ಹಾಗೇ ಸುಮ್ಮನೆ ಯೋಚನೆ ಮಾಡೋಣ. ಅಮೇರಿಕಾದ ಪ್ರಜೆಯೋರ್ವ ಅಲ್ಲಿ ಕುಳಿತುಕೊಂಡು ಐಸಿಸ್ ಭಯೋತ್ಪಾದಕರು ಅಮಾಯಕರು, ಅವರು ಭಯೋತ್ಪಾದಕರಲ್ಲ ಬದಲಾಗಿ ಸಿರಿಯಾ-ಇರಾಕ್‍ನ ಸಶಸ್ತ್ರ ಹೋರಾಟಗಾರರು ಅಷ್ಟೇ ಅಂದು ಬಿಟ್ಟರೆ ಆತನ ಪರಿಸ್ಥಿತಿ ಹೇಗಿರಬಹುದು? ಖಂಡಿತಾ ಆತನಿಗೆ ಜೀವನಪರ್ಯಂತ ಜೈಲೂಟವೇ ಗತಿಯಾಗಬಹುದು. ಅದೇ ರೀತಿ ಪಾಕಿಸ್ಥಾನದಲ್ಲಿ ಯಾರಾದರು ಕಾಶ್ಮೀರವು ಭಾರತಕ್ಕೆ ಸೇರಿದ್ದು, ಎಂದೆನ್ನುತ್ತಾ ಪಾಕ್ ವಿರೋಧ ಧೋರಣೆ ವ್ಯಕ್ತಪಡಿಸಿದರೆ ಆತನ ಗತಿ ಹೇಗಿರಬಹುದು!? ಊಹಿಸಕ್ಕೂ ಸಾಧ್ಯವಿಲ್ಲ ಬಿಡಿ. ಅಮೇರಿಕಾ ಪಾಕಿಸ್ಥಾನ ಅಂತಲ್ಲ ಪ್ರಪಂಚದ ಯಾವ ರಾಷ್ಟ್ರವೂ ಕೂಡ ತನ್ನ ದೇಶದ ಹಿತಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾರಾದರೂ ನಡೆದರೆ ಅವರನ್ನು ಒಂದಾ ಜೈಲಿಗಟ್ಟಬಹುದು ಇಲ್ಲವೇ ಕೊಂದು ಬಿಸಾಕಬಹುದು ಅಷ್ಟೇ! ತನ್ನ ದೇಶದ ಬಹುಸಂಖ್ಯಾತರ ಹುಳುಕುಗಳನ್ನು ಜಗತ್ತಿನ ಎದುರು ಬಹಿರಂಗ ಪಡಿಸಿದಳು ಎಂಬ ಒಂದೇ ಕಾರಣಕ್ಕೆ ಇಸ್ಲಾಂ ರಾಷ್ಟ್ರವಾದ ಬಾಂಗ್ಲಾದೇಶವು ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನಳನ್ನು ದೇಶದಿಂದಲೇ ಹೊರದಬ್ಬಿದ ಉದಾಹರಣೆಯೇ ನಮ್ಮ ಮುಂದಿದೆ ನೋಡಿ. ಅಲ್ಲೆಲ್ಲಾ ರಾಷ್ಟ್ರ ಮೊದಲು ಮಿಕ್ಕೆಲ್ಲಾ ವಿಚಾರಗಳು ಆ ಬಳಿಕವಷ್ಟೇ. ದೇಶವನ್ನು ತೆಗಳಿದರು, ಅವಮರ್ಯಾದೆ ಸಲ್ಲಿಸಿದರು ಎಂದಾದರೆ ಅಲ್ಲಿನ ಪ್ರತೀಯೋರ್ವರೂ ಜಾಗರೂಕರಾಗುತ್ತಾರೆ. ಪಕ್ಷ ಬೇಧ ಮರೆತು ಎಲ್ಲರೂ ಒಂದಾಗುತ್ತಾರೆ. ಅದ್ಯಾವ ‘ವಾಕ್ ಸ್ವಾತಂತ್ರ್ಯವೂ’ ರಾಷ್ಟ್ರವಿರೋಧೀಯ ಪರ ನುಸುಳದು. ಈ ಪರಿಯ ರಾಷ್ಟ್ರ ಪ್ರೇಮವಿರುವುದರಿಂದಲೇ ಅಲ್ಲೆಲ್ಲಾ ‘ಆಂತರಿಕ ಶತ್ರುಗಳ’ ಉಪಟಳ ಇಲ್ಲವಾಗಿರುವುದೇನೋ!
ಆದರೆ ಇತ್ತ ಭಾರತದ ಪರಿಸ್ಥಿತಿಯನ್ನೊಮ್ಮೆ ಗಮನಿಸೋಣ. ಇತ್ತೀಚಿನ ದಿನಗಳಲ್ಲಿ ಅರುಂದತಿ ರಾಯ್ ಎಂಬ ಬೂಕರ್ ಪ್ರಶಸ್ತಿ ವಿಜೇತೆ ಸಾಲು ಸಾಲಾಗಿ ಭಾರತದ ವಿರೋಧಿ ದೋರಣೆಗಳನ್ನು ಹರಿಯ ಬಿಟ್ಟರೂ, ಕಾಶ್ಮೀರ ಭಾರತದಲ್ಲ ಬದಲಾಗಿ ಅದು ಸ್ವತಂತ್ರ ರಾಷ್ಟ್ರವೆಂದು ಅಪ್ಪಟ ಪಾಕಿಸ್ಥಾನಿಯಳಂತೆ ಬೊಬ್ಬೆ ಹೊಡೆದರೂ ಇಲ್ಲಿ ಆಕೆ ನಿಶ್ಚಿಂತೆಯಾಗಿಯೇ ಜೀವನ ಸಾಗಿಸುತ್ತಿದ್ದಾಳೆ!! ಆಕೆಯ ರಾಷ್ಟ್ರವಿರೋಧಿ ಧೋರಣೆಗೆ ಅದ್ಯಾವ ಸರಕಾರವೂ ಶಿಕ್ಷಿಸುವ ಯೋಚನೆ ಮಾಡಿಲ್ಲ. ಸಾಲದಕ್ಕೆ ಆಕೆಯ ಧೋರಣೆಗಳನ್ನು ಬೆಂಬಲಿಸುವ ಅಂತಹುದೇ ಒಂದಷ್ಟು ಮನಸ್ಸುಗಳು ಹುಟ್ಟಿಕೊಂಡು ಸರಕಾರದ ವಿರುದ್ಧವೇ ತೊಡೆ ತಟ್ಟುತ್ತಿವೆ! ಆಕೆಯ ಭಾರತ ವಿರೋಧೀ ಮಾತು, ಕೃತಿಗಳೆಲ್ಲವೂ ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಬರುತ್ತದೆಯಂತೆ!! ಎಂಥಾ ವೈಚಿತ್ರವಲ್ಲವೇ ಇದು!?
ಅಂದ ಹಾಗೆ ಈ ಅರುಂಧತಿ ರಾಯ್ ಎನ್ನುವ ಪಕ್ಕಾ ಎಡಪಂಥೀಯ ಧೋರಣೆಯುಳ್ಳ ಈ ಮಹಿಳೆ ನೀಡುತ್ತಿರುವ ಹೇಳಿಕೆಗಳಾದರೂ ಎಂತಹುದು? ತೀರಾ ಇತ್ತೀಚೆಗೆ ಕಾಶ್ಮೀರದ ಬಗ್ಗೆ ಮಾತನಾಡುತ್ತಾ ಈಕೆ ‘ಭಾರತವು ತನ್ನ ಸೇನೆಯ ಸಂಖ್ಯೆಯನ್ನು ಏಳು ಲಕ್ಷದಿಂದ ಎಪ್ಪತ್ತು ಲಕ್ಷಕ್ಕೆ ಹೆಚ್ಚಿಸಿದರೂ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಒಂದಷ್ಟು ಹತ್ತಿಕ್ಕಲಾಗದು ಎಂದು ನಮ್ಮ ಸೇನೆಯ ಬಗ್ಗೆಯೇ ಲಘುವಾಗಿ ಮಾತನಾಡಿದ್ದರು! ದೇಶಾದ್ಯಂತ ಸೈನಿಕರ ಸಾವುನೋವುಗಳಿಗೆ ಮರುಕ ಪಡುತ್ತಿದ್ದರೆ, ಸೇನೆಯ ಮೇಲೆ ಕಾಶ್ಮೀರದ ಪ್ರತ್ಯೇಕತವಾದಿಗಳ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ ಇತ್ತ ಅರುಂಧತಿ ರಾಯ್ ಸೇನೆಯನ್ನೇ ಹೀಯಾಳಿಸಿ ಮಾತನಾಡುತ್ತಿದ್ದಾಳೆ!
ಹಾಗಾದರೆ ಈಕೆಯ ನಿಷ್ಠ ಇರುವುದು ಅದ್ಯಾರ ಪರ!? ಇದೇ ದೇಶದಲ್ಲಿ ಹುಟ್ಟಿ, ಇಲ್ಲೇ ತಿಂದುಂಡು ಬೆಳೆಯುತ್ತಾ ಕೊನೆಗೆ ಈ ನೆಲಕ್ಕೇನೆ ಅಪಮಾನವಾಗುವ ಹಾಗೆ ಮಾತಾನಾಡುತ್ತಾರೆ ಎಂದರೆ ನಮ್ಮ ಕಾನೂನು ಯಾಕೆ ಮಾತನಾಡದು!? ಈಕೆಯ ಈ ರೀತಿಯ ವರ್ತನೆಯನ್ನು ಖಂಡಿಸದೇ ಹೋದರೆ, ಶಿಕ್ಷಿಸದೇ ಹೋದರೆ ಅದು ನಿಜವಾಗಿಯೂ ಈ ರಾಷ್ಟ್ರಕ್ಕೆ ಮಾಡುವ ಮತ್ತೊಂದು ಅಪಮಾನವೇ ಸರಿ. ಅಂದ ಹಾಗೆ ಈಕೆಯ ಪ್ರಕಾರ ಕಾಶ್ಮೀರ ಭಾರತದ ಭಾಗವಾಗಿರುವುದೇ ಕಾಶ್ಮೀರದ ಜನತೆಗೆ ಮಾಡುವ ದೊಡ್ಡ ಅಪಮಾನವಂತೆ! ಆದ್ದರಿಂದ ಕಾಶ್ಮೀರದ ಮೇಲಣ ಹಿಡಿತವನ್ನು ಭಾರತವು ಸಡಿಲಿಸಿ ಅದನ್ನೊಂದು ಸ್ವತಂತ್ರ ರಾಷ್ಟ್ರವಾಗಲು ಬಿಡಬೇಕೆಂಬ ಒತ್ತಾಸೆ ಈಕೆಯದ್ದು! ಎಂಥಾ ಹೃದಯ ವೈಶಾಲ್ಯತೆ ನೋಡಿ! ಹಾಗಂತ ಈಕೆ ಈ ವಿಚಾರಗಳನ್ನು ಗಟ್ಟಿಯಾಗಿ ಹೇಳಿದ್ದು ಎಲ್ಲಿ ಗೊತ್ತೇ? 2010ರಲ್ಲಿ ಹುರ್ರಿಯತ್‍ನ ನಾಯಕ ಸೈಯದ್ ಆಲಿ ಷಾ ಗಿಲಾನಿಯ ಜೊತೆ ಸೇರಿಕೊಂಡು ನಡೆದ ಸೆಮಿನಾರ್ ಕಾರ್ಯಕ್ರಮವೊಂದರಲ್ಲಿ! ಕಾಶ್ಮೀರದ ಸಮಸ್ಯೆಯ ಪರಿಹಾರಕ್ಕೆ ‘ಅಜಾದಿ’ಒಂದೇ ಪರಿಹಾರವೆಂದು ಅದೇ ವೇದಿಕೆಯಲ್ಲಿ ಗಟ್ಟಿಯಾಗಿ ಕಿರುಚಿ ಕಾಶ್ಮೀರದ ಪ್ರತ್ಯೇಕತಾವಾದಿಗಳ ಪರ ನಾನೆಂಬುದನ್ನು ಜಗತ್ತಿನ ಮುಂದೆ ಘಂಟಾಘೋಷವಾಗಿ ಸಾರಿ ಬಿಟ್ಟವಳು ಇವಳು! ಸಿಟ್ಟಿಗೆದ್ದ ಕಾಶ್ಮೀರಿ ಪಂಡಿತರುಗಳು ಅಂದೇ ಈಕೆಯ ಮೇಲೆ ಎಫ್‍ಐಆರ್ ದಾಖಲಿಸಿದರಾದರೂ ಅಂದಿನ ಕೇಂದ್ರ ಸರಕಾರದ ಕೃಪಕಟಾಕ್ಷದಿಂದ ಅರುಂಧತಿ ರಾಯ್ ಬಚಾವಾಗಿದ್ದು ಇಂದು ಇತಿಹಾಸ. ಒಂದು ಸಂದರ್ಭದಲ್ಲಿ ‘ನಾನು ಭಾರತೀಯಳೇ ಅಲ್ಲ ನಾನು ಇಡಿಯಾ ವಿಶ್ವಕ್ಕೆ ಸೇರಿದವಳು. ನನಗ್ಯಾವ ರಾಷ್ಟ್ರಗೀತೆಯೂ ಮುಖ್ಯವಲ್ಲ ಅದ್ಯವಾ ರಾಷ್ಟ್ರಧ್ವಜವೂ ನನಗೆ ಗೌರವಯುತವಾದುದು ಅಲ್ಲ’ ಎಂದು ಹೇಳಿ ತನ್ನ ಭಾರತೀಯತೆಯನ್ನೇ ಅಲ್ಲಗಳೆದಿದ್ದಳು. ಇಂತಹ ಹೆಣ್ಣಿನ ಮೇಲೆ ಅದ್ಯಾಕೆ ಅಂದಿನ ಕೇಂದ್ರ ಸರಕಾರ ಮೃದು ಧೋರಣೇ ತಳೆಯಿತೋ ಆ ದೇವರೇ ಬಲ್ಲ. ದೇಶದೊಳಗೇ ಇದ್ದುಕೊಂಡು ದೇಶದ ಸಾರ್ವಭೌಮತೆ, ಸಿದ್ಧಾಂತಗಳಿಗೆ ಧಿಕ್ಕಾರ ಕೂಗುವ ಇಂತಹ ಅವಿವೇಕಿಗಳಿಂದಲೇ ಅಲ್ಲವೇ ಈ ನಮ್ಮ ದೇಶ ದೊಡ್ಡ ಮಟ್ಟದಲ್ಲಿ ಗಂಡಾಂತರವನ್ನು ಎದುರಿಸುತ್ತಿರುವುದು? ನಮ್ಮ ಕಾನೂನು, ಸರಕಾರಕ್ಕೆಲ್ಲಾ ಇದೇಕೆ ತಿಳಿಯದು!?
ಹೌದು, ಈಕೆಯ ಪ್ರತೀ ನಿಲುವುಗಳನ್ನು, ಹೇಳಿಕೆಗಳನ್ನು ಗಮನಿಸಿದರೂ ಈಕೆಯ ಮೇಲೆ ಒಂದಷ್ಟು ಸಿಟ್ಟಲ್ಲದೆ ಬೇರೇನು ಮೂಡದು. 2001ರಲ್ಲಿ ಪಾರ್ಲಿಮೆಂಟ್ ಮೇಲೆ ಉಗ್ರರು ದಾಳಿ ಮಾಡಿದ ಸಂದರ್ಭದಲ್ಲೂ ಕೂಡ ಈಕೆಯ ನಿಲುವು ಉಗ್ರರ ಪರವೇ ಇತ್ತು! ಉಗ್ರರ ಹೋರಾಟವನ್ನು ಅದು ಅವರ ನ್ಯಾಯಕ್ಕಾಗಿ ನಡೆಸುವ ಹೋರಾಟವಷ್ಟೇ ಎಂದಿದ್ದ ಹೆಣ್ಣು ಈಕೆ! ಅಷ್ಟು ಮಾತ್ರವೇ ಅಲ್ಲದೆ ದಾಳಿಯ ಪ್ರಮುಖ ರೂವಾರಿ ಭಯೋತ್ಪಾದಕ ಅಫ್ಜಲ್ ಗುರುವನ್ನು ‘ಪ್ರಿಸನರ್ ಆಫ್ ವಾರ್’ ಎಂದು ಗೌರವಿಸಿ ಆತನ ಗಲ್ಲು ಶಿಕ್ಷೆಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಳು! ಎಂಥಾ ವಿಕೃತತೆ ಇದು. ಸಾಲದಕ್ಕೆ ಆತನ ಪರವೇ ‘ದಿ ಹ್ಯಾಂಗಿಂಗ್ ಆಫ್ ಅಫ್ಜಲ್ ಗುರು’ ಎಂಬ ಪುಸ್ತಕವನ್ನೇ ಬರೆದು ತನ್ನ ಕಣ್ಣೀರ ಹರಿಸಿದ್ದಳು! ಅತ್ತ ಭಯೋತ್ಪಾದಕರು ನಮ್ಮ ಸೈನಿಕರ ಬಂದೂಕಿಗೆ ಗುರಿಯಾದರೆ, ನಕ್ಷಲರು ಪೋಲೀಸರ ಕೈಯಿಂದ ಸತ್ತರೆ ತನ್ನ ಸ್ವಂತ ಮಕ್ಕಳನ್ನು ಕಳೆದುಕೊಂಡವರ ಹಾಗೇ ಆಡುವ ಈಕೆ ಅದೇ ನಮ್ಮ ಸೈನಿಕರು, ಪೋಲೀಸರು ಸತ್ತರೆ ಮಾತ್ರ ಅದನ್ನು ಹೋರಾಟಗಾರರ ಜಯವೆಂದು ಬಣ್ಣಿಸಿ ಶಹಬಾಸ್ ಹೇಳುತ್ತಾಳೆ! ಒಂದು ವೇಳೆ ಇದೇ ನಕ್ಸಲರು ಈಕೆಯ ಗಂಡನನ್ನೋ, ಮಗನನ್ನೋ ಇಲ್ಲವೇ ಅಣ್ಣ ತಮ್ಮನನ್ನೋ ಚಿತ್ರಹಿಂಸೆ ಮಾಡಿ ಕೊಂದು ಹಾಕಿದ್ದರೆ, ಇಲ್ಲವೇ ಭಯೋತ್ಪಾದಕರು ಶಿರಚ್ಚೇದನಗೊಳಿಸಿ ವಿಕೃತವಾಗಿ ಕೊಂದು ಹಾಕಿರುತ್ತಿದ್ದರೆ ಆವಾಗಲೂ ಈಕೆ ಅಂತಹ ಭಯೋತ್ಪಾದಕರ ಪರವೇ ವಾದಿಸುತ್ತಿದ್ದಳೇ!? ದೇಶದ ವಿರುದ್ಧ ನೀಡುವ ಒಂದೊಂದು ಹೇಳಿಕೆಗೂ ಅದ್ಯಾವುದೋ ಮೂಲದಿಂದ ಹಣವನ್ನು ಪಡೆದು ಐಷರಾಮದ ಜೀವನ ಸಾಗಿಸುತ್ತಿರುವ ಈಕೆಗೆ ಭಯೋತ್ಪಾದಕರುಗಳ ಕೈಯಲ್ಲಿ ಸಾವು ನೋವುಗಳನ್ನುಂಡ ಮನೆಯವರ ಸಂಕಟ ಅರ್ಥವಾಗುವುದು ಕಷ್ಟವೇ ಬಿಡಿ! ಕಾಡು ಪೊದೆಗಳ ನಡುವೆ ಅವಿತುಕೊಂಡು, ಬಡವರನ್ನು ಬಳಸಿಕೊಂಡು ಅಮಾಯಕ ಪೋಲೀಸರನ್ನು ಹತ್ಯೆಗೈಯುತ್ತಿರುವ ನಕ್ಸಲರನ್ನು ಇದೇ ನಮ್ಮ (?) ಅರುಂಧತಿ ರಾಯ್‍ಯ ಚಿಂತನೆಯಲ್ಲಿ ‘ಬಂಧೂಕು ಹಿಡಿದ ಗಾಂಧೀವಾದಿಗಳು’ ಅಂತೆ! ಎಲ್ಲಿಯ ಗಾಂಧೀ ಎಲ್ಲಿಯ ನಕ್ಸಲಿಸಂ!? ಒಂದು ಕಣ್ಣಿಗೆ ಹೊಡೆದರೆ ಇನ್ನೊಂದನ್ನೂ ತೋರಿಸು ಎಂದಿರುವ ಅಹಿಂಸಾವಾದಿ ಗಾಂಧೀ ಹಾಗೂ ಕರುಣೆಯೇ ಇಲ್ಲದೆ ಅಮಾಯಕರ ರಕ್ತ ಕುಡಿಯುತ್ತಿರವ ನಕ್ಸಲರ ಮಧ್ಯೆ ಈಕೆಗೆ ವ್ಯತ್ಯಾಸವೇ ಕಾಣುವುದಿಲ್ಲವೆಂದಾದರೆ ಅದೆಂತಾಹ ವಿಕೃತತೆ ತುಂಬಿರಬಹುದು ಮನದಲ್ಲಿ!? ‘ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಎಂಬ ಬೂಕರ್ ಪ್ರಶಸ್ತಿ ಪಡೆದ ಈಕೆಯ ಕೃತಿ ಕೂಡ ಇಂತಹುದು ವಿಕೃತತೆಯ ಇನ್ನೊಂದು ಪುಟ ಎಂದರೂ ತಪ್ಪಾಗದು! ತಾನೋರ್ವ ಪ್ರಗತಿಪರಳು, ತಾನೋರ್ವ ಮಾನವ ಹಕ್ಕುಗಳ ಹೋರಾಟಗಾರಳು ಎಂದ್ಹೇಳಿಕೊಂಡು ಸುತ್ತುವ ಈಕೆಗೆ ಪಾಕಿಸ್ಥಾನದ ಅದ್ಯಾವ ಬರ್ಬರತೆಯೂ ಅಮಾನವೀಯವೆಂದೆನ್ನಿಸದೇ ಹೋಗಿರುವುದು ವಿಚಿತ್ರವೇ ಸರಿ! ಒಟ್ಟಿನಲ್ಲಿ ಭಾರತದಲ್ಲಾಗುವ ಅದ್ಯಾವ ಒಳ್ಳೆಯ ಕೆಲಸಗಳೂ ಈಕೆಗೆ ಪಥ್ಯವಾಗುವುದಿಲ್ಲ. ಸಹ್ಯ ಎನ್ನಿಸುವುದಿಲ್ಲ. ತಮಾಷೆಯೆಂದರೆ ಇಡೀಯಾ ಭಾರತವೇ ಭೇಷ್ ಅಂದಿರುವ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೂ ಈ ಅರುಂಧತಿ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದಳು!!
ಹೇಳೀ ಇಂತಹ ಹುಳುಕು ಮನಸುಗಳು ಇರುವುದರಿಂದಲೇ ಅಲ್ಲವೇ ಅತ್ತ ಕಾಶ್ಮೀರದಲ್ಲಿ ಕಲ್ಲೆಸೆಯುವವರ ಕೈಗಳು ಗಟ್ಟಿಯಾಗುತ್ತಿರುವುದು? ದೇಶ ವಿರೋಧಿ ಚಟುವಟಿಕೆಗಳಿಗೆ ಬಲ ಬಂದಿರುವುದು? ಭಾರತ ಬಲಗೊಳ್ಳಬೇಕು, ಶಾಂತಿ ನೆಮ್ಮದಿ ನೆಲೆಯಾಗಬೇಕು ಎಂಬದಾದರೆ ಮೊದಲು ಇಂತಹ ಕಳೆಗಳನ್ನು ಕೀಳಬೇಕು ಅಷ್ಟೇ! ‘ಸೇನೆಯ ಜೀಪಿಗೆ ಕಲ್ಲು ತೂರಾಟಗಾರರನ್ನು ಕಟ್ಟುವ ಬದಲು ಇದೇ ಅರುಂಧತಿ ರಾಯ್‍ರನ್ನು ಕಟ್ಟುವುದು ಒಳ್ಳೆಯದು’ ಎಂದು ಪರೇಶ್ ರಾವಲ್ ಮಾಡಿರುವ ಆಕ್ರೋಶಭರಿತ ಟ್ವೀಟ್‍ನ ಹಿಂದಿರುವ ಸದುದ್ದೇಶ ಕೂಡ ಇದುವೇ!
Facebook ಕಾಮೆಂಟ್ಸ್