ದನ ಮತ್ತು ಧನ ಇವೆರಡೂ ನಮ್ಮ ರಾಜಕೀಯ ಆಗುಹೋಗುಗಳ ಜೊತೆಗೆ ಆಳವಾಗಿ ಬೆರೆತು ಹೋಗಿವೆ. ಅದರಲ್ಲೂ ಗೋ-ರಾಜಕೀಯವಂತೂ ಒಮ್ಮೊಮ್ಮೆ ಘೋರ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದನ್ನು ಸಾಕುವ ರೈತ ಕೆಚ್ಚಲಿಗೆ ಕೈಹಾಕಿ ಹಾಲು ಹಿಂಡಿ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪ ಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ, ರಾಜಕಾರಣಿಗಳು, ಮಾತನಾಡದ ಈ ಮೂಕ ಪ್ರಾಣಿಯ ನೆರವಿನಿಂದಲೂ ಮತ ಗಳಿಸಿಕೊಳ್ಳುವುದೆಂತು ಎಂದು ಚಿಂತಿಸುತ್ತಾರೆ. ವ್ಯತ್ಯಾಸವೆಂದರೆ ಅದರಲ್ಲಿ ಕೆಲವರದು ರಕ್ಷಣೆಯ ಮಾರ್ಗವಾದರೆ ಇನ್ನು ಕೆಲವರದು ಭಕ್ಷಣೆಯ ಮಾರ್ಗವಷ್ಟೇ!
ಒಮ್ಮೊಮ್ಮೆ ಮಾನವನ ವರ್ತನೆ ಪ್ರಾಣಿಗಳಿಗಿಂತಲೂ ಕಡೆಯಾಗಿರುತ್ತದೆ ಎಂದು ಮಾತಿನ ನಡುವೆ ಉಲ್ಲೇಖಿಸುವುದಿದೆ. ಅದು ಸತ್ಯ ಎನ್ನುವುದು ಎಷ್ಟೋ ಸಂದರ್ಭದಲ್ಲಿ ಸಾಬೀತಾಗುತ್ತಲೂ ಇರುತ್ತದೆ. ಅದು ಸರಿಯಷ್ಟೇ, ಆದರೆ ಈಗ ಆ ಮಾತು ಏಕೆಂದಿರಾ? ಇಲ್ಲದಿದ್ದರೆ ನೀವೇ ಯೋಚಿಸಿ. ತನ್ನ ಸತ್ಯಸಂಧತೆಯ ಶ್ರೇಷ್ಠತೆಯಿಂದಾಗಿ ಖೂಳಾತಿ ಖೂಳ ವ್ಯಾಘ್ರನ ಹಸಿದ ಬಾಯಿಗೆ ಬಲಿಯಾಗದೆ ಸುರಕ್ಷಿತವಾಗಿ ಹಿಂದಿರುಗಿದ್ದ ಪುಣ್ಯಕೋಟಿಯ ಕಥೆ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆಧುನಿಕ ಪುಣ್ಯಕೋಟಿಗೆ ಮಾತ್ರ ಈ ಹುಲುಮಾನವರಿಂದ ಬಚಾವಾಗಿ ಈಚೆ ಬರುವುದೇ ಕಷ್ಟಸಾಧ್ಯವೆಂಬಂತಾಗಿದೆ. ಪ್ರತಿಭಟನೆಯ ಹೆಸರಲ್ಲಿ ಅಮಾಯಕ ಹಸುವನ್ನೇ ನಡು ಬೀದಿಯಲ್ಲಿ ಹತ್ಯೆಗೈದವರಿಗಿಂತ ಆ ಹಸಿದ ಹೆಬ್ಬುಲಿಯೇ ಎಷ್ಟೋ ವಾಸಿಯಲ್ಲವೇ? ಎರಡು ಪೆಟ್ಟು ಬಿಗಿದು ಪಳಗಿಸುವುದನ್ನೇ ಪ್ರಾಣಿಹಿಂಸೆ ಎಂದು ಪರಿಗಣಿಸಿ ನಿಷೇಧಿಸುವಂತೆ ಪಟ್ಟುಹಿಡಿಯುವ ಮೂಲಕ ಬೀಗುವ ‘ಪೆಟಾ’ದವರು ಕಣ್ಣೆದುರೇ ನಡೆದ ಈ ಹಿಂಸೆಯ ವಿಚಾರದಲ್ಲಿ ಮಾತ್ರ ಪತ್ತೆಯೇ ಇಲ್ಲ.
ಕಳೆದೊಂದು ವಾರದಿಂದ ಎಲ್ಲವೂ ಮತ್ತು ಎಲ್ಲೆಲ್ಲೂ ಗೋಮಯ. ‘ಗೋಮಯ’ ಸಾಮಾನ್ಯವಾಗಿ ಪರಿಶುದ್ಧತೆಯ ಪ್ರತೀಕ ಎಂಬ ನಂಬಿಕೆಯಿದೆ. ಆದರೆ ಇತ್ತೀಚಿನ ಬೆಳವಣಿಗೆಳಲ್ಲಿನ ‘ಗೋ’ಮಯ ಸಂಗತಿಗಳು ವೈಚಾರಿಕ ರಾಢಿಯೆಬ್ಬಿಸಿರುವುದು ಶೋಚನೀಯ. ಬೀಫ್ ಬ್ಯಾನ್’ನ ಪರ ಅಥವಾ ವಿರೋಧದ ಬಿಸಿ ಬಿಸಿ ಚರ್ಚೆ ನಡೆಯುವ ಬದಲಾಗಿ ಕೆಲವರು ಬಿಸಿ ಬಿಸಿ ಬೀಫ್ ಖಾದ್ಯಗಳನ್ನು ಮುಕ್ಕಲು ಮುಗಿಬಿದ್ದರು. ದೇವರ ನಾಡಿನ ಕೆಲವು ರಕ್ಕಸರಂತೂ ಸಾರ್ವಜನಿಕವಾಗಿ ಕರುವಿನ ಕತ್ತು ಕಡಿದು ಬಿಸಿಯಲ್ಲ, ಹಸಿ ಹಸಿ ಮಾಂಸವನ್ನೇ ಬಾಯಿಗಿಟ್ಟುಕೊಂಡು ಆಹಾರ ಸಂಸ್ಕ್ರತಿಯ ಹೆಸರಲ್ಲಿ ತಮ್ಮ ಮನದ ವಿಕೃತಿಯನ್ನು ಮೆರೆದರು.
ಗೋ ರಕ್ಷಣೆಯ ಒತ್ತಾಯದ ಹಿಂದಿನ ಅಹಿಂಸೆಗಿಂತಲೂ ಭಕ್ಷಣೆಯ ಹಿಂಸೆಯೇ ಹೆಚ್ಚು ಡೆಮಾಕ್ರಟಿಕ್ ಎನ್ನುವುದು ಇಂದಿನ ಕೆಲವು ವಿಚಾರವಾದಿಗಳ ಪರಮ ವಾದ. ಪೊರೆಯುವ ಕೈಗಳಿಗಿಂತಲೂ ಕೊಲ್ಲುವ ಕೈಗಳೇ ಮೇಲು ಎಂದು ಸಾಧಿಸುವ ಮೂಲಕ ಅಹಿಂಸೆಯ ವ್ಯಾಖ್ಯಾನವನ್ನೇ ಬದಲಿಸ ಹೊರಟಿರುವ ಇವರೆಲ್ಲಾ ಅಸಲಿಗಲ್ಲ, ಹೆಸರಿಗೆ ಮಹಾನ್ ಅಹಿಂಸಾವಾದಿಗಳು. ಇವರು ಅವಕಾಶ ಸಿಕ್ಕಾಗೆಲ್ಲಾ ಸಮಯ, ಸಂದರ್ಭ ನೋಡದೆ ಬುದ್ಧ, ಗಾಂಧಿಯನ್ನು ಉಲ್ಲೇಖಿಸುತ್ತಾ, ಕೇಳುಗರಿಗೆ ಹಿಂಸೆಯಾಗುವಷ್ಟು ಅಹಿಂಸೆಯ ಬಗ್ಗೆ ಮಾತನಾಡಿದವರೇ. ಅದೇ ಕಾರಣಕ್ಕೆ ಆಡಳಿತಾರೂಢ ಪಕ್ಷಕ್ಕೆ ತುಂಬಾ ಹತ್ತಿರವಾಗಿ ಸರ್ಕಾರದ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಪಡೆಯಬೇಕಾದ್ದನ್ನು ತುಸು ಹೆಚ್ಚೇ ಪಡೆದವರೂ ಕೂಡಾ. ಆದರೆ ಗೋ ಹತ್ಯೆಯಿಂದಾಗುವ ಹಿಂಸೆಯ ಬಗ್ಗೆ ಮಾತನಾಡಿದರೆ ಮಾತ್ರ ಕೆಂಡಾಮಂಡಲರಾಗುವ ಸೌಮ್ಯ ವಿಚಾರವಾದಿಗಳಿವರು.
ಆನೆಯನ್ನು “ಇದ್ದರೂ ಸಾವಿರ ಸತ್ತರೂ ಸಾವಿರ” ಎಂದು ಕರೆಯಲಾಗುತ್ತದೆ. ಇದೇ ಮಾತನ್ನು ಹಸುವಿನ ವಿಚಾರದಲ್ಲೂ ಅನ್ವಯಿಸಲು ತುಸು ಹೆಚ್ಚೇ ಆಸಕ್ತರಾಗಿರುವ ಕೆಲವರು ದನ ಸತ್ತರಷ್ಟೇ ಸಾವಿರ ಎಂಬ ವಾದವನ್ನು ಮುಂದ್ದೊಡ್ಡುವ ಆತುರದಲ್ಲಿ “ಇದ್ದರೂ ಸಾವಿರ” ಎನ್ನುವುದನ್ನು ಉದ್ಧೇಶಪೂರ್ವಕವಾಗಿ ಮರೆಯುತ್ತಾ, ಮರೆಸುತ್ತಿದ್ದಾರೆ. ಆಸ್ತಿಯುಳ್ಳವ ‘ಆಸ್ತಿಕ’ ಎಂದು ವ್ಯಾಖ್ಯಾನಿಸುವವರೇ, ‘ಹಸು’ ಎಂದು ಕರೆವ ಮಾತ್ರಕ್ಕೆ ಹಸಿವನ್ನು ನೀಗಿಸುವ ಮಾಂಸವನ್ನಾಗಿ ಬಳಸುವಂತದ್ದು ಎಂದು ನಿರ್ಧರಿಸಿದಂತಿದೆ. ಕಟುಕತೆ ಹಾಗೂ ಕಟ್ಟುಕಥೆಗಳಿಂದ ಗೋವನ್ನು ರಕ್ಷಿಸಬೇಕಾಗಿರುವುದು ಸದ್ಯದ ಅವಶ್ಯಕತೆ.
ಓವರ್ ಡೋಸ್: ಪ್ರತಿಭಟನೆಯ ಹೆಸರಲ್ಲಿ ಹಸುವಿನ ಕತ್ತು ಕಡಿದು ರೌರವ ಕ್ರೌರ್ಯ ಮೆರೆದವರು – ‘COW’ರವರು.
ಚಿತ್ರ: ಇಂಟರ್’ನೆಟ್
Facebook ಕಾಮೆಂಟ್ಸ್