಮಧ್ಯಪ್ರಾಚ್ಯಾ ದೇಶಗಳ ನಿದ್ದೆಯನ್ನ ಹಾಳುವಮಾಡುವ ಕುತಂತ್ರವೇನಾದರೂ ಇದರ ಹಿಂದೆ ಅಡಗಿದ್ದರೆ ಈಗಾಗಲೇ ಮದ್ದುಗುಂಡುಗಳ ಕಪ್ಪು ಹೊಗೆಯಿಂದ  ಕರಕಲಾಗಿ ಹೋಗುತ್ತಿರುವ ಇಲ್ಲಿಯ ನೆಲ ಅಕ್ಷರ ಸಹ ಬೂದಿಯ ಗುಡ್ಡೆಯಾಗುವ ಮಾತು ಸುಳ್ಳಾಗುವುದಿಲ್ಲ. ಅಷ್ಟಕ್ಕೂ ಈ ಶಸ್ತ್ರಾಸ್ತ್ರ ಒಪ್ಪಂದವನ್ನು ಒಬಾಮ ಆಡಳಿತ ಹಿಡಿತಗೊಳಿಸಿದ್ದೇಕ್ಕೆ? ಟ್ರಂಪ್ ಸರ್ಕಾರಕ್ಕೆ ಇದರಿಂದ ಆಗುವ ಲಾಭವಾದರೂ ಏನು? ಶಿವನ ಪೂಜೆಯಲ್ಲಿ ಕರಡಿಗೇನು ಕೆಲಸ ಎಂದುಕೊಂಡು ಹಾಯಾಗಿ ಮಲಗಿಕೊಂಡಿರುವ ಜಗತ್ತಿಗೆ ಇದರಿಂದ ಆಗುವ ಪರಿಣಾಮಗಳೇನು?

ವಿಶ್ವವನ್ನೇ ತನ್ನ ತೈಲ ಶಕ್ತಿಯಿಂದ ಕುಣಿಸುವ ತಾಕತ್ತಿರುವ ಸೌದಿ ದೇಶಕ್ಕೆ ಪಕ್ಕದಲ್ಲಿರುವ ಇರಾನ್’ನ ಕಂಡರೆ ಕೆಂಡವನ್ನು ಮೈಯ್ಯ ಮೇಲೆ ಸುರಿದುಕೊಂಡಂತೆ ಆಡುತ್ತದೆ. ಎಂದಿಗೂ ಆ ದೇಶದ ಮೇಲೆ ತನ್ನ ಒಂದು ಹದ್ದಿನ ಕಣ್ಣನ್ನು ಇರಿಸಿಗೊಂಡಿರುತ್ತದೆ. ಹೆಚ್ಚುಕಡಿಮೆ ತನ್ನಷ್ಟೇ ತೈಲವನ್ನು ಉತ್ಪಾದಿಸಬಲ್ಲ ಸಾಮರ್ಥ್ಯವಿರುವ, ವಿಶ್ವ ಮಾರುಕಟ್ಟೆಯಲ್ಲಿ ತನ್ನ ಬಾಸ್-ಗಿರಿಗೇ ಸಡ್ಡು ಹೊಡೆಯಬಲ್ಲ ದೇಶವಾದ್ದರಿಂದ ಅದು ರಕ್ಷಣಾತ್ಮಕವಾಗಿ ತೆಗೆದುಕೊಳ್ಳುವ ಪ್ರತಿ ಹೆಜ್ಜೆಗಿಂತಲೂ ತಾನು ಎರಡೆಜ್ಜೆ ಮುಂದೆ ಇರಬೇಕಂಬ ದರ್ಪ ಸೌದಿಯರದ್ದು. ಇರಾನ್ ಅದಾಗಲೇ ಅತ್ಯುತ್ತಮ ಸಾಮರ್ಥ್ಯದ ಮಿಸೈಲ್’ಗಳನ್ನೂ ಹೊಂದಿರುವುದಲ್ಲದೆ ತನ್ನ ರಕ್ಷಣಾ ವ್ಯವಸ್ಥೆಗೆ ಏನು ಬೇಕೋ ಅದೆಲ್ಲವನ್ನು ಹೆಚ್ಚಿನ ಆಸ್ಥೆಯಿಂದ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದೆ. ನೆಲ ಬಗೆದು ಎಣ್ಣೆಯನ್ನು ಎತ್ತುವ ಮಟ್ಟಿನ ಚತುರತೆ ಹೊಂದಿರುವ ಸೌದಿ ಅರೇಬಿಯಾ ಮಾತ್ರ ತನ್ನ ಮಿಲಿಟರಿ ಕಾರ್ಯಾಚರಣೆಗಳಿಗೆ/ ಕಾರ್ಯಕ್ರಮಗಳಿಗೆ ಬೇಕಾಗುವ ಅವಶ್ಯಕ ಯುದ್ಧ ಸಾಮಗ್ರಿಗಳಿಗೆ ಹೆಚ್ಚಾಗಿ ಇತರೆ ದೇಶಗಳನ್ನೇ ಅವಲಂಬಿಸಿರುತ್ತದೆ. ವರ್ಷಕ್ಕೆ ಒಮ್ಮೆ ಹಬ್ಬಕ್ಕೋ ಜಾತ್ರೆಗೋ ಶಾಪಿಂಗ್’ಗೆ ಹೋದಂತೆ ಒಂದಿಷ್ಟು ಬಿಲಿಯನ್ ಡಾಲರ್ ದುಡ್ಡನ್ನು ಸುರಿದು ತನಗೆ ಇಷ್ಟ ಬಂದ ಯುದ್ಧ ಸಾಮಗ್ರಿಗಳನ್ನು ಕೊಂಡು ತಂದರೆ ಇಲ್ಲಿನ ರಕ್ಷಣಾ ಸಚಿವಾಲಯಕ್ಕೆ ನೆಮ್ಮದಿಯ ನಿಟ್ಟುಸಿರು. ಹೀಗೆ ಯುದ್ಧ ಸಾಮಗ್ರಿಗಳ ಶಾಪಿಂಗ್ ಹೊರಡುವ ಸೌದಿ ದೊರೆಗಳು ಹೆಚ್ಚಾಗಿ ತಟ್ಟುವುದು ವಿಶ್ವದ ದೊಡ್ಡಣ್ಣ ಅಮೇರಿಕಾದ ಬಾಗಿಲು.

ಸೌದಿ ಹಾಗು ಅಮೇರಿಕ ನಡುವಿನ ಸಂಬಂಧ ದಶಕಗಳ ಕಾಲ ಹಳೆಯದು. ಮಧ್ಯದಲ್ಲಿ ಕೊಂಚ ಇರುಸು ಮುರುಸು ಉಂಟಾದರೂ ಸಂಬಂಧದ ಗಟ್ಟಿತನವೇನು ಅಷ್ಟಾಗಿ ಕ್ಷೀಣಿಸಲಿಲ್ಲ. 2001ರ WTC  ದಾಳಿಯ ಹಿಂದೆ ಸೌದಿಯ ಕೈಚಳಕ ಇದೆಯೆಂಬ ಸುದ್ದಿಗಳು ಇದ್ದರೂ ಅಮೇರಿಕ ಅಷ್ಟಾಗಿ ತನ್ನ ವಕ್ರ ದೃಷ್ಟಿಯನ್ನು ಈ ವಿಷಯದ ಮೇಲೆ ಹರಿ ಬಿಡಲಿಲ್ಲ. ವರ ಕೊಡುವ ದೇವರನ್ನೇ ಹಿಡಿದು ಜೈಲಿನಲ್ಲಿ ಹಾಕಲಾದಿತೇ?! ಪರಿಣಾಮ ಅದೇನೇ ಕಷ್ಟ-ನಷ್ಟಗಳಿದ್ದರೂ ತೈಲದ ದಾಹಕ್ಕೆ ಮಣಿದು ತಣ್ಣಗಿರಲೇಬೇಕಾದ ಅನಿವಾರ್ಯದ ಸ್ಥಿತಿ ಅಮೆರಿಕದಾಯಿತು. ಆದರೆ ಎಂದು ಅಮೇರಿಕ ‘ಷೇಲ್ ‘ತೈಲವನ್ನು  (Shale Oil – ಒಂದು ಭಿನ್ನ ಬಗೆಯ ಕಲ್ಲಿನಿಂದ ತೈಲವನ್ನು ಉತ್ಪಾದಿಸುವ ವಿಧಾನ) ಉತ್ಪಾದಿಸಲು ಪ್ರಾರಂಭಿಸಿತೋ, ತೈಲದ ವಿಚಾರದಲ್ಲಿ ಸ್ವಾವಲಂಬಿಯಾಗುವ ಕನಸು ಕಂಡಿತೋ ಅಂದೇ ಈ ವಿಚಾರ ಕುರಿತು ಸೌದಿ ದೇಶಕ್ಕೆ ಸೆಡ್ಡು ಹೊಡೆಯಲು ಶುರು ಮಾಡಿದ್ದು. ವಾಡಿಕೆಯಂತೆ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ, ತೈಲದ ಬೆಲೆ ಕುಸಿತವನ್ನು ತಡೆಯಲು ವಿಶ್ವದ ತೈಲ ಉತ್ಪಾದಿಸುವ ಎಲ್ಲಾ ದೇಶಗಳು ಕೆಲಕಾಲ ತೈಲ ಗಣಿಗಾರಿಕೆಯನ್ನು ಕಡಿಮೆ ಮಾಡುತ್ತವೆ. ಇದು ಪೂರೈಕೆ ಕಡಿಮೆಯಾದಷ್ಟು ಕೋರಿಕೆ ಹೆಚ್ಚಾಗಿ ಬೆಲೆ ಕುಸಿಯತಂತೆ ತಡೆಯುವ ಸರಳ ಸೂತ್ರ. OPEC (Organization of Petrolium Exporting Companies) ಎಂಬ ವಿಶ್ವದ ಅತಿ ಹೆಚ್ಚು ತೈಲ ಉತ್ಪಾದಿಸುವ ದೇಶಗಳ ಸಂಘದ ಅಧ್ಯಕ್ಷನಾಗಿರುವ ಸೌದಿ, 2014 ರ ನವೆಂಬರ್’ನಲ್ಲಿ ವಾಡಿಕೆಯಂತೆ ಉತ್ಪಾದನೆಯನ್ನು ನಿಲ್ಲಿಸದೆ ತೈಲದ ಬೆಲೆಯಲ್ಲಿ ಭಾರಿ ಅಲ್ಲೊಲ್ಲ ಕಲ್ಲೊಲ್ಲವನ್ನು ಉಂಟುಮಾಡಿತ್ತು. ಈ ಕಿತಾಪತಿಯ ಹಿಂದಿದ್ದ ಮುಖ್ಯ ಕಾರಣ ಅಮೆರಿಕದ ಷೇಲ್ ತೈಲವನ್ನು ಉತ್ಪಾದಿಸುವ ಕಂಪನಿಗಳನ್ನು ಪಾಪರ್ ಮಾಡುವುದು ಹಾಗು ಜಾಗತಿಕ ಇಂಧನ ಉತ್ಪಾದಕರ ಕುರ್ಚಿಯಲ್ಲಿ ಅಮೆರಿಕವನ್ನು ಕೂರದಂತೆ ಮಾಡುವುದು. ಅಲ್ಲಿಯವರೆಗೂ ತೆಪ್ಪಗೆ ಕೂತಿದ್ದ ರಷ್ಯಾವೂ ಕೂಡ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಎಡೆಬಿಡದೆ ತೈಲವನ್ನು ಉತ್ಪಾದಿಸಲು ಶುರುಮಾಡಿದಾಗಲೇ ನೋಡಿ ಪೆಟ್ರೋಲ್ ಡೀಸೆಲ್ ಗಳ ಬೆಲೆ ಊಹಿಸಲಾಗದ ಮಟ್ಟಿಗೆ ಕ್ಷೀಣಿಸಿದ್ದು.  ಪರಿಣಾಮ ಜಾಗತಿಕ ಮಟ್ಟದಲ್ಲಿ  110 ರಿಂದ 120 ಡಾಲರ್ ಪ್ರತಿ ಬ್ಯಾರೆಲ್ ಇದ್ದ ತೈಲದ ಬೆಲೆ ಒಂದು ಹಂತದಲ್ಲಿ 20 ಡಾಲರ್ ಪ್ರತಿ ಬ್ಯಾರೆಲ್ ಬರುವ ಸನಿಹದಲಿತ್ತು! ತೈಲದ ಬೆಲೆ ಏನೋ ಕುಸಿಯಿತು. ಅಮೆರಿಕದ ಹಲವು ತೈಲ ಕಂಪನಿಗಳ ಜೋಳಿಗೆಗಳು ಬರಿದೂ ಕೂಡ ಆದವು. ಆದರೆ ಜೊತೆ ಜೊತೆಗೆ ಕುಸಿಯತೊಡಗಿದ್ದು ಸೌದಿಯ ತೈಲ ಕಂಪನಿಗಳು! ಕುರುಡು ಕಾಂಚಾಣ ಕುಣಿಯುವ ಭರದಲ್ಲಿ ತನ್ನವರನ್ನೇ ತುಳಿದು ಅಪ್ಪಚ್ಚಿ ಮಾಡತೊಡಗಿತ್ತು. ಪರಿಣಾಮ ಬಹಳಷ್ಟು ತೈಲ ಕಂಪನಿಗಳು ಸೌದಿಯ ನೆಲದಿಂದ ಕಾಲುಕಿತ್ತವು. (ಈ ಸಂದರ್ಭದಲ್ಲಿ ತೈಲದ ಬೆಲೆ ಅರ್ಧಕ್ಕಿಂತ ಹೆಚ್ಚು ಕುಸಿದರೂ ಭಾರತದಲ್ಲಿ ಮಾತ್ರ ಅದು ಪೈಸೆಗಳಲ್ಲಿ ಇಳಿತ ಕಂಡಿದ್ದು ಮಾತ್ರ ಚಿದಂಬರ ರಹಸ್ಯವೇ ಸರಿ.) ತನ್ನ ತುಘಲಕ್ ಬುದ್ದಿಯ ಅರಿವು ಕೊನೆಗೂ ಆದ ಮೇಲೆ ಒಮ್ಮಿಂದೊಮ್ಮೆಗೆ ಸೌದಿಯ ತೈಲ ಸಚಿವ ಅಮೆರಿಕದ ಕದವನ್ನು ತಟ್ಟಿ ಆದದ್ದೆಲ್ಲ ಆಗಿಹೋಯಿತು, ಇನ್ಮುಂದೆ ಇಂಥ ತಲೆಕೆಡುಕ ವಿಚಾರಗಳು ಬಂದಾಗ ವಿಚಾರ ವಿಮರ್ಶೆ ಮಾಡಿ ಸಾಗೋಣ ಎಂಬಂತೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದು.

ಇಷ್ಟೆಲ್ಲಾ ಹಿನ್ನಲೆಯೊಂದಿಗೆ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಕಡುಬದ್ದ ವೈರಿಗಳಲ್ಲಿ ಒಂದಾಗಿ ಮಾಡಿಕೊಂಡಿದ್ದ ಟ್ರಂಪ್ ಅಧ್ಯಕ್ಷ ಗಾದಿಯನ್ನು ಏರಿದ ದಿನವಂತೂ ಸೌದಿಗರ ಪಾಲಿಗೆ ನೆಲವೇ ಅದುರಿ ಹೋಗಿತ್ತು.

ಸೌದಿ ಹಾಗು ಅಮೇರಿಕಾದ ನಡುವಿನ ಶಸ್ತ್ರಾಸ್ತ್ರ ಒಪ್ಪಂದ ಹೊಸತೇನಲ್ಲ. ಒಬಾಮ ಆಡಳಿತದಲ್ಲೇ ಈ ಒಪ್ಪಂದಕ್ಕೆ ಹಸಿರು ನಿಶಾನೆಯನ್ನು ತೋರಲಾಗಿತ್ತಾದರೂ ಕೆಲ ಅಂಶಗಳನ್ನು ಆ ಒಪ್ಪಂದದಲ್ಲಿ ಸೇರಿಸಲೇ ಬೇಡವೆಂಬ ವಾದ ಬಿಗಿಯಾಗಿದ್ದಿತು. ತಿಳಿದವನು ಬಲ್ಲನೆಂಬುವಂತೆ ಸೌದಿ ತಾನು ಆಮದು ಮಾಡಿಕೊಳ್ಳುವ  ಹೆಚ್ಚಿನ ಯುದ್ಧ ಸಾಮಗ್ರಿಗಳನ್ನು ಅಲ್-ಖೈದಾ ಹಾಗು ಇತರ ಭಯೋತ್ಪಾದಕ ಗುಂಪಿಗೆ ಸರಬರಾಜು ಮಾಡಿರುವ ಸುಳಿವುಗಳಿದ್ದವು. ಅಲ್ಲದೆ ತನ್ನ ರಕ್ಷಣೆಗಿಂತ ಇತರರ ಮೇಲೆ ಆಕ್ರಮಣ ಮಾಡಲೇ ಈ ಯುದ್ಧ ಸಾಮಗ್ರಿಗಳು ಬಳಕೆಯಾಗಿರುವುದಕ್ಕೂ ಪುರಾವೆಗಳು ಸಿಕ್ಕವು. ಕೂಡಲೇ ಒಬಾಮ ಆಡಳಿತ ಒಪ್ಪಂದದಲ್ಲಿ ಕೆಲ ಯುದ್ಧ ಸಾಮಗ್ರಿಗಳನ್ನು ತೆಗೆದು ಹಾಕಿ ಇಂತಿಷ್ಟೇ ಸಾಮಗ್ರಿಗಳನ್ನು ‘ಬೇಕಾದರೆ ಖರೀದಿಸಬಹು’ ಎಂದು ಬೇಕು ಬೇಡವಾಗಿ ಹೇಳತೊಡಗಿತು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಸೌದಿಗರ ಕೋಪಕ್ಕೆ ಕಾರಣವಾಯಿತು. ಪರಿಣಾಮ ಎಂದೋ ಆಗಿ ಹೋಗಬೇಕಿದ್ದ ಒಪ್ಪಂದ ಕುಂಟಲು ಶುರುವಾಹಿತು. ನಂತರ ಟ್ರಂಪ್ ಅಧಿಕಾರಕ್ಕೇರಿದ ಮೇಲಂತೂ ಅಮೆರಿಕದೊಡಗಿನ ಶಸ್ತ್ರಾಸ್ತ್ರ ಒಪ್ಪಂದ ಇನ್ನು ಕನಸೇ ಎನಿಸಿಕೊಂಡಿದ್ದ ಸೌದಿ ರಾಜರುಗಳಿಗೆ ಈಗ ಒಮ್ಮಿಂದೊಮ್ಮೆಲೆ ವೈಟ್’ಹೌಸ್’ನ ಮುದ್ರೆ ಅಕ್ಷರ ಸಹ ಸಿಹಿ ಕಡಲಿನಲ್ಲಿ ಮುಳುಗಿಸೆಬ್ಬಿಸಿದೆ. ಈ ಒಪ್ಪಂದದಲ್ಲಿ ಒಬಾಮ ಆಡಳಿತ ನಿಷೇದಿಸಿದ ಯುದ್ಧ ಸಾಮಗ್ರಿಗಳ ಜೊತೆಗೆ ಇನ್ನೂ ಹೆಚ್ಚಿನ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ಸೌದಿ ಅರೇಬಿಯಾಕ್ಕೆ ಅಮೇರಿಕ  ಪೂರೈಸಲಿದೆ. ಪ್ರತಿಯಾಗಿ ಸೌದಿ ದೊರೆಗಳು ಅಮೆರಿಕದಲ್ಲಿ ಸುಮಾರು 40   ಬಿಲಿಯನ್ ಡಾಲರ್’ನಷ್ಟು ಹಣವನ್ನು ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಹೂಡುವ ಕನಸ್ಸನ್ನು ಬಿತ್ತಿ ಟ್ರಂಪ್’ನನ್ನ ಹಿರಿ ಹಿರಿ ಹಿಗ್ಗಿಸಿದ್ದಾರೆ.

‘ಥಿಂಕ್ ಬಿಗ್’ ಎಂಬೊಂದೇ ಘೋಷವಾಕ್ಯವನ್ನು ಜಪಿಸುತ್ತ ಸಾಗುತ್ತಿರುವ ಟ್ರಂಪ್ ನ ನಿರ್ಧಾರಗಳು ಅದೆಷ್ಟು ಪಕ್ವಗೊಂಡ ನಿರ್ಧಾರಗಳು ಎಂಬುದನ್ನು ಜಗತ್ತು ಕಾದು ನೋಡಬೇಕಿದೆ. ನೀವು ಮಾರುತ್ತಿರುವ ಯುದ್ಧ ಸಾಮಗ್ರಿಗಳನ್ನು ಸೌದಿ ಉಗ್ರ ಸಂಘಟನೆಗಳಿಗೆ ರವಾನಿಸುತ್ತಿದೆಯಲ್ಲ ಎಂದು ಪ್ರೆಶ್ನಿಸಿದರೆ ‘ನೋ ವೇಸ್, ಇವುಗಳೆಲ್ಲ ಆ ದೇಶದ ಗಡಿ ರಕ್ಷಣೆಗೆ ಹಾಗು ISIS ನಂತಹ ಉಗ್ರ ಸಂಘಟನೆಗಳ ವಿರುದ್ಧ ಹೊರಡುವುದಕ್ಕೆ’ ಎಂದು ಆತ ಸೌದಿಗರ ಪಕ್ಷವನ್ನೇ ತೆಗೆದುಕೊಳ್ಳುತ್ತಾನೆ. ಇರಾನ್’ನೊಟ್ಟಿಗಿನ ತನ್ನ ಸಂಬಂಧ ಎಣ್ಣೆ ಸೀಗೆಕಾಯಿ ಆಗಿರುವಾಗ,  ಅಲ್ಲದೆ ಸೌದಿ ಹಾಗು ಇರಾನ್’ನ ಮಾತುಕತೆಗಳು ಭಾಗಶಃ ಮುನಿಸೇಕೊಂಡಿರುವ ಸೂಕ್ತ ಸಂದರ್ಭದಲ್ಲಿ ಇರಾನ್’ನ ಮೇಲಿನ ತನ್ನ ಹಳೆಯ ಸೇಡನ್ನು ಸೌದಿ ಮುಖಾಂತರ ತೀರಿಸಿಕೊಳ್ಳುವ ಹುನ್ನಾರವೂ ಇದರಿಂದೆ ಇರಬಹುದು. ಇಲ್ಲಿಯವರೆಗೂ ಸುಮಾರು ಹತ್ತರಿಂದ ಹನ್ನೆರೆಡು ಯುದ್ಧಗಳಲ್ಲಿ ಸೆಣೆಸಿ ಒಮ್ಮೆಯೂ ಸೋಲನ್ನು ಕಾಣದ ಇರಾನ್ ಎಂಬ ಭಲಿಷ್ಟ ದೇಶಕ್ಕೆ ಇದು ಅಷ್ಟೇನೂ ದೊಡ್ಡ ತಲೆನೋವೆನಿಸದಿದ್ದರೂ ಸುಖಾಸುಮ್ಮನೆ ಇಂತಹ ಕಲಹಗಳನ್ನು ಹುಟ್ಟುಹಾಕಿಕೊಳ್ಳಲು ಅದು ಬಯಸುವುದಿಲ್ಲ.

ಈ ಹಿಂದೆ ದ್ವಿತೀಯ ವಿಶ್ವಯುದ್ದಕ್ಕೆ ಕಾರಣವಾಗಿದ್ದ ಜಪಾನಿನ  ಪರ್ಲ್’ಹಾರ್ಬರ್ ದಾಳಿ ಅಮೇರಿಕ ಹೇಳಿ ಮಾಡಿಸಿಕೊಂಡಿತ್ತು ಎಂಬೊಂದು ಕಾನ್ಸ್ಪಿರಸಿ ಥಿಯರಿ ಇದೆ. ಆ ಮೂಲಕ ಅಮೇರಿಕ ಎಲ್ಲಡೆ ಕೋಲಾಹಲವನ್ನು ಹಬ್ಬಿಸಿ, ಯುದ್ಧ ಸಾಮಗ್ರಿಗಳ ಬೇಡಿಕೆಯನ್ನು ಹೆಚ್ಚಿಸಿ ವಿಶ್ವವನ್ನೇ ತನ್ನ ಮರುಕಟ್ಟೆಯನ್ನಾಗಿ ಮಾಡಿಕೊಂಡಿತು ಎಂಬೊಂದು ವಾದವಿದೆ. ಈ ಥಿಯರಿ ನಿಜವೋ ಸುಳ್ಳೋ ಆದರೆ ಅಮೇರಿಕಾದದ ನಗುಮುಖದ ಹಿಂದಿರುವ ಚಾಣಾಕ್ಷ ಬುದ್ದಿಯನ್ನು ಅಲ್ಲಗೆಳೆಯಲಾಗುವುದಿಲ್ಲ. ಪ್ರಸ್ತುತ ಟ್ರಂಪ್ ಆಡಳಿತವೂ ಇಂತದೆ ಒಂದು ಒಪ್ಪಂದವನ್ನು ಮಾಡಿಕೊಂಡು ಸೌದಿ ದೊರೆಗಳ ಹಣವನ್ನು ಪೀಕತೊಡಗಿದೆ. ಆದರೆ ಕೇವಲ ಬಡಾಯಿ ಕೊಚ್ಚುವುದಷ್ಟೇ ಟ್ರಂಪ್’ನ ಸಾಮರ್ಥ್ಯವೆಂದು ಅರಿತಿದ್ದ ಜಗತ್ತಿಗೆ ಆತನ ಇತ್ತೀಚಿನ ಕೆಲವು ನಿರ್ಧಾರಗಳು ಅಕ್ಷರಶಃ ಕಾದ ತುಪ್ಪವಾಗಿದೆ. ಇತ್ತಕಡೆ ಯುದ್ಧ ಸಾಮಗ್ರಿಗಳನ್ನು ಗೆದ್ದ ಖುಷಿಯಲ್ಲಿ ಬೀಗುತ್ತಿರುವ ಸೌದಿ ಅರೇಬಿಯಾ ತಾನೊಂದು ಕಾಣದ ಗುಂಡಿಯೊಳಗೆ ಬಿದ್ದಿರಬಹುದೇ ಎಂಬುದನ್ನೂ ಸಾವಕಾಶವಾಗಿ ಕೂತು ವಿಶ್ಲೇಷಿಸಬೇಕಿದೆ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post