X

ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !

ಮಂಕುತಿಮ್ಮನ ಕಗ್ಗ ೦೬೫.

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |

ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||

ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |

ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ || ೦೬೫ ||

ಪುಸ್ತಕದ ಬದನೆಕಾಯಿಯ ಜ್ಞಾನಕ್ಕು, ಅನುಭವಸಿದ್ದ ಜ್ಞಾನಕ್ಕು ನಡುವೆಯಿರುವ ಅಂತರವನ್ನು ಬಿಂಬಿಸುವ ಈ ಪದ್ಯ ಬರಿ ಓದು ಬರಹ ಕಲಿತು, ವಿದ್ಯಾಭ್ಯಾಸ ಮಾಡಿ ಪದವಿ ಪಡೆದ ಮಾತ್ರಕ್ಕೆ ಅದು ಶ್ರೇಷ್ಟವೆನ್ನಲಾಗದು ಎಂದು ಸಾರಲು ಯತ್ನಿಸುತ್ತದೆ.

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |

ಪುಸ್ತಕವನ್ನು ಓದಿದಾಗ ಜ್ಞಾನ ಸಿಗುವುದೆಂಬುದೇನೊ ಎಲ್ಲರೂ ಒಪ್ಪುವ ಮಾತೆ. ಆದರೆ ಆ ಅರಿವು ಯಾವ ರೀತಿಯದು ? ಎಂದರೆ ಅದೊಂದು ಕಿರೀಟದೊಂದಿಗೆ ತಲೆಗೆ ಅಂಟಿಸಿಕೊಂಡ ಅಥವಾ ಸ್ಥಾಪಿಸಿಕೊಂಡ ಅಲಂಕಾರದ ಮಣಿಯ ಹಾಗೆ. ಅದೆಷ್ಟೇ ಅಲಂಕಾರಪ್ರಾಯವಾಗಿ, ಭೂಷಣಪ್ರಾಯವಾಗಿ ಕಂಡರು ಅದು ಕೇವಲ ಬಾಹ್ಯದಾಡಂಬರವೆ ಹೊರತು ಅಂತರಂಗದಲ್ಲಿ ನೈಸರ್ಗಿಕವಾಗಿ ಪ್ರಸ್ಥಾನವಾಗುವ ಅನುಭವಸಿದ್ಧ ಗತ್ತಿನ ದನಿಯಾಗುವುದಿಲ್ಲ. ಫಳಫಳ ಹೊಳೆವ ಆಕರ್ಷಕ ಮಣಿಯಾದರೂ ಅದೊಂದು ರೂಪಾಂತರವಾಗದ, ನಿಶ್ಚಿತ ಜಡಸ್ಥಿತಿಯನ್ನಪ್ಪಿಕೊಂಡ ಕೃತಕ ವಸ್ತು. ಜೀವವಿರುವ ವಸ್ತುಗಳಂತೆ ಸ್ವರೂಪ ಬದಲಾಯಿಸಿಕೊಳ್ಳದ ಏಕರೂಪಿ ಸ್ಥಿತಿಯಿಂದಾಗಿ ಅದರ ಪ್ರಯೋಜನ ಸೀಮಿತ ಮಟ್ಟದ್ದು. ಪುಸ್ತಕದ ಬದನೆಕಾಯಿಯು ಸಹ ಹಾಗೆಯೇ – ಮುಕುಟದಲಿಟ್ಟ ಮಣಿಯ ಹಾಗೆ; ಆ ಜ್ಞಾನ ಸಂಪಾದನೆ ಕ್ರಿಯಾಶಕ್ತಿಯಾಗಿ ಲೋಕೋಪಯೋಗಕ್ಕೆ ದಕ್ಕುವಂತಿರದಿದ್ದರೆ ಅದರಿಂದೇನೂ ಸುಖವಿಲ್ಲ.

ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||

ಆದರೆ ಚಿತ್ತದಲ್ಲಿ ಅನುಭವದಿಂದ, ಅಂತರ್ಮಥನದಿಂದ, ಸರಿತಪ್ಪಿನ ಜಿಜ್ಞಾಸೆಯಿಂದ ವಿಕಸಿಸುತ್ತಾ ಅರಳುವ ಜ್ಞಾನ ಜಡಸ್ವರೂಪದ್ದಲ್ಲ. ಅದೊಂದು ಚಲನಶೀಲ, ಜೀವಭರಿತ ಸಸ್ಯದ ಹಾಗೆ; ಬೆಳೆಯುತ್ತ ಹಂತಹಂತವಾಗಿ ಪಕ್ವಗೊಳ್ಳುತ್ತ ಸುಂದರ ರೂಪ, ಸುವಾಸನೆ ಹೊಂದುವ ಪುಷ್ಪದ ರೀತಿಯದು. ಅದರ ವೈಖರಿ ಸದಾ ವಿಕಸಿತವಾಗುತ್ತಿರುವುದು. ಗಿಡದಲ್ಲಿ ಒಂದು ಪುಷ್ಪ ಬಾಡಿ ಸೊರಗಿ ಉದುರಿದರೂ, ಮತ್ತೊಂದು ಹೊಸ ಹೂವಿನ ರೂಪದಲ್ಲಿ ಮತ್ತೆ ಅವತರಿಸುವಂತೆ, ಸದಾ ಜೀವಂತಿಕೆಯನ್ನು ಕಾದುಕೊಳ್ಳುವ ಸ್ವರೂಪದ್ದು. ಅನುಭವ ಕಲಿಸಿದ ಪಾಠಗಳು ಕಾಲಾನುಕ್ರಮೇಣ ಅಸಂಗತ ಅಥವಾ ನಿರುಪಯುಕ್ತವೆನಿಸಿದರು ಹೊಸ ಹೊಸ ಪಾಠಗಳು ಮತ್ತೆ ಹೊಸ ಪುಷ್ಪಗಳ ಹಾಗೆ ಅರಳುತ್ತಾ ಜೀವಂತಿಕೆಯ ಜತೆಗೆ ನಿರಂತರತೆಯನ್ನು ಕಾಯ್ದುಕೊಳ್ಳುತ್ತವೆ. ಹೀಗೆ ಸ್ವಾನುಭವದಿಂದ ಚಿತ್ತದಲ್ಲಿ ಬರುವ ಅರಿವು-ಬೆಳವಣಿಗೆ, ಪಕ್ವತೆಯತ್ತ ಮುನ್ನಡೆಸಬಲ್ಲ, ನಿರಂತರ ಕಲಿಕೆಯ ಸಾಕಾರ ಸ್ವರೂಪವೆಂದರೆ ತಪ್ಪಾಗಲಾರದು.

ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ ….

ನೈಜವಾದ ವಸ್ತುಜ್ಞಾನ ಮತ್ತದರಿಂದುತ್ಪನ್ನವಾಗುವ ಮಿಕ್ಕೆಲ್ಲದರ ನಿಜರೂಪದ ಸೂಕ್ತ ಅರಿವುಂಟಾಗುವುದು, ಅದರ ಮೂಲಸ್ವರೂಪದ ಸಾಕ್ಷಾತ್ಕಾರವಾಗುವುದು ವ್ಯಕ್ತಿಯೊಬ್ಬ ತಾನೆ ಅನುಭವಿಸಿ-ಅನುಭಾವಿಸಿ ಪಡೆಯುವ ಒಳನೋಟಗಳಿಂದಲೆ (ಅಂತರೀಕ್ಷಣೆ) ಹೊರತು ಬರಿಯ ಶಾಸ್ತ್ರಾಧ್ಯಯನದ ಮೂಲಕ ಪಡೆಯುವ ಖಾಲಿ ಜ್ಞಾನಾರ್ಜನೆಯಿಂದಲ್ಲ. ಕೇವಲ ಪುಸ್ತಕಜ್ಞಾನದ ಶಾಸ್ತ್ರಿತನದಲ್ಲಿ (ಶಾಸ್ತ್ರಿತನ = ಪಂಡಿತರು, ಜ್ಞಾನಿಗಳೆಂಬ ಪದವಿಯ ಒಡೆತನ) ಪ್ರಾಯೋಗಿಕಜ್ಞಾನದ ಪೂರಕತೆಯಿರದಿದ್ದರೆ, ಅಂತಹ ಸೈದ್ದಾಂತಿಕ ಪುಸ್ತಕಜ್ಞಾನ ನಿಷ್ಪ್ರಯೋಜಕ. ಮುಖ್ಯವಾಗಿ ಅರಿಯಬೇಕಾದ್ದೆಂದರೆ ಅಂತಹ ಜ್ಞಾನ ಸಂಪಾದನೆ, ಪ್ರಬುದ್ಧತೆಯ ಹಾದಿಯ ಕೇವಲ ಮೊದಲ ಮೆಟ್ಟಿಲು ಮಾತ್ರ. ನಂತರದಲ್ಲಿ ಅದನ್ನು ಆಳವಾಗಿ ಹೊಕ್ಕು ನೋಡಿ, ಅಂತರಾರ್ಥವನ್ನು ಮಥಿಸಿ ಗ್ರಹಿಸಿದಾಗಲಷ್ಟೆ ಮೂಲಾರ್ಥದ ಸಾಕ್ಷಾತ್ಕಾರವಾಗುತ್ತದೆ. ಅದರ ವಿವಿಧ ಆಯಾಮ-ಬಳಕೆಗಳ ಸಾಧ್ಯತೆ, ಅರ್ಥ ವೈಶಾಲ್ಯತೆ, ವಿಭಿನ್ನ ಉದ್ದೇಶಗಳ ಹಿನ್ನಲೆ ಗ್ರಹಿಕೆಗೆ ನಿಲುಕುತ್ತದೆ. ಆಗ ಅದರ ಸೂಕ್ತರೀತಿಯ ಬಳಕೆಗೆ ಬೇಕಾದ ವೇದಿಕೆಯನ್ನು ತಂತಾನೇ ನಿರ್ಮಿಸುತ್ತದೆ. ಕೊನೆಗೊಂದು ಪರಿಪಕ್ವ ವ್ಯಕ್ತಿತ್ವದ ರೂಪದಲ್ಲಿ ಅನಾವರಣಗೊಂಡು ವಿತರಣೆಯಾಗುವ ಸರಕದು ಎಂದು ಹೇಳುತ್ತಿದ್ದಾನೆ ಮಂಕುತಿಮ್ಮ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post