ಮೋಡ ಮುಸುಕಿ ಆಗಸದ ಮೂತಿ ಕಪ್ಪಿಟ್ಟಾಗಲೆಲ್ಲ ಮನಸ್ಸು ನನ್ನ ಊರಿನ ಮಳೆಗಾಲದ ದಿನಗಳಿಗೆ ಜಾರಿ ಮೆಲುಕುಹಾಕಿ ಮರುಗುತ್ತದೆ.
ನಮ್ಮೂರಿನ ಮಳೆಗಾಲದ ಬಗ್ಗೆ ಒಂದ್ ಸ್ವಲ್ಪ ಹೇಳುವ ಅಂತ. ಅದಕ್ಕಿಂತ ಮುಂಚೆ ನಮ್ಮೂರಿನ ಪರಿಚಯ ಮಾಡಿಕೊಳ್ಳುವ. ಮಲೆನಾಡಿನ ಹೃದಯ ಭಾಗವೆನಿಸಿರುವ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಹಿರೇಬಿಲುಗುಂಜಿ ಗ್ರಾಮ. ಸಾಗರ ಸಿಟಿಯಿಂದ 25 ಕೀ. ಮಿ, ಅನಂದಪುರ ದಿಂದ ಶಿಕಾರಿಪುರ ಮಾರ್ಗವಾಗಿ 8 ಕಿ.ಮೀ ಚಲಿಸಿ ಎಡಕ್ಕೆ 8 ಕೀಮಿ ಹೋದರೆ ಅದೇ 12-14 ಮನೆಗಳ ನನ್ನೂರು. ಬಸ್ಸುಮಾರ್ಗವಾಗಿ ಯಾವದಿಕ್ಕಿನಿಂದ ಬಂದರು ಕನಿಷ್ಟ 2 ಕಿ .ಮೀ ನಡೆಯಲೇಬೇಕು.
ಏಪ್ರಿಲ್ ಮೇ ತಿಂಗಳಿನಲ್ಲಿ ಮುಂಗಾರು ಆರಂಭ ಮಧ್ಯಾಹ್ನದವರೆಗೆ ಉರಿಬಿಸಿಲು ಸಂಜೆ 4- 5 ಗಂಟೆ ಇಂದ ನಡು ರಾತ್ರಿವರೆಗೆ ಗುಡುಗು ಸಿಡಿಲು, ಕೆಲಒಮ್ಮೆ ಫೋಟೋ ಪ್ಲಾಷ್ ನಂತ ಮಿಂಚು ಜಡಿಗಾಳಿ ಆಲಿಕಲ್ ಮಳೆಯ ಆರ್ಭಟ. ಇದಾವುದಕ್ಕೂ ಲೆಕ್ಕಿಸದೆ ಅಂಗಳಕ್ಕೆ ಓಡಿ ಆನಿಕಲ್ ಹೆಕ್ಕಿ ತಿನ್ನುವುದು ಒಂತರಾ ಮಜಾ, ಬೆಳಗಾಗುತ್ತಲೇ ಮಾವಿನ ಮರೆಕ್ಕೆ ಓಡುತಿದ್ದೆವು, ರಾತ್ರಿಯೆಲ್ಲ ಬೀಸಿದ ಗಾಳಿಗೆ ಮರಗಳು ಯದ್ವಾ ತದ್ವಾ ಮೈಮುರಿದು 3- 4 ದಿನ ಉದಿರಿಸುವ ಹಣ್ಣು ಗಳನ್ನು ಅಂದೇ ಉದುರಿಸಿ ಇನ್ನೆರಡು ದಿನ ತಮಗೆ ಕಲ್ಲು, ಮರದ ಬಡಿಕೆ ಬೀಳುವುದಿಲ್ಲವೆಂದು ಮಳೆಗೆ ಮೈತೊಳೆದು ಸುಗಂಧ ದ್ರವ್ಯದಂತ ಮಣ್ಣಿನ ವಾಸನೆಯನ್ನು ಸೂಸುತ್ತಾ ನಗುತ್ತಿದ್ದವು.
ಮದುವೆ ಸೀಸನ್ ಆದ್ದರಿಂದ ಬಹಳಷ್ಟು ಮದುವೆಗಳು ಮನೆಯಲ್ಲೇ ನೆಡೆಯುತ್ತಿದ್ದರಿಂದ ಮದುವೆ ಮನೆಯವರಿಗೆ ಆಗುತ್ತಿದ್ದ ಸಮಸ್ಯೆಗಳು ಹೇಳತೀರದು ಅರ್ಧ ಎಕೆರೆಗೆ ಹಾಕಿದ ಚಪ್ಪರ ಉಬ್ಬು ತಗ್ಗುಗಳ ಸಮಗೊಳಿಸಿದ ಅಂಗಳ, ಕಾಲಿಗೆ ಅಂಟಿದ ಕೆಸರನ್ನು ಲೆಕ್ಕಿಸದೆ ಮನೆ ಒಳಗೆ ಹೊರಗೆ ಓಡಾಡುವ ನೆಂಟರಿಷ್ಟರು. ಆಲಿಕಲ್ ಮಳೆಗೆ ಬಾಳೆಎಲೆ ಗಳು ಹರಿದು ಹೋಗುತ್ತಿದ್ದರಿಂದ ಎಕರೆಗಟ್ಟಲೇ ತೋಟವಿದ್ದರೂ ಬಾಳೆಎಲೆಗೆ ಬರಗಾಲ, ಕರೆಂಟು ಇಲ್ಲದೆ ಗ್ಯಾಸ್ ಲೈಟ್, ಮತ್ತು ಸೀಮೆ ಎಣ್ಣೆ ದೀಪಗಳೇ ಗತಿ… ಆಗಾಗ ಬಿದ್ದ ಮಳೆಯಿಂದ ಹಸಿರಿನ ಕಳೆಯಿಂದ ಕಂಗೊಳಿಸುವ ಗದ್ದೆಗಳು ಹಸಿರ ತಿಂದು ದನ ಕರುಗಳು ಸೊಂಪಾಗಿ ಕೊಬ್ಬಿರುತ್ತದವು.
ನೆಂಟರಂತೆ ಆಗಾಗ ಬರುತ್ತಿದ್ದ ಮಳೆ ಜೂನ್ ೨ – ೩ ವಾರದಲ್ಲಿ ಖಾಯಂ ಆಗಿಬಿಡುವ ಜೋರಾಗಿಯೂ ಬಾರದೇ ಸಂಪೂರ್ಣ ನಿಂತು ಹೋಗದ ಮಳೆಗೆ ಜಿಟಿ ಜಿಟಿ ಬೀಳುವ ಮಳೆಗೆ ಕಂಬಳಿ ಸುತ್ತಿ ಗಡದ್ದಾಗಿ ಮಲಗುವ ಅನ್ನಿಸುತ್ತಿತ್ತು. ಇದರೊಂದಿಗೆ ಹಲಸಿನ ಕಾಯಿ, ಅಕ್ಕಿ ಹಪ್ಪಳಗಳು ಒಂದು ಸ್ಟ್ರಾಂಗ್ ಕಾಫಿ ಇದ್ದರೆ ಇದರ ಮುಂದೆ ಸ್ವರ್ಗದ ಸುಖವನ್ನು ನಿವಾಳಿಸಿ ತೆಗೆಯ ಬೇಕು. ನಂತರ ಮಳೆಗೆ ಹೊಂದಿಕೊಡು ಜೀವನ ಯಥಾ ಸ್ಥಿತಿಗೆ ಬರುತಿತ್ತು.
ಶಾಲೆಗೆ ಹೋಗುವ ದರ್ಬಾರು ಹೊಸಬ್ಯಾಗು, ಹೊಸ ಪುಸ್ತಕ, ಹೊಸ ಛತ್ರಿ ಇವುಗಳೊಂದಿಗೆ ಕೆಸರುಮಯ ರಸ್ತೆಯಲ್ಲಿ ಪ್ರತಿದಿನ ಓಡಾಟ ಒಂದೊಂದು ದಿನ ರಸ್ತೆಯಲ್ಲಿ ಬಿದ್ದು ಶಾಲೆಗೆ ಚಕ್ಕರ್ ಹೊಡೆಯುವ ಅವಕಾಶ! ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಜೋರಾಗಿ ಮಳೆ ಬಂದರೆ ಅದರ ಮಜಾ ಬೇರೆ. ಮೇಲ್ಭಾಗದ ಜಮೀನಿನ ನೀರೆಲ್ಲ ಚರಂಡಿ ಗಳು ಸರಿ ಇಲ್ಲದ ಕಾರಣ ರಸ್ತೆ ಮೇಲೆಯೆ ಹರಿದು ಹಳ್ಳ ಸೇರುತ್ತಿತ್ತು, ಆ ನೀರಿನಲ್ಲಿ ಕಾಲುಗಳನ್ನು ದಬ ದಬನೆ ಎತ್ತಿಹಾಕುತ್ತ ಮೈತುಂಬ ನೀರನ್ನು ಸಿಡಿಸಿಕೊಂಡು ಬರುತಿದ್ದೆವು.ಈಗ ಬೆಂಗಳೂರಿನಲಿ ಇಂತ ಅವಕಾಶಗಳಿವೆ ಆದ್ರೆ ಆ ನೀರಿನಲ್ಲಿ ಕಾಲಿಡುವುದಿರಲಿ ಕಣ್ಣೆತ್ತಿ ನೋಡಲು ಅಸಹ್ಯ.ಮಳೆ ಜೋರಾದ ನೆಪದಲ್ಲಿ ಶಾಲೆ ಒಂದೆರಡು ದಿನ ರಜೆ ಬೇರೆ ಸಿಗುತಿತ್ತು ಯಾವ ಅದೃಷ್ಟವೋ ರಜೆ ಕೊಟ್ಟ ದಿನದಿಂದ ಮಳೆ ಕಡಿಮೆಯಾಗಿ ಆಟವಾಡಲು ಚೆನ್ನಾಗಿತ್ತು.
ಇನ್ನು ಮಳೆಗಾಲ ಮುಗಿಯುದರೊಳಗೆ ಒಂದೆರಡು ಛತ್ರಿಗಳನ್ನಾದರೂ ಮೂಲೆಸೇರುವಂತೆ ಮಾಡುತ್ತಿದ್ದೆ. ಕೆಲವು ಬಾರಿ ಗೊತ್ತಿಲ್ಲದೆ ಹಲವು ಸಾರಿ ಬೇಕಂತಲೆ ಗಾಳಿಗೆ ಎದುರು ಛತ್ರಿ ಹಿಡಿದು ಢಿಶ್ ಬುಟ್ಟಿ ತರ ಮಾಡಿ ಜಾದೂ ಪ್ರದರ್ಶನ ಮಾಡಿ ಸಾಕಷ್ಟು ಹೊಡೆತ ತಿನ್ನುವುದು ಮಾಮುಲು.
ಜುಲೈ ಆಗಸ್ಟ್ ತಿಂಗಳಿನಲ್ಲಿ ಮಳೆಯ ಆರ್ಭಟ ತಾರಕ್ಕೇರುತ್ತಿದ್ದಂತೆಯೇ ಮೊದಲೇ ತುಂಬಿ ಹರಿಯುತ್ತಿದ್ದ ಹಳ್ಳಗಳು ಒಂದರ್ಧ ಗಂಟೆ ಜೋರಾಗಿ ಮಳೆ ಬರುತ್ತಿದ್ದಂತೆ ತಮ್ಮ ಹರಿವಿಕೆಯ ಜಾಗವನ್ನು ವಿಸ್ತರಿಸುವ ಭರದಲ್ಲಿ ನಾಟಿಮಾಡಿದ ಗದ್ದೆಗಳನ್ನು ನುಂಗುತ್ತಾ. ಮಾಮೂಲಿ ರೂಟ್ ಬಿಟ್ಟು ತಗ್ಗಾದ ಶಾರ್ಟ್’ಕಟ್ ದಾರಿಹಿಡಿಯುತ್ತಿದ್ದಾಗ ಸಂಪೂರ್ಣ ಗದ್ದೆ ಬಯಲಿಲ್ಲ ಕೆಂಪು ಸಮುದ್ರದಂತೆ ಭಾಸವಾಗುತ್ತಿತ್ತು.
ಅಂಗಳಗಳು ಪಾಚಿ ಕಟ್ಟಿ ಕಾಲು ಇಡಲು ಹೆದರಿಕೆ ಆಗುವಂತಿತ್ತು. ಮಳೆಯ ಹೊಡೆತಕ್ಕೆ ನೆಲವೆಲ್ಲ ಅದುರಿ ತನ್ನಿಂದ ನೀರನ್ನು ಒಡಲೊಳಗೆ ಒಳಗೆ ಸೆಳೆಯನ್ನು ಸಾಧ್ಯವಿಲ್ಲ ಎನ್ನುವಂತೆ ಇದ್ದ ಎಲ್ಲ ಹೊಂಡಗಳು ಜೌಗು ನೀರನ್ನು ಹೊರಸೂರುವ ಜಲಧಾರೆಗಳಾಗುತ್ತಿದ್ದವು…
-ಆದರ್ಶ ಜಯಣ್ಣ. ಹಿರೇಬಿಲುಗುಂಜಿ.
jadarsh03@gmail.com
Facebook ಕಾಮೆಂಟ್ಸ್